ಮೆಟ್ರೋ ಸಿಟಿ ಸ್ಥಾನಮಾನ ನಮ್ಮ ಬೆಂಗಳೂರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ; ಸಿಕ್ಕಿದರೆ ಏನು ಉಪಯೋಗ
Metro City status to Bengaluru; ಕರ್ನಾಟಕ ರಾಜಧಾನಿ ಬೆಂಗಳೂರು ಮೆಟ್ರೋ ಸ್ಥಾನಮಾನದ ಕನಸು ಮರೀಚಿಕೆಯಾಗುವ ಲಕ್ಷಣಗಳು ಗೋಚರಿಸಿವೆ. ಹೌದು, ಮೆಟ್ರೋ ಸಿಟಿ ಸ್ಥಾನಮಾನ ನಮ್ಮ ಬೆಂಗಳೂರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಅಕಸ್ಮಾತ್ ಈ ಸ್ಥಾನಮಾನ ಸಿಕ್ಕಿದರೆ ಏನು ಉಪಯೋಗ ಎಂಬುದರ ವಿವರ ಈ ವರದಿಯಲ್ಲಿದೆ.
ಬೆಂಗಳೂರು: ‘ಮೆಟ್ರೋ ನಗರ’ ಸ್ಥಾನ ಮಾನದ ವಿಚಾರದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಹಿನ್ನಡೆಯಾಗಿದೆ. ಐಟಿ ಸಿಟಿಯಾಗಿ ಮತ್ತು ಜನಸಂಖ್ಯೆ ಹಾಗೂ ಉದ್ಯಮಗಳ ಭಾರಿ ಬೆಳವಣಿಗೆ ಇದ್ಯಾಗ್ಯೂ ಬೆಂಗಳೂರಿಗೆ ‘ಮೆಟ್ರೋ ಸಿಟಿ’ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ, 1962ರ ಆದಾಯ ತೆರಿಗೆ ನಿಯಮ 2ಎ ವಿಭಾಗದಲ್ಲಿ 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (13ಎ) ರಲ್ಲಿ ಉಲ್ಲೇಖಿಸಿರುವ ವಸತಿ ಸೌಕರ್ಯಗಳ ವಿಶೇಷ ಭತ್ಯೆಯನ್ನು ಮುಂಬಯಿ, ಕೋಲ್ಕತ, ದೆಹಲಿ, ಚೆನ್ನೈ ನಗರಗಳು ಮತ್ತು ಇತರ ನಗರಗಳ ನಡುವೆ ವ್ಯತ್ಯಸ್ತವಾಗಿದೆ ಎಂಬುದನ್ನು ವಿವರಿಸಿರುವುದಾಗಿ ಸಂಸತ್ತಿಗೆ ಮಂಗಳವಾರ ತಿಳಿಸಿದ್ದಾರೆ.
ಮೆಟ್ರೋ ಸಿಟಿ ಸ್ಥಾನಮಾನ- ಹಣಕಾಸು ಖಾತೆ ರಾಜ್ಯಸಚಿವರ ವಿವರಣೆ
ನಾಲ್ಕು ಅಧಿಸೂಚಿತ ಮೆಟ್ರೋಪಾಲಿಟನ್ ನಗರಗಳಿಗೆ, 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(13A) ರಲ್ಲಿ ವಿನಾಯಿತಿ ಮಿತಿಗಳನ್ನು ಲೆಕ್ಕಾಚಾರ ಮಾಡಲು ಸಂಬಳದ 50 ಪ್ರತಿಶತವನ್ನು ಪರಿಗಣಿಸಬಹುದಾಗಿದೆ. ಆದಾಗ್ಯೂ, ಬೆಂಗಳೂರು ಸೇರಿ ಇತರೆ ನಗರಗಳಲ್ಲಿ ಈ ಮಿತಿ ಶೇಕಡ 40 ನಿಗದಿಯಾಗಿದೆ. ಇದರಲ್ಲಿ ಬದಲಾವಣೆ ತರುವ ಯಾವುದೇ ಪಸ್ತಾವನೆ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ಸಚಿವ ಪಂಕಜ್ ಚೌಧರಿ ವಿವರಿಸಿದರು.
"ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವುದು ಮತ್ತು ವಿನಾಯಿತಿಗಳು ಮತ್ತು ಕಡಿತಗಳಿಂದ ದೂರ ಸರಿಯುವುದು ಸರ್ಕಾರದ ಈಗಾಗಲೇ ಘೋಷಿಸಿರುವ ನೀತಿಯಾಗಿದೆ. ಆದ್ದರಿಂದ, ಹೆಚ್ಚಿನ ನಗರಗಳನ್ನು ಮೆಟ್ರೋ ನಗರಗಳಾಗಿ ಘೋಷಿಸುವುದು ಮತ್ತು ಅಂತಹ ನಗರಗಳಿಗೆ ಎಚ್‌ಆರ್‌ಎ ಮೇಲಿನ ಹೆಚ್ಚಿನ ವಿನಾಯಿತಿ ಮಿತಿಯ ಲಾಭವನ್ನು ವಿಸ್ತರಿಸುವುದು ಘೋಷಿತ ನೀತಿಗೆ ವಿರುದ್ಧವಾದುದು”ಎಂದು ಸಚಿವ ಪಂಕಜ್ ಚೌಧರಿ ಹೇಳಿದರು.
ಮೆಟ್ರೋ ಸಿಟಿ ಸ್ಥಾನಮಾನ; ಬೆಂಗಳೂರಿಗರಿಗೆ ಏನು ಉಪಯೋಗ
ಒಂದೊಮ್ಮೆ ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ಸಿಕ್ಕರೆ ಬೆಂಗಳೂರಿಗರಿಗೆ ಏನು ಉಪಯೋಗ ಎಂಬ ಪ್ರಶ್ನೆ ಕಾಡುವುದು ಸಹಜ. ಆದಾಯ ತೆರಿಗೆ ಕಾನೂನಿನಡಿಯಲ್ಲಿ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ತೆರಿಗೆ ವಿನಾಯಿತಿಗಾಗಿ ಬೆಂಗಳೂರನ್ನು ಮೆಟ್ರೋಪಾಲಿಟನ್ ಸಿಟಿ ಎಂದು ಗುರುತಿಸಬೇಕು ಎಂಬುದು ದೀರ್ಘಕಾಲದಿಂದ ಬೇಡಿಕೆ. ಈ ಸ್ಥಾನಮಾನ ಸಿಕ್ಕಿದರೆ ಈಗಾಗಲೇ ಅಸ್ತಿತ್ವದಲ್ಲಿರುವ 4 ಅಧಿಸೂಚಿತ ಮೆಟ್ರೋಪಾಲಿಟನ್ ನಗರಗಳಂತೆಯೇ ಬೆಂಗಳೂರಿನ ನಿವಾಸಿಗಳು ಕೂಡ ತಮ್ಮ ವೇತನದ ಮೇಲೆ ಎಚ್ಆರ್‌ಎಗೆ ಸಮಾನವಾದ 50 ಪ್ರತಿಶತ ವಿನಾಯಿತಿ ಪಡೆಯುವುದಕ್ಕೆ ಸಾಧ್ಯವಿದೆ.
ಆದರೆ, ಕೇಂದ್ರದ ಪ್ರಸ್ತುತ ನಿಲುವು ದೃಢವಾಗಿದೆ. ಬೆಂಗಳೂರಿನ ತ್ವರಿತ ನಗರೀಕರಣ ಮತ್ತು ಆರ್ಥಿಕ ಮತ್ತು ತಾಂತ್ರಿಕ ಕೇಂದ್ರವಾಗಿ ಅದರ ನಿರ್ಣಾಯಕ ಪಾತ್ರದ ಹೊರತಾಗಿಯೂ, ಅದನ್ನು ಮೆಟ್ರೋ ನಗರವಾಗಿ ಸೇರಿಸಲು ತೆರಿಗೆ ವಿನಾಯಿತಿ ನಿಯಮಗಳನ್ನು ಪರಿಷ್ಕರಿಸದಿರಲು ಭಾರತ ಸರ್ಕಾರ ನಿರ್ಧರಿಸಿದೆ. ಇದನ್ನು ಅದು ಸಂಸತ್ತಿನಲ್ಲೂ ಮಂಗಳವಾರ ಸ್ಪಷ್ಟಪಡಿಸಿದೆ. ಇದರೊಂದಿಗೆ ಬೆಂಗಳೂರಿಗೆ, ಬೆಂಗಳೂರಿಗರಿಗೆ ತೆರಿಗೆ ವಿನಾಯಿತಿ ಶಾಶ್ವತವಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
ಬೆಂಗಳೂರಿಗೆ ಮೆಟ್ರೋ ಸ್ಥಾನಮಾನ ಸಿಗಬೇಕು ಎಂಬ ಕುರಿತಾದ ಚರ್ಚೆಯು ಸ್ಥಳೀಯ ಬೆಳವಣಿಗೆಯ ಪ್ರಮಾಣ ಮತ್ತು ರಾಷ್ಟ್ರೀಯ ಹಣಕಾಸಿನ ನೀತಿಗಳ ನಡುವೆ ಇರುವ ಸಣ್ಣ ಪ್ರಮಾಣದ ಸಂಘರ್ಷವನ್ನು ಎತ್ತಿ ತೋರಿಸುತ್ತದೆ. ಬೆಂಗಳೂರನ್ನು ಇತರೆ ನಾಲ್ಕು ಮೆಟ್ರೋ ನಗರಗಳ ಜೊತೆಗೆ ಸೇರಿಸಿ, ಬೆಂಗಳೂರಿಗರಿಗೆ ತೆರಿಗೆ ವಿನಾಯಿತಿ ನೀಡಲು ಭಾರತ ಸರ್ಕಾರ ಹಿಂದೇಟು ಹಾಕುತ್ತಿರುವುದನ್ನೂ ಬೊಟ್ಟು ಮಾಡಿ ತೋರಿಸಿದೆ. ಆದಾಗ್ಯೂ, ಬೆಂಗಳೂರಿನ ಬೆಳವಣಿಗೆ ಭಾರತ ಸರ್ಕಾರದ ಮೇಲೆ ಈ ವಿಚಾರವಾಗಿ ಒತ್ತಡ ಸೃಷ್ಟಿಸಿರುವುದು ಖಚಿತ.