ಸುಪ್ರೀಂ ಕೋರ್ಟ್ ಸೂಚನೆ; ಐಎಎಸ್ ಅಧಿಕಾರಿ ರೋಹಿಣಿ ವಿರುದ್ದದ ಫೇಸ್‌ಬುಕ್ ಪೋಸ್ಟ್ ತೆಗೆದು ಹಾಕಿದ ಐಪಿಎಸ್‌ ರೂಪಾ
ಕನ್ನಡ ಸುದ್ದಿ  /  ಕರ್ನಾಟಕ  /  ಸುಪ್ರೀಂ ಕೋರ್ಟ್ ಸೂಚನೆ; ಐಎಎಸ್ ಅಧಿಕಾರಿ ರೋಹಿಣಿ ವಿರುದ್ದದ ಫೇಸ್‌ಬುಕ್ ಪೋಸ್ಟ್ ತೆಗೆದು ಹಾಕಿದ ಐಪಿಎಸ್‌ ರೂಪಾ

ಸುಪ್ರೀಂ ಕೋರ್ಟ್ ಸೂಚನೆ; ಐಎಎಸ್ ಅಧಿಕಾರಿ ರೋಹಿಣಿ ವಿರುದ್ದದ ಫೇಸ್‌ಬುಕ್ ಪೋಸ್ಟ್ ತೆಗೆದು ಹಾಕಿದ ಐಪಿಎಸ್‌ ರೂಪಾ

ಕರ್ನಾಟಕದ ಇಬ್ಬರು ಮಹಿಳಾ ಐಎಎಸ್ ಮತ್ತು ಐಪಿಎಸ್‌ ಅಧಿಕಾರಿಗಳ ನಡುವಿನ ಜಗಳ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ವಿರುದ್ದದ ಫೇಸ್‌ಬುಕ್ ಪೋಸ್ಟ್ ತೆಗೆದು ಹಾಕಿದ್ದಾರೆ.

ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

ಬೆಂಗಳೂರು: ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧದ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ಗಳನ್ನು ತೆಗೆದು ಹಾಕಬೇಕು ಎಂದು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಘನ ನ್ಯಾಯಾಲಯ ಸೂಚನೆ ನೀಡಿದ ಕೂಡಲೇ ರೂಪಾ ಮೌದ್ಗಿಲ್ ನ್ಯಾಯಾಲಯದ ಸೂಚನೆಗೆ ಗೌರವ ನೀಡಿ ಪ್ರತಿವಾದಿ ವಿರುದ್ದ ಫೇಸ್‌ಬುಕ್ ಮತ್ತು ಸಾಮಾಜಿಕ ಜಾಲತಾಣ ಗಳಲ್ಲಿ ಹಾಕಿರುವ ಪೋಸ್ಟ್ ಮತ್ತು ಹೇಳಿಕೆಗಳನ್ನು ತೆಗೆದು ಹಾಕಿರುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಆಫಿಡವಿಟ್ ಸಲ್ಲಿಸಿದ್ದಾರೆ.

ಪ್ರತಿವಾದಿ ಕೇವಲ ಕೆಲವೇ ಪೋಸ್ಟ್‌ಗಳಿಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಪ್ರತಿವಾದಿ ಕುರಿತಾದ ಎಲ್ಲ ಪೋಸ್ಟ್ ಮತ್ತು ಹೇಳಿಕೆಗಳನ್ನು ಡಿಲಿಟ್ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ಮುಂದೆ ಪ್ರತಿವಾದಿ ಕುರಿತು ಯಾವುದೇ ರೀತಿಯ ಹೇಳಿಕೆ ಅಥವಾ ಪೋಸ್ಟ್‌ಗಳನ್ನು ಹಾಕುವುದಿಲ್ಲ ಎಂದೂ ಆಫಿಡೆವಿಟ್‌ನಲ್ಲಿ ತಿಳಿಸಿದ್ದಾರೆ.

ರೋಹಿಣಿ ವಿರುದ್ದ ಹಾಕಿರುವ ಎಲ್ಲ ಹೇಳಿಕೆಗಳನ್ನು ಹಿಂದಕ್ಕೆ ಪಡೆದಿದ್ದೇನೆ ಎಂದೂ ಪೋಸ್ಟ್ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನನ್ನ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಬೇಕು ಎಂದು ಕೋರಿ ಡಿ.ರೂಪಾ ಮೌದ್ಗಿಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್.ಓಕಾ ಹಾಗೂ ಪಂಕಜ್‌ ಮಿತ್ತಲ್ ಅವರನ್ನು ಒಳಗೊಂಡ ಪೀಠವು ಮೌಖಿಕ ನಿರ್ದೇಶನ ನೀಡಿತು.

ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಒಪ್ಪದ ಸಿಂಧೂರಿ

ಕರ್ನಾಟಕದ ಇಬ್ಬರು ಮಹಿಳಾ ಅಧಿಕಾರಿಗಳಿಗೂ ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಡಿಸೆಂಬರ್‌ 13ರಂದು ನ್ಯಾಯಾಲಯ ಸಲಹೆ ನೀಡಿತ್ತು. ಆದರೆ ಮಾತುಕತೆ ಮತ್ತು ಸಂಧಾನ ಸಾಧ್ಯವಿಲ್ಲ ಎಂದು ಇಬ್ಬರೂ ಅಧಿಕಾರಿಗಳು ವಿಚಾರಣೆ ವೇಳೆ ತಿಳಿಸಿದ್ದರು. ಮರುದಿನ ಈ ವಿಚಾರ ಪ್ರಸ್ತಾಪಿಸಿದ ನ್ಯಾಯಪೀಠ ಅಧಿಕಾರಿಗಳಿಬ್ಬರು ಸೌಹಾರ್ದಯುತವಾಗಿ ವಿವಾದ ಬಗೆಹರಿಸಿಕೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಈ ವೇಳೆ ಇಬ್ಬರೂ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಕ್ರಿಮಿನಲ್‌ ಪ್ರಕರಣವನ್ನು ಹಿಂಪಡೆಯಲು ಸಿಂಧೂರಿ ಒಪ್ಪಲಿಲ್ಲ.

ಅಧಿಕಾರಿಗಳೇ ಹೀಗೆ ಕಿತ್ತಾಡಿದರೆ ಹೇಗೆ-ಕೋರ್ಟ್ ಅಸಮಾಧಾನ

ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಈ ರೀತಿ ಕಿತ್ತಾಟ ನಡೆಸಿದರೆ ಆಡಳಿತ ಹೇಗೆ ನಡೆಯುತ್ತದೆ ಎಂದು ಪೀಠ ಪ್ರಶ್ನಿಸಿದೆ. ರೂಪಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ರೋಹಿಣಿ ಅವರು ಪೀಠಕ್ಕೆ ತಿಳಿಸಿದರು. ವಿನಾಕಾರಣ ನನ್ನ ಕುಟುಂಬವನ್ನು ಎಳೆದು ತರಲಾಗಿದೆ. ಹೀಗಾದರೆ ನಾನು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಅವರು ಹೇಳಿದರು.

ನಂತರ ನ್ಯಾಯಪೀಠವು ಸಿಂಧೂರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ನೀವು ತನಿಖೆ ನಡೆಸುತ್ತಿದ್ದೀರಾ ಎಂದು ರೂಪಾ ಅವರನ್ನು ಪ್ರಶ್ನಿಸಿತು. ಆಗ ರೂಪಾ, ಇಲ್ಲ ಎಂದು ಉತ್ತರಿಸಿದರು. ಯಾರೋ ಆರೋಪ ಮಾಡಿದ್ದು, ಮತ್ತಿನ್ಯಾರೋ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ನಿಮಗೆ ಏಕೆ ಆಸಕ್ತಿ ಎಂದು ಪೀಠ ಪ್ರಶ್ನಿಸಿತು. ಈ ವಿವಾದಕ್ಕೆ ಕೊನೆ ಹಾಡುವ ಉದ್ದೇಶದಿಂದಲೇ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೀಠ ಹೇಳಿತು.

ಪ್ರಕರಣದ ಹಿನ್ನೆಲೆ

ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್ 2023ರ ಫೆಬ್ರುವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಾನಹಾನಿಯಾಗುವ ರೀತಿಯಲ್ಲಿ ಆರೋಪ ಮಾಡಿದ್ದಾರೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು 2023ರ ಮಾರ್ಚ್ 3ರಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಡಿ.ರೂಪಾ ಅವರಿಂದ 1 ಕೋಟಿ ರೂಪಾಯಿ ಮೊತ್ತವನ್ನು ಪರಿಹಾರವಾಗಿ ಕೊಡಿಸಿಕೊಡಬೇಕು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. ದೂರು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಮಾರ್ಚ್‌ 24ರಂದು ಆದೇಶಿಸಿತ್ತು. ಈ ಆದೇಶ ಮತ್ತು ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ರೂಪಾ 2023ರ ಮೇ 31ರಂದು ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ವರದಿ: ಎಚ್ ಮಾರುತಿ

Whats_app_banner