Free Bus Effect: ನಮ್ಮ ಬಸ್ಗಳಲ್ಲೂ ಉಚಿತ ಪ್ರಯಾಣ ಕಲ್ಪಿಸಿ ಇಲ್ಲವೇ ತೆರಿಗೆ ವಿನಾಯಿತಿ, ಪ್ಯಾಕೇಜ್ ನೀಡಿ; ಖಾಸಗಿ ಬಸ್ ಮಾಲೀಕರ ಆಗ್ರಹ
Private bus owners in loss: ಖಾಸಗಿ ಬಸ್ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ. ಖಾಸಗಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪುರುಷ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಏಕೆ ಅನ್ನುತ್ತೀರಾ ? ಮಹಿಳೆಯರ ಜತೆ ಹೋಗಬೇಕಾದ ಪುರುಷರು ಈಗ ಅನಿವಾರ್ಯವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಬೇಕಿದೆ.
ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (free travel for women) ಕಲ್ಪಿಸಿರುವ ಶಕ್ತಿ ಯೋಜನೆಗೆ (Shakthi yojane) ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರು ಖುಷಿ ಖುಷಿಯಿಂದ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ತಾನು ಕೊಟ್ಟ ಮಾತನ್ನು ಉಳಿಸಿ ಕೊಂಡಿದೆ. ಇದು ಒಂದೆಡೆಯಾದರೆ, ಮತ್ತೊಂದು ಕಡೆ ಖಾಸಗಿ ಬಸ್ ಮಾಲೀಕರು (Private bus owners) ಚಿಂತಾಕ್ರಾಂತರಾಗಿದ್ದಾರೆ. ಖಾಸಗಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪುರುಷ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಏಕೆ ಅನ್ನುತ್ತೀರಾ ? ಮಹಿಳೆಯರ ಜತೆ ಹೋಗಬೇಕಾದ ಪುರುಷರು ಈಗ ಅನಿವಾರ್ಯವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಬೇಕಿದೆ.
ಹೀಗಾಗಿ ಖಾಸಗಿ ಬಸ್ಗಳ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಒಂದು ಸುತ್ತು ಬಂದರೆ ಅವರ ಕಷ್ಟ ಸುಖ ಅರ್ಥವಾದೀತು. ಕಲಾಸಿಪಾಳ್ಯದಿಂದ ಪ್ರತಿದಿನ ನೂರಾರು ಬಸ್ ಗಳು ಟ್ರಿಪ್ ಮಾಡುತ್ತವೆ. ಬೆಂಗಳೂರಿನಿಂದ ಕೋಲಾರ, ಚಿಕ್ಕ ಬಳ್ಳಾಪುರ, ಚಿಂತಾಮಣಿ, ಕೆಜಿಎಫ್, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿ ಭಾಗ, ಚಿಂತಾಮಣಿ, ಮುಳಬಾಗಿಲು ಕಡೆ ಹೋಗುವ ಪ್ರಯಾಣಿಕ ರೆಲ್ಲಾ ಖಾಸಗಿ ಬಸ್ ಗಳನ್ನೇ ಅವಲಂಬಿಸಿದ್ದರು.
ಒಂದು ಸೀಟ್ ಗೆ 100- 150ರೂಪಾಯಿ ಸಿಗುತ್ತಿತ್ತು. ಒಮ್ಮೊಮ್ಮೆ 60 ಸೀಟ್ ಭರ್ತಿಯಾಗಿ ಪ್ರಯಾಣಿಕರು ನಿಂತು ಪ್ರಯಾಣ ಮಾಡುತ್ತಿದ್ದರು. ಈಗ 40 ಸೀಟ್ ಭರ್ತಿ ಆಗುವುದೇ ಕಷ್ಟ ಎಂದು ಅಳಲು ತೋಡಿಕೊಳ್ಳುತ್ತಾರೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಂದ ವ್ಯಾಪಾರಿಗಳು ಚಿಕ್ಕಪೇಟೆ, ಕೆ. ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮುಗಿಸಿ ನಮ್ಮ ಖಾಸಗಿ ಬಸ್ ಹತ್ತಲು ಕಲಾಸಿಪಾಳ್ಯಕ್ಕೆ ಬರುತ್ತಿದ್ದರು. ಈಗ ಬಿಎಂಟಿಸಿ ಬಸ್ ಪ್ರಯಾಣವೂ ಉಚಿತವಾಗಿದ್ದು ಮೆಜೆಸ್ಟಿಕ್ ಗೆ ಹೋಗಿ ಅಲ್ಲಿಂದ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ತಮ್ಮ ತಮ್ಮ ಊರಿಗೆ ಹೋಗುತ್ತಾರೆ ಎಂದು ಕಂಡಕ್ಟರ್ವೊಬ್ಬರು ಹೇಳಿದ್ದಾರೆ.
ವಾರದಲ್ಲಿ ಎರಡು ಮೂರು ಬಾರಿ ಬೆಂಗಳೂರಿನ ಚಿಕ್ಕಪೇಟೆಗೆ ಬರುತ್ತೇವೆ. ಖಾಸಗಿ ಬಸ್ ಗಳಲ್ಲಿ ಬಂದು ಹೋಗಲು ವಾರಕ್ಕೆ 400- 500 ರೂಪಾಯಿ ಬೇಕಾಗುತ್ತಿತ್ತು. ಈಗ ಅಷ್ಟೂ ಹಣ ಉಳಿತಾಯವಾಗುತ್ತದೆ. ಆಸ್ಪತ್ರೆ, ದಿನಸಿ ಮತ್ತು ಮಕ್ಕಳ ಖರ್ಚಿಗೆ ಸಹಾಯವಾಗುತ್ತದೆ ಎನ್ನುತ್ತಾರೆ. ಇಂತಹ ಖಾಸಗಿ ಬಸ್ ಗಳಲ್ಲಿ ಪ್ರಯಾಣ ಮಾಡುವವರು ಬಹುತೇಕ ಬಡವರು ಇಲ್ಲವೇ ಮಾಧ್ಯಮ ವರ್ಗದ ಜನ. ಅಂತಹವರಿಗೆ 50 - 100 ರೂಪಾಯಿಯೂ ಮುಖ್ಯ. ಹಾಗಾಗಿ ಹಣ ಉಳಿತಾಯಕ್ಕೆ ಆದ್ಯತೆ ನೀಡುತ್ತಾರೆ.
ತೆರಿಗೆ ವಿನಾಯಿತಿ ನೀಡಲು ಆಗ್ರಹ
ಸರ್ಕಾರ ನಮಗೆ ಯಾವುದೇ ಉಚಿತ ಸೌಲಭ್ಯ ಕಲ್ಪಿಸುವುದಿಲ್ಲ. ತೆರಿಗೆ, ಟೋಲ್, ನಿರ್ವಹಣೆ ಸೇರಿ ತಿಂಗಳಿಗೆ 28-30 ಸಾವಿರರೂಪಾಯಿ ಖರ್ಚು ಬರುತ್ತದೆ. ಆದಾಯ ಇಲ್ಲದಿದ್ದರೂ ಈ ವೆಚ್ಚಗಳನ್ನು ಭರಿಸಲೇಬೇಕು. ಹಾಗಾಗಿ ಸರ್ಕಾರ ನಮಗೆ ತೆರಿಗೆ ವಿನಾಯಿತಿ ನೀಡಲಿ ಎಂದು ಒತ್ತಾಯಿಸುತ್ತಾರೆ. ರಾಜ್ಯದಲ್ಲಿ ಸುಮಾರು 10,000 ಖಾಸಗಿ ಬಸ್ ಗಳು ಸೇವೆ ಸಲ್ಲಿಸುತ್ತಿವೆ. ಈಗ ಬಸ್ ಮಾಲೀಕರು ಮತ್ತು ಅವನ್ನು ಅವಲಂಬಿಸಿರುವ ಸಾವಿರಾರು ನೌಕರರು ಬೀದಿ ಪಾಲಾಗುತ್ತಾರೆ. ಒಂದೋ ಸರ್ಕಾರ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಬೇಕು ಇಲ್ಲವೇ ನಮಗೂ ಪ್ಯಾಕೇಜ್ ನೀಡಬೇಕು ಎಂದು ಖಾಸಗಿ ಬಸ್ ಮಾಲೀಕರು ಆಗ್ರಹ ಪಡಿಸುತ್ತಿದ್ದಾರೆ.
ಪ್ರತಿ ಖಾಸಗಿ ಬಸ್ ಪ್ರತಿ ಮೂರು ತಿಂಗಳಿಗೊಮ್ಮೆ 47,955 ರೂಪಾಯಿ ರಸ್ತೆ ತೆರಿಗೆ ಕಟ್ಟುತ್ತೇವೆ. 9,000 ಬಸ್ ಗಳ ಮಾಲೀಕರು 14,4ಕೋಟಿ ರೂಪಾಯಿ ರಾಜ್ಯ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿ ಮಾಡುತ್ತೇವೆ. ಒಂದು ವೇಳೆ ಸರಕಾರ ನಮ್ಮ ನೆರವಿಗೆ ಧಾವಿಸದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾದೀತು ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದೇವೆ. ಸರ್ಕಾರ ನಮ್ಮ ನೆರವಿಗೆ ಧಾವಿಸಲೇ ಬೇಕು. ನಮ್ಮಲ್ಲೂ ಚಾಲಕ ಕ್ಲೀನರ್ ಕಚೇರಿ ಬುಕ್ಕಿಂಗ್ ಸೇರಿದಂತೆ ಉದ್ಯೋಗ ಒದಗಿಸಿದ್ದೇವೆ. ಈಗ ಅವರೆಲ್ಲರೂ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂಬುದು ಖಾಸಗಿ ಬಸ್ ಮಾಲೀಕರ ಮಾತು.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಬಸ್ ಮತ್ತು ಪರ್ಮಿಟ್ ಅನ್ನು ಮಾರಾಟ ಮಾಡಬೇಕಾಗುತ್ತದೆ. ನಮಗೂ ಕಷ್ಟಗಳಿವೆ. ಬ್ಯಾಂಕ್ ಲೋನ್ ಇರುತ್ತದೆ, ಕಚೇರಿ ಮಾಡಿ ಉದ್ಯೋಗ ನೀಡಿರುತ್ತೇವೆ. ಈಗ ಬಂದ್ ಮಾಡಬೇಕು, ಅನ್ಯ ಮಾರ್ಗವೇ ಇಲ್ಲ ಎಂದು ಹೇಳುತ್ತಾರೆ. ಸ್ವಲ್ಪ ಕಷ್ಟವಾದರೂ ಮೆಜೆಸ್ಟಿಕ್ ಗೆ ಹೋಗಿ ಬಸ್ ಹತ್ತುತ್ತಾರೆ. ಕೆಲವು ಮಾರ್ಗಗಳಿಗೆ ಖಾಸಗಿ ಬಸ್ ತುಂಬಾ ಸಹಾಯಕಾರಿ. ಹಾಗಾಗಿ ಆರಂಭದಲ್ಲಿ ಉಚಿತ ಮೊರೆ ಹೋಗುತ್ತಾರೆ. ನಂತರದ ದಿನಗಳಲ್ಲಿ ಖಾಸಗಿ ಬಸ್ಗಳತ್ತ ಮುಖ ಮಾಡುವ ವಿಶ್ವಾಸವಿದೆ ಎಂದೂ ಕೆಲವು ಬಸ್ ಮಾಲೀಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಟ್ರಾವೆಲ್ಸ್ ಗಳಿಗೆ ಆತಂಕ ಇಲ್ಲ
ಎಲ್ಲ ಬಸ್ಗಳಿಗೂ ಇದೇ ರೀತಿಯ ತೊಂದರೆ ಎದುರಾಗಿಲ್ಲ. ಎಸಿ, ಸ್ಲೀಪರ್ ಕೋಚ್ ಹೊಂದಿರುವ ಟ್ರಾವೆಲ್ ಬಸ್ಗಳಿಗೆ ಕಂಟಕ ಉಂಟಾಗಿಲ್ಲ. ಮಹಿಳೆಯರ ಸಂಖ್ಯೆಯಲ್ಲಿ ಕಡಿಮೆಯಾದರೂ ಆತಂಕ ಇಲ್ಲ. ದೂರದ ಪ್ರಯಾಣ ಮಾಡುವ ಪುರುಷ ಪ್ರಯಾಣಿಕರು ಸುಖಕರ ಪ್ರಯಾಣಕ್ಕೆ ಟ್ರಾವೆಲ್ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಪ್ರವಾಸ ಕೈಗೊಳ್ಳುವವರು ಮತ್ತು ಉಳ್ಳವರು ನಿರಾತಂಕವಾಗಿ ಟ್ರಾವೆಲ್ಸ್ ಬಸ್ಗಳಲ್ಲಿ ಪ್ರಯಾಣ ಮಾಡುತ್ತಾರೆ.