ಯುಗಾದಿ ಪ್ರಯುಕ್ತ ಬೆಂಗಳೂರಲ್ಲಿ ನಾಟಿ ಕೋಳಿ, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ, ಗೆದ್ದವರಿಗುಂಟು ಭಾರಿ ಬಹುಮಾನ
Nati Koli Ragi Mudde Eating Competition: ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಈ ಬಾರಿಯು ನಾಟಿಕೋಟಿ, ರಾಗಿಮುದ್ದೆ ಉಣ್ಣುವ ಸ್ಪರ್ಧೆ ಏರ್ಪಸಲಾಗಿದೆ. ಕಳೆದ 3 ವರ್ಷಗಳಿಂದ ಕೆಂಪೇಗೌಡ ಚಾರಿಟೆಬಲ್ ಟ್ರಸ್ಟ್ ಈ ಸ್ಪರ್ಧೆ ಏರ್ಪಡಿಸುತ್ತಿದೆ. ಗೆದ್ದವರಿಗೆ ಭಾರಿ ಬಹುಮಾನವೂ ಉಂಟು.

ಬೆಂಗಳೂರು: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಶುರುವಾಗಿದೆ. ಹಳೆ ಮೈಸೂರು ಭಾಗದಲ್ಲಿ ಯುಗಾದಿ ಹಬ್ಬದ ಜೊತೆ ಹೊಸ ತೊಡಕು ಆಚರಣೆ ಕೂಡ ಬಹಳ ವಿಶೇಷ. ಹೊಸ ತೊಡಕು ಎಂದರೆ ಮಾಂಸಾಹಾರದ ಊಟ. ಯುಗಾದಿ ಮರುದಿನ ಬೆಂಗಳೂರು, ಮಂಡ್ಯ, ಮೈಸೂರು ಮುಂತಾದ ಕಡೆಗಳಲ್ಲಿ ಹೊಸತೊಡಕು ಆಚರಿಸುತ್ತಾರೆ. ಬೆಂಗಳೂರಿನಲ್ಲಿ ಹೊಸತೊಡಕಿನ ಸಲುವಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಗುತ್ತದೆ, ಅದು ಕೂಡ ಯುಗಾದಿ ಹಬ್ಬಕ್ಕೆ ಮುಂಚಿತವಾಗಿ. ಈ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಬಹುದು.
ಅದೇನಪ್ಪಾ ಅಂತ ಸ್ಪರ್ಧೆ ಅಂತೀರಾ, ಇದು ಖಂಡಿತ ಒಂಥರಾ ವಿಶೇಷ ಸ್ಪರ್ಧೆ. ಇಲ್ಲಿ ನೀವು ಹಾಡಲ್ಲ ಬೇಕಿಲ್ಲ, ಓಡಬೇಕಿಲ್ಲ, ಕುಣಿಯಬೇಕಿಲ್ಲ, ಆದ್ರೆ ನೀವು ತಿನ್ನಬೇಕು. ಹೌದು ಈ ಸ್ಪರ್ಧೆಯ ಹೆಸರು ‘ನಾಟಿ ಕೋಳಿ, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ‘. ಕಳೆದ 3 ವರ್ಷಗಳಿಂದ ಈ ಸ್ಪರ್ಧೆ ನಡೆಯುತ್ತಿದೆ.
ಬೆಂಗಳೂರಿನ ನಂದಿನಿ ಲೇಔಟ್‌ನ ಜೈಮಾರುತಿ ನಗರದ ಬಯಲು ರಂಗ ಮಂದಿರ ಮೈದಾನದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಕೆಂಪೇಗೌಡ ಚಾರಿಟೆಬಲ್ ಟ್ರಸ್ಟ್ ಈ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಬಾರಿ ಮಾ. 23ರ ಮಧ್ಯಾಹ್ನ 12 ಗಂಟೆಗೆ ಈ ಸ್ಪರ್ಧೆ ನಡೆಯುತ್ತದೆ. ಯುಗಾದಿ ಹಬಕ್ಕಿಂತಲೂ ಮುಂಚಿತವಾಗಿ ಈ ಸ್ಪರ್ಧೆ ನಡೆಯುತ್ತಿದೆ.
ಗೆದ್ದವರಿಗೆ ಸಿಗುತ್ತೆ ಈ ಬಹುಮಾನ
ಹೊಸ ತೊಡಲು ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದವರಿಗೆ 25 ಕೆಜಿ ಹೋತ, ದ್ವಿತೀಯ ಬಹುಮಾನ ಪಡೆದವರಿಗೆ 20 ಕೆಜಿ ಟಗರು, ತೃತಿಯ ಬಹುಮಾನ ಪಡೆದವರಿಗೆ 5 ಕೆಜಿ ನಾಟಿ ಹುಂಜ ಸಿಗಲಿದೆ. ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಬಂದವರಿಗೆ 15 ಕೆಜಿ ಕುರಿ, ದ್ವಿತೀಯ ಸ್ಥಾನ ಗಳಿಸಿದವರಿಗೆ 6 ಕೆಜಿ ನಾಟಿ ಕೋಳಿ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ 3 ಕೆಜಿ ನಾಟಿಕೋಳಿ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರವೇಶ ಶುಲ್ಕವಿದೆ
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಪುರುಷರಿಗೆ 150 ರೂ ಹಾಗೂ ಮಹಿಳೆಯರಿಗೆ 100 ರೂ ಪ್ರವೇಶ ಶುಲ್ಕವಿದೆ. ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗೆ: 9900150608
