ಹೆಸರುಕಾಳು, ಸೂರ್ಯಕಾಂತಿಗೂ ಕನಿಷ್ಠ ಬೆಂಬಲ ಬೆಲೆ; ಕರ್ನಾಟಕದ ಪ್ರಸ್ತಾವನೆೆ ಒಪ್ಪಿದ ಕೇಂದ್ರ ಸರ್ಕಾರ
Minimum Support Price; ಕರ್ನಾಟಕದಲ್ಲಿ ಈ ಬಾರಿ ಹೆಸರುಬೇಳೆ ಮತ್ತು ಸೂರ್ಯಕಾಂತಿ ಖರೀದಿಗೆ ಬೆಂಬಲ ಬೆಲೆ ಸಿಗಲಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಸರ್ಕಾರ ಅಂಗೀಕರಿಸಿದ ಬೆಂಬಲ ಬೆಲೆಯ ವಿವರ ಹೀಗಿದೆ ನೋಡಿ.
ಬೆಂಗಳೂರು: ರಾಜ್ಯದಲ್ಲಿ ಈ ಸಲ ಹೆಸರುಕಾಳು ಮತ್ತು ಸೂರ್ಯಕಾಂತಿಗೂ ಬೆಂಬಲ ಬೆಲೆ ಸಿಗಲಿದೆ. ಹೌದು ಬೆಂಬಲ ಬೆಲೆ ಯೋಜನೆಯಲ್ಲಿ ಈ ಎರಡೂ ಕೃಷಿ ಉತ್ಪನ್ನ ಖರೀದಿಗೆ ಕರ್ನಾಟಕ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.
ಇದನ್ನು ಕರ್ನಾಟಕದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ದೃಢಪಡಿಸಿದ್ದು, ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಖರೀದಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ತಿಳಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಧಾರಣೆ ಕುಸಿದಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಖರೀದಿಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಹೆಸರುಕಾಳು, ಸೂರ್ಯಕಾಂತಿ ಖರೀದಿಪ್ರಮಾಣ ಎಷ್ಟು
ಕರ್ನಾಟಕ ಸರ್ಕಾರದ ಪ್ರಸ್ತಾವನೆ ಅಂಗೀಕರಿಸಿರುವ ಕೇಂದ್ರ ಸರ್ಕಾರ, ಇದರಂತೆ ಒಟ್ಟು 22,215 ಮೆಟ್ರಿಕ್ ಟನ್ ಹೆಸರುಕಾಳು ಹಾಗೂ 13,210 ಮೆಟ್ರಿಕ್ ಟನ್ ಸೂರ್ಯಕಾಂತಿಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಿದೆ.
ಹೀಗಾಗಿ. ಕರ್ನಾಟಕದಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗುವ ಹೆಸರುಕಾಳಿಗೆ ಎಫ್ ಎ ಕ್ಯೂ ಗುಣಮಟ್ಟದ ಮಾನದಂಡದಲ್ಲಿ ಪ್ರತಿ ಕ್ವಿಂಟಲ್ಗೆ 8.682 ರೂಪಾಯಿ ಹಾಗೂ ಸೂರ್ಯಕಾಂತಿಗೆ 7,280 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಗಾರರ ಹಿತದೃಷ್ಟಿಯಿಂದ ತ್ವರಿತವಾಗಿ ಕೃಷಿ ಉತ್ಪನ್ನ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಶೀಘ್ರವೇ ಖರೀದಿಗೆ ಏಜೆನ್ಸಿ ನೇಮಕ
ಕರ್ನಾಟಕದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವ ಕಾರಣ ಹೆಸರುಕಾಳು ಮತ್ತು ಸೂರ್ಯಕಾಂತಿ ಖರೀದಿ ಏಜನ್ಸಿ ನೇಮಕ ಮಾಡಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇವಿಷ್ಟೂ ವಿದ್ಯಮಾನಗಳು ಕೃಷಿಕರಲ್ಲಿ ಭರವಸೆ ಮೂಡಿಸುವಂಥವು.
ಆದ್ದರಿಂದ ಧಾರಣೆ ಕುಸಿದಿದೆ ಎಂದು ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಗಾರರು ಕಳವಳಪಡಬೇಕಾಗಿಲ್ಲ. ಖರೀದಿ ಏಜೆನ್ಸಿಗಳು ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದಂತೆ ನೋಂದಣಿ ಮಾಡಿಸಿಕೊಂಡು ಬೆಂಬಲ ಬೆಲೆಯಲ್ಲಿ ತಮ್ಮ ಕೃಷಿ ಉತ್ಪನ್ನವನ್ನು ಮಾರಾಟ ಮಾಡಬಹುದು ಎಂದು ಸಚಿವ ಶಿವಾನಂದ ಪಾಟೀಲ ವಿವರಿಸಿದ್ದಾರೆ.
ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಯುವ ಪ್ರಮುಖ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಟಾಸ್ಕ್ ಪೋರ್ಸ್ ಸಭೆ ನಡೆಸಿ ಅಗತ್ಯ ಇರುವ ಕಡೆ ಖರೀದಿ ಕೇಂದ್ರಗಳನ್ನು ಗುರುತಿಸಿ ನೋಂದಣಿ ಆರಂಭಿಸಲಿದ್ದಾರೆ. ನಂತರ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ವಿಳಂಬ ಮಾಡದೆ ಟಾಸ್ಕ್ ಫೋರ್ಸ್ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.