ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಪರೀಕ್ಷೆ ಬರೆಯಲು ಬಿಡದ ಕಾರಣ 21 ವರ್ಷದ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ, ಮನೆ ಮಾಲಕಿಯ ಹತ್ಯೆ ಆರೋಪಿ ಯುವತಿಯ ಬಂಧನ

ಬೆಂಗಳೂರು ಅಪರಾಧ ಸುದ್ದಿ; ಪರೀಕ್ಷೆ ಬರೆಯಲು ಬಿಡದ ಕಾರಣ 21 ವರ್ಷದ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ, ಮನೆ ಮಾಲಕಿಯ ಹತ್ಯೆ ಆರೋಪಿ ಯುವತಿಯ ಬಂಧನ

ಬೆಂಗಳೂರು ಅಪರಾಧ ಸುದ್ದಿ; ಪರೀಕ್ಷೆ ಬರೆಯಲು ಬಿಡದ ಕಾರಣ 21 ವರ್ಷದ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇನ್ನೊಂದಡೆ, ಮನೆ ಮಾಲಕಿಯ ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿದ್ದ ಆರೋಪಿ ಯುವತಿಯ ಬಂಧನವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಮನೆ ಮಾಲಕಿಯ ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿದ್ದ ಆರೋಪಿ ಯುವತಿಯ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಮನೆ ಮಾಲಕಿಯ ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿದ್ದ ಆರೋಪಿ ಯುವತಿಯ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಪರೀಕ್ಷೆ ಬರೆಯಲು ಬಿಡದ ಕಾರಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾಲೇಜೊಂದರ ಕಟ್ಟಡದ 6ನೇ ಮಹಡಿಯಿಂದ ಹಾರಿ ಅದೇ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಆಂಧ್ರಪ್ರದೇಶದ ಕರ್ನೂಲಿನ 21 ವರ್ಷದ ಕರಸಾಲ ರಾಹುಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ವಿದ್ಯಾರ್ಥಿ.

ಟ್ರೆಂಡಿಂಗ್​ ಸುದ್ದಿ

ಬಿ.ಇ ಕಂಪ್ಯೂಟರ್ ಸೈನ್ಸ್‌ನಲ್ಲಿ 5ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ್ದರು. ಆದರೆ ರಾಹುಲ್ 10 ಗಂಟೆಯ ವೇಳೆಗೆ ಕಾಲೇಜಿನ 6ನೇ ಮಹಡಿಗೆ ತೆರಳಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪೋಷಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆಯ ನಂತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಹುಲ್ ಅವರ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಎಂದೇ ರಾಹುಲ್ ತನ್ನ ತಾಯಿಯೊಂದಿಗೆ ಬೆಂಗಳೂರಿನ ಕೂಡ್ಲುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪರೀಕ್ಷೆಗೆ ತಡವಾಗಿ ಬಂದದ್ದಕ್ಕೆ ಪ್ರವೇಶ ನಿರಾಕರಿಸಿದ್ದರಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪರೀಕ್ಷೆಗೆ ಕೆಲವು ನಿಮಿಷ ತಡವಾಗಿ ಬಂದಿದ್ದಕ್ಕೆ ಶಿಕ್ಷಕರು ನಿಂದಿಸಿದ್ದರಿಂದ ರಾಹುಲ್ ಬೇಸರ ಮಾಡಿಕೊಂಡಿದ್ದರು ಎಂದೂ ಹೇಳಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗದು ಎಂದು ಪೊಲೀಸರು ಹೇಳಿದ್ದಾರೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

ಮನೆ ಮಾಲಕಿಯನ್ನೇ ಕೊಂದಿದ್ದ ಯುವತಿ ಅರೆಸ್ಟ್

ಬೆಂಗಳೂರಿನ ಕೋನಸಂದ್ರದಲ್ಲಿ ಮನೆ ಮಾಲಕಿ ದಿವ್ಯಾ ಎಂಬುವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

34 ವರ್ಷದ ದಿವ್ಯಾ ಅವರನ್ನು ಕೊಲೆ ಮಾಡಿದ್ದ ಆರೋಪದ ಮೇರೆಗೆ ಅದೇ ಕಟ್ಟಡದಲ್ಲಿ ಬಾಡಿಗೆಗಿದ್ದ ಮೋನಿಕಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ ಕೋಲಾರ ಮೂಲದ 24 ವರ್ಷದ ಮೋನಿಕಾ ಮೇ 10 ರಂದು ಮಧ್ಯಾಹ್ನದ ವೇಳೆಗೆ ದಿವ್ಯಾ ಅವರನ್ನು ಕೊಲೆ ಮಾಡಿದ್ದರು.

ಆರಂಭದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ದಿವ್ಯಾ ಅವರನ್ನು ಚಿನ್ನಾಭರಣದ ಆಸೆಗೆ ಹೊರಗಿನ ದುಷ್ಕರ್ಮಿಗಳು ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಿದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ಅದೇ ಕಟ್ಟಡದಲ್ಲಿ ಬಾಡಿಗೆಗಿದ್ದ ಮೋನಿಕಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಮೋನಿಕಾ ಖಾಸಗಿ ಕಂಪನಿಯೊಂದರಲ್ಲಿ ಡೇಟಾ ಆಪರೇಟರ್ ಕೆಲಸ ಮಾಡುತ್ತಿದ್ದಳು. ಮೂರು ತಿಂಗಳ ಹಿಂದೆಯಷ್ಟೇ ಕೆಂಗೇರಿ ಸಮೀಪದ ಕೋನಸಂದ್ರದಲ್ಲಿ ದಿವ್ಯಾ ಅವರ ಕಟ್ಟಡದಲ್ಲಿ ಬಾಡಿಗೆಗೆ ಮನೆ ಪಡೆದಿದ್ದಳು. ಈ ಮನೆಗೆ ಈಕೆಯ ಪ್ರಿಯಕರ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ವಿಷಯ ಎಲ್ಲರಿಗೂ ತಿಳಿದಿತ್ತು. ಉಳಿದಂತೆ ಆರೋಪಿ ಮೋನಿಕಾ ಒಬ್ಬಳೇ ಇರುತ್ತಿದ್ದಳು. ಮೋಜಿನ ಜೀವನ

ನಡೆಸಲು ಈಕೆ ಶಕ್ತಿ ಮೀರಿ ಸಾಲ ಮಾಡಿಕೊಂಡಿದ್ದಳು. ಸಾಲದ ಹಣದಲ್ಲಿ ಪ್ರಿಯಕರನಿಗೆ ದ್ವಿಚಕ್ರ ವಾಹನ ಕೊಡಿಸಿದ್ದಳು. ಹೀಗಾಗಿ ಸಾಲ ಹೆಚ್ಚಾಗಿ ತೀರಿಸಲು ಪರದಾಡುತ್ತಿದ್ದಳು.

ಇದೇ ವೇಳೆ ಮನೆ ಮಾಲಕಿ ದಿವ್ಯಾ ಅವರನ್ನು ಕೊಲೆ ಮಾಡಿದರೆ ಚಿನ್ನಾಭರಣ ಮತ್ತು ನಗದು ಹಣ ಸಿಗಲಿದೆ ಎಂದು ಭಾವಿಸಿ ಕೊಲೆಗೆ ಸಂಚು ರೂಪಿಸಿದ್ದಳು. ಮೇ 10ರಂದು ದಿವ್ಯಾ ತನ್ನ ಮಗುವಿನ ಜೊತೆ ಒಬ್ಬರೇ ಇದ್ದರು. ಆಗ ಮೋನಿಕಾ ಹಿಂಬಾಗಿಲಿನಿಂದ ಮನೆಯೊಳಗೆ ಪ್ರವೇಶಿಸಿ ದಿವ್ಯಾ ಅವರ ಕತ್ತು ಹಿಸುಕಿ ಕೊಲೆ ಮಾಡಿ, ಅವರ ಮೈಮೇಲಿದ್ದ 36 ಗ್ರಾಂ ಚಿನ್ನಾಭರಣವನ್ನು ಕಸಿದುಕೊಂಡು ಪರಾರಿಯಾಗಿದ್ದಳು. ನಂತರ ಏನೂ ತಿಳಿದಿಲ್ಲ ಎನ್ನುವ ಹಾಗೆ ತನ್ನ ಬಾಡಿಗೆ ಮನೆಯಲ್ಲಿ ಸಹಜವಾಗಿಯೇ ಇದ್ದಳು. ಅನುಮಾನಗೊಂಡ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ವಿಲಾಸಿ ಜೀವನ ನಡೆಸಲು ಮನೆಯ ಮಾಲಕಿಯನ್ನು ಕೊಂದಿರುವುದು ತನಿಖೆಯಿಂದ ಬೆಳಕಿಗೆ ಎಂದು ಪೊಲೀಸರು ಹೇಳಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

IPL_Entry_Point