Bengaluru Jobs: ಬೆಂಗಳೂರಲ್ಲಿ ಫಾಕ್ಸ್‌ಕಾನ್ ಆಪಲ್ ಫ್ಯಾಕ್ಟರಿ, ವರ್ಷಕ್ಕೆ 2 ಕೋಟಿ ಐಫೋನ್, ದೇವನಹಳ್ಳಿಯಲ್ಲಿ 50 ಸಾವಿರ ಉದ್ಯೋಗ ಸೃಷ್ಟಿ
Bengaluru Apple iPhones Foxconn Factory: ಫಾಕ್ಸ್‌ಕಾನ್ ಕಂಪನಿಯ ಬೆಂಗಳೂರಿನ ಐಫೋನ್ ಪ್ಯಾಕ್ಟರಿಯಲ್ಲಿ ವರ್ಷಕ್ಕೆ ಸುಮಾರು 2 ಕೋಟಿ ಐಫೋನ್‌ಗಳನ್ನು ತಯಾರಿಸಲಾಗುತ್ತದೆ. ಇದರಿಂದ ರಾಜ್ಯದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ
ಕರ್ನಾಟಕದಲ್ಲಿ ಐಫೋನ್‌ನ ಫಾಕ್ಸ್‌ಕಾನ್ ಫ್ಯಾಕ್ಟರಿಯು ಮುಂದಿನ ದಿನಗಳಲ್ಲಿ ಸಿದ್ಧಗೊಳ್ಳಲಿದೆ. ಆಪಲ್‌ನಂತಹ ಬೃಹತ್ ಕಂಪನಿಗೆ ಐಫೋನ್ ತಯಾರಿಸುವ ಈ ಕಂಪನಿಯಿಂದ ಬೃಹತ್ ಉದ್ಯೋಗ ಸೃಷ್ಟಿಯೂ ಆಗಲಿದೆ. ಫಸ್ಟ್‌ಪೋಸ್ಟ್ ವರದಿ ಪ್ರಕಾರ ಫಾಕ್ಸ್‌ಕಾನ್ ಕಂಪನಿಯ ಬೆಂಗಳೂರಿನ ಐಫೋನ್ ಪ್ಯಾಕ್ಟರಿಯಲ್ಲಿ ವರ್ಷಕ್ಕೆ ಸುಮಾರು 2 ಕೋಟಿ ಐಫೋನ್‌ಗಳನ್ನು ತಯಾರಿಸಲಾಗುತ್ತದೆ. ಇದರಿಂದ ರಾಜ್ಯದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆಯಂತೆ.
ಬೆಂಗಳೂರಲ್ಲಿ ಸ್ಯಾಪ್ ಲ್ಯಾಬ್‌ನ ಎರಡನೇ ಕ್ಯಾಂಪಸ್ ನಿರ್ಮಾಣಗೊಂಡು ದೇವನಹಳ್ಳಿಯಲ್ಲಿ 15 ಸಾವಿರ ಉದ್ಯೋಗಸೃಷ್ಟಿಯಾಗುವ ಸುದ್ದಿಯನ್ನು ನಿನ್ನೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ನೀಡಿತ್ತು. (ಇಲ್ಲಿದೆ ಲಿಂಕ್) ಇದೀಗ ಬೆಂಗಳೂರು ಉದ್ಯೋಗ ಕ್ಷೇತ್ರಕ್ಕೆ ಆಪಲ್ ಫಾಕ್ಸ್‌ಕಾನ್ ಕಂಪನಿಯೂ ದೊಡ್ಡ ಬೂಸ್ಟ್ ನೀಡಲಿದೆ. ಭಾರತದಲ್ಲಿ ಐಫೋನ್ ತಯಾರಿಸುವ ಆಪಲ್ ಕಂಪನಿಯ ಮಹಾತ್ವಕಾಂಕ್ಷೆಯ ಯೋಜನೆಗೆ ಕರ್ನಾಟಕದ ಬೆಂಗಳೂರು ಬೆನ್ನೆಲುಬು ಆಗುವ ಸಾಧ್ಯತೆಯಿದೆ.
ಕರ್ನಾಟಕದ ಬೃಹತ್ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ಎಂಬಿ ಪಾಟೀಲ್ ಇದಕ್ಕೆ ಸಂಬಂಧಪಟ್ಟ ಪೂರಕ ಮಾಹಿತಿ ನೀಡಿದ್ದಾರೆ. ಫಾಕ್ಸ್ ಕಾನ್ 2024ರ ಏಪ್ರಿಲ್ 1ರ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಜಾರ್ಜ್ ಚು ಅವರ ನೇತೃತ್ವದಲ್ಲಿ ಫಾಕ್ಸ್ ಕಾನ್ ಕಂಪನಿಯ ಉನ್ನತ ಅಧಿಕಾರಿಗಳ ತಂಡವು ಸೌಜನ್ಯದ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ (ಐಟಿಐಆರ್) ಕಾರ್ಯಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿಯು ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮುಂಚೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
"ಕರ್ನಾಟಕದ ಯುವ ಜನತೆಗೆ ಉದ್ಯೋಗ ದೊರಕಲು ಪೂರಕವಾದ ಅಂಶಗಳನ್ನೂ ಚರ್ಚಿಸಲಾಗಿದೆ. ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲಗಳ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ನೀಡಲಾಗುವುದು" ಎಂದು ಅವರು ತಿಳಿಸಿದ್ದಾರೆ.
ಇದು 13 ಸಾವಿರ ಕೋಟಿ ರೂಪಾಯಿಯ ವೆಚ್ಚದ ಪ್ರಾಜೆಕ್ಟ್ ಆಗಿದೆ. ಈಗಾಗಲೇ ಭೂಮಿಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಶೇಕಡ 30ರಷ್ಟನ್ನು (90 ಕೋಟಿ ರೂಪಾಯಿ) ಕಂಪನಿಯು ಕೆ.ಐ.ಎ.ಡಿ.ಬಿ.ಗೆ ಪಾವತಿಸಿದೆ.
ಆರಂಭದಲ್ಲಿ ಈ ಫ್ಯಾಕ್ಟರಿಯು ಒಂದು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಲಾಗಿತ್ತು. ಆದರೆ, ಈಗ ಬಂದ ಮಾಹಿತಿ ಪ್ರಕಾರ ಈ ಫ್ಯಾಕ್ಟರಿಯು 50 ಸಾವಿರ ಉದ್ಯೋಗ ಸೃಷ್ಟಿಸಲಿದೆ. ಇಡೀ ಜಗತ್ತಿನಲ್ಲಿ ಮಾರಾಟವಾಗುವ ಐಫೋನ್‌ಗಳಲ್ಲಿ ಶೇಕಡ 7-10 ಐಫೋನ್‌ಗಳು ಬೆಂಗಳೂರಿನಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ.