ಖಾಸಗಿ ವಿಡಿಯೊ ಬಿಡುಗಡೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಸುಲಿಗೆ, ಆರೋಪಿ ಬಂಧನ; ಬೆಂಗಳೂರಿನಲ್ಲಿ ಘಟನೆ
ಖಾಸಗಿ ವಿಡಿಯೊ ಬಿಡುಗಡೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಜಯನಗರ ಪೊಲೀಸರು ಬಂಧಿಸಿದ್ದಾರೆ. ಪ್ರಾಂಶುಪಾಲರು ನಿಂದಿಸಿದರು ಎಂಬ ಕಾರಣಕ್ಕೆ ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ನಡೆದಿರುವ ಘಟನೆ ಶುಕ್ರವಾರ ನಡೆದಿದೆ. ಈ ಎರಡೂ ಸುದ್ದಿಗಳ ವಿವರ ಇಲ್ಲಿದೆ. (ವರದಿ: ಎಚ್. ಮಾರುತಿ)
ಬೆಂಗಳೂರು: ಪ್ರಿಯಕರನ ಜೊತೆಯಲ್ಲಿ ಸಲುಗೆಯಿಂದ ಇರುವ ಖಾಸಗಿ ಕ್ಷಣಗಳ ವಿಡಿಯೊ ಬಿಡುಗಡೆ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹೆದರಿಸಿ ಸ್ನೇಹಿತೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರ್.ಟಿ.ನಗರ ನಿವಾಸಿ ಅರಾಫತ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನಿಂದ 15 ಲಕ್ಷ ರೂಪಾಯಿ ಮೌಲ್ಯದ 264 ಗ್ರಾಂ. ತೂಕದ ಚಿನ್ನಾಭರಣ ವಪಡಿಸಿಕೊಂಡಿದ್ದಾರೆ.
ಜಯನಗರದ ನಿವಾಸಿಯಾದ ಯುವತಿಯು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಳು. ಕಾಲೇಜಿನಲ್ಲಿ ಓದುವಾಗ ಸಹಪಾಠಿಯಾಗಿದ್ದ ಡ್ಯಾನಿಶ್ ಎಂಬುವನ ಜತೆ ಸಲುಗೆಯಿಂದ ಇದ್ದಳು. ಡ್ಯಾನಿಶ್ ಸ್ನೇಹಿತ ಅರಾಫತ್ ಎಂಬಾತ ಈ ಯುವತಿಗೂ ಪರಿಚಿತನಾಗಿದ್ದ. ಈ ಮಧ್ಯೆ ಕಾರಣಾಂತರಗಳಿಂದ ಯುವತಿ ಹಾಗೂ ಡ್ಯಾನಿಶ್ ನಡುವೆ ವೈಮನಸ್ಸು ಉಂಟಾಗಿಟ್ಟು. ಹಾಗಾಗಿ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಅರಾಫತ್, ಯುವತಿಗೆ ಕರೆ ಮಾಡಿ ಡ್ಯಾನಿಶ್ ಜೊತೆ ಇರುವ ಖಾಸಗಿ ವಿಡಿಯೊ ಹಾಗೂ ಪೋಟೊಗಳನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಹೆದರಿಸುತ್ತಿದ್ದ. ಹಾಗೆ ಮಾಡಬಾರದು ಎಂದರೆ ಮನೆಯಲ್ಲಿರುವ ಚಿನ್ನಾಭರಣಗಳನ್ನು ತಂದು ಕೊಡಬೇಕು. ಇಲ್ಲದಿದ್ದಲ್ಲಿ ವಿಡಿಯೊ ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹೆಸರಿಸುತ್ತಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿದ್ದು, ಮಗಳ ಮೇಲೆಯೇ ಪೋಷಕರು ಅನುಮಾನಗೊಂಡು ದೂರು ನೀಡಿದ್ದರು. ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಕೆ ಎಲ್ಲ ಸತ್ಯವನ್ನು ಹೇಳಿದ್ದಾಳೆ. ಖಾಸಗಿ ವಿಡಿಯೊ ಬಿಡುಗಡೆ ಮಾಡುವುದಾಗಿ ಹೆದರಿಸಿ ಚಿನ್ನಾಭರಣ ತಂದು ಕೊಡುವಂತೆ ಅರಾಫತ್ ಬಲವಂತ ಮಾಡುತ್ತಿದ್ದ. ಆತನ ಕಾಟ ತಾಳಲಾರದೆ ಸ್ವಲ್ಪ ಸ್ವಲ್ಪವೇ ಚಿನ್ನಾಭರಣ ತಂದು ಕೊಡುತ್ತಿದ್ದೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾಳೆ.
ನಂತರ ಪೊಲೀಸರು ಆರೋಪಿ ಅರಾಫತ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತನ್ನ ಬಳಿ ಯುವತಿಯ ಖಾಸಗಿ ವಿಡಿಯೊ ಇಲ್ಲ. ಸುಳ್ಳು ಹೇಳಿ ಚಿನ್ನಾಭರಣ ತರಿಸಿಕೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಶಾಲೆಯ ಪ್ರಾಂಶುಪಾಲರು ನಿಂದಿಸಿದರು ಎಂಬ ಒಂದೇ ಕಾರಣಕ್ಕೆ ಶಾಲೆಯ ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ. ಬಾಪೂಜಿನಗರದ ಅಲ್ ಫಹಾದ್ ಶಾಲೆಯ
ಹತ್ತನೇ ತರಗತಿ ವಿದ್ಯಾರ್ಥಿನಿ ಶುಕ್ರವಾರ ಮಧ್ಯಾಹ್ನ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ. ಬಿದ್ದ ರಭಸಕ್ಕೆ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಶಾಲೆಗೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯು ಕಟ್ಟಡದಿಂದ ಹಾರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಯಾರೊಬ್ಬರೂ ದೂರು ನೀಡಿಲ್ಲ. ಆದರೂ ಪ್ರಾಂಶುಪಾಲರು ಹಾಗೂ ಶಿಕ್ಷಕರ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.