ಬೆಂಗಳೂರು ನೀರಿನ ಸಮಸ್ಯೆ; ಟ್ಯಾಪ್ ಏರಿಯೇಟರ್ ಬಳಸಿದ್ರೆ ದಿನಕ್ಕೆ 10 ಕೋಟಿ ಲೀಟರ್ ನೀರು ಉಳಿಸಿಬಹುದು ಎನ್ನುತ್ತಿದೆ ಈ ಲೆಕ್ಕಾಚಾರ
ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರವೇನು?, ಬೆಂಗಳೂರಿನಲ್ಲಿ ಇದು ನಿತ್ಯ ಚರ್ಚೆಯ ವಿಚಾರ. ನೀರು ಉಳಿತಾಯದ ವಿಚಾರವೂ ಚರ್ಚೆಯಲ್ಲಿದೆ. ಈ ನಡುವೆ, ಟ್ಯಾಪ್ ಏರಿಯೇಟರ್ ಬಳಸಿದರೆ ದಿನಕ್ಕೆ 10 ಕೋಟಿ ನೀರು ಉಳಿಸಬಹುದು ಎನ್ನುವ ಲೆಕ್ಕಾಚಾರ ಗಮನಸೆಳೆದಿದೆ. ಅದು ಹೇಗೆ ಎಂಬ ವಿವರ ಇಲ್ಲಿದೆ.
ಬೆಂಗಳೂರು ನೀರಿನ ಸಮಸ್ಯೆ ದಿನೇದಿನೆ ಬಿಗಡಾಯಿಸುತ್ತಿದೆ. ನಲ್ಲಿಗಳ ಬಳಿ ಮಹಿಳೆಯ ಸರದಿ ಸಾಲು, ಕುಡಿಯುವ ನೀರಿನ ಘಟಕಗಳ ಬಳಿ ಪುರುಷರ ಸಾಲು, ಟ್ಯಾಂಕರ್ ನೀರು ಪಡೆಯಲು ಹರಸಾಹಸ ಮಾಡುತ್ತಿರುವ ಬೆಂಗಳೂರಿಗರು… ಇವೆಲ್ಲವೂ ಸದ್ಯದ ಬೆಂಗಳೂರಿನ ಪರಿಸ್ಥಿತಿ ಈ ನೀರಿನ ಸಮಸ್ಯೆಗೆ ಪರಿಹಾರ ಕ್ರಮಗಳ ಕುರಿತಾದ ಚರ್ಚೆಯೂ ಚಾಲ್ತಿಯಲ್ಲಿದೆ. ಇದರಲ್ಲಿ ಟ್ಯಾಪ್ ಏರಿಯೇಟರ್ ಬಳಸುವ ವಿಚಾರ ಚರ್ಚೆಯ ಮುನ್ನೆಲೆ ಬಂದಿದ್ದು, ಈ ಬಗ್ಗೆ ಜಾಗೃತಿ ಮೂಡಿ ಅನುಷ್ಠಾನಕ್ಕೆ ಬಂದರೆ ದಿನಕ್ಕೆ 10 ಕೋಟಿ ನೀರು ಉಳಿಸಬಹುದು ಎಂಬ ಲೆಕ್ಕಾಚಾರ ಗಮನಸೆಳೆದಿದೆ.
ವಿಭಿನ್ನ ಕಾಲಾವಧಿಗಳು ಮತ್ತು ವೆಚ್ಚಗಳೊಂದಿಗೆ ಪರಿಹಾರಗಳನ್ನು ಒಳಗೊಂಡಿರುವ ಬಹು-ಹಂತದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದಾಗ್ಯೂ, ಯಾವುದೇ ದೊಡ್ಡ ಬಂಡವಾಳ ಇಲ್ಲದೇ ಹೆಚ್ಚುವರಿ 10 ಕೋಟಿ ಲೀಟರ್ ನೀರನ್ನು ದಿನಕ್ಕೆ ಉಳಿಸಬಹುದು. ಇದನ್ನು ಕಳೆದುಕೊಳ್ಳಬಾರದು. ಇದಕ್ಕಾಗಿ ಎಲ್ಲ ಮನೆಗಳ ನಲ್ಲಿಗಳಿಗೆ ಟ್ಯಾಪ್ ಏರಿಯೇಟರ್ ಅಳವಡಿಸಬೇಕು. ಟ್ಯಾಪ್ ಏರಿಯೇಟರ್ ಬಳಸುವ ಸಣ್ಣ ಬದಲಾವಣೆಯ ಮೂಲಕ ಬಹಳಷ್ಟು ನೀರು ಉಳಿಸಬಹುದು ಎಂಬ ಮಾತು ಕೇಳಿಬಂದಿದೆ.
ಒಂದು ಸಣ್ಣ ಟ್ಯಾಪ್ ಏರಿಯೇಟರ್ ಅಳವಡಿಸುವುದರಿಂದ ನೀರಿನ ಹರಿವನ್ನು ನಿಮಿಷಕ್ಕೆ 12 ರಿಂದ 18 ಲೀಟರ್ ಹರಿದು ಹೋಗುವ ಬದಲು, ನಿಮಿಷಕ್ಕೆ 3 ರಿಂದ 6 ಲೀಟರ್ ನೀರಿಗೆ ಇಳಿಸಬಹುದು. ಅಂದರೆ, ನೀರಿನ ಬಳಕೆಯನ್ನು ಶೇಕಡ 50 ಕ್ಕಿಂತಲೂ ಹೆಚ್ಚು ಕಡಿಮೆ ಮಾಡಬಹುದು. ಇದು ಜಲ ಸಂರಕ್ಷಣೆಯ ವಿಚಾರದಲ್ಲಿ ಅತ್ಯಂತ ಪ್ರಾಯೋಗಿಕ ವಿಧಾನ ಎಂದು ಪರಿಣತರು ಹೇಳುತ್ತಿದ್ದಾರೆ. ಈ ನಲ್ಲಿಯ ಏರಿಯೇಟರ್ ಒಂದಕ್ಕೆ 50 ರೂಪಾಯಿಯಿಂದ 70 ರೂಪಾಯಿ ಇದೆ.
ಮಾಲಿನ್ಯ ನಿಯಂತ್ರಣದಲ್ಲಿರುವಂತೆ ನೀರಿನ ಹರಿವು ನಿಯಂತ್ರಣದಲ್ಲಿ ಇರಬಾರದೇ?
ಟ್ಯಾಪ್ ಏರಿಯೇಟರ್ ಅಥವಾ ನಲ್ಲಿ ಏರಿಯೇಟರ್ ಪರಿಕಲ್ಪನೆ ಹೊಸತಲ್ಲ. ಟ್ಯಾಪ್ ಏರಿಯೇಟರ್ ಕೆಲಸ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಇದು ಉತ್ತರ. ನೀರಿನ ಹರಿವಿನ ನಿಯಂತ್ರಣ (Waterflow Under Control) ನೀತಿಯಂತೆ ಟ್ಯಾಪ್ ಏರೇಟರ್ ಕೆಲಸ ಮಾಡುತ್ತದೆ. ಮಾಲಿನ್ಯ ನಿಯಂತ್ರಣದಲ್ಲಿದೆ (Pollution Under Control) ಎಂಬ ಪ್ರಮಾಣಪತ್ರದ ಮಾದರಿಯಲ್ಲೇ ನೀರಿನ ಹರಿವು ನಿಯಂತ್ರಣದಲ್ಲಿದೆ ಎಂಬ ನೀತಿಯೂ ಅವಕಶ್ಯಕತೆ ಇದೆಯಲ್ಲವೇ ಎಂಬುದು ಪರಿಣತರ ಪ್ರಶ್ನೆ.
ಈ ನೀತಿ ರೂಪಿಸಿದರೆ ಅದನ್ನು ಅನುಷ್ಠಾನಗೊಳಿಸುವುದಕ್ಕೆ ಜಾಗೃತಿ ಮೂಡಿಸಬೇಕಾದ್ದು ಅವಶ್ಯ. ನೀರಿನ ನಲ್ಲಿಗಳಲ್ಲಿ ನೀರಿನ ಹರಿವಿಗೆ ಗರಿಷ್ಠ ಮಿತಿ ನಿಮಿಷಕ್ಕೆ 3 ರಿಂದ 6 ಲೀಟರ್ ಎಂದು ನಿಗದಿ ಮಾಡಿದರೆ 10 ಕೋಟಿ ಲೀಟರ್ ಉಳಿತಾಯ ಮಾಡಬಹುದು ಎಂಬ ಲೆಕ್ಕಾಚಾರವನ್ನು ಪರಿಣತರು ಮುಂದಿಡುತ್ತಾರೆ. ಅಲ್ಲದೆ ನೀರಿನ ಹರಿವಿನ ನಿಯಂತ್ರಣ ನೀತಿಯ ಅವಶ್ಯಕತೆ ತುಂಬಾ ಅಗತ್ಯ ಎಂದು ಡೆಕ್ಕನ್ ಹೆರಾಲ್ಡ್‌ನಲ್ಲಿ ಎ ಬಿಲಿಯನ್ ಟ್ಯಾಪ್ಸ್‌ನ ಮೆಂಟರ್ ಮಾಧವನ್ ರಾವ್ ಪ್ರತಿಪಾದಿಸುತ್ತಾರೆ.
ನೀರ ಹರಿವಿನ ನಿಯಂತ್ರಣ ಮತ್ತು 10 ಕೋಟಿ ಲೀಟರ್ ನೀರು ಉಳಿತಾಯ ಲೆಕ್ಕಾಚಾರ
ಈ ಪ್ರತಿಪಾದನೆಯನ್ನು ಸಮರ್ಥಿಸುವುದಕ್ಕಾಗಿ, ಬೆಂಗಳೂರಿನಲ್ಲಿ 15 ಲಕ್ಷ ಉದ್ಯೋಗಿಗಳಿದ್ದು, ಐಟಿ ಕಂಪನಿಗಳಲ್ಲಿ ಹ್ಯಾಂಡ್ ವಾಶ್ ಟ್ಯಾಪ್‌ಗಳನ್ನು ಬಳಸುತ್ತಿರುವುದನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. ಇದರಂತೆ, ಪ್ರತಿ ಉದ್ಯೋಗಿಯು ದಿನಕ್ಕೆ ಒಂದು ನಿಮಿಷದವರೆಗೆ ಹ್ಯಾಂಡ್ ವಾಶ್ ಟ್ಯಾಪ್ ಅನ್ನು ಬಳಸುತ್ತಾರೆ ಎಂದು ಭಾವಿಸಿದರೆ, ಏರಿಯೇಟರ್ ಅಳವಡಿಸಿದರೆ ಬಳಕೆಯ ಸಮಯದಲ್ಲಿ ನಿಮಿಷಕ್ಕೆ ಕನಿಷ್ಠ 1 ಕೋಟಿ ಲೀಟರ್‌ಗಳಷ್ಟು ಉಳಿತಾಯಕ್ಕೆ ಕಾರಣವಾಗುತ್ತದೆ. ಇದರಿಂದ ಐಟಿ ಕಾರಿಡಾರ್ ಒಂದರಲ್ಲೇ ದಿನಕ್ಕೆ 1.5 ಕೋಟಿ ಲೀಟರ್ ಉಳಿತಾಯವಾಗಲಿದೆ.
ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರೆ, 10 ದಿನಗಳಲ್ಲಿ ಬೆಂಗಳೂರಿನ ಎಲ್ಲ ಕಟ್ಟಡಗಳ ಟ್ಯಾಪ್‌ಗಳಲ್ಲಿ ಟ್ಯಾಪ್ ಏರಿಯೇಟರ್‌ಗಳ ಕ್ಷಿಪ್ರ ಅಳವಡಿಕೆ ಮಾಡಬಹುದು. ಇದರ ಪರಿಣಾಮ ದಿನಕ್ಕೆ 1.5 ಕೋಟಿ ಲೀಟರ್ ನೀರು ಉಳಿತಾಯವಾಗಲಿದೆ. ಇದರಿಂದ ಸರ್ಕಾರಕ್ಕೇನೂ ಆರ್ಥಿಕ ಹೊರೆ ಇರಲ್ಲ. ನೂರು ದಿನಗಳ ಅವಧಿಯಲ್ಲಿ 10 ಕೋಟಿಯಿಂದ 50 ಕೋಟಿ ಲೀಟರ್ ನೀರು ಉಳಿಸಬಹುದು. ಮನಸ್ಸು ಮಾಡಬೇಕು ಅಷ್ಟೆ ಎಂದು ಅವರು ಪ್ರತಿಪಾದಿಸಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)
.