ಬೆಂಗಳೂರಿನ ಈ ಬಡಾವಣೆಗೆ ಬರಲು ಶಾಲಾ ಬಸ್‌ಗೂ ಅಂಜಿಕೆ; ಚಳ್ಳಕೆರೆ ಲೇಔಟ್ ಜನರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ-bengaluru news this is worst layout of bengaluru people live in challakere layout curse bda for apathy problems ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಈ ಬಡಾವಣೆಗೆ ಬರಲು ಶಾಲಾ ಬಸ್‌ಗೂ ಅಂಜಿಕೆ; ಚಳ್ಳಕೆರೆ ಲೇಔಟ್ ಜನರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ

ಬೆಂಗಳೂರಿನ ಈ ಬಡಾವಣೆಗೆ ಬರಲು ಶಾಲಾ ಬಸ್‌ಗೂ ಅಂಜಿಕೆ; ಚಳ್ಳಕೆರೆ ಲೇಔಟ್ ಜನರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ

ಬೆಂಗಳೂರಿನ ಉಸ್ತುವಾರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ನಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಂಡರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಇಲ್ಲಿನ ನಿವಾಸಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ. (ವರದಿ: ಮಾರುತಿ ಎಚ್.)

ಬೆಂಗಳೂರಿನ ಈ ಬಡಾವಣೆಗೆ ಬರಲು ಶಾಲಾ ಬಸ್‌ಗೂ ಅಂಜಿಕೆ; ಚಳ್ಳಕೆರೆ ಲೇಔಟ್ ಜನರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ
ಬೆಂಗಳೂರಿನ ಈ ಬಡಾವಣೆಗೆ ಬರಲು ಶಾಲಾ ಬಸ್‌ಗೂ ಅಂಜಿಕೆ; ಚಳ್ಳಕೆರೆ ಲೇಔಟ್ ಜನರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bengaluru Development Authority - BDA) ರಚಿಸಿರುವ ಅರ್ಕಾವತಿ ಬಡಾವಣೆಯ ಚಳ್ಳಕೆರೆ ಲೇಔಟ್‌ನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ 18 ವರ್ಷಗಳೇ ಉರುಳಿವೆ. ಈ ಬಡಾವಣೆಯಲ್ಲಿ ಈಗಾಗಲೇ 400 ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಈ ಬಡಾವಣೆಯಲ್ಲಿ ಮೂಲ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ. ಬಡಾವಣೆಯ 19ನೇ ಬ್ಲಾಕ್‌ನಲ್ಲಿ ಡಾಂಬರು, ಒಳ ಚರಂಡಿ ವ್ಯವಸ್ಥೆ ಇಲ್ಲ. ಜೊತೆಗೆ ವಿದ್ಯುತ್‌ ಸರಬರಾಜು ಆಗಾಗ ಕಡಿತಗೊಳ್ಳುತ್ತಲೇ ಇರುತ್ತದೆ ಎಂದು ಸ್ಥಳೀಯರು ದೂರುತ್ತಾರೆ.

ಬಡಾವಣೆಯ ಸಮಸ್ಯೆಗಳನ್ನು ಬಗೆಹರಿಸುವಂತೆ ಬಿಡಿಎಗೆ ಹತ್ತಾರು ಬಾರಿ ಮನವಿಗಳನ್ನು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಬೆಂಗಳೂರಿನ ಉಸ್ತುವಾರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ನಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಂಡರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಇಲ್ಲಿನ ನಿವಾಸಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ. ಪಕ್ಕದ ಬಾಬುಸಾಪಾಳ್ಯ ಬಡಾವಣೆಯ ಒಳಚರಂಡಿ ನೀರು ಈ ಬಡಾವಣೆಗೆ ನುಗ್ಗಿ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬ ಡೆಂಗಿ ರೋಗಿ ಕಾಣಸಿಗುತ್ತಾನೆ ಎಂದು ಮತ್ತೊಬ್ಬರು ಹೇಳುತ್ತಾರೆ.

ಈಗ ಮುಂಗಾರು ಮಳೆ ಸುರಿಯುತ್ತಿದ್ದು, ರಸ್ತೆ ಕೆಸರು ಗದ್ದೆಯಾಗಿದೆ. ನಡೆದುಕೊಂಡು ಮತ್ತು ವಾಹನಗಳಲ್ಲಿ ಓಡಾಡುವುದೇ ಕಷ್ಟವಾಗಿದೆ. ಸಮರ್ಪಕ ರಸ್ತೆ ಇಲ್ಲದಿರುವುದು ಅತಿ ಹೆಚ್ಚು ತೊಂದರೆಯನ್ನುಂಟು ಮಾಡಿದೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತರಲು ಕಷ್ಟವಾಗುತ್ತಿದೆ ಎನ್ನುತ್ತಾರೆ. ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎನ್ನುವುದನ್ನು ಬಿಡಿಎ ಒಪ್ಪಿಕೊಂಡಿದೆ. ಈ ರಸ್ತೆಯಲ್ಲಿ ವಾಹನಗಳು ಮುಂದಕ್ಕೆ ಹೋಗುವುದೇ ಇಲ್ಲ. ಕೆಸರಿನಲ್ಲಿ ಚಕ್ರಗಳು ಹೂತುಹೋಗುತ್ತವೆ. ಶಾಲಾ ಬಸ್‌ಗಳ ಚಾಲಕರು ಈ ರಸ್ತೆಯಲ್ಲಿ ಬರಲು ನಿರಾಕರಿಸುತ್ತಾರೆ. ಮುಖ್ಯರಸ್ತೆಯವರೆಗೆ ಮಕ್ಕಳನ್ನು ಪ್ರತಿದಿನ ಕರೆದುಕೊಂಡು ಹೋಗಿ ಬಸ್‌ ಹತ್ತಿಸಬೇಕಾಗಿದೆ. ಇದರಿಂದ ಕಚೇರಿಗೆ ತೆರಳುವ ಪೋಷಕರಿಗೆ ಕಷ್ಟವಾಗುತ್ತಿದೆ ಎನ್ನುತ್ತಾರೆ.

ಈ ಬಡಾವಣೆಯ 600 ನಿವೇಶನಗಳಿಗೆ ಬೆಸ್ಕಾಂ ಮೂರು ಪರಿವರ್ತಕಗಳನ್ನು (ಟ್ರಾನ್ಸ್‌ಫಾರ್ಮರ್) ಅಳವಡಿಸಿದೆ. ಓವರ್‌ಲೋಡ್‌ ಆಗುವುದರಿಂದ ವೋಲ್ಟೇಜ್‌ ಇರುವುದಿಲ್ಲ. ಕರೆಂಟ್‌ ಕಡಿತ ಆಗಾಗ ಆಗುತ್ತಲೇ ಇರುತ್ತದೆ. ಮನೆಯಿಂದಲೇ ಕೆಲಸ ಮಾಡುವವರಿಗೆ (ವರ್ಕ್‌ ಫ್ರಂ ಹೋಮ್), ವಿದ್ಯಾರ್ಥಿಗಳಿಗೆ ಮತ್ತು ಗೃಹಿಣಿಯರಿಗೆ ಇದರಿಂದ ಕಷ್ಟವಾಗುತ್ತಿದೆ.

ವಿದ್ಯುತ್ ಸಮಸ್ಯೆಯಿಂದಾಗಿ ಲಿಫ್ಟ್ ಕೆಲಸ ಮಾಡದಿರುವುದರಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳು ತಮ್ಮ ಮನೆಗಳಿಗೆ ತಲುಪಲು ಏದುಸಿರು ಬಿಡುವಂತಾಗಿದೆ ಎಂದು ನಿವಾಸಿಗಳು ಕಷ್ಟಗಳ ಸರಮಾಲೆಯನ್ನು ಬಿಚ್ಚಿಡುತ್ತಾರೆ. ತಡರಾತ್ರಿ ಹೋಟೆಗಳ ಕಾರ್ಮಿಕರು ಹೋಟೆಲ್‌ ನ ಕಸ ಮತ್ತು ತ್ಯಾಜ್ಯವನ್ನು ತಂದು ಖಾಲಿ ನಿವೇಶನಗಳಲ್ಲಿ ಸುರಿಯುತ್ತಿದ್ದಾರೆ. ಇದರಿಂದ ನಾಯಿಗಳ ಕಾಟ ಹೆಚ್ಚಾಗಿದೆ. ಮಕ್ಕಳು ಮನೆಯಿಂದ ಹೊರ ಬರಲು ಹೆದರಿಕೊಳ್ಳುತ್ತಿದ್ದಾರೆ ಎಂದು ಗೃಹಿಣಿಯೊಬ್ಬರು ಹೇಳುತ್ತಾರೆ.

ಈ ಸಮಸ್ಯೆಗಳ ಪಟ್ಟಿ ಇಲ್ಲಿಗೇ ನಿಲ್ಲುವುದಿಲ್ಲ. ಈ ಬಡಾವಣೆಯ ಸಾವಿರಾರು ನಾಗರೀಕರಿಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇಲ್ಲಿನ ಪ್ರತಿ ಮನೆಯೂ ಟ್ಯಾಂಕರ್‌ ನೀರನ್ನು ಅವಲಂಬಿಸಿದ್ದು ಪ್ರತಿ ತಿಂಗಳು 5-10 ಸಾವಿರ ರೂ. ವರೆಗೆ ಪಾವತಿ ಮಾಡಬೇಕಾಗಿದೆ. ಈ ಭಾಗದ 16 ಹಳ್ಳಿಗಳಿಗೆ ಡಾಂಬರು ಹಾಕಲು ಟೆಂಡರ್‌ ಆಹ್ವಾನಿಸಲಾಗಿದೆ. ಚಳ್ಳಕರೆಗೆ ಗ್ರಾಮಕ್ಕೆ ಕರೆಯಲಾಗಿದ್ದ ಟೆಂಡರ್‌ ನಲ್ಲಿ ಒಬ್ಬರು ಮಾತ್ರ ಭಾಗವಹಿಸಿದ್ದರು. ಆದ್ದರಿಂದ ಮರು ಟೆಂಡರ್‌ ಕರೆಯಲಾಗಿದೆ ಎಂದು ಬಿಡಿಎ ಎಂಜಿನಿಯರ್‌ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಅತ್ಯಂತ ಕೆಟ್ಟ ಬಡಾವಣೆಗೆ ಪ್ರಶಸ್ತಿ ಕೊಡುವುದಾದರೆ ಈ ಬಡಾವಣೆಗೆ ಕೊಡಬೇಕು. ಅಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಬಿಡಿಎ ಶೀಘ್ರ ಗಮನ ಹರಿಸಲಿದೆಯೇ ಎಂದು ಕಾದು ನೋಡಬೇಕು.