Namma Metro: ಶಕ್ತಿ ಯೋಜನೆಯಿಂದ ಮೆಟ್ರೋಗೆ ನಷ್ಟ ಇಲ್ಲ; ಮಾರ್ಗ ವಿಸ್ತರಣೆಯಿಂದ ಪ್ರಯಾಣಿಕರ ಸಂಖ್ಯೆ ಲಕ್ಷ ಲಕ್ಷ ಹೆಚ್ಚಳ
ಕನ್ನಡ ಸುದ್ದಿ  /  ಕರ್ನಾಟಕ  /  Namma Metro: ಶಕ್ತಿ ಯೋಜನೆಯಿಂದ ಮೆಟ್ರೋಗೆ ನಷ್ಟ ಇಲ್ಲ; ಮಾರ್ಗ ವಿಸ್ತರಣೆಯಿಂದ ಪ್ರಯಾಣಿಕರ ಸಂಖ್ಯೆ ಲಕ್ಷ ಲಕ್ಷ ಹೆಚ್ಚಳ

Namma Metro: ಶಕ್ತಿ ಯೋಜನೆಯಿಂದ ಮೆಟ್ರೋಗೆ ನಷ್ಟ ಇಲ್ಲ; ಮಾರ್ಗ ವಿಸ್ತರಣೆಯಿಂದ ಪ್ರಯಾಣಿಕರ ಸಂಖ್ಯೆ ಲಕ್ಷ ಲಕ್ಷ ಹೆಚ್ಚಳ

Bengaluru news: ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಉದ್ಯಮಕ್ಕೆ ಹೊಡೆದ ಬಿದ್ದಿದೆ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ. ಬದಲಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಲಕ್ಷ ಲಕ್ಷ ಹೆಚ್ಚಳವಾಗಿದೆ.

ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಉದ್ಯಮಕ್ಕೆ ಹೊಡೆದ ಬಿದ್ದಿದೆ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ. ಬದಲಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ.

ಶಕ್ತಿ ಯೋಜನೆ ಜಾರಿಗೊಳ್ಳುವುದಕ್ಕೂ ಮುನ್ನವೇ ಮೆಟ್ರೋ ಪ್ರಯಣಿಕರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಏರಿಕೆಯಾಗುತ್ತಲೇ ಇದೆ. ಫೆಬ್ರವರಿಯಿಂದ ಜೂನ್‌ವರೆಗೆ ಪ್ರಯಾಣಿಸಿರುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮೆಟ್ರೋ ಮಾರ್ಗದಲ್ಲಿ ವಿಸ್ತರಣೆಯಾಗಿರುವುದು ಪ್ರಮುಖ ಕಾರಣ ಎಂದು ಬಿಎಂಆರ್‌ಸಿಎಲ್ ಮೂಲಗಳು ಹೇಳುತ್ತವೆ. ಫೆಬ್ರವರಿಯಲ್ಲಿ 1.46 ಕೋಟಿ ಪ್ರಯಾಣಿಕರು ಸಂಚಾರ ಮಾಡಿದ್ದು, 34.90 ಕೋಟಿ ಆದಾಯ ಗಳಿಸಿದೆ. ಮಾರ್ಚ್ ತಿಂಗಳಲ್ಲಿ 1.60 ಕೋಟಿ ಪ್ರಯಾಣಿಕರು ಮೆಟ್ರೋ ಸಾರಿಗೆ ಬಳಕೆ ಮಾಡಿದ್ದು 38.36 ಕೋಟಿ ರೂ. ಆದಾಯ ಬಂದಿದೆ. ನಂತರದ ಏಪ್ರಿಲ್ ಮತ್ತು ಮೇ ತಿಂಗಳಲ್ಲೂ ಇದೇ ಏರಿಕೆ ಕಂಡು ಬಂದಿದೆ. ಏಪ್ರಿಲ್ ನಲ್ಲಿ 1.71 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದು ರೂ. 41.40 ಕೋಟಿ ಲಾಭ ಗಳಿಸಿದೆ. ಮೇ ತಿಂಗಳಲ್ಲಿ 1.74 ಪ್ರಯಾಣಿಕರು ಸಂಚಾರ ಮಾಡಿದ್ದು ಬಿಎಂಆರ್ ಸಿಎಲ್ ಗೆ ರೂಪಾಯಿ 43.45 ಕೋಟಿ ರೂ. ಆದಾಯ ಬಂದಿದೆ. ಫೆಬ್ರವರಿ ಮತ್ತು ಮೇ ತಿಂಗಳಿಗೆ ಹೋಲಿಸಿದರೆ 28 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ಮಾರ್ಗ ವಿಸ್ತರಣೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಏರಿಕೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಿರುವುದು ಪ್ರಮುಖ ಕಾರಣ. ಪ್ರಸ್ತುತ 69.66 ಕಿ.ಮೀ. ನಷ್ಟು ಮೆಟ್ರೋ ಸಂಚಾರ ನಡೆಸುತ್ತಿದೆ. ಈ ವರ್ಷದಲ್ಲಿ ಇನ್ನೂ 26.40 ಕಿ.ಮೀ. ಸೇರ್ಪಡೆಯಾಗಲಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಲಿದೆ ಎಂದು ಮೆಟ್ರೋ ಅಧಿಕರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ವರ್ಷದಲ್ಲಿ ಕೆಂಗೇರಿಯಿಂದ ಚಲ್ಲಘಟ್ಟವರೆಗೆ 1.34 ಕಿ.ಮೀ, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ 19.15 ಕಿ.ಮೀ, ನಾಗಸಂದ್ರ ಮತ್ತು ಮಾದಾವಾರದವರೆಗೆ 1 ಕಿ.ಮೀ. ವಿಸ್ತರಣೆಯಾಗಲಿದೆ.

ಕೋವಿಡ್ ನಂತರ ಮೆಟ್ರೋ ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಕೋವಿಡ್‌ಗೂ ಮುನ್ನ 4 ಲಕ್ಷ ಮಂದಿ ಮೆಟ್ರೋ ಬಳಸುತ್ತಿದ್ದರೆ ಕೋವಿಡ್ ಅವಧಿಯಲ್ಲಿ 2 ಲಕ್ಷಕ್ಕೆ ಇಳಿದಿತ್ತು. ಆದಾಯ ಗಳಿಕೆ ನೋಡುವುದದರೆ 2019 ಡಿಸೆಂಬರ್ ನಲ್ಲಿ33.39 ಕೋಟಿ ರೂ. ಆದಾಯ ಗಳಿಸಿದ್ದರೆ 2020 ಫೆಬ್ರವರಿ ವೇಳೆಗೆ 33.45 ಕೋಟಿಗೆ ಆದಾಯ ಜಿಗಿದಿದೆ. ಪ್ರಸ್ತುತ 5.7 ಲಕ್ಷ ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಸಂಚರಿಸುತ್ತಿದ್ದು, ಈ ಮಾರ್ಗಗಳ ವಿಸ್ತರಣೆ ನಂತರ 8 ಲಕ್ಷಕ್ಕೆ ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಎರಡನೇ ಹಂತದ ಮೆಟ್ರೋ ಕಾಮಾಗರಿಗಳು ನೇರಳೆ ಮತ್ತು ಹಸಿರು ಮಾರ್ಗಗಳೆರಡರಲ್ಲೂ ಬಿರುಸಿನಿಂದ ಸಾಗಿವೆ. ಜತೆಗೆ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ಮತ್ತು ಕಾಳೇನ ಅಗ್ರಹಾರದಿಂದ ನಾಗಾವಾರವರೆಗಿನ ಕಾಮಗಾರಿಗಳೂ ಚಾಲನೆಯಲ್ಲಿವೆ. ಒಟ್ಟಾರೆ ಎರಡನೇ ಹಂತದ 72.09 ಕಿ.ಮೀ. ಮೆಟ್ರೋ ಮಾರ್ಗ ಸಿದ್ದವಾದರೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಗಣನೀಯ ಸುಧಾರಣೆಯಾಗಲಿದೆ. ಈ ಮಾರ್ಗಗಳೆಲ್ಲವೂ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲೇ ಹಾದುಹೋಗುತ್ತಿರುವುದು ಟ್ರಾಫಿಕ್ ಕಡಿಮೆಯಾಗಲು ಮತ್ತೊಂದು ಕಾರಣವಾಗಲಿದೆ. ಎರಡನೇ ಹಂತವೂ ಮೆಟ್ರೋ ಜಾಲಕ್ಕೆ ಸೇರ್ಪಡೆಯಾದರೆ ಬೆಂಗಳೂರಿನ ನಮ್ಮ ಮೆಟ್ರೋ ಜಾಲ 101 ನಿಲ್ದಾಣಗಳು ಮತ್ತು 114.39 ಕಿ.ಮೀಗೆ ಏರಿಕೆಯಾಗಲಿದೆ.

ಹಾಗಾದರೆ ಶಕ್ತಿ ಯೋಜನೆಯಿಂದ ಮೆಟ್ರೋಗೆ ಹೊಡೆತ ಬೀಳಲಿದೆಯೇ? ಇಲ್ಲ ಎನ್ನುತ್ತವೆ ಮೆಟ್ರೋ ಮೂಲಗಳು. ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್, ಒಟ್ಟಾರೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಒಟ್ಟು ಪ್ರಯಾಣಿಕರ ಲೆಕ್ಕ ಇರುತ್ತದೆಯೇ ಹೊರತು ಮಹಿಳಾ ಮತ್ತು ಪುರುಷ ಎಂಬ ಪ್ರತ್ಯೇಕ ಅಂಕಿಅಂಶ ಇರುವುದಿಲ್ಲ ಎನ್ನುತ್ತಾರೆ.

ಶಕ್ತಿ ಮತ್ತು ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರ ನಡುವೆ ಇದೆ ವ್ಯತ್ಯಾಸ

ಇದೇ ಜಾಡನ್ನು ಹಿಡಿದು ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರನ್ನು ಮಾತನಾಡಿಸಿದಾಗ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುವ ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೂ ವ್ಯತ್ಯಾಸ ಇರುವುದು ಕಂಡು ಬರುತ್ತದೆ. ಟಿಕೆಟ್ ದರ ಹೆಚ್ಚು ಎಂಬ ಕಾರಣಕ್ಕೆ ಸಾಮಾನ್ಯವಾಗಿ ಎಲ್ಲ ವರ್ಗಗಳ ಪ್ರಯಾಣಿಕರು ನಿರಂತರವಾಗಿ ಮೆಟ್ರೋ ಬಳಸುವುದಿಲ್ಲ. ಐಟಿ, ಬಿಟಿ, ಸರಕಾರಿ ಉದ್ಯೋಗಿಗಳು, ಖಾಸಗಿ ಕಂಪನಿಗಳಲ್ಲಿ ಉನ್ನತ ಹುದ್ದೆ ಹೊಂದಿರುವವರು ನಿರಂತರವಾಗಿ ಮೆಟ್ರೋ ಬಳಸುತ್ತಿದ್ದಾರೆ. ಇನ್ನು ಉಳಿದಂತೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಅನಿವಾರ್ಯವಾದಾಗ ಮಾತ್ರ ಬಳಸುತ್ತಿದ್ದಾರೆ. ಉದಾಹರಣೆಗೆ ಕಚೇರಿ ತಲುಪಲು ಬೆಳಗ್ಗೆ ಮಾತ್ರ ಮೆಟ್ರೋ ರೈಲು ಆಶ್ರಯಿಸಿದರೆ ಸಂಜೆ ಹಿಂತಿರುಗುವಾಗ ಬಸ್ ನಲ್ಲಿ ಮರಳುತ್ತಾರೆ. ಇದು ಮಹಿಳಾ ಮತ್ತು ಪುರುಷ ಪ್ರಯಾಣಿಕರಿಬ್ಬರಿಗೂ ಅನ್ವಯವಾಗುತ್ತದೆ. ಹಾಗಾಗಿ ಶಕ್ತಿ ಯೋಜನೆಯನ್ನೇ ನಿರಂತರವಾಗಿ ಬಳಕೆ ಮಾಡಲು ಸಾಧ್ಯವಾಗದು ಎಂದು ಮಹಿಳಾ ಪ್ರಯಾಣಿಕರು ಹೇಳುತ್ತಾರೆ. ಜೂನ್ ತಿಂಗಳ ಮೆಟ್ರೋ ರೈಲುಗಳಲ್ಲಿ ಸಂಚರಿಸಿರುವ ಪ್ರಯಾಣಿಕರ ಒಟ್ಟು ಮಾಹಿತಿ ಲಭ್ಯವಾದರೆ ಶಕ್ತಿ ಯೋಜನೆಯ ಎಫೆಕ್ಟ್ ಪರಿಣಾಮ ಬೀರಿದೆಯೇ ಇಲ್ಲವೇ ಎಂದು ತಿಳಿದು ಬರಲಿದೆ. ಈ ಮಾಹಿತಿ ಇನ್ನೂ ಕ್ರೋಢೀಕರಣವಾಗುತ್ತಿದ್ದು ಕೆಲವೇ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಚವ್ಹಾಣ್ ತಿಳಿಸಿದ್ದಾರೆ.

ಫೆಬ್ರವರಿ ತಿಂಗಳಿನಿಂದ ಇದುವರೆಗಿನ ಪ್ರಯಾಣಿಕರ ಸಂಖ್ಯೆ ಅವಲೋಕಸಿದಾಗ ಮುಂಬರುವ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಲಕ್ಷಣಗಳಿವೆ.

ವರದಿ: ಎಚ್.ಮಾರುತಿ

Whats_app_banner