ಬೆಂಗಳೂರಲ್ಲಿ ಬಿಸಿಲಿನ ತಾಪ, ಬೀದಿ ಬದಿ ವ್ಯಾಪಾರಿಗಳು ಕಂಗಾಲು; ಸುಲಭ ಸಂಪಾದನೆಗೆ ಚುನಾವಣಾ ಪ್ರಚಾರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಬಿಸಿಲಿನ ತಾಪ, ಬೀದಿ ಬದಿ ವ್ಯಾಪಾರಿಗಳು ಕಂಗಾಲು; ಸುಲಭ ಸಂಪಾದನೆಗೆ ಚುನಾವಣಾ ಪ್ರಚಾರ

ಬೆಂಗಳೂರಲ್ಲಿ ಬಿಸಿಲಿನ ತಾಪ, ಬೀದಿ ಬದಿ ವ್ಯಾಪಾರಿಗಳು ಕಂಗಾಲು; ಸುಲಭ ಸಂಪಾದನೆಗೆ ಚುನಾವಣಾ ಪ್ರಚಾರ

ಬೆಂಗಳೂರಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದ್ದು, ಬೀದಿ ಬದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಸುಲಭ ಸಂಪಾದನೆಗೆ ಚುನಾವಣಾ ಪ್ರಚಾರವನ್ನು ನೆಚ್ಚಿಕೊಳ್ಳಲಾರಂಭಿಸಿದ್ದಾರೆ.ಒಂದು ಕಡೆ ನೀರಿನ ಅಭಾವ ಮತ್ತೊಂದು ಕಡೆ ಬಿಸಿಲಿನ ಝಳದ ಕಾರಣ ನಿರೀಕ್ಷಿತ ವ್ಯಾಪಾರವಿಲ್ಲದೆ ಬೀದಿ ಬದಿ ವ್ಯಾಪಾರಿಗಳು ಪರ್ಯಾಯ ಸಂಪಾದನೆ ಕಡೆಗೆ ಗಮನಹರಿಸಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಲ್ಲಿ ಬಿಸಿಲಿನ ತಾಪ, ಬೀದಿ ಬದಿ ವ್ಯಾಪಾರಿಗಳು ಕಂಗಾಲು ಆಗಿದ್ದು, ಸುಲಭ ಸಂಪಾದನೆಗೆ ಚುನಾವಣಾ ಪ್ರಚಾರದ ಕಡೆಗೆ ಗಮನಹರಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಬಿಸಿಲಿನ ತಾಪ, ಬೀದಿ ಬದಿ ವ್ಯಾಪಾರಿಗಳು ಕಂಗಾಲು ಆಗಿದ್ದು, ಸುಲಭ ಸಂಪಾದನೆಗೆ ಚುನಾವಣಾ ಪ್ರಚಾರದ ಕಡೆಗೆ ಗಮನಹರಿಸಿದ್ದಾರೆ. (ಸಾಂಕೇತಿಕ ಚಿತ್ರ) (ravikrishnareddy/ IIMB)

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಅಭಾವ ಮತ್ತು ಬಿಸಿಲಿನ ಝಳ ಯಾರನ್ನೂ ಕಾಡದೆ ಬಿಟ್ಟಿಲ್ಲ. ಅದರಲ್ಲೂ ಬೀದಿಬದಿ ವ್ಯಾಪಾರಿಗಳು, ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುವವರು ಹೈರಾಣಾಗಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಕಷ್ಟವಂತೂ ಹೇಳತೀರದು. ಒಂದು ಕಡೆ ನೀರಿನ ಅಭಾವ, ಗ್ರಾಹಕರ ಕೊರತೆ ಮತ್ತು ಬಿಸಿಲಿನಲ್ಲಿ ನಿಲ್ಲಲಾಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೂ ಕೆಲಸ ಮಾಡದೆ ಸುಮ್ಮನಿರುವಂತಿಲ್ಲ. ಇವರಿಗೆ ನಿಶ್ಚಿತ ವರಮಾನ ಅಥವಾ ಸಂಬಳ ಇರುವುದಿಲ್ಲ. ಅಂದು ದುಡಿದರೆ ಮಾತ್ರ ಅಂದಿನ ಹೊಟ್ಟೆ ತುಂಬುತ್ತದೆ.

ಬಿಸಿಲಿನ ಬೇಗೆಯಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಬೀದಿಬದಿಯಲ್ಲಿ ವ್ಯಾಪಾರ ಮಾಡುವುದು ಕಷ್ಟವಾಗಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಉಷ್ಣಾಂಶ ಹೆಚ್ಚುತ್ತಿರುವುದರಿಂದ ಗ್ರಾಹಕರ ಕೊರತೆಯನ್ನು ಎದುರಿಸುತ್ತಿದ್ದಾರೆ.

ಕೆಲವು ವ್ಯಾಪಾರಿಗಳು ಬೆಳಗಿನ ವ್ಯಾಪಾರವನ್ನು ಕೈಬಿಟ್ಟು ಮಧ್ಯಾಹ್ನದ ನಂತರ ಆರಂಭಿಸುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳ ಹೋರಾಟಗಾರರ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಅನೇಕ ವ್ಯಾಪಾರಿಗಳು ಆನಾರೋಗ್ಯಕ್ಕೆ ಈಡಾಗಿರುವುದು ಕಂಡು ಬಂದಿದೆ. ಇದು ಒಂದು ಕಡೆ ನಿಂತು ವ್ಯಾಪಾರ ಮಾಡುವವರ ಪರಿಸ್ಥಿತಿ.

ತಳ್ಳುಗಾಡಿಯವರ ಬದುಕಿನ ಬವಣೆ

ಇನ್ನು ತಳ್ಳುವ ಗಾಡಿಗಳಲ್ಲಿ ಬೀದಿ ಬೀದಿ ಸುತ್ತುವ ವ್ಯಾಪಾರಿಗಳದ್ದು ಮತ್ತೊಂದು ರೀತಿಯ ವ್ಯಥೆ. ಇವರು ಬೆಳಗ್ಗೆಯಿಂದ ಸಂಜೆಯವರೆಗೆ ದಿನವಿಡೀ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಾರೆ. ತರಕಾರಿ, ಹೂ ಹಣ್ಣು, ಆಟದ ಸಾಮಾನುಗಳು, ಮನೆಯ ಅಗತ್ಯ ವಸ್ತುಗಳು, ಉಡುಪು ಇತ್ಯಾದಿ. ಈಗ ಅವರ‍್ಯಾರೂ ದಿನವಿಡೀ ಗಾಡಿಗಳನ್ನು ತಳ್ಳುವ ಪರಿಸ್ಥಿತಿಯಲಿಲ್ಲ. ಆದ್ದರಿಂದ ಆದಷ್ಟೂ ಕಡಿಮೆ ವಸ್ತುಗಳನ್ನು ಖರೀದಿಸಿ ಕಡಿಮೆ ವ್ಯಾಪಾರ ಮಾಡುತ್ತಿರುವುದಾಗಿ ಹೇಳುತ್ತಾರೆ. ಇದರಿಂದ ಹೊಟ್ಟಪಾಡಿನ ಮೇಲೆ ಹೊಡೆತ ಬಿದ್ದಿದೆ. ಆಸ್ಪತ್ರೆ ಮಕ್ಕಳ ವಿದ್ಯಾಭ್ಯಾಸದ ಖರ್ಚು ಬಾಡಿಗೆ ದಿನಸಿ ಎಲ್ಲವನ್ನೂ ಸರಿದೂಗಿಸುವುದು ಕಷ್ಟವಾಗಿದೆ ಎಂದು ಶಾರದಮ್ಮ ಎಂಬುವರು ಹೇಳುತ್ತಾರೆ.

ತರಕಾರಿ ಹೂವು ಹಣ್ಣು ವ್ಯಾಪಾರದವರ ಸಂಕಟ

ಇನ್ನು ತರಕಾರಿ ಹೂ ಹಣ್ಣು ವ್ಯಾಪಾರ ಮಾಡುವವರು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರ ಮಾಡುತ್ತೇವೆ. ಆ ನಂತರ ಓಡಾಡುವವದು ಕಷ್ಟ ಎಂದು ಮುನಿಯಪ್ಪ ಎಂಬ ತರಕಾರಿ ವ್ಯಾಪಾರಿ ಹೇಳುತ್ತಾರೆ. ಮೊದಲೆಲ್ಲಾ 12 ಗಂಟೆಯವರೆಗೂ ವ್ಯಾಪಾರ ಮಾಡಿ ನಂತರ 4 ಗಂಟೆಯ ನಂತರವೂ ವ್ಯಾಪಾರಕ್ಕೆ ಇಳಿಯುತ್ತಿದ್ದೆವು. ಆದರೆ ಈಗ ಸಾಧ್ಯವಾಗುತ್ತಿಲ್ಲ ಸುಸ್ತು ಆವರಿಸುತ್ತದೆ ಎನ್ನುತ್ತಾರೆ.

ದಿನವಿಡೀ ವ್ಯಾಪಾರ ಮಾಡುವುದು ಸವಾಲಾಗಿ ಪರಿಣಮಿಸಿದೆ. ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ಸಂಜೆ ಚಾಟ್ಸ್ ಮತ್ತು ರಾತ್ರಿ ಊಟದ ವ್ಯಾಪಾರ ಮಾಡುವವರು ಇದ್ದರು. ಈಗ ಅರ‍್ಯಾರೂ ಕಾಣಿಸುತ್ತಿಲ್ಲ. ೨ ಗಂಟೆಯ ನಂತರ ಮಾತ್ರ ವ್ಯಾಪಾರ ಅರಂಭಿಸುತ್ತಿದ್ದಾರೆ.

ಹೂ ಹಣ್ಣು, ತರಕಾರಿ ವ್ಯಾಪಾರ ಮಾಡುವವರಿಗೆ ಮತ್ತೊಂದು ಕಷ್ಟದ ಪರಿಸ್ಥಿತಿ ಇದೆ. ಇವು.ಬಿಸಿಲಿಗೆ ಬೇಗ ಬಾಡುತ್ತವೆ ಮತ್ತು ಹಾಳಾಗುತ್ತವೆ. ಮೊದಲೇ ಮಳೆಯ ಕೊರತೆಯಿಂದಾಗಿ ಬೆಲೆ ಗಗನಕ್ಕೇರಿದೆ. ಹೆಚ್ಚು ಬಂಡವಾಳ ಹಾಕಿ ವ್ಯಾಪಾರ ಮಾಡುವಂತಿಲ್ಲ. ಬೇಗ ಹಾಳಾಗುವ ಭಯ ಇದೆ ಎನ್ನುತ್ತಾರೆ. ಹೂ, ಹಣ್ಣು ತರಕಾರಿ ವ್ಯಾಪಾರ ಬಿಟ್ಟು ಬೇರೆ ಏನು ವ್ಯಾಪಾರ ಮಾಡಬಹುದು ಎಂದು ಯೋಚಿಸುತ್ತಿರುವುದಾಗಿ ಮತ್ತೊಬ್ಬ ವ್ಯಾಪಾರಿ ಹೇಳುತ್ತಾರೆ.

ಪೊಲೀಸ್ ಕಾಟ, ಪ್ರಚಾರವೇ ಬೆಸ್ಟ್‌

ಒಂದು ಕಡೆ ನಿಂತು ವ್ಯಾಪಾರ ಮಾಡುವವರದ್ದು ಮತ್ತೊಂದು ಕಷ್ಟ. ಬೃಹತ್ ಕೊಡೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡಲು ನಿಂತರೆ ಓಡಾಡುವವರಿಗೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಪೊಲೀಸರು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.

ಕೆಲವು ವ್ಯಾಪಾರಿಗಳು ಚುನಾವಣೆ ಮುಗಿಯುವವರಿಗೆ ಈ ವ್ಯಾಪಾರದ ಸಹವಾಸವೇ ಬೇಡ ಎನ್ನುವವರೂ ಇದ್ದಾರೆ. ಬೆಳಗ್ಗೆ ಮತ್ತು ಸಂಜೆ ಮೂರ‍್ನಾಲ್ಕು ಗಂಟೆ ಚುನಾವಣಾ ಪ್ರಚಾರಕ್ಕೆ ಹೋದರೆ ಕೈ ತುಂಬಾ ಸಂಪಾದನೆಯಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಇದು ಸುಲಭವಾದ ಸಂಪಾದನೆಯ ಮಾರ್ಗ, ಯಾವ ಪಕ್ಷವಾದರೂ ಅಡ್ಡಿ ಇಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಸಾವಿರಾರು ಬೀದಿಬದಿ ಮತ್ತು ತಳ್ಳುವ ಗಾಡಿಗಳ ವ್ಯಾಪಾರಿಗಳು ಸಂಕಷ್ಟದಲ್ಲಿರುವುದಂತೂ ಸತ್ಯ.

(ವರದಿ- ಎಚ್.ಮಾರುತಿ, ಬೆಂಗಳೂರು)

Whats_app_banner