ಕನ್ನಡ ಸುದ್ದಿ  /  Karnataka  /  Bengaluru News Social Media Should Have A Minimum Age Limit For Users Karnataka Hc Suggests Court News In Kannada Uks

Explainer: ಸಾಮಾಜಿಕ ಜಾಲತಾಣ ಬಳಕೆಗೆ ಕನಿಷ್ಠ ವಯಸ್ಸು ಎಷ್ಟು, ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ಹೇಳಿದ್ದೇನು

ಸರಿ ತಪ್ಪುಗಳನ್ನು ನಿರ್ಣಯಿಸುವ ವಿವೇಚನೆ ಬೆಳೆಯುವ ಮೊದಲೇ ಮಕ್ಕಳು ಸೋಷಿಯಲ್ ಮೀಡಿಯಾ ಬಳಸುತ್ತಿರುವುದು, ಅದರಿಂದ ತೊಂದರೆಗೆ ಒಳಗಾಗುತ್ತಿರುವುದು ಅತ್ಯಂತ ಕಾಳಜಿ ವಿಚಾರ. ಇದನ್ನು ಕರ್ನಾಟಕ ಹೈಕೋರ್ಟ್‌ ಪ್ರಸ್ತಾಪಿಸಿರುವುದು ದೇಶದ ಗಮನಸೆಳೆದಿದೆ.

ಸೋಷಿಯಲ್ ಮೀಡಿಯಾ ಬಳಸುವ ಬಗ್ಗೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್.
ಸೋಷಿಯಲ್ ಮೀಡಿಯಾ ಬಳಸುವ ಬಗ್ಗೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್.

ಸೋಷಿಯಲ್ ಮೀಡಿಯಾ ಬಳಕೆ ಮಾಡುವುದಕ್ಕೆ ಬೇಕಾದ ಕನಿಷ್ಠ ವಯಸ್ಸು ಈಗ ಚರ್ಚೆಯ ಕೇಂದ್ರ ಬಿಂದು. ಸೋಷಿಯಲ್ ಮೀಡಿಯಾಗಳಲ್ಲಿ ಖಾತೆ ತೆರೆಯಲು ಬೇಕಾದ ಕನಿಷ್ಠ ವಯೋಮಿತಿಯನ್ನು 13 ಎಂದು ಕೆಲವು ವರ್ಷಗಳ ಹಿಂದೆ ನಿಗದಿ ಮಾಡಲಾಗಿತ್ತು. ಆ ಸಂದರ್ಭದಲ್ಲೇ ಈ ವಿಚಾರ ಬಹಳಷ್ಟು ಟೀಕೆ, ಚರ್ಚೆಗೆ ಒಳಗಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಇದೇ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ಮಂಗಳವಾರ (ಸೆ.19) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಶೇಷವಾಗಿ ಶಾಲಾ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದರೆ ಅದು ದೇಶಕ್ಕೆ ಒಳ್ಳೆಯದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಇದರೊಂದಿಗೆ ಮತದಾನದ ಹಕ್ಕನ್ನು ಪಡೆಯುವ ವಯಸ್ಸಿನಲ್ಲಿ ಮಾತ್ರ ಸಾಮಾಜಿಕ ಜಾಲತಾಣಗಳನ್ನು ಬಳಸುವ ಅವಕಾಶವನ್ನು ನೀಡಬೇಕು. ಮತದಾನದ ಹಕ್ಕು ಪಡೆಯುವ ವಯಸ್ಸು 18 ಆಗಿರಬಹುದೂ ಅಥವಾ 21ನೇ ವರ್ಷ ವಯಸ್ಸನ್ನೂ ಸೋಷಿಯಲ್ ಮೀಡಿಯಾ ಬಳಕೆಗೆ ಸೂಕ್ತವೆಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ನ್ಯಾಯಮೂರ್ತಿ ಜಿ. ನರೇಂದ್ರ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರ ವಿಭಾಗೀಯ ಪೀಠವು ಎಕ್ಸ್ (ಹಿಂದಿನ ಟ್ವಿಟರ್) ಕಂಪನಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸುತ್ತಿದೆ. ಈ ಸಮಯದಲ್ಲಿ ಈ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ. ಶಾಲೆಗೆ ಹೋಗುವ ಮಕ್ಕಳು ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗಿದ್ದು, ಅದರ ಬಳಕೆಯನ್ನು ಮಕ್ಕಳ ಮಟ್ಟಿಗೆ ನಿಷೇಧಿಸಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ನ್ಯಾಯಪೀಠ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಕ್ಕಳಿಗೆ 17 ಅಥವಾ 18 ವರ್ಷ ತುಂಬಬೇಕು. ದೇಶದ ಹಿತದೃಷ್ಟಿಯಿಂದ ಯಾವುದು ಒಳ್ಳೆಯದು, ಯಾವುದು ಅಲ್ಲ ಎಂಬುದನ್ನು ನಿರ್ಣಯಿಸುವಂತಹ ಪ್ರಬುದ್ಧತೆ ಅವರಿಗೆ ಬರುವ ಕಾಲಘಟ್ಟವದು.ಅದಕ್ಕಿಂತ ಚಿಕ್ಕವಯಸ್ಸಿನಲ್ಲಿ ಅಂತಹ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಮನಸ್ಸನ್ನು ಹಾಳುಮಾಡುವಂತಹ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಬೇಕು. ಸೋಷಿಯಲ್ ಮೀಡಿಯಾ ಬಳಕೆಗೆ ವಯಸ್ಸಿನ ಮಿತಿಯನ್ನು ನಿಗದಿ ಮಾಡುವ ಬಗ್ಗೆಯೂ ಸರ್ಕಾರ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿರುವುದಾಗಿ ಪಿಟಿಐ ವರದಿ ಹೇಳಿದೆ.

ಸೋಷಿಯಲ್ ಮೀಡಿಯಾ ಬಳಕೆ ವಿವಾದ ಏನು

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶಗಳನ್ನು ಎತ್ತಿಹಿಡಿದ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಹಿಂದೆ ಆಗಸ್ಟ್ 10 ರಂದು ವಿಚಾರಣೆಯ ಸಮಯದಲ್ಲಿ, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ನೇತೃತ್ವದ ವಿಭಾಗೀಯ ಪೀಠವು ಷರತ್ತುಬದ್ಧ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಒಂದು ವಾರದೊಳಗೆ 25 ಲಕ್ಷ ರೂ.ಗಳನ್ನು ಠೇವಣಿ ಮಾಡುವಂತೆ ಎಕ್ಸ್ ಕಾರ್ಪ್ ಗೆ ಸೂಚಿಸಿತ್ತು. ಈ ಮೊತ್ತವು ಜೂನ್ 30 ರ ಆದೇಶದಲ್ಲಿ ಸಿಂಗಲ್ ಬೆಂಚ್ ವಿಧಿಸಿರುವ 50 ಲಕ್ಷ ರೂಪಾಯಿ ವೆಚ್ಚದ ಅರ್ಧದಷ್ಟು. ಅಂದಿನ ಆ ಆದೇಶದಲ್ಲಿ, 2021ರ ಫೆಬ್ರವರಿ 2 ರ ಮತ್ತು 2022ರ ಫೆಬ್ರವರಿ 28ರ ನಡುವೆ ಕೇಂದ್ರ ಸರ್ಕಾರವು ಹೊರಡಿಸಿದ ಸರಣಿ ತಡೆ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿದಾರರ ಅರ್ಜಿಯನ್ನು ಅದೇ ವರ್ಷ ಫೆ.28ರಂದು ತಳ್ಳಿಹಾಕಿತ್ತು.

ಈ ಕುರಿತ ಮಧ್ಯಂತರ ಆದೇಶ ಇಂದು (ಸೆ.20) ಪ್ರಕಟವಾಗುವ ನಿರೀಕ್ಷೆ ಇದೆ.

ಸೋಷಿಯಲ್ ಮೀಡಿಯಾ ಬಳಕೆಗೆ ಕನಿಷ್ಠ ವಯೋಮಿತಿ ಎಷ್ಟು

ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಟಿಕ್‌ಟಾಕ್ ಸೇರಿ ಜಗತ್ತಿನ ಬಹುತೇಕ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಖಾತೆ ತೆರೆಯಲು ಕನಿಷ್ಠ ವಯಸ್ಸು 13 ಎಂದು ನಿಗದಿ ಮಾಡಲಾಗಿದೆ. ಬಹುತೇಕ ಕಂಪನಿಗಳು ಅಮೆರಿಕ ಮೂಲದವಾಗಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಅಲ್ಲಿನ ನೆಲದ ಕಾನೂನನ್ನು ಈ ಕಂಪನಿಗಳು ಜಾಗತಿಕ ಬಳಕೆಗೆ ಅನ್ವಯಿಸುತ್ತಿವೆ.

ಅಮೆರಿಕದ 1998ರ ಕಾನೂನು ಪ್ರಕಾರ, ಸೋಷಿಯಲ್ ಮೀಡಿಯಾ ಬಳಕೆಗೆ ಕನಿಷ್ಠ ವಯಸ್ಸಿನ ಅರ್ಹತೆ ಹುಟ್ಟಿಕೊಂಡಿದೆ. ಅಲ್ಲಿನ ಈ ಶಾಸನ ಪ್ರಕಾರ, ಪಾಲಕರ ಒಪ್ಪಿಗೆ ಇಲ್ಲದೆ ಮಕ್ಕಳ ವೈಯಕ್ತಿಕ ಡೇಟಾ ಸಂಗ್ರಹಿಸುವುದು ನಿಷಿದ್ಧ.

ಅಮೆರಿಕದಲ್ಲೂ ಸೋಷಿಯಲ್ ಮೀಡಿಯಾದ ಈ ನಡೆ ಟೀಕೆಗೆ ಒಳಗಾಗಿದೆ. ಮಕ್ಕಳು ಸೋಷಿಯಲ್ ಮೀಡಿಯಾ ಬಳಸುವುದಕ್ಕೆ ಕನಿಷ್ಠ ವಯೋಮಿತಿ 16 ಅಥವಾ 17 ಅಥವಾ 18 ವರ್ಷ ದಾಟಿರಬೇಕು. ಇದನ್ನು ಅಗತ್ಯ ಅಧ್ಯಯನ ನಡೆಸಿ ಅಂತಿಮಗೊಳಿಸಬೇಕು ಎಂಬ ಬೇಡಿಕೆ ಇದೆ.