Beautiful Airport: ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ, ಏನಿದು ಯುನೆಸ್ಕೋ ಮನ್ನಣೆ
ಕನ್ನಡ ಸುದ್ದಿ  /  ಕರ್ನಾಟಕ  /  Beautiful Airport: ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ, ಏನಿದು ಯುನೆಸ್ಕೋ ಮನ್ನಣೆ

Beautiful Airport: ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ, ಏನಿದು ಯುನೆಸ್ಕೋ ಮನ್ನಣೆ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಕ್ಕೆ ಯುನೆಸ್ಕೋದ ವಿಶೇಷ ವಿಶ್ವ ಮನ್ನಣೆ ಸಿಕ್ಕಿದೆ. ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಇದೂ ಒಂದು ಎಂಬ ಕೀರ್ತಿಗೆ ಭಾಜನವಾಗಿದೆ. ಏನಿದು ಮನ್ನಣೆ ಮತ್ತು ಟರ್ಮಿನಲ್ 2ರ ವಿಶೇಷವೇನು ಇಲ್ಲಿದೆ ವಿವರ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರ ನೋಟ (ಸಾಂಕೇತಿಕ ಚಿತ್ರ)
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರ ನೋಟ (ಸಾಂಕೇತಿಕ ಚಿತ್ರ) (Wikipedia)

ಬೆಂಗಳೂರು: ವರ್ಷಾಂತ್ಯದಲ್ಲಿ ಬೆಂಗಳೂರಿಗೆ ಒಂದು ಶುಭ ಸುದ್ದಿ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋದ 2023ರ ಪ್ರಿಕ್ಸ್‌ ವರ್ಸೈಲ್ಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ಹೌದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ಧಾಣಗಳ ಪೈಕಿ ಒಂದು ಎಂದು ಯುನೆಸ್ಕೋ ಗುರುತಿಸಿದೆ.

ಟರ್ಮಿನಲ್ 2ರ ಒಳಾಂಗಣ ವಿನ್ಯಾಸಕ್ಕಾಗಿ “ವರ್ಲ್ಡ್‌ ಸ್ಪೆಷಲ್ ಪ್ರೈಝ್ ಫಾರ್ ಆನ್ ಇಂಟೀರಿಯರ್‌ 2023” ಎಂಬ ಪ್ರಶಸ್ತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

ಪ್ರಸಿದ್ಧ ಫ್ಯಾಷನ್ ಡಿಸೈನರ್ ಎಲೀ ಸಾಬ್ ಅಧ್ಯಕ್ಷತೆಯ ಪ್ರಿಕ್ಸ್ ವರ್ಸೈಲ್ಸ್ 2023 ರ ವಿಶ್ವ ತೀರ್ಪುಗಾರರ ಸಮಿತಿಯು ವಿಶ್ವ ಪ್ರಶಸ್ತಿ ಗೆದ್ದ ಪ್ರಾಜೆಕ್ಟ್‌ಗಳ ವಿವರವನ್ನು ಪ್ರಕಟಿಸಿತು. ಈ ಪೈಕಿ ಬೆಂಗಳೂರು ವಿಮಾನ ನಿಲ್ದಾಣವು ಈ ಗೌರವಾನ್ವಿತ ಮನ್ನಣೆಯನ್ನು ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿ ಕಾಣಿಸಿಕೊಂಡಿದೆ. ಇದು ಪ್ರಯಾಣಿಕ ಸೇವೆಯಲ್ಲಿ ಜಾಗತಿಕ ಮಟ್ಟದ ವಿನ್ಯಾಸ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿ ವಿಮಾನ ನಿಲ್ದಾಣದ ಅಸಾಧಾರಣ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಸಮಿತಿ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹರಿ ಮಾರಾರ್ ಈ ಮನ್ನಣೆಯಿಂದ ಸಂತಸಗೊಂಡಿದ್ದು, "2023 ರ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಟರ್ಮಿನಲ್ 2 ನಾಮನಿರ್ದೇಶನವು ನಮ್ಮ ಪಾಲಿಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ಟರ್ಮಿನಲ್‌ಗೆ ಅರ್ಹವಾಗಿಯೇ ಈ ಮನ್ನಣೆ ಸಿಕ್ಕಿದೆೆ. ಟಿ2, ಕಲೆ ಮತ್ತು ತಂತ್ರಜ್ಞಾನದ ವಿಶಿಷ್ಟ ಮಿಶ್ರಣದೊಂದಿಗೆ, ಒಂದು ವಿಶಿಷ್ಟ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ರಾಜ್ಯ ಮತ್ತು ದೇಶದ ಶ್ರೀಮಂತ ಕೊಡುಗೆಗಳ ಒಂದು ನೋಟವನ್ನು ಈ ಟರ್ಮಿನಲ್‌ ನೀಡುತ್ತದೆ" ಎಂದು ವಿವರಿಸಿದರು.

ಟರ್ಮಿನಲ್ 2 ಅನ್ನು ವರ್ಷಕ್ಕೆ 25 ಲಕ್ಷ ಪ್ರಯಾಣಿಕರನ್ನು ಬರಮಾಡಿಕೊಳ್ಳುವುದಕ್ಕೆ ಮತ್ತು ಬೀಳ್ಕೊಡುವುದಕ್ಕೆ ಬೇಕಾದಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ಸುಂದರವಾಗಿ ಮತ್ತು ಆಕರ್ಷಣೀಯವಾಗಿ ಸಂಯೋಜಿಸಲಾಗಿದೆ.

ಟಿ2 ತನ್ನ ಒಳನೋಟದಿಂದ ಕ್ಯುರೇಟೆಡ್ ಕಲೆ ಮತ್ತು ಅಲಂಕಾರದ ಅಂಶಗಳೊಂದಿಗೆ ಎಲ್ಲಾ ಪ್ರಯಾಣಿಕರಿಗೆ ಕಣ್ಣಿಗೆ ಆನಂದವನ್ನು ನೀಡುವ ಗುರಿಯನ್ನು ಹೊಂದಿದೆ. ಅದು ಇತ್ತೀಚೆಗೆ ಪ್ರಾರಂಭಿಸಿದ ಅಲಂಕಾರಿಕ ಯೋಜನೆಯ ಭಾಗವಾಗಿದೆ. ಇದು ಈ ಟರ್ಮಿನಲ್ ಮೂಲಕ ಸಾಗುವ ಪ್ರಯಾಣಿಕರ ಪ್ರಯಾಣವನ್ನು ಮರೆಯಲಾಗದ ಅನುಭವವಾಗಿಸುತ್ತದೆ ಎಂದು ವಿಮಾನ ನಿಲ್ದಾಣದ ಪ್ರತಿನಿಧಿಗಳು ಹೇಳಿಕೊಂಡಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಈ ಹಿಂದೆ ಐಜಿಬಿಸಿ ಗ್ರೀನ್ ನ್ಯೂ ಬಿಲ್ಡಿಂಗ್ ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನಿಂದ ಪ್ರತಿಷ್ಠಿತ ಐಜಿಬಿಸಿ ಪ್ಲಾಟಿನಂ ಪ್ರಮಾಣೀಕರಣವನ್ನು ಕೂಡ ಪಡೆದುಕೊಂಡಿತ್ತು.

Whats_app_banner