ಕನ್ನಡ ಸುದ್ದಿ  /  Karnataka  /  Bengaluru News Unsafe For Women Karnataka Govt Withdraws Electric Bike Taxi Services Karnataka News Uks

Bengaluru News: ಮಹಿಳೆಯರಿಗೆ ಅಸುರಕ್ಷಿತ ಎಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ಹಿಂಪಡೆದ ಕರ್ನಾಟಕ ಸರ್ಕಾರ

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಗೆ ನಿಷೇಧ ಹೇರಲಾಗಿದೆ. ಮಹಿಳೆಯರಿಗೆ ಅಸುರಕ್ಷಿತ ಎಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ಹಿಂಪಡೆದ ಕರ್ನಾಟಕ ಸರ್ಕಾರ, ಇದು ತತ್‌ಕ್ಷಣದಿಂದ ಜಾರಿಗೆ ಬಂದಿದೆ ಎಂದು ತಿಳಿಸಿದೆ. ಆದೇಶದ ವಿವರ ಹೀಗಿದೆ.

ಇ ಬೈಕ್ ಟ್ಯಾಕ್ಸಿ (ಸಾಂಕೇತಿಕ ಚಿತ್ರ)
ಇ ಬೈಕ್ ಟ್ಯಾಕ್ಸಿ (ಸಾಂಕೇತಿಕ ಚಿತ್ರ) (Abdul Sajid / ANI Photo)

ಬೆಂಗಳೂರು: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಹಿಳೆಯರಿಗೆ ಅಸುರಕ್ಷಿತ ಎಂಬ ಕಾರಣಕ್ಕೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ.

ಕೆಲವು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿ ಜಾರಿಗೆ ತಂದಿರುವುದು ಖಚಿತವಾಗಿದೆ. ಅದೇ ರೀತಿ, ಮಹಿಳೆಯರಿಗೆ ಅಸುರಕ್ಷಿತ ಎಂದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಯನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.

ಸಾರಿಗೆ ಇಲಾಖೆ ಈ ಸಂಬಂಧ ಪ್ರಕಟಿಸಿರುವ ಆದೇಶದಲ್ಲಿ 2021 ರ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ (Karnataka Electric Bike Taxi Scheme 2021) ಯನ್ನು ಈಗ ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ

"ಕೆಲವು ಖಾಸಗಿ ಅಪ್ಲಿಕೇಶನ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರ ನಿಯಮಗಳನ್ನು ಉಲ್ಲಂಘಿಸುತ್ತಿವೆ ಮತ್ತು ಅಕ್ರಮ ಸಾರಿಗೆಯೇತರ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ಓಡಿಸುತ್ತಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ" ಎಂದು ಅದು ಹೇಳಿದೆ.

ಆಟೋ ರಿಕ್ಷಾಗಳು ಮತ್ತು ಮ್ಯಾಕ್ಸಿ ಕ್ಯಾಬ್ ಗಳ ಮಾಲೀಕರು ಮತ್ತು ಚಾಲಕರ ನಡುವೆ ಬೈಕ್ ಸವಾರರೊಂದಿಗೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿದ್ದವು. ಈ ಕುರಿತು ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ ಎಂದು ಅದು ಹೇಳಿದೆ.

ಈ ಯೋಜನೆಯು ಸಾರಿಗೆ ಇಲಾಖೆಗೆ ತೆರಿಗೆ ಸಂಗ್ರಹಿಸುವುದನ್ನು ಕಷ್ಟಕರವಾಗಿಸಿತು. ಇದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ದ್ವಿಚಕ್ರ ವಾಹನ ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದರು. 2021 ರಲ್ಲಿ ಅಂದಿನ ಬಿಜೆಪಿ ಸರ್ಕಾರವು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿತ್ತು.

"ನಮ್ಮ ವಿರೋಧದ ಹೊರತಾಗಿಯೂ, ಅನುಮತಿಯನ್ನು ಹಿಂತೆಗೆದುಕೊಳ್ಳಲಿಲ್ಲ. ನಾವು ಇದರ ವಿರುದ್ಧ ಆಂದೋಲನ ನಡೆಸುತ್ತಿದ್ದೆವು ಮತ್ತು ಆಟೋ ಮತ್ತು ಟ್ಯಾಕ್ಸಿ ಚಾಲಕರ ಜೀವನದ ಮೇಲೆ ಈ ಅನುಮತಿಯ ಪರಿಣಾಮದ ಬಗ್ಗೆ ಸರ್ಕಾರಕ್ಕೆ ವಿವರಿಸಲು ಪ್ರಯತ್ನಿಸಿದ್ದೇವೆ" ಎಂದು ತನ್ವೀರ್ ಪಾಷಾ ಹೇಳಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point