ಕನ್ನಡ ಸುದ್ದಿ  /  Karnataka  /  Bengaluru News Stone Pelting On Trains Is A Punishable Offense Us 152 153 154 Of The Railway Act Indian Railways Uks

Stone Pelting: ರೈಲುಗಳ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ; ಯಾವ ಕಾನೂನು ಅನ್ವಯ, ಇಲ್ಲಿದೆ ವಿವರ

ಕರ್ನಾಟಕದಲ್ಲಿ ಈ ತಿಂಗಳ ಆರಂಭದಲ್ಲಿ ಕೆಲವು ರೈಲುಗಳ ಮೇಲೆ ಕಲ್ಲುತೂರಾಟ ನಡೆದ ಪ್ರಕರಣ ವರದಿಯಾಗಿತ್ತು. ಈ ರೀತಿರೈಲುಗಳ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ, ಯಾವ ಕಾನೂನು ಅನ್ವಯವಾಗುತ್ತದೆ ಎಂಬುದು ಸಹಜ ಕುತೂಹಜಲ. ಇಲ್ಲಿದೆ ಅದರ ವಿವರ.

ಭಾರತೀಯ ರೈಲ್ವೆಯ ರೈಲುಗಳ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ ಎಂಬ ವಿವರ ಈ ವರದಿಯಲ್ಲಿದೆ. ರೈಲೊಂದರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
ಭಾರತೀಯ ರೈಲ್ವೆಯ ರೈಲುಗಳ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ ಎಂಬ ವಿವರ ಈ ವರದಿಯಲ್ಲಿದೆ. ರೈಲೊಂದರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೆಲವು ಕಡೆ ವಂದೇ ಭಾರತ್‌ ರೈಲುಗಳ ಮೇಲೆ ಕಲ್ಲು ತೂರಾಟದ ಕೆಲ ಘಟನೆಗಳು ವರದಿಯಾಗಿದ್ದವು. ಚಳಗೇರಿ - ಕುಮಾರಪಟ್ಟಣಂ ಸೈಡಿಂಗ್ ಮತ್ತು ಚಿಕ್ಕಬಾಣಾವರ, ಕುಪ್ಪಂ ಮತ್ತು ಧರ್ಮಾವರಂ ರೈಲ್ವೆ ನಿಲ್ದಾಣಗಳ ಬಳಿ ಈ ಕಲ್ಲು ತೂರಾಟ ಘಟನೆ ನಡೆದಿದ್ದವು. ಅಪರಿಚಿತರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸ್‌ ಸಿಬ್ಬಂದಿ ಅಂತಹ ಪ್ರದೇಶಗಳಲ್ಲಿ ಜಾಗರೂಕರಾಗಿದ್ದಾರೆ.

ನೈಋತ್ಯ ರೈಲ್ವೆ ವಲಯದ ಮೂಲಕ ಹಾದುಹೋಗುವ ನಾಲ್ಕು ವಂದೇ ಭಾರತ್ ರೈಲುಗಳ ಮೇಲೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ಸ್ಥಳಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಭಾನುವಾರ ಸಂಭವಿಸಿದ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲವಾದರೂ, ರೈಲುಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದರು.

ನೈಋತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ, ಭಾನುವಾರ (ಮಾ.3) ಬೆಳಿಗ್ಗೆ 6.15 ಕ್ಕೆ ಮೊದಲ ಘಟನೆ ನಡೆದಿದ್ದು, ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 20661) ಚಿಕ್ಕಬಾಣಾವರ ರೈಲ್ವೆ ನಿಲ್ದಾಣವನ್ನು ದಾಟಿದ ನಂತರ ಕಲ್ಲು ತೂರಾಟ ನಡೆದಿತ್ತು.

ಅದೇ ದಿನ ಮಧ್ಯಾಹ್ನ ನಂತರ 3.20 ರ ಸುಮಾರಿಗೆ ಧಾರವಾಡದಿಂದ ಬೆಂಗಳೂರು ಸಿಟಿ ಜಂಕ್ಷನ್ ಗೆ ರೈಲು (ಸಂಖ್ಯೆ 20662) ಚಲಿಸುತ್ತಿದ್ದಾಗ ಎರಡನೇ ಘಟನೆ ನಡೆದಿದೆ.

ಮೂರನೇ ಘಟನೆ ಸಂಜೆ 4.30 ರ ಸುಮಾರಿಗೆ ಮೈಸೂರು ಜಂಕ್ಷನ್‌ನಿಂದ ಚೆನ್ನೈ ಸೆಂಟ್ರಲ್‌ಗೆ ತೆರಳುತ್ತಿದ್ದ ರೈಲು (ಸಂಖ್ಯೆ 20608) ಆಂಧ್ರಪ್ರದೇಶದ ಕುಪ್ಪಂ ನಿಲ್ದಾಣದ ಮುಂದೆ ಹೋದಾಗ ಕಲ್ಲು ತೂರಾಟ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಧರ್ಮಾವರಂ ಜಂಕ್ಷನ್ ಬಳಿ ರೈಲು (ಸಂಖ್ಯೆ 20704) ರಾತ್ರಿ 8 ಗಂಟೆಗೆ ಹಾದುಹೋದಾಗ ನಾಲ್ಕನೇ ಘಟನೆ ನಡೆದಿದೆ.

ಇದೇ ರೀತಿ, ನೈಋತ್ಯ ರೈಲ್ವೆಯ ಕೆಲವು ವಿಭಾಗಗಳಲ್ಲಿ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಕೆಲವು ಘಟನೆಗಳು ಇತ್ತೀಚೆಗೆ ಚಳಗೇರಿ-ಕುಮಾರಪಟ್ಟಣಂ ಸೈಡಿಂಗ್ ನಡುವೆ ಮತ್ತು ಚಿಕ್ಕಬಾಣಾವರ, ಕುಪ್ಪಂ ಮತ್ತು ಧರ್ಮಾವರಂ ರೈಲ್ವೆ ನಿಲ್ದಾಣಗಳ ಬಳಿ ವರದಿಯಾಗಿವೆ. ರೈಲ್ವೆ ರಕ್ಷಣಾ ಪಡೆ ಮತ್ತು ಜಿಆರ್‌ಪಿ (ಸರ್ಕಾರಿ ರೈಲ್ವೆ ಪೊಲೀಸ್) ಸಿಬ್ಬಂದಿ ಅಂತಹ ಪ್ರದೇಶಗಳಲ್ಲಿ ಜಾಗರೂಕರಾಗಿದ್ದಾರೆ.

ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ; ಯಾವ ಕಾನೂನು ಅನ್ವಯ

ದೇಶಾದ್ಯಂತ ವಿವಿಧೆಡೆ ಈ ರೀತಿ ಕಲ್ಲು ತೂರಾಟ ಪ್ರಕರಣಗಳು ಪದೇಪದೆ ವರದಿಯಾಗುತ್ತಿರುತ್ತದೆ. ಹೀಗಾಗಿ, ಈ ರೀತಿ ಕಲ್ಲು ತೂರಾಟ ನಡೆಸಿದವರಿಗೆ ಏನು ಶಿಕ್ಷೆ, ಆರೋಪಿಗಳ ವಿರುದ್ಧ ಯಾವ ಕಾನೂನು ಅನ್ವಯವಾಗುತ್ತದೆ. ರೈಲ್ವೆ ಕಾನೂನು ಏನು ಹೇಳುತ್ತದೆ ಎಂಬಿತ್ಯಾದಿ ಕುತೂಹಲ ತಣಿಸುವ ವಿವರ ಇಲ್ಲಿದೆ.

ರೈಲ್ವೆ ಕಾಯ್ದೆಯ ಸೆಕ್ಷನ್ 153, 154ರ ಪ್ರಕಾರ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್‌ ಅಪರಾಧ. ಯಾವುದೇ ವ್ಯಕ್ತಿ, ಕಾನೂನುಬಾಹಿರ ಕೃತ್ಯ ಅಥವಾ ಉದ್ದೇಶಪೂರ್ವಕ ಲೋಪ ಅಥವಾ ನಿರ್ಲಕ್ಷ್ಯದಿಂದ, ರೈಲ್ವೆಯಲ್ಲಿ ಪ್ರಯಾಣಿಸುವ ಅಥವಾ ಇರುವ ವ್ಯಕ್ತಿಯ ಸುರಕ್ಷತೆಗೆ ಅಪಾಯವನ್ನು ಉಂಟುಮಾಡಿದರೆ, ಅಥವಾ ರೈಲ್ವೆಯ ರೋಲಿಂಗ್ ಸ್ಟಾಕ್ ಗೆ ಅಡ್ಡಿಪಡಿಸುವುದು ಮತ್ತು ಅಡ್ಡಿಪಡಿಸಲು ಪ್ರಯತ್ನಿಸುವುದು ಮಾಡಿದರೆ ಅದು ಕ್ರಿಮಿನಲ್ ಅಪರಾಧ. ಹೀಗಾಗಿ ರೈಲ್ವೆ ಕಾಯ್ದೆ 1989 ರ ಸೆಕ್ಷನ್ 153 ರ ಪ್ರಕಾರ ಅಂತಹ ವ್ಯಕ್ತಿಗೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಬಹುದು.

ದುಡುಕಿನ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ಯಾವುದೇ ಕಾರ್ಯವನ್ನು ಮಾಡುವ ಅಥವಾ ಯಾವುದೇ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಯ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದರೆ ಅಂತಹ ವ್ಯಕ್ತಿಗೆ, ರೈಲ್ವೇ ಕಾಯಿದೆ 1989 ರ ಸೆಕ್ಷನ್ - 154 ರ ಅಡಿಯಲ್ಲಿ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಅಥವಾ ದಂಡ, ಎರಡನ್ನೂ ವಿಧಿಸಬಹುದು.

ಕಲ್ಲು ತೂರಾಟ ಕಂಡರೆ ಯಾರಿಗೆ ದೂರು ನೀಡಬೇಕು

ಜಾಗರೂಕತೆಯನ್ನು ಹೆಚ್ಚಿಸುವುದರ ಹೊರತಾಗಿ, ಅಂತಹ ಘಟನೆಗಳ ಸ್ಥಳಗಳಲ್ಲಿ ಮತ್ತು ಶಾಲೆಗಳು, ಗ್ರಾಮಗಳು ಇತ್ಯಾದಿಗಳನ್ನು ಒಳಗೊಂಡ ನೆರೆಹೊರೆಯ ಪ್ರದೇಶಗಳಲ್ಲಿ ರೈಲ್ವೆ ಪೊಲೀಸ್‌ ಜಾಗೃತಿ ಅಭಿಯಾನಗಳನ್ನು ಆಯೋಜಿಸುತ್ತಿದೆ. ಇದರಿಂದಾಗಿ ದುಷ್ಕರ್ಮಿಗಳು ರೈಲು ಕಾರ್ಯಾಚರಣೆಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಂದ ದೂರವಿರುತ್ತಾರೆ. ಅತಿಕ್ರಮಣ ಮತ್ತು ಕಲ್ಲು ತೂರಾಟದಂತಹ ಘಟನೆಗಳು ಕಂಡುಬಂದರೆ ಸಹಾಯವಾಣಿ ಸಂಖ್ಯೆ (139) ಗೆ ಮಾಹಿತಿ ನೀಡುವಂತೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಮನವಿ ಮಾಡಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)