ಕನ್ನಡ ಸುದ್ದಿ  /  Karnataka  /  Bengaluru News Ub City Mall Charging 1 Thousand Rupees For 1 Hour Premium Parking Mrt

ಬೆಂಗಳೂರಿನ ಈ ಮಾಲ್‌ನಲ್ಲಿ ವಾಹನ ಪಾರ್ಕಿಂಗ್ ಮಾಡಲು 1 ಗಂಟೆಗೆ 1000 ರೂಪಾಯಿ ಶುಲ್ಕ; ಅಂತಹದ್ದೇನಿದೆ ಎಂದ ಜನ

ಯುಬಿ ಸಿಟಿ ಮಾಲ್‌ನಲ್ಲಿ 1 ಗಂಟೆಗೆ ಪ್ರೀಮಿಯಂ ಪಾರ್ಕಿಂಗ್‌ಗೆ 1 ಸಾವಿರ ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಇದರಲ್ಲಿ ಅಂತಹದ್ದೇನಿದೆ ಎಂದು ಬೆಂಗಳೂರಿಗರ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನ ಯುಬಿ ಸಿಟಿ ಮಾಲ್‌ ಪಾರ್ಕಿಂಗ್ ಸ್ಥಳದಲ್ಲಿ ಹಾಕಲಾಗಿರುವ ನಾಮಫಲಕ. 1 ಗಂಟೆಗೆ ಪ್ರೀಮಿಯಂ ಪಾರ್ಕಿಂಗ್‌ಗೆ 1 ಸಾವಿರ ರೂಪಾಯಿ ಎಂದು ಬರೆಯಲಾಗಿದೆ.
ಬೆಂಗಳೂರಿನ ಯುಬಿ ಸಿಟಿ ಮಾಲ್‌ ಪಾರ್ಕಿಂಗ್ ಸ್ಥಳದಲ್ಲಿ ಹಾಕಲಾಗಿರುವ ನಾಮಫಲಕ. 1 ಗಂಟೆಗೆ ಪ್ರೀಮಿಯಂ ಪಾರ್ಕಿಂಗ್‌ಗೆ 1 ಸಾವಿರ ರೂಪಾಯಿ ಎಂದು ಬರೆಯಲಾಗಿದೆ.

ಬೆಂಗಳೂರಿನಲ್ಲಿ ಮಾಲ್ ಅಥವಾ ಯಾವುದೇ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ಎಷ್ಟಿರಬಹುದು ? 50 ರೂಪಾಯಿ, 100 ರೂಪಾಯಿ? ಇಲ್ಲ, ಒಂದು ಗಂಟೆಗೆ ಬರೋಬ್ಬರಿ 1000 ರೂಪಾಯಿ. ಸಿಲಿಕಾನ್ ಸಿಟಿಯ ಯುಬಿ ಸಿಟಿಯ ಶಾಪಿಂಗ್ ಮಾಲ್‌ನಲ್ಲಿ 1 ಗಂಟೆಗೆ 1000 ರೂಪಾಯಿ ವಾಹನಕ್ಕೆ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗಿದೆ. ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ದುಬಾರಿ ಶುಲ್ಕ ವಸೂಲಿಯನ್ನು ಬೆಂಬಲಿಸುವುದಕ್ಕಿಂತ ತರಾಟೆಗೆ ತೆಗೆದುಕೊಂಡವರೇ ಹೆಚ್ಚು. ಯುಬಿ ಸಿಟಿ ಮಾಲ್ ದೇಶದ ಮೊದಲ ಮಾಲ್. 2008 ರಲ್ಲಿ ಆರಂಭವಾಗಿದ್ದು, ವಿಜಯ್ ಮಲ್ಯ ಅವರ ಕನಸಿನ ಕೂಸು ಇದು. ನಗರದ ಹೃದಯ ಭಾಗದಲ್ಲಿರುವ ಈ ಮಾಲ್‌ಗೆ ಭೇಟಿ ನೀಡುವವರಲ್ಲಿ ಶ್ರೀ ಸಾಮಾನ್ಯರಿಗಿಂತ ಶ್ರೀಮಂತರೇ ಅಧಿಕ. ಇಲ್ಲಿನ ವಸ್ತುಗಳ ಬೆಲೆಯೂ ದುಬಾರಿ. ಜನಸಾಮಾನ್ಯರ ಕೈಗೆ ಎಟಕುವುದಿಲ್ಲ. ಹಾಗಾಗಿ ಪಾರ್ಕಿಂಗ್ ಶುಲ್ಕವೂ ಮಧ್ಯಮ ವರ್ಗದ ಗ್ರಾಹಕರಿಗೆ ಹೊರೆ ಅನ್ನಿಸಿದರೂ ಸಿರಿವಂತರಿಗೆ ಸಾವಿರ ರೂಪಾಯಿ ನಗಣ್ಯ ಅನ್ನಿಸಬಹುದು.

ಆರಂಭದಿಂದ ಇತ್ತೀಚಿನ ವರ್ಷಗಳವರೆಗೆ ಪಾರ್ಕಿಂಗ್ ಶುಲ್ಕ ದುಬಾರಿಯಾಗಿರಲಿಲ್ಲ. ಗಂಟೆಗೆ 50, 100 ರೂ.ಗಳ ಆಸುಪಾಸಿನಲ್ಲೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕೋಟಿ ರೂಪಾಯಿ ಬೆಲೆ ಬಾಳುವ ಕಾರುಗಳಲ್ಲಿ ಓಡಾಡುವವರಿಗೆ 1000 ರೂಪಾಯಿ ಹೊರೆ ಅನ್ನಿಸಲಿಕ್ಕಿಲ್ಲ. ಏಕೆಂದರೆ ಅವರಿಗೆ ತಮ್ಮ ದುಬಾರಿ ಕಾರುಗಳ ರಕ್ಷಣೆ ಮುಖ್ಯ. ಉಳಿದವರು ಯುಬಿ ಸಿಟಿ ನೋಡಬೇಕು ಎಂದರೆ ಮೆಟ್ರೋ ಹಿಡಿದು ಎಂಜಿ ರಸ್ತೆ ನಿಲ್ದಾಣದಲ್ಲಿ ಇಳಿದು ಹೋಗಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಬೆಂಗಳೂರನ್ನು ಸಿಂಗಾಪುರ, ಲಂಡನ್, ಹಾಂಗ್ ಕಾಂಗ್ ಮಾಡಲು ಹೊರಟಿದ್ದಾರಾ?

ಸಾವಿರ ರೂಪಾಯಿ ಪಡೆದು ಅವರು ಕಾರನ್ನು ನೀರಿನಿಂದ ತೊಳೆದು ಕೊಡಲಿದ್ದಾರೆಯೆ ಅಥವಾ ಹಣದಲ್ಲೇ ತೊಳೆಯಲಿದ್ದಾರೆಯೆ. ಎಂದೂ ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಡೈಮಂಡ್ ಫೇಶಿಯಲ್ ಮಾಡಿ ಕೊಡಲಿದ್ದಾರೆಯೆ ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರನ್ನು ಸಿಂಗಾಪುರ, ಲಂಡನ್, ಹಾಂಗ್ ಕಾಂಗ್ ಮಾಡಲು ಹೊರಟಿದ್ದಾರೆ, ಹಾಗಾಗಿ ಶುಲ್ಕ ದುಬಾರಿಯಾಗುತ್ತಿದೆ ಎಂದು ಕೆಲವರು ಕಾಲೆಳೆದಿದ್ದಾರೆ. ಮತ್ತೊಬ್ಬರು ಭಾರಿ ಲೆಕ್ಕಾಚಾರವನ್ನೇ ಹಾಕಿದ್ದಾರೆ. ಒಂದು ಗಂಟೆಗೆ 1000 ರೂಪಾಯಿ ಎಂದರೆ 10 ಗಂಟೆಗೆ 10,000 ರೂಪಾಯಿ. ಒಂದು ತಿಂಗಳಿಗೆ 3 ಲಕ್ಷ ಅಥವಾ 36 ಲಕ್ಷ ರೂಪಾಯಿ. ಇದು ಅಸಾಮಾನ್ಯ ಸಂಗತಿ ಎನ್ನುತ್ತಾರೆ ಕೆಲವರು.

ಮತ್ತೊಬ್ಬರ ಸಲಹೆ ಹೀಗಿದೆ. ಪಾರ್ಷೇ, ಜಾಗ್ವಾರ್, ಲಾಂಬ್ರೋಗಿನಿಯಂತಹ ಕಾರುಗಳಿಗೆ 1000 ರೂಪಾಯಿ ಶುಲ್ಕ ಸರಿಯಾಗಿದೆ. ಆಲ್ಟೊ, ವ್ಯಾಗನರ್, ಕಾರುಗಳ ಮಾಲೀಕರು ತಮ್ಮ ವಾಹನಗಳನ್ನು ಮನೆಗಳಲ್ಲಿ ಬಿಟ್ಟು ಮೆಟ್ರೋ ರೈಲಿನಲ್ಲಿ ಬಂದು ಹೋಗಬಹುದು ಎನ್ನುತ್ತಾರೆ. ಕಾರುಗಳಲ್ಲಿ ಬರುವುದನ್ನು ನಿಯಂತ್ರಿಸಲು ಮಾಲ್ ಈ ತಂತ್ರ ಅನುಸರಿಸುತ್ತಿದೆ. ಈ ಮಾಲ್‌ನ ಪಾರ್ಕಿಂಗ್‌ನಲ್ಲಿ ಸಾಮಾನ್ಯ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಅಲ್ಲಿಯೇ ಕೆಲಸ ಮಾಡುವ ಉದ್ಯೋಗಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರೀಮಿಯಂ ಪಾರ್ಕಿಂಗ್ ಎಂದರೇನು?

1000 ರೂಪಾಯಿ ಕಾರ್ ಪಾರ್ಕಿಂಗ್ ಜೊತೆಗೆ ಒಂದು ತಿಂಗಳ ಅವಧಿಗೆ ಷೇರು ಮಾರುಕಟ್ಟೆಯ ಉಚಿತ ಸಲಹೆ ನೀಡುತ್ತಾರೆ. ಇದನ್ನೇ ಪ್ರೀಮಿಯಂ ಪಾರ್ಕಿಂಗ್ ಎಂದು ಕರೆಯುತ್ತಾರೆ. ಇತ್ತೀಚೆಗೆ ಯಲಹಂಕದಲ್ಲಿ ಮಾಲ್ ಆಫ್ ಏಷ್ಯಾ ಆರಂಭವಾಗಿದೆ. ಇಲ್ಲಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಬೆಂಗಳೂರಿನ ಯಾವುದೇ ಮಾಲ್‌ನಲ್ಲಿ ಗ್ರಾಹಕರಿಗೆ ಪ್ರವೇಶ ಶುಲ್ಕ ಇಲ್ಲ. ಆದರೆ ವಾಹನಗಳಿಗೆ ಗಂಟೆಗೆ ಇಂತಿಷ್ಟು ಶುಲ್ಕವನ್ನು ವಿಧಿಸಲಾಗುತ್ತಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )