ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳ ನಿರಾಸಕ್ತಿ

ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳ ನಿರಾಸಕ್ತಿ

ಕರ್ನಾಟಕದಲ್ಲಿ ಎನ್‍ಇಪಿ ರದ್ದುಗೊಳ್ಳುತ್ತಿದ್ದು ಕನ್ನಡ ಮಾಧ್ಯಮವೂ ಬಂದ್ ಆಗುವ ಸಾಧ್ಯತೆ. 4 ವರ್ಷಗಳ ಬಿಎಸ್‍ಸಿ ಆನರ್ಸ್ ಕೋರ್ಸ್ ಭವಿಷ್ಯವೂ ಡೋಲಾಯಮಾನವಾಗಿದೆ.

ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳ ನಿರಾಸಕ್ತಿ
ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳ ನಿರಾಸಕ್ತಿ

ರಾಷ್ರೀಯ ಶಿಕ್ಷಣ ನೀತಿ (NEP) ಶಿಫಾರಸ್ಸಿನಂತೆ ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಕನ್ನಡ ಮಾಧ್ಯಮದಲ್ಲಿ ಆರಂಭಿಸಲಾಗಿತ್ತು. ಆದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಈ ಕೋರ್ಸ್‍ಗಳಿಗೆ ಈ ಶೈಕ್ಷಣ ಕ ವರ್ಷದಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆರಳೆಣಿಕೆಯಷ್ಟೂ ವಿದ್ಯಾರ್ಥಿಗಳು ಕನ್ನಡ ಮೀಡಿಯಂ ಆಯ್ಕೆ ಮಾಡಿಕೊಳ್ಳುತ್ತಿಲ್ಲ.

ಟ್ರೆಂಡಿಂಗ್​ ಸುದ್ದಿ

ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದೆ ಎರಡನೇ ಸುತ್ತಿನ ಕೌನ್ಸೆಲಿಂಗ್‍ನಲ್ಲಿ ಒಬ್ಬರೂ ಈ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಂಡಿಲ್ಲ. ಈ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಪರಿಚಯಿಸಲಾಗಿತ್ತು. ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಎನ್‍ಇಪಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದು ಈ ಕೋರ್ಸ್‍ಗಳ ಭವಿಷ್ಯ ಡೋಲಾಯಮಾನವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸಿನ ಆಧಾರದ ಮೇಲೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ(ಎಐಸಿಟಿಇ) ಪ್ರಾದೇಶಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಲು ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿತ್ತು. ಸಿವಿಲ್ ಮತ್ತು ಮೆಕ್ಯಾನಿಕಲ್ ಕೋರ್ಸ್‍ಗಳನ್ನು ಮಾತ್ರ ಕನ್ನಡ ಮಾಧ್ಯಮದಲ್ಲಿ ಬೋಧಿಸಲು ನಿರ್ಧರಿಸಲಾಗಿತ್ತು. 2021-22 ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇಂಗ್ಲೀಷ್ ಭಾಷೆಯಲ್ಲಿದ್ದ ಇಂಜಿನಿಯರಿಂಗ್ ಕೋರ್ಸ್‍ಗಳ ಪಠ್ಯಗಳನ್ನು ಕನ್ನಡ ಭಾಷೆಗೆ ತುರ್ಜಮೆ ಮಾಡಿಸಿತ್ತು.

ಚಿಕ್ಕಬಳ್ಳಾಪುರದ ಎಸ್ ಜೆಸಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೈಸೂರಿನ ಮಹಾರಾಜ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗಳನ್ನು ಆರಂಭಿಸಿದ್ದವು.

2021-22 ರಲ್ಲಿ 17 ವಿದ್ಯಾರ್ಥಿಗಳು ಮಾತ್ರ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು, ಕೇವಲ 7 ವಿದ್ಯಾರ್ಥಿಗಳು ಮಾತ್ರ ದಾಖಲಾತಿ ಪಡೆದುಕೊಂಡಿದ್ದರು. ನಂತರ ಈ ಎಲ್ಲ 7 ವಿದ್ಯಾರ್ಥಿಗಳೂ ಕನ್ನಡ ಮಾಧ್ಯಮವನ್ನು ಕೈಬಿಟ್ಟು ಇಂಗ್ಲೀಷ್ ಮಾಧ್ಯಮಕ್ಕೆ ವರ್ಗಾವಣೆಗೊಂಡರು. 2022-23ರ ಶೈಕ್ಷಣ ಕ ವರ್ಷದಲ್ಲಿ ಭಾಲ್ಕಿಯ ಬಿಕೆಐಟಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದರೂ ನಂತರ ಆ ವಿದ್ಯಾರ್ಥಿ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಕೊಂಡಿದ್ದಾರೆ.

ಬಿಎಸ್‍ಸಿ ಆನರ್ಸ್‍ಗೂ ನೀರಸ ಪ್ರತಿಕ್ರಿಯೆ

ಎನ್‍ಇಪಿ ಪ್ರಸ್ತಾವನೆಯ ಆಧಾರದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಪ್ರಯೋಗಾಲಯ ಮತ್ತಿತರ ಸವಲತ್ತುಗಳನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಟಿಯು 4 ವರ್ಷಗಳ ಬಿಎಸ್‍ಸಿ ಆನರ್ಸ್ ಕೋರ್ಸ್ ಅನ್ನು ಪರಿಚಯಿಸಿತ್ತು. ಪ್ರತಿ ಕಾಲೇಜಿಗೆ 40 ಸೀಟುಗಳಂತೆ 50 ಕಾಲೇಜುಗಳಿಗೆ ಬಿಎಸ್‍ಸಿ ಆನರ್ಸ್ ಆರಂಭಿಸಲು ಅನುಮತಿ ನೀಡಲಾಗಿತ್ತು. ಆದರೆ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳು ಮಾತ್ರ ಈ ಕೋರ್ಸ್ ಅನ್ನು ಆರಂಭಿಸಿದ್ದವು. 2022-23ರಲ್ಲಿ ಈ ಕೋರ್ಸ್‍ಗೆ ಕೇವಲ 32 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಮತ್ತು ಬಿಎಸ್‍ಸಿ ಆನರ್ಸ್ ಕೋರ್ಸ್‍ಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ವರ್ಷದ ದಾಖಲಾತಿಯನ್ನು ಆಧರಿಸಿ ಈ ಕೋರ್ಸ್‍ಗಳನ್ನು ಮುಂದುವರೆಸುವ ಬಗ್ಗೆ ವಿಟಿಯು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ಎನ್‍ಇಪಿಯನ್ನು ಹಿಂಪಡೆದಿದ್ದು, ತನ್ನದೇ ಆದ ರಾಜ್ಯ ಶಿಕ್ಷಣ ನೀತಿಯನ್ನು(ಎಸ್‍ಇಪಿ) ಜಾರಿಗೊಳಿಸಲು ನಿರ್ಧರಿಸಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಈ ಎರಡೂ ಕೋರ್ಸ್‍ಗಳು ಬಹುತೇಕ ಬಂದ್ ಆಗುವುದು ನಿಶ್ಚಯ ಎನ್ನಲಾಗಿದೆ. ಬಹುಶಃ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ಬಂದರೆ ಉನ್ನತ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯಲು ವಿದ್ಯಾರ್ಥಿಗಳು ನಿರ್ಧರಿಸಬಹುದು ಎಂದು ಕನ್ನಡ ಪರ ಹೋರಾಟಗಾರರ ಅಭಿಮತವಾಗಿದೆ. ಒಟ್ಟಾರೆ ಉನ್ನತ ಶಿಕ್ಷಣ ಮಾತೃಭಾಷೆಯಲ್ಲಿ ಅಲಭ್ಯ ಎನ್ನುವುದಂತೂ ಸ್ಪಷ್ಟವಾಗಿದೆ.

(ವರದಿ: ಎಚ್.ಮಾರುತಿ)

ಟಿ20 ವರ್ಲ್ಡ್‌ಕಪ್ 2024