ಕನ್ನಡ ಸುದ್ದಿ  /  Karnataka  /  Bengaluru News Surging Water Demand Bwssb Meeting With 40 Lakh To 2 Cr Ltr Water Users Bengaluru Water Crisis Mrt

ನೀರಿನ ಸದ್ಬಳಕೆಗೆ ಬೆಂಗಳೂರು ಜಲ ಮಂಡಳಿ ಭಗೀರಥ ಪ್ರಯತ್ನ; 40 ಲಕ್ಷದಿಂದ 2 ಕೋಟಿ ಲೀ. ನೀರು ಬಳಕೆದಾರರ ಸಭೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ಸದ್ಬಳಕೆಗೆ ಭಗೀರಥ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪೂರಕವಾಗಿ 40 ಲಕ್ಷದಿಂದ 2 ಕೋಟಿ ಲೀ. ನೀರು ಬಳಕೆದಾರರ ಸಭೆ ನಡೆಸಿತು. ಅವರಿಗೆ ನೀರು ಉಳಿಸಲು 5 ಸೂತ್ರಗಳನ್ನು ವಿವರಿಸಿದೆ. ಈ ಕುರಿತ ವಿವರ ಇಲ್ಲಿದೆ. (ವರದಿ -ಎಚ್. ಮಾರುತಿ, ಬೆಂಗಳೂರು).

ಬೆಂಗಳೂರು ಜಲ ಮಂಡಳಿ ನೀರಿನ ಸದ್ಬಳಕೆಗೆ ಭಗೀರಥ ಪ್ರಯತ್ನದಲ್ಲಿದ್ದು, 40 ಲಕ್ಷದಿಂದ 2 ಕೋಟಿ ಲೀ. ನೀರು ಬಳಕೆದಾರರ ಸಭೆ ನಡೆಸಿತು.
ಬೆಂಗಳೂರು ಜಲ ಮಂಡಳಿ ನೀರಿನ ಸದ್ಬಳಕೆಗೆ ಭಗೀರಥ ಪ್ರಯತ್ನದಲ್ಲಿದ್ದು, 40 ಲಕ್ಷದಿಂದ 2 ಕೋಟಿ ಲೀ. ನೀರು ಬಳಕೆದಾರರ ಸಭೆ ನಡೆಸಿತು.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದೆ. ಒಂದು ಕಡೆ ಮಳೆ ಬರುವ ಲಕ್ಷಣಗಳಿಲ್ಲ ಮತ್ತೊಂದು ಕಡೆ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಬರಿದಾಗುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ಬಹುಶಃ ನೀರು ಉಳಿಸಲು ನೀರಿನ ಉಳಿತಾಯವೊಂದೇ ಉಳಿದಿರುವ ಏಕೈಕ ಮಾರ್ಗವಾಗಿದೆ.

ಈ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಭಗೀರಥ ಪ್ರಯತ್ನ ನಡೆಸುತ್ತಿದೆ. ನೀರು ಉಳಿಸುವುದಕ್ಕಾಗಿ ಬೆಂಗಳೂರು ಜಲಮಂಡಳಿ ಜಾರಿಗೊಳಿಸಿರುವ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವ ಕುರಿತು 40 ಲಕ್ಷದಿಂದ 2 ಕೋಟಿ ಲೀಟರ್ ನೀರು ಬಳಕೆದಾರರ ಸಭೆಯನ್ನು ಆಯೋಜಿಸಲಾಗಿತ್ತು.

ಗ್ರೀನ್ ಸ್ಟಾರ್ ಚಾಲೆಂಜ್‌ನ ಪಂಚ ಸೂತ್ರಗಳನ್ನು ಅರಿತುಕೊಂಡು, ಅದನ್ನು ಅಳವಡಿಸಬೇಕು. ಆ ಮೂಲ ನೀರು ಉಳಿತಾಯ ಮತ್ತು ಮರುಬಳಕೆ ಮಾಡಬೇಕು. ಈ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಭೆಯಲ್ಲಿ ಜಲ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದರು.

ಬೆಂಗಳೂರು ನಗರದಲ್ಲಿ ಸದ್ಯ ಕುಡಿಯುವ ನೀರು ಕೊರತೆ ಆಗಿಲ್ಲ. ಆದರೆ ಅಂತರ್ಜಲ ಮಟ್ಟವು ಕುಸಿತವಾಗಿದ್ದು, ಅದರ ಕಾರಣ ದಿನ ಬಳಕೆಯ ನೀರಿನ ಕೊರತೆ ಉಂಟಾಗಿದೆ. ಮುಂದಿನ ಎರಡು ತಿಂಗಳ ಕಾಲ ನೀರಿನ ಮಿತವ್ಯಯ ಬಳಕೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಜಲಮಂಡಳಿ ಭವಿಷ್ಯದಲ್ಲಿ ಬೆಂಗಳೂರು ನಗರವನ್ನು ಹೆಚ್ಚುವರಿ ನೀರು ಹೊಂದಿರುವ ನಗರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ನೀರು ಉಳಿಸಲು 5 ಸೂತ್ರ

ಈ ಪಂಚ ಸೂತ್ರಗಳು ಯಾವುವೆಂದರೆ, ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ಕೊಡುವುದು.

ಈ ಸೂತ್ರಗಳನ್ನು ಅಳವಡಿಸಿಕೊಳ್ಳಲು ಈಗಾಗಲೇ ಅಪಾರ್ಟ್ ಮೆಂಟ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಮುಂದೆ ಬಂದಿವೆ. ಈ ಸವಾಲನ್ನು ನೀವೂ ಕೂಡಾ ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ವಾಟರ್ ಸರ್ ಪ್ಲಸ್ ಅಭಿಯಾನದಲ್ಲಿ ಕೈಜೋಡಿಸಿ ಎಂದು ಕರೆ ನೀಡಿದರು. ಬಲ್ಕ್ ಬಳಕೆದಾರರು ತಮ್ಮ ಸಮುದಾಯದಲ್ಲಿ ಹೆಚ್ಚು ನೀರು ಬಳಕೆ ಮಾಡುವವರಲ್ಲಿ ಜಾಗೃತಿ ಮೂಡಿಸಬೇಕು. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಏಪ್ರಿಲ್ 10 ರ ಒಳಗಾಗಿ ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ನಂತರ ಸರಬರಾಜಾಗುವ ಶೇ. 10 ರಷ್ಟು ನೀರನ್ನು ಕಡಿತಗೊಳಿಸಿ ಅಗತ್ಯವಿರುವ ಪ್ರದೇಶಗಳಿಗೆ ಕಾವೇರಿ ನೀರನ್ನು ಸರಬರಾಜು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಭೆಗೆ ಆಗಮಿಸಿದ ಪ್ರತಿನಿಧಿಗಳಿಗೆ ಸಸಿ ವಿತರಿಸಿದ್ದು, ಹೆಚ್ಚು ಸಸಿಗಳನ್ನು ನೆಡುವ ಮೂಲಕ ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಮೌಲ್ಯವನ್ನು ಉಳಿಸೋಣ ಎಂದು ರಾಮ ಪ್ರಸಾತ್‌ ಕರೆ ನೀಡಿದರು. ಈಗಾಗಲೇ 133 ಬಿಲ್ಡರ್‌ಗಳ ಜೊತೆಗೆ ಸಭೆ ನಡೆಸಲಾಗಿದೆ. ಸಂಸ್ಕರಿಸಿದ ನೀರು ಬಳಸುವಂತೆ ಅವರಿಗೆ ಮಂಡಳಿ ಸೂಚಿಸಿದೆ.

ಮಿತವಾಗಿ ನೀರು ಬಳಿಸುವ ಮೂಲಕ ನೀರು ಉಳಿಸಬೇಕು. ಮನೆಯಲ್ಲಿ ಹೆಚ್ಚು ನೀರು ಬಳಸುವಲ್ಲಿ ಏರಿಯೆಟರ್ ಅಳವಡಿಸಬೇಕು, ವಾಷಿಂಗ್‌ಮೆಷನ್ ಒಳಗೆ ಬರುವ ನೀರನ್ನು ಮರುಬಳಿಸಬೇಕು. ಒಂದು ಫ್ಲಷ್‌ಗೆ 20 ಲೀಟರ್ ಹೊರಹೋಗುತ್ತಿದೆ. ಈ ರೀತಿ ನೀರು ಪೋಲಾಗುವುದನ್ನು ತಡೆಗಟ್ಟಲು ಫ್ಲಷ್‌ ಬ್ಯಾಗ್ ಆಳವಡಿಸಬೇಕು. ಸಂಸ್ಕರಿಸಿದ ನೀರು ಬಳಕೆ ಮಾಡುವಂತೆ ಸೂಚಿಸಿದರು.

ಸಂಸ್ಕರಿಸಿದ ನೀರನ್ನು ಸ್ವಚ್ಛತೆಗೆ ಕಟ್ಟಡ ಕಾಮಗಾರಿ ಗಳಿಗೆ ತೋಟಗಾರಿಕೆಗೆ ಸಸ್ಯಗಳ ಆರೈಕೆಗೆ ಬಳಸಬಹುದಾಗಿದೆ. ನೀರು ಬಳಕೆ ಹಾಗೂ ಮರು ಬಳಕೆ ಕುರಿತು ಮನೆಯವರು ಮತ್ತು ನೆರೆಹೊರೆಯ ಸದಸ್ಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಲಮಂಡಳಿ ಮನವಿ ಮಾಡಿಕೊಂಡಿದೆ.

(ವರದಿ -ಎಚ್. ಮಾರುತಿ, ಬೆಂಗಳೂರು)