ಹಸಿರು ಮಾರ್ಗದ ನಾಗಸಂದ್ರ-ಮಾದವಾರ ನಡುವಿನ ನಮ್ಮ ಮೆಟ್ರೋ ಪರೀಕ್ಷಾರ್ಥ ರೈಲು ಸಂಚಾರ ಆರಂಭ; ನವೆಂಬರ್‌ ವೇಳೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯ-bengaluru news trial run of namma metro line between nagasandra madawara on green line has started mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಹಸಿರು ಮಾರ್ಗದ ನಾಗಸಂದ್ರ-ಮಾದವಾರ ನಡುವಿನ ನಮ್ಮ ಮೆಟ್ರೋ ಪರೀಕ್ಷಾರ್ಥ ರೈಲು ಸಂಚಾರ ಆರಂಭ; ನವೆಂಬರ್‌ ವೇಳೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯ

ಹಸಿರು ಮಾರ್ಗದ ನಾಗಸಂದ್ರ-ಮಾದವಾರ ನಡುವಿನ ನಮ್ಮ ಮೆಟ್ರೋ ಪರೀಕ್ಷಾರ್ಥ ರೈಲು ಸಂಚಾರ ಆರಂಭ; ನವೆಂಬರ್‌ ವೇಳೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯ

ಬೆಂಗಳೂರಿನ ನಾಗಸಂದ್ರ-ಮಾದವಾರ ಮಧ್ಯೆ ಗ್ರೀನ್‌ ಲೈನ್‌ ಮೆಟ್ರೋ ರೈಲು ಪರೀಕ್ಷಾ ಸಂಚಾರ ಆರಂಭವಾಗಿದ್ದು ನವೆಂಬರ್‌ ವೇಳೆಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಈ ವಿಚಾರವನ್ನು ನಮ್ಮ ಮೆಟ್ರೋ, ತನ್ನ ಅಧಿಕೃತ ಎಕ್ಸ್‌ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಹಸಿರು ಮಾರ್ಗದ ನಾಗಸಂದ್ರ-ಮಾದವಾರ ನಡುವಿನ ನಮ್ಮ ಮೆಟ್ರೋ ಪರೀಕ್ಷಾರ್ಥ ರೈಲು ಸಂಚಾರ ಆರಂಭ; ನವೆಂಬರ್‌ ವೇಳೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯ
ಹಸಿರು ಮಾರ್ಗದ ನಾಗಸಂದ್ರ-ಮಾದವಾರ ನಡುವಿನ ನಮ್ಮ ಮೆಟ್ರೋ ಪರೀಕ್ಷಾರ್ಥ ರೈಲು ಸಂಚಾರ ಆರಂಭ; ನವೆಂಬರ್‌ ವೇಳೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯ (PC: @OfficialBMRCL)

ಬೆಂಗಳೂರು:  ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ-ಮಾದವಾರ ಮಧ್ಯೆ ಮೆಟ್ರೋ ರೈಲು ಪರೀಕ್ಷಾ ಸಂಚಾರ ಆರಂಭವಾಗಿದೆ. ರೀಚ್‌ -3 ಎತ್ತರಿಸಿದ ಮಾರ್ಗದಲ್ಲಿನ ನಾಗಸಂದ್ರದಿಂದ ಮಾದವಾರದ 3.14 ಕಿ.ಮೀ. ನಡುವೆ ಮೆಟ್ರೋ ರೈಲು ಮೂಲಕ ಮೊದಲ ಪರೀಕ್ಷಾರ್ಥ ಸಂಚಾರ ನಡೆದಿದೆ. ಕನಿಷ್ಟ 5 ಕಿಮೀ ಮತ್ತು ಗರಿಷ್ಟ 35 ಕಿಮೀ ವೇಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕೃತ ಎಕ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ತಿಳಿಸಿದೆ.

ನವೆಂಬರ್‌ ವೇಳೆಗೆ ಸಾರ್ವಜನಿಕರ ಸೇವೆಗೆ ಲಭ್ಯ

ಬಲ್ಲ ಮೂಲಗಳ ಪ್ರಕಾರ ಅಕ್ಟೋಬರ್‌ ಅಥವಾ ನವಂಬರ್‌ನಲ್ಲಿ ವಾಣಿಜ್ಯ ಸೇವೆಗಳು ಆರಂಭವಾಗಲಿವೆ. ರೇಷ್ಮೆ ಮಂಡಳಿಯಿಂದ ನಾಗಸಂದ್ರದವರೆಗೂ ಇದ್ದ ಹಸಿರು ಮಾರ್ಗದ ನಮ್ಮ ಮೆಟ್ರೋ ಮಾರ್ಗ ಇದೀಗ ಮಾದವಾರ (ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ) ದವರೆಗೂ ವಿಸ್ತರಣೆಯಾಗಿದೆ. ಈ ಮೂಲಕ ಹಸಿರು ಮಾರ್ಗವು 34.64 ಕಿಮೀ ಉದ್ದವಿದ್ದು, ಬೆಂಗಳೂರಿನ ಒಟ್ಟು ನಮ್ಮ ಮೆಟ್ರೋ ಮಾರ್ಗ 75.2 ಕಿಮೀ ಗೆ ವಿಸ್ತರಣೆಯಾಗಲಿದೆ. ಪ್ರಾಥಮಿಕ ಹಂತದ ಪರೀಕ್ಷೆ ಆರಂಭವಾಗಿದೆ. ಸುಮಾರು 15 ದಿನ ಈ ಪರೀಕ್ಷೆ ನಡೆಯಲಿದೆ. ನಂತರ 45 ದಿನಗಳ ಕಾಲ ಸಿಗ್ನಲಿಂಗ್‌, ದೂರ ಸಂಪರ್ಕ, ವಿದ್ಯುತ್‌ ಸರಬರಾಜು, ಸಾಮರ್ಥ್ಯ ಪರಿಶೀಲನೆ ಸೇರಿದಂತೆ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳು ನಡೆಯಲಿವೆ.

ನಂತರ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ಅಂತಿಮ ವರದಿ ನೀಡಲಿವೆ. ವರದಿಯನ್ನು ಸ್ವೀಕರಿಸಿದ ನಂತರ ರೈಲ್ವೆ ಮಂಡಳಿಯು ಅನುಮತಿ ನೀಡಲಿದೆ. ನಂತರ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಈ ನವೆಂಬರ್‌ ವೇಳೆಗೆ ಪ್ರಯಾಣಿಕರ ಸೇವೆಗೆ ನಮ್ಮ ಮೆಟ್ರೋ ಸಜ್ಜಾಗಲಿದೆ ಎಂದು ಬಿಎಂಆರ್‌ ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್)‌, ಮಾದವಾರ ನಿಲ್ದಾಣಗಳು ಇರುತ್ತವೆ. ಈ ನಿಲ್ದಾಣಗಳ ಕಾಮಗಾರಿಯೂ ಬಹುತೇಕ ಮುಕ್ತಾಯಗೊಂಡಿದೆ. ನಾಗಸಂದ್ರ- ಮಾದವಾರ ಮಾರ್ಗ ಪೂರ್ಣಗೊಂಡರೆ ಹಸಿರು ಮಾರ್ಗದ ನಿರ್ಮಾಣ ಶೇ.100ರಷ್ಟು ಪೂರ್ಣಗೊಂಡಂತಾಗುತ್ತದೆ.

ಯಾರಿಗೆಲ್ಲಾ ಅನುಕೂಲವಾಗಲಿದೆ?

ನೆಲಮಂಗಲ, ಮಾದನಾಯಕನಹಳ್ಳಿ, ಮಾಕಳಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಪ್ರದೇಶಗಳ ನಾಗರಿಕರಿಗೆ ಅನುಲಕೂಲವಾಗಲಿದೆ. ತುಮಕೂರು ಭಾಗದಿಂದ ಆಗಮಿಸುವವರು ಇಲ್ಲಿಯೇ ಬಸ್‌ ಇಳಿದು ಬೆಂಗಳೂರು ನಗರ ಪ್ರವೇಶಿಸಲು ಮೆಟ್ರೋ ರೈಲನ್ನು ಬಳಸಬಹುದು. ನೆಲಮಂಗಲ ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ದಟ್ಟಣೆ ಕಡಿಮೆಯಾಗಲಿದೆ. ಈ ಭಾಗದಲ್ಲಿ ಬಿಡಿಎ ಮತ್ತು ಖಾಸಗಿ ಸಂಸ್ಥೆಗಳು ನಿರ್ಮಿಸುತ್ತಿರುವ ಬಡಾವಣೆಗಳಲ್ಲಿ ವಾಸ ಮಾಡುವವರಿಗೂ ಮೆಟ್ರೋ ವರದಾನವಾಗಲಿದೆ. ಬಹುತೇಕ ವಸ್ತು ಪ್ರದರ್ಶನಗಳು ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದ್ದು, ಆಯೋಜಕರು ಮತ್ತು ಗ್ರಾಹಕರಿಗೂ ಅನುಕೂಲವಾಗಲಿದೆ.

ನಾಗಸಂದ್ರ ಮಾದವಾರ 3.7 ಕಿಮೀ ಉದ್ದದ ಕಾಮಗಾರಿ 2017ರಲ್ಲಿ ಆರಂಭವಾಗಿತ್ತು. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ, ಕೋವಿಡ್‌ ಕಾರಣಗಳಿಗಾಗಿ ಕಾಮಗಾರಿ ನಿಧಾನವಾಗಿದ್ದು, 2023ರಲ್ಲಿ ಮುಗಿದಿತ್ತು. ನಂತರ ತಾಂತ್ರಿಕ ಕಾಮಗಾರಿಗಳು ಆರಂಭವಾಗಿದ್ದವು. 2017ರ ಫೆಬ್ರವರಿಯಲ್ಲಿ 3.7 ಕಿಮೀ ಮಾರ್ಗದ ಕಾಮಗಾರಿಯನ್ನು 298.65 ಕೋಟಿ ರೂ.ಗಳ ಟೆಂಡರನ್ನು ಸಿಂಪ್ಲೆಕ್ಸ್‌ ಇನ್ಫ್ರಾಸ್ಟ್ರಕ್ಚರ್‌ ಕಂಪನಿ ಪಡೆದುಕೊಂಡಿತ್ತು.

(ವರದಿ: ಎಚ್.ಮಾರುತಿ, ಬೆಂಗಳೂರು)