ಕನ್ನಡ ಸುದ್ದಿ  /  Karnataka  /  Bengaluru News Up Noida Man Held For Cheating People Of <Span Class='webrupee'>₹</span>4 51 Cr With Premium Bonds Offer Mrt

Cheating Case: ಬೆಂಗಳೂರಲ್ಲಿ ಜೀವ ವಿಮೆ ಹೆಸರಲ್ಲಿ 4.51 ಕೋಟಿ ರೂ ವಂಚನೆ, ಉತ್ತರ ಪ್ರದೇಶದಲ್ಲಿ ಆರೋಪಿ ಸೆರೆ

ಬೆಂಗಳೂರಿನಲ್ಲಿ ಜೀವವಿಮೆ ಹೆಸರಿನಲ್ಲಿ 4.51 ಕೋಟಿ ರೂಪಾಯಿ ವಂಚಿಸಿದ್ದ ಆರೋಪಿ ಉತ್ತರ ಪ್ರದೇಶದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಆತ ಅಲ್ಲಿಂದ ಬೆಂಗಳೂರಿಗೆ ಬಂದು ವಂಚನೆ ಎಸಗಿದ್ದ. ಇನ್ನೊಂದು ಪ್ರಕರಣದಲ್ಲಿ, ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಕುಪ್ಪಂ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಬೆಂಗಳೂರು: ಪ್ರಸಿದ್ದ ವಿಮಾ ಕಂಪನಿಗಳ ಹೆಸರಿನಲ್ಲಿ ಜೀವ ವಿಮೆ ಮಾಡಿಸಿಕೊಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಅವರಿಂದ ಸುಮಾರು 4.51 ಕೋಟಿ ರೂಪಾಯಿ ವಂಚಿಸಿದ್ದ 40 ವರ್ಷದ ಮನ್ವೀರ್ ಸಿಂಗ್ ಎಂಬಾತನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈತ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದವ ಎಂದು ತಿಳಿದು ಬಂದಿದೆ. ಈತ ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳ ಸಾರ್ವಜನಿಕರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಈತನನ್ನು ಉತ್ತರಪ್ರದೇಶದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತರಲಾಗಿದೆ.

ಈತನ ಅಪರಾಧ ಕೃತ್ಯಗಳನ್ನು ಕುರಿತು ಬೆಂಗಳೂರಿನ ವಿವಿಧ ಸೈಬರ್ ಕ್ರೈಮ್ ಠಾಣೆಗಳಲ್ಲಿ 34 ಪ್ರಕರಣಗಳೂ ದಾಖಲಾಗಿದ್ದವು. ವಿಸ್ತೃತ ತನಿಖೆ ನಡೆಸಿದಾಗ ಮನ್ವೀರ್ ಸಿಂಗ್ ಸುಮಾರು 4.51 ಕೋಟಿ ರೂ. ವಂಚಿಸಿರುವುದು ಪತ್ತೆಯಾಗಿದೆ. ಈತ ಎಚ್‌ಡಿಎಫ್‌ಸಿ, ಆದಿತ್ಯ ಬಿರ್ಲಾ ಸನ್‌ಲೈಫ್ ಮತ್ತು ಐಸಿಸಿಐಸಿಐ ವಿಮಾ ಕಂಪನಿಗಳ ಹೆಸರಿನಲ್ಲಿ ಜೀವ ವಿಮೆ ಮಾಡಿಸಿಕೊಡುವುದಾಗಿ ಅಮಾಯಕರಿಂದ ಹಣ ಪಡೆದು ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಈ ಕಂಪನಿಗಳ ಹೆಸರಿನಲ್ಲಿ ನಕಲಿ ಜಾಲತಾಣಗಳನ್ನು ಆರಂಭಿಸಿದ್ದ.

ಬಿಎಸ್ ಸಿ ಪದವಿಧರನಾಗಿದ್ದ ಮನ್ವಿತ್ ನೊಯ್ಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಂಬಳ ಕಡಿಮೆ ಎಂಬ ಕಾರಣಕ್ಕೆ ರಾಜೀನಾಮೆ ನೀಡಿ ರಿಯಲ್ ಎಸ್ಟೇಟ್ ಮಧ್ಯವರ್ತಿಯಾಗಿಯೂ ಕೆಲಸ ಮಾಡುತ್ತಿದ್ದ. ಅಲ್ಲಿಯೂ ನಷ್ಟ ಅನುಭವಿಸಿದ್ದ ಈತ ಹಣ ಸಂಪಾದನೆಗಾಗಿ ವಿಮೆ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ಕೆಲಸಕ್ಕೆ ಇಳಿದಿದ್ದ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

ಆರೋಪಿಯು ಯ್ಯೂ ಟ್ಯೂಬ್ ನೋಡಿ ಗ್ರಾಹಕರನ್ನು ವಂಚಿಸುವ ಬಗ್ಗೆ ಕಲಿತುಕೊಂಡಿದ್ದ. ಅದಕ್ಕಾಗಿ ಜೀವ ವಿಮೆಗೆ ಸಂಬಂಧಪಟ್ಟ ವಿಡಿಯೋಗಳನ್ನು ನಿರಂತರವಾಗಿ ನೋಡುತ್ತಿದ್ದ. ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ, ಮಾತನಾಡುವ ಕಲೆ, ಜೀವ ವಿಮೆ ನಕಲಿ ದಾಖಲೆಗಳ ಸೃಷ್ಟಿ, ಮೊದಲಾದ ಅಂಶಗಳನ್ನು ಕಲಿತುಕೊಂಡಿದ್ದ. ನಂತರ ಸಾರ್ವಜನಿಕರನ್ನು ವಂಚಿಸಲು ಆರಂಭಿಸಿದ್ದ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಜೀವವಿಮೆ ಮಾಡಿಸಿಕೊಡುವುದಾಗಿ ಹೇಳಿ ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡಿದ್ದ. ತನ್ನ ಮಾತಿಗೆ ಜನರು ಮರುಳಾಗುತ್ತಾರೆ ಎನ್ನವುದನ್ನು ಅರಿತುಕೊಂಡ ಈತ ಆನ್ ಲೈನ್ ಮೂಲಕವೂ ಜನರನ್ನು ವಂಚಿಸಲು ಆರಂಭಿಸಿದ್ದ. ಈ ರೀತಿ ಮೋಸದಿಂದ ಸಂಪಾದನೆಯಾದ ಹಣದಿಂದ ಮನ್ವಿತ್ ತನ್ನ ಹುಟ್ಟೂರಿನಲ್ಲಿ ಕಿಸಾನ್ ಸೇವಾ ಕೇಂದ್ರವನ್ನು ತೆರದಿದ್ದ. ಕೃಷಿ ಉಪಕರಣ ಮತ್ತು ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದ. ಮತ್ತೊಂದು ಕಡೆ ತಾನೊಬ್ಬ ವಂಚಕ ಎನ್ನವುದು ಯಾರ ಅರಿವಿಗೂ ಬಾರದಂತೆ ಸಂಭಾವಿತನಂತೆ ನಡೆದುಕೊಳ್ಳುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲಿನಲ್ಲಿ ಕಳ್ಳತನ, ಕುಪ್ಪಂ ತಂಡದ ಇಬ್ಬರು ಕಳ್ಳಿಯರ ಬಂಧನ

ಕುಪ್ಪಂ ತಂಡದ ಸದಸ್ಯರು ಮತ್ತೆ ಕಳ್ಳತನದಲ್ಲಿ ಸಕ್ರಿಯರಾಗಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಚಿನ್ನಾಭರಣಗಳನ್ನು ಈ ತಂಡದ ಸದಸ್ಯೆಯರು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ರೈಲು ಮತ್ತು ಬಸ್ಸುಗಳಲ್ಲಿ ಪ್ರಯಾಣಿಕರ ವೇಷದಲ್ಲಿ ಸಂಚರಿಸುತ್ತಾ ಕಳ್ಳತನ ಮಾಡುತ್ತಿದ್ದ ಕುಪ್ಪಂ ತಂಡದ ಇಬ್ಬರು ಮಹಿಳೆಯರನ್ನು ಮಂಗಳೂರು ರೈಲ್ವೇ ಪೊಲೀಸರು ಬಂಧಿಸಿದ್ದಾರೆ ಎಂದು ರೈಲ್ವೇ ಎಸ್ ಪಿ ಸೌಮ್ಯಲತಾ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ 38 ವರ್ಷದ ಗಾಯತ್ರಿ ಆಲಿಯಾಸ್ ರೂಪಾ ಮತ್ತು ತಮಿಳುನಾಡಿನ 25 ವರ್ಷದ ಸಂಧ್ಯಾ ಆಲಿಯಾಸ್ ಶರಣ್ಯಾ ಬಂಧಿತ ಆರೋಪಿಗಳು. ಇವರು ನಿರಂತರವಾಗಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಲೇ ಇದ್ದವರು. ಇವರಿಂದ 402 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೌಮ್ಯಲತಾ ಹೇಳಿದ್ದಾರೆ.

ಇತ್ತೀಚೆಗೆ ಮುರುಡೇಶ್ವರದಿಂದ ಬೆಂಗಳೂರಿಗೆ ಮಹಿಳೆಯೊಬ್ಬರು ಆಗಮಿಸುತ್ತಿದ್ದರು ಅವರ ಬ್ಯಾಗ್ ನಿಂದ ಆಭರಣ ಕಳುವಾಗಿತ್ತು. ಈ ಸಂಬಂಧ ದಾಖಲಾದ ಪ್ರಕರಣ ಕುರಿತು ತನಿಖೆ ಕೈಗೊಂಡಾಗ ಇವರನ್ನು ಬಂಧಿಸಲಾಗಿದೆ. ಇವರು ಬೇಸಗೆಯ ದಿನಗಳಲ್ಲಿ ಮಾತ್ರ ಕಳ್ಳತನ ಮಾಡುತ್ತಿದ್ದರು. ಒಮ್ಮೊಮ್ಮೆ ಮಕ್ಕಳನ್ನು ಎತ್ತಿಕೊಂಡು, ಬಸ್‌ಗಳಲ್ಲಿ, ಸಾಮಾನ್ಯ ಮತ್ತು ಮೀಸಲು ಬೋಗಿಗಳಲ್ಲಿ ಪ್ರಯಾಣಿಸುತ್ತಾ ಕಳ್ಳತನ ಮಾಡುತ್ತಿದ್ದರು. ನಂತರ 7 ತಿಂಗಳು ಇವರು ಕುಪ್ಪಂನಲ್ಲೇ ಇರುತ್ತಿದ್ದರು. ಮತ್ತೆ ಬೇಸಿಗೆ ಬಂದಾಗ ಕಳ್ಳತನಕ್ಕೆ ಇಳಿಯುತ್ತಿದ್ದರು.

IPL_Entry_Point