ಬೆಂಗಳೂರು ಮಾರುಕಟ್ಟೆಯಲ್ಲಿ 200 ರೂಪಾಯಿ ಗಡಿ ದಾಟಿದ ತರಕಾರಿ ಬೆಲೆ, ಬೀನ್ಸ್ ಕಿಲೋಗೆ 120 ರೂಪಾಯಿ-bengaluru news vegitable price hike price of beans crosses rs 120 per kg mark in bengaluru business news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮಾರುಕಟ್ಟೆಯಲ್ಲಿ 200 ರೂಪಾಯಿ ಗಡಿ ದಾಟಿದ ತರಕಾರಿ ಬೆಲೆ, ಬೀನ್ಸ್ ಕಿಲೋಗೆ 120 ರೂಪಾಯಿ

ಬೆಂಗಳೂರು ಮಾರುಕಟ್ಟೆಯಲ್ಲಿ 200 ರೂಪಾಯಿ ಗಡಿ ದಾಟಿದ ತರಕಾರಿ ಬೆಲೆ, ಬೀನ್ಸ್ ಕಿಲೋಗೆ 120 ರೂಪಾಯಿ

ಬೆಂಗಳೂರು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 200 ರೂಪಾಯಿ ಗಡಿ ದಾಟಿದೆ. ಬೀನ್ಸ್ ಕಿಲೋಗೆ 120 ರೂಪಾಯಿ ತಲುಪಿದೆ. ಸೊಪ್ಪು ತರಕಾರಿಗಳ ಇಳುವರಿ ಕೊರತೆ, ಬೇಡಿಕೆ ಹೆಚ್ಚಳದ ಕಾರಣ ಬೆಲೆ ಏರಿಕೆ ಆಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಯಾವ ತರಕಾರಿಗೆ ಹೇಗಿದೆ ಬೆಲೆ ಇಲ್ಲಿದೆ ಕಿರುನೋಟ.

ಬೆಂಗಳೂರು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 200 ರೂಪಾಯಿ ಗಡಿ ದಾಟಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 200 ರೂಪಾಯಿ ಗಡಿ ದಾಟಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬರ ಪರಿಸ್ಥಿತಿ ಕಾರಣ ಸೊಪ್ಪು, ತರಕಾರಿ ಇಳುವರಿಯೂ ಕಡಿಮೆಯಾಗಿದ್ದು, ಬೇಡಿಕೆ ತಕ್ಕಷ್ಟು ಪೂರೈಕೆ ಇಲ್ಲದೆ ಸೊಪ್ಪು, ತರಕಾರಿ ಬೆಲೆ ಏರಿಕೆಯಾಗಿದೆ. ಕಟ್ಟು ಸೊಪ್ಪಿನ ಬೆಲೆ 30 ರೂಪಾಯಿ ದಾಟಿದರೆ ಬೀನ್ಸ್‌ ಬೆಲೆ 120 ರೂಪಾಯಿ ಗಡಿ ದಾಟಿದೆ. ಕೆಲವು ಕಡೆ ಹುರುಳಿಕಾಯಿ 180 ರೂಪಾಯಿಯಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ. ಸೌತೆಕಾಯಿ ಬೆಲೆಯೂ 50 ರೂಪಾಯಿ ಆಸುಪಾಸಿನಲ್ಲಿದೆ.

ಈ ವರ್ಷ ಮಳೆಯ ಕೊರತೆ ಒಂದೆಡೆ, ಇನ್ನೊಂದೆಡೆ ತಾಪಮಾನ ಹೆಚ್ಚಳ, ಸುಡುಬಿಸಿಲು, ಶಾಖ ತರಂಗಗಳ ಹೊಡೆತಕ್ಕೆ ಸಿಲುಕಿ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸೊಪ್ಪು, ತರಕಾರಿ ಬೆಳೆಯುವುದು ಕೂಡ ಕಷ್ಟವಾಗಿದೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದೆ. ಕೆಲವು ಭಾಗಗಳಲ್ಲಿ ಮಳೆ ಬಿದ್ದಿದೆ ಎಂದು ಹೇಳುವ ಮಟ್ಟಿಗೆ ಮಳೆ ಬಿದ್ದರೂ ಅದರಿಂದ ಸೊಪ್ಪು, ತರಕಾರಿ ಬೆಳೆಗಳಿಗೆ ಉಪಯೋಗವಾಗಿಲ್ಲ.

ಇವೆಲ್ಲದರ ವ್ಯತಿರಿಕ್ತ ಪರಿಣಾಮವಾಗಿ ಮಾರುಕಟ್ಟೆಯ ಬೇಡಿಕೆ ಈಡೇರಿಸುವಷ್ಟು ತರಕಾರಿ ಪೂರೈಕೆ ಆಗುತ್ತಿಲ್ಲ. ಬೇಡಿಕೆಯೂ ಹೆಚ್ಚಾಗಿದ್ದು, ಸಹಜವಾಗಿಯೇ ಎಲ್ಲ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದೆ.

ಬೆಲೆ ಏರಿಕೆಗೆ ತರಕಾರಿ ಪೂರೈಕೆ ಕೊರತೆ ಕಾರಣ

ಬೆಂಗಳೂರು ಮಾರುಕಟ್ಟೆಗೆ ತಮಿಳುನಾಡು ಹೊರತಾಗಿ ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ, ಕುಣಿಗಲ್, ತುಮಕೂರುಗಳಿಂದ ಬೀನ್ಸ್ ಅಥವಾ ಹುರುಳಿಕಾಯಿ ಪೂರೈಕೆಯಾಗುತ್ತದೆ. ಇದು ಮದುವೆ ಮತ್ತು ಇತರೆ ಶುಭಕಾರ್ಯಗಳ ಸೀಸನ್ ಕೂಡ ಆಗಿರುವುದರಿಂದಾಗಿ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಪೂರೈಕೆ ಕಡಿಮೆ. ಮಳೆ ಇಲ್ಲ, ಬರಪರಿಸ್ಥಿತಿ. ಹೀಗಾಗಿ ಇಳುವರಿ ಕಡಿಮೆ. ಪೂರೈಕೆ ಕಡಿಮೆಗೆ ಇದು ಕಾರಣ. ಇವೆಲ್ಲದರ ಪರಿಣಾಮವೇ ತರಕಾರಿಗಳ ಬೆಲೆ ಏರಿಕೆ. ಬೀನ್ಸ್‌ ಬೆಲೆ ಏರಿದ್ದೂ ಹೀಗೆಯೇ ಎಂದು ಕೆ ಆರ್ ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳು ಹೇಳುತ್ತಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.

ಇದೇ ಕಾರಣಕ್ಕೆ, ಕಳೆದ ವಾರ 80 ರೂಪಾಯಿಗೆ ಮಾರಾಟವಾಗಿದ್ದ ಹುರುಳಿಕಾಯಿಗೆ ಈಗ 120 ರೂಪಾಯಿಗೂ ಅಧಿಕ ದರ ಇದೆ. ಕ್ಯಾರೆಟ್, ಕ್ಯಾಪ್ಸಿಕಮ್‌, ಬದನೆಕಾಯಿ ಬೆಲೆ ಕಿಲೋಗೆ 60 ರೂಪಾಯಿ ದಾಟಿದೆ. ಮೆಣಸಿನಕಾಯಿ ಕಿಲೋಗೆ 80 ರೂಪಾಯಿ, ಹಿರೇಕಾಯಿ ದರ 70 ರೂಪಾಯಿ ಆಗಿದೆ. ಬಟಾಣಿ 180 ರೂಪಾಯಿ, ಹೂಕೋಸು 50 ರೂಪಾಯಿ, ಬೆಳ್ಳುಳ್ಳಿ ದರ 180 ರೂಪಾಯಿ, ಶುಂಠಿ 200 ರೂಪಾಯಿ ತಲುಪಿದೆ. ಕಟ್ಟು ಸೊಪ್ಪುಗಳ ದರವೂ 20 ರೂಪಾಯಿಯಿಂದ 30 ರೂಪಾಯಿಗೇರಿಕೆಯಾಗಿದೆ. ಕೊತ್ತಂಬರಿ, ಮೆಂತೆ, ಸಬ್ಸಿಗೆ ಎಲ್ಲವೂ 30 ರೂಪಾಯಿ ತಲುಪಿದೆ ಎಂದು ವರದಿ ಹೇಳಿದೆ.

ಆನ್‌ಲೈನ್, ಚಿಲ್ಲರೆ ದರ ತರಕಾರಿಗೆ 180 ರಿಂದ 220 ರೂ

ಬೆಂಗಳೂರಿನ ಚಿಲ್ಲರೆ ಮತ್ತು ಆನ್‌ಲೈನ್ ಮಾರುಕಟ್ಟೆಗಳಲ್ಲಿ ತರಕಾರಿ ಕಿಲೋಗೆ 180 ರಿಂದ 220 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಕೋಲಾರ ಜಿಲ್ಲೆ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಇತರ ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಬೀನ್ಸ್ ಬೆಳೆ ನಾಶವಾಗಿರುವುದರಿಂದ ಮಾರುಕಟ್ಟೆ ಪೂರೈಕೆಗೆ ಹೊಡೆತ ಬಿದ್ದಿದೆ. ಪ್ರತಿ ಬೇಸಿಗೆಯಲ್ಲಿ ಬೀನ್ಸ್ ದುಬಾರಿಯಾಗುವುದು ಸಹಜ. ಆದರೆ ವ್ಯಾಪಾರಿಗಳ ಪ್ರಕಾರ, ಈ ಬಾರಿ ಬೆಲೆ ದುಬಾರಿಯಾಗಿ ಬಿಟ್ಟಿದೆ. ಸಗಟು ಮಾರುಕಟ್ಟೆಗಳಲ್ಲಿ ಕೆ.ಜಿ.ಗೆ 120 ರಿಂದ130 ರೂಪಾಯಿ ಆಸುಪಾಸಿನಲ್ಲಿ ಬೀನ್ಸ್‌ ಮಾರಾಟವಾಗುತ್ತಿದೆ ಎಂದು ದ ಹಿಂದೂ ವರದಿ ಮಾಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point