ಕೆಂಪೇಗೌಡ ಏರ್‌ಪೋರ್ಟ್ ಮೇಲೆ ಹೆಚ್ಚಿದ ಒತ್ತಡ; ಬೆಂಗಳೂರು ಸಮೀಪ ಇನ್ನೊಂದು ವಿಮಾನ ನಿಲ್ದಾಣಕ್ಕೆ ಚಿಂತನೆ
Bengaluru Airport: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಪ್ರಯಾಣಿಕರ ಒತ್ತಡ ಹೆಚ್ಚುತ್ತಿರುವ ಕಾರಣದಿಂದಾಗಿ ಬೆಂಗಳೂರು ಸಮೀಪದಲ್ಲಿ ಬೆಂಗಳೂರಿಗಾಗಿ ಎರಡನೇ ವಿಮಾನ ನಿಲ್ದಾಣವನ್ನು ತುಮಕೂರು-ಚಿತ್ರದುರ್ಗ ನಡುವೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. (ವರದಿ: ಎಚ್. ಮಾರುತಿ)
ಬೆಂಗಳೂರು: ಬೆಂಗಳೂರು ಐಟಿ ಬಿಟಿ ನಗರ. ಇಲ್ಲಿಂದ ದೇಶ ವಿದೇಶಗಳಿಗೆ ದಿನಂಪ್ರತಿ ಆಗಮಿಸುವ ಮತ್ತು ಪ್ರಯಾಣ ಬೆಳೆಸುವ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ದಶಕದ ಅಂತ್ಯಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯ ಮಿತಿ ಮೀರುತ್ತದೆ.
ಬೆಂಗಳೂರಿಗಾಗಿ ಎರಡನೇ ವಿಮಾನ ನಿಲ್ದಾಣವನ್ನು ತುಮಕೂರು-ಚಿತ್ರದುರ್ಗ ನಡುವೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ತುಮಕೂರು ಸಮೀಪವಾಗಿರುವುದರಿಂದ ಸರ್ಕಾರ ಈ ನಗರವನ್ನು ಆಯ್ಕೆ ಮಾಡಿಕೊಂಡಿದೆ.
ಇತ್ತೀಚೆಗೆ ಈ ವಿಷಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬೃಹತ್ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರು ಹೊಸ ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ ಆರಂಭವಾಗಿದ್ದು ತುಮಕೂರಿನಲ್ಲಿ ನಿರ್ಮಾಣ ಮಾಡುವ ಬಗ್ಗೆ ಸಾಧಕ ಭಾದಕಗಳನ್ನು ಕುರಿತು ಅವಲೋಕಿಸಲಾಗುತ್ತಿದೆ ಎಂದಿದ್ದಾರೆ.
ಈ ಸ್ಥಳದ ಜೊತೆಗೆ ಇನ್ನೂ ಅನೇಕ ಪ್ರದೇಶಗಳ ಪರಿಶೀಲನೆ ನಡೆದಿದೆಯಾದರೂ ತುಮಕೂರು- ಚಿತ್ರದುರ್ಗ ಪ್ರಶಸ್ತವಾದ ಸ್ಥಳವಾಗಿದೆ. ಬೇರೆ ಸ್ಥಳಗಳೂ ಅಷ್ಟೊಂದು ಸೂಕ್ತ ಎಂದು ಕಂಡು ಬಂದಿಲ್ಲ ಎಂದರು. ಒಂದಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಿರುವ ಮುಂಬೈ ಮತ್ತು ಗೋವಾದಿಂದ ಪ್ರೇರಣೆ ಪಡೆದಿರುವ ರಾಜ್ಯ ಸರ್ಕಾರ ಬೆಂಗಳೂರಿಗೆ ಸಮೀಪದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸಲು ಮುಂದಾಗಿದೆ. ಒಂದೇ ನಗರದಲ್ಲಿ ಒಂದಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ನಡೆಸುವುದು ಸಾಧ್ಯ ಎನ್ನುವುದು ಸಾಬೀತಾಗಿದೆ.
ಹಾಲಿ ಇರುವ ವಿಮಾನ ನಿಲ್ದಾಣಕ್ಕಿಂತ 150 ಕಿಮೀ ಅಂತರದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಆರಂಭಿಸುವಂತಿಲ್ಲ ಎಂದು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ಮಾರ್ಗಸೂಚಿ ಹೇಳುತ್ತದೆ. ಒಂದೇ ನಗರದಲ್ಲಿ ಎರಡು ವಿಮಾನ ನಿಲ್ದಾಣಗಳನ್ನು ಆರಂಭಿಸುವಾಗ ಎರಡು ವಿಮಾನ ನಿಲ್ದಾಣಗಳ ನಡುವೆ ವಿಮಾನ ಹಾರಾಟವನ್ನು ಹಂಚಿಕೆ ಮಾಡುವ ಮಾನದಂಡಗಳನ್ನು ನಿರ್ಧರಿಸಬೇಕಾಗುತ್ತದೆ.
ವಿಮಾನ ನಿಲ್ದಾಣವನ್ನು ಆರಂಭಿಸಲು ಅಗತ್ಯವಿರುವಷ್ಟು ಭೂಮಿ ಬೇಕಾಗುತ್ತದೆ. ಜೊತೆಗೆ ಭವಿಷ್ಯದಲ್ಲಿ ವಿಸ್ತರಣೆಗೂ ಭೂಮಿ ಬೇಕಾಗುತ್ತದೆ. ಅಂತಹ ಸ್ಥಳದಲ್ಲಿ ವಿಮಾನ ನಿಲ್ದಾಣವನ್ನು ಆರಂಭಿಸಬೇಕಾಗುತ್ತದೆ ಎಂದು ಸಚಿವ ಪಾಟೀಲ್ ಉತ್ತರಿಸಿದರು.
ಈ ಸಂಬಂಧ ಮೂಲಭೂತ ಸೌಕರ್ಯ ಇಲಾಖೆ ಬಿಐಎಎಲ್ ಜೊತೆ ಮಾತುಕತೆ ನಡೆಸುತ್ತಿದೆ. ಆರಂಭದಲ್ಲಿ ಬೆಂಗಳೂರು ನಗರದೊಳಗೆ ಇರುವ ಎಚ್.ಎ.ಎಲ್ ವಿಮಾನ ನಿಲ್ದಾಣವನ್ನು ಪುನಾರಂಭಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಸೀಮಿತ ಸ್ಥಳಾವಕಾಶ ಇರುವುದರಿಂದ ಕೈ ಬಿಡಲಾಗಿದೆ.
ತುಮಕೂರು- ಚಿತ್ರದುರ್ಗ ನಡುವೆ ಮತ್ತೊಂದು ವಿಮಾನ ನಿಲ್ದಾಣ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿರುವ ಬಗ್ಗೆ ಉತ್ತರಿಸಿದ ಬಿಐಎಎಲ್ ಅಭ್ಯಂತರ ಇಲ್ಲ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್)ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾತ್ಯಕಿ ರಘುನಾತ್ ಹೇಳಿದ್ದಾರೆ.
2030 ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ 80-90 ಮಿಲಿಯನ್ ಗೆ ಏರಲಿದೆ. ಇದರಿಂದ ಒತ್ತಡ ಹೆಚ್ಚುವುದು ಸಹಜ. 2030ರ ಅಂತ್ಯಕ್ಕೆ ಈ ವಿಮಾನ ನಿಲ್ದಾಣದ ಸಾಮರ್ಥ್ಯ ಮಿತಿ ಮೀರುತ್ತದೆ. ಇಲ್ಲಿ ಇರುವುದು ಎರಡು ರನ್ ವೇಗಳು ಮಾತ್ರ. ಬೆಂಗಳೂರು ನಗರದ ವಿಮಾನ ಹಾರಾಟ ಸಾಮರ್ಥ್ಯ ಎರಡು ರನ್ ವೇಗಳಿಂತಲೂ ಹೆಚ್ಚಾದಾಗ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದಾಗಿದೆ. ಅದು ತುಮಕೂರು, ಮೈಸೂರು ಅಥವಾ ಹೊಸೂರಿನಲ್ಲಿ ಬೇಕಾದರೂ ಆಗಬಹುದು ಎಂದರು.
ಒಂದು ವೇಳೆ ಸರ್ಕಾರ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವುದಾದರೆ ಬಿಐಎಎಲ್ ಬಿಡ್ ನಲ್ಲಿ ಭಾಗವಹಿಸಲಿದೆ ಎಂದು ಅವರು ಹೇಳಿದರು. ಈ ಆರ್ಥಿಕ ವರ್ಷಾಂತ್ಯಕ್ಕೆ ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ 36-38 ಮಿಲಿಯನ್ ತಲುಪುವ ನಿರೀಕ್ಷೆ ಇದೆ ಎಂದರು. ಬೆಂಗಳೂರು ಆ ಮೂಲಕ ಕರ್ನಾಟಕ ಪ್ರಗತಿ ಸಾಧಿಸುತ್ತಿರುವುದಕ್ಕೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವುದು ಸಾಕ್ಷಿ.