ಅಮೆರಿಕ ಹೋಗಬೇಕಿದ್ದ ಟೆಕ್ಕಿ ಭೀಕರ ಅಪಘಾತಕ್ಕೆ ಬಲಿ; ಬೆಂಗಳೂರಿನಲ್ಲಿ ಮೇಲ್ಸೇತುವೆಯಿಂದ ಕೆಳಗೆ ಹಾರಿದ ಕಾರು
ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಟೆಕ್ಕಿ ಸಾವನ್ನಪ್ಪಿದ್ದಾನೆ. ಅಮೆರಿಕ ತೆರಳುವ ಖುಷಿಯಲ್ಲಿ ಶಾಪಿಂಗ್ ನಡೆಸುವ ಸಲುವಾಗಿ ನಗರಕ್ಕೆ ಬಂದಿದ್ದ ವ್ಯಕ್ತಿ, ಪ್ರಾಣ ಕಳೆದುಕೊಂಡಿದ್ದಾನೆ. (ವರದಿ: ಎಚ್.ಮಾರುತಿ)
ಅಮೆರಿಕಕ್ಕೆ ಹಾರಲು ವೀಸಾ ಪಡೆದುಕೊಳ್ಳಲು ಮತ್ತು ಶಾಪಿಂಗ್‌ಗೆ ಬೆಂಗಳೂರಿಗೆ ಆಗಮಿಸಿದ್ದ ಟೆಕ್ಕಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿ ದುರಂತ ಸಾವನ್ನಪ್ಪಿರುವ ಘಟನೆ ಯಶವಂತಪುರದ ಮೇಲ್ಸೇತುವೆ ಮೇಲೆ ಮಂಗಳವಾರ ಸೆಪ್ಟೆಂಬರ್ 3ರಂದು ನಡೆದಿದೆ. ಈ ಟೆಕ್ಕಿ ತನ್ನ ಇತರ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುವಾಗ ದುರಂತ ಸಂಭವಿಸಿದೆ. ಇವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ.
ಮೃತ ಟೆಕ್ಕಿಯನ್ನು ಸೇಲಂನ 29 ವರ್ಷದ ಎಸ್ ಶಬರೀಶ್ ದೇವದಾಸ್ ಎಂದು ಗುರುತಿಸಲಾಗಿದೆ. ಇವರ ಇತರ ಸ್ನೇಹಿತರನ್ನು ಸೇಲಂನ ಮಿಥುನ್, ಬೆಂಗಳೂರಿನ ಶಂಕರ್ ರಾಮ್ ಮತ್ತು ಅನುಶ್ರೀ ಎಂದು ಗುರುತಿಸಲಾಗಿದೆ. ಬೈಕ್ ಸವಾರನನ್ನು ಮಂಜುನಾಥ್ ಎಂದು ಹೇಳಲಾಗಿದೆ. ಕಾಚರಕನಹಳ್ಳಿ ನಿವಾಸಿಯಾಗಿರುವ ಇವರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಎಂದು ತಿಳಿದು ಬಂದಿದೆ.
ಗಾಯಗೊಂಡರುವ ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತವು ಮುಂಜಾನೆ 3.45ಕ್ಕೆ ಸಂಭವಿಸಿದೆ. ಸ್ನೇಹಿತರೆಲ್ಲರೂ ತುಮಕೂರು ದಿಕ್ಕಿನತ್ತ ಸಾಗುತ್ತಿದ್ದರು. ಮಿಥುನ್ ಕಾರನ್ನು ಚಲಾಯಿಸುತ್ತಿದ್ದರು. ಮೇಲ್ಸೇತುವೆಯ ಮಧ್ಯ ಭಾಗದಲ್ಲಿ ತಿರುವು ಇದ್ದು, ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಅನ್ನು ದಾಟಿ ಮತ್ತೊಂದು ಭಾಗದ ರಸ್ತೆಗೆ ಹಾರಿದೆ. ಆಗ ಎದುರು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ 40 ಅಡಿ ಕೆಳಗೆ ಹಾರಿದೆ. ಆದರೆ ಅದೃಷ್ಟಾವಶಾತ್ ಕೆಳಗೆ ಯಾವುದೇ ವಾಹನ ಬರುತ್ತಿರಲಿಲ್ಲ. ಒಂದು ವೇಳೆ ಬರುತ್ತಿದ್ದರೆ ಮತ್ತೊಂದು ಅಪಘಾತಕ್ಕೆ ಕಾರಣವಾಗುತ್ತಿತ್ತು. ಕಾರಿನಲ್ಲಿ ಮಿಥುನ್ ಪಕ್ಕದಲ್ಲಿ ಶಬರೀಶ್ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಈ ಅಪಘಾತ ಯಶವಂತಪುರ ಪೊಲೀಸ್ ಠಾಣೆಯ ಸಮೀಪದಲ್ಲೇ ಸಂಭವಿಸಿದೆ. ಭಾರಿ ಶಬ್ಧವನ್ನು ಕೇಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಆಟೋ ಚಾಲಕರು ಮತ್ತು ತಳ್ಳುಗಾಡಿಯವರು ಪೊಲೀಸರಿಗೆ ಸಹಾಯ ಮಾಡಿದ್ದಾರೆ. ನಾವು ಮೇಲ್ಸೇತುವೆ ಕೆಳಗೆ ನಿಂತಿದ್ದೆವು. ಆಕಸ್ಮಿಕವಾಗಿ ಭಾರಿ ಶಬ್ಧವೊಂದು ಕೇಳಿ ಬಂತು. ಮತ್ತೊಂದು ಕ್ಷಣದಲ್ಲಿ ವಾಹನವೊಂದು ಕೆಳಗೆ ಬಿದ್ದ ಶಬ್ಧ ಕೇಳಿ ಬಂತು. ಅದೃಷ್ಟವಶಾತ್ ಖಾಲಿ ಸ್ಥಳಕ್ಕೆ ಕಾರು ಬಿದ್ದಿತ್ತು. ಅಲ್ಲಿ ಯಾವುದೇ ವಾಹನ ಅಥವಾ ಜನರು ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಶಬರೀಶ್ ಮತ್ತು ಮಿಥುನ್ ಸೋಮವಾರವಷ್ಟೇ ಸೇಲಂನಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಲ್ಲೇಶ್ವರಂನ ಪಿಜಿಯಲ್ಲಿದ್ದ ತಮ್ಮ ಸಂಬಂಧಿಗಳಾದ ಅನುಶ್ರೀ ಮತ್ತು ಶಂಕರ್ ರಾಮ್ ಅವರನ್ನು ಭೇಟಿ ಮಾಡಿದ್ದರು. ಸಂಜೆ ಯಶವಂತಪುರದ ಮಾಲ್‌ಗೆ ತೆರಳಿ ಶಾಪಿಂಗ್ ಮುಗಿಸಿದ್ದರು. ಸಂಜೆ ಪಬ್‌ವೊಂದಕ್ಕೆ ತೆರಳಿದ್ದರು. ನಂತರ ಊಟ ಮಾಡಲು ತುಮಕೂರು ರಸ್ತೆಯತ್ತ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದಾಗ ಕಾರು 120 ಕಿಮೀ ವೇಗದಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.