ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ಕಾವೇರಿ ಥಿಯೇಟರ್ ಬಂದ್; ಇತ್ತೀಚೆಗೆ ಸುವರ್ಣ ಸಂಭ್ರಮ ಆಚರಿಸಿದ್ದ ಚಿತ್ರಮಂದಿರ

ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ಕಾವೇರಿ ಥಿಯೇಟರ್ ಬಂದ್; ಇತ್ತೀಚೆಗೆ ಸುವರ್ಣ ಸಂಭ್ರಮ ಆಚರಿಸಿದ್ದ ಚಿತ್ರಮಂದಿರ

ಒಟಿಟಿ, ಮಲ್ಟಿಪ್ಲೆಕ್ಸ್‌ಗಳ ಅಬ್ಬರ ನಡುವೆ, ಏಕಪರದೆ ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚತೊಡಗಿವೆ. ಈ ಸಾಲಿನಲ್ಲಿ ಈಗ ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ಕಾವೇರಿ ಥಿಯೇಟರ್ ಬಂದ್ ಆಗಿದೆ. ಇತ್ತೀಚೆಗೆ ಸುವರ್ಣ ಸಂಭ್ರಮ ಆಚರಿಸಿದ್ದ ಚಿತ್ರಮಂದಿರದ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ.

ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ಕಾವೇರಿ ಥಿಯೇಟರ್ ಬಂದ್ ಆಗಿದೆ. ಇತ್ತೀಚೆಗೆ ಸುವರ್ಣ ಸಂಭ್ರಮ ಆಚರಿಸಿದ್ದ ಚಿತ್ರಮಂದಿರ ಇದು.
ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ಕಾವೇರಿ ಥಿಯೇಟರ್ ಬಂದ್ ಆಗಿದೆ. ಇತ್ತೀಚೆಗೆ ಸುವರ್ಣ ಸಂಭ್ರಮ ಆಚರಿಸಿದ್ದ ಚಿತ್ರಮಂದಿರ ಇದು.

ಬೆಂಗಳೂರು: ಸುವರ್ಣ ಸಂಭ್ರಮ ಆಚರಿಸಿದ ಕೆಲವೇ ವಾರಗಳಲ್ಲಿ ಬೆಂಗಳೂರಿನ ಐತಿಹಾಸಿಕ ಕಾವೇರಿ ಥಿಯೇಟರ್‌ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಕಾಲಾಂತರದ ಪ್ರಭಾವದ ನಡುವೆಯೂ ಸ್ಯಾಂಕಿ ರಸ್ತೆಯಲ್ಲಿ ಪ್ಯಾಲೇಸ್ ಗುಟ್ಟಹಳ್ಳಿ ಸಮೀಪದ ಹಳೆಯ ಚಿತ್ರ ಮಂದಿರ ಇದಾಗಿದ್ದು, ಮಲ್ಟಿಪ್ಲೆಕ್ಸ್‌ಗಳ ನಡುವೆ ಉಳಿದುಕೊಂಡ ಏಕ ಪರದೆಯ ಚಿತ್ರಮಂದಿರ ಎಂಬ ಕಾರಣಕ್ಕೆ ಆಕರ್ಷಣೆಗೆ ಪಾತ್ರವಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಹಳೆಯ ಬೆಂಗಳೂರಿಗರು ಈ ಚಿತ್ರಮಂದಿರದಲ್ಲಿ ನೋಡದೇ ಇರುವ ಸಿನಿಮಾ ಇರಲಾರದು. ಸದಾ ಸಿನಿರಸಿಕರಿಂದ ತುಂಬಿಕೊಂಡಿರುತ್ತಿದ್ದ ಥಿಯೇಟರ್ ಈಗ ತನ್ನ ಕಾರ್ಯಾಚರಣೆ ನಿಲ್ಲಿಸಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ.

ಡಾ. ರಾಜ್‌ಕುಮಾರ್ ನಟನೆಯ 'ಬಂಗಾರದ ಪಂಜರ' ಸಿನಿಮಾ ಪ್ರದರ್ಶನದ ಮೂಲಕ 1974ರ ಜನವರಿ 11ರಂದು ಈ ಚಿತ್ರಮಂದಿರ ಆರಂಭವಾಗಿತ್ತು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಏಪ್ರಿಲ್ 20 ರಂದು ಎರಡು ಹಿಂದಿ ಚಲನಚಿತ್ರಗಳಾದ ಬಡೇ ಮಿಯಾನ್ ಚೋಟೆ ಮಿಯಾನ್ ಮತ್ತು ಮೈದಾನ್ ಪ್ರದರ್ಶನದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಈಗ ಈ ಥಿಯೇಟರ್ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಕೆಲಸ ಆರಂಭವಾಗಿದೆ.

ಒಟಿಟಿ, ಮಲ್ಟಿಪ್ಲೆಕ್ಸ್‌ ಸಂಸ್ಕೃತಿಗೆ ಬಲಿಯಾಯಿತು ಏಕಪರದೆ ಚಿತ್ರಮಂದಿರ

ಮೆಜೆಸ್ಟಿಕ್‌ ಕಪಾಲಿ ಚಿತ್ರಮಂದಿರದ ನಂತರ ಅತಿ ಹೆಚ್ಚು ಆಸನ ವ್ಯವಸ್ಥೆ ಹೊಂದಿದ್ದ ಈ ಚಿತ್ರಮಂದಿರ ಆರಂಭದಲ್ಲೇ 1384 ಆಸನಗಳನ್ನು ಹೊಂದಿತ್ತು. ಮಿನಿ ಬಾಲ್ಕನಿ ಹೊಂದಿದ ಕೆಲವೇ ಚಿತ್ರಮಂದಿರಗಳ ಪೈಕಿ ಕಾವೇರಿ ಥಿಯೇಟರ್ ಕೂಡ ಒಂದಾಗಿತ್ತು. ಆದಾಗ್ಯೂ, 1995ರಲ್ಲಿ ನವೀಕರಣದ ಬಳಿಕ ಆಸನಗಳ ಸಂಖ್ಯೆ 1110ಕ್ಕೆ ಇಳಿಕೆಯಾಗಿತ್ತು. ಒಂದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಚಿತ್ರಮಂದಿರಕ್ಕೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇತ್ತು. ಅದು ಇಲ್ಲಿನ ವಿಶೇಷತೆಯೂ ಆಗಿತ್ತು.

“ಒಟಿಟಿ ಅಲೆಯು ಸಿಂಗಲ್ ಸ್ಕ್ರೀನ್‌ಗಳನ್ನು ಕೊಂದಿದೆ. ಜನರ ಚಲನಚಿತ್ರ ನೋಡುವ ಅಭ್ಯಾಸವು ಬದಲಾಗಿದೆ. ಸಿನಿಮಾಗಳು ಆನ್‌ಲೈನ್‌ಗೆ ಬರಲು ಜನ ಕಾಯುತ್ತಿದ್ದಾರೆ. ಇದು ಕೋವಿಡ್ ನಂತರದ ಬದಲಾವಣೆ ”ಎಂದು ಖೇದ ವ್ಯಕ್ತಪಡಿಸುತ್ತಾರೆ ಕಾವೇರಿ ಥಿಯೇಟರ್ ಮಾಲೀಕ ಪ್ರಕಾಶ್ ನರಸಿಂಹಯ್ಯ ಎಂದು ದ ಹಿಂದೂ ವರದಿ ಮಾಡಿದೆ.

"ಮೌಂಟ್ ಕಾರ್ಮೆಲ್ ಮತ್ತು ಎಂಇಎಸ್ ಕಾಲೇಜಿನ ಚಲನಚಿತ್ರ ಪ್ರೇಮಿಗಳಿಗೆ, ಹಿಂದಿ ಸಿನಿಮಾ ಬಿಡುಗಡೆಗಳಿಗೆ ಬೇಡಿಕೆಯ ಥಿಯೇಟರ್ ಕಾವೇರಿ ಆಗಿತ್ತು. ರಜನಿಕಾಂತ್ ಮತ್ತು ವಿಜಯ್ ಅವರ ಹಲವಾರು ದೊಡ್ಡ ಹಿಂದಿ ಮತ್ತು ತಮಿಳಿನ ಚಲನಚಿತ್ರಗಳು ಕಾವೇರಿ ಥಿಯೇಟರ್‌ನಲ್ಲಿ ದೀರ್ಘಕಾಲ ಓಡಿದವು." ಎಂದು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ಸಲ್ಟಿಂಗ್ ಕ್ಯುರೇಟರ್ ಹರೀಶ್ ಮಲ್ಯ ಹೇಳಿದ್ದಾಗಿ ವರದಿ ಹೇಳಿದೆ.

ಸಿನಿರಸಿಕರ ನೆನಪಿನಂಗಳದಲ್ಲಿ ಕಾವೇರಿ ಥಿಯೇಟರ್‌

ಕಾವೇರಿ ಥಿಯೇಟರ್‌ನಲ್ಲಿ ಎಲ್ಲ ಭಾಷೆಗಳ ಸಿನಿಮಾ ಪ್ರದರ್ಶನವೂ ಆಗುತ್ತಿತ್ತು. ಉತ್ತರ ಬೆಂಗಳೂರಿಗರ ಪಾಲಿಗೆ ಇದು ಚಿತ್ರಮಂದಿರ ಎನ್ನುವುದಕ್ಕಿಂತ ಸಾಂಸ್ಕೃತಿಕ ಸ್ಥಳವೇ ಆಗಿತ್ತು. ಅನೇಕ ಸಿನಿಪ್ರೇಮಿಗಳು ಇಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳ ಸೂಪರ್‌ಹಿಟ್ ಸಿನಿಮಾಗಳನ್ನು ನೋಡಿದ ನೆನಪನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಡಾ ರಾಜ್‌ಕುಮಾರ್ ಅವರ ಪ್ರೇಮದ ಕಾಣಿಕೆ (1976) ಉತ್ತಮ ಪ್ರದರ್ಶನ ನೀಡಿತು. ತೆಲುಗು ಸಂಗೀತ, ಶಂಕರಾಭರಣಂ (1980), ಮತ್ತು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (1995) ಕಾವೇರಿಯಲ್ಲಿ 25 ವಾರಗಳಿಗಿಂತ ಹೆಚ್ಚು ಕಾಲ ಪ್ರದರ್ಶನ ಕಂಡವು. ಕಮಲ್ ಹಾಸನ್ ಅವರ ಇಂಡಿಯನ್ (1996) 100 ದಿನ, ಕಾಂತಾರ 50-ದಿನಗಳ ಪ್ರದರ್ಶನ ಕಂಡಿದೆ.

ಒಟಿಟಿ, ಮಲ್ಟಿಪ್ಲೆಕ್ಸ್ ಅಬ್ಬರದ ನಡುವೆ, ಕಪಾಲಿ, ಪಲ್ಲವಿ, ಸಾಗರ್, ತ್ರಿಭುವನ್ ಮತ್ತು ಎವರೆಸ್ಟ್‌ನಂತಹ ಇತರ ಐತಿಹಾಸಿಕ ಏಕಪರದೆ ಚಿತ್ರಮಂದಿರಗಳ ಬಳಿಕ ಈಗ ಕಾವೇರಿಯಲ್ಲಿ ಪ್ರದರ್ಶನ ಮುಗಿಸಿದೆ. ಬದಲಾದ ಕಾಲಘಟಕ್ಕೆ ಏಕಪರದೆಯ ಚಿತ್ರಮಂದಿರ ಅಸ್ತಿತ್ವ ಕಳೆದುಕೊಂಡಿತು.

IPL_Entry_Point