ಬೆಂಗಳೂರಿನಲ್ಲಿ ಮಳೆಯ ನಂತರ ಕಾಣಿಸಿಕೊಳ್ಳುತ್ತಿದೆ ವೈರಲ್ ಸೋಂಕು; ಜ್ವರ, ದದ್ದುಗಳಿಂದ ಬಳಲುತ್ತಿದ್ದಾರೆ ಮಕ್ಕಳು
ಬೆಂಗಳೂರಿನಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲ, ಮಳೆಯ ಜೊತೆಗೆ ವೈರಲ್ ಸೋಂಕುಗಳು ಮತ್ತು ಉಸಿರಾಟದ ಕಾಯಿಲೆಗಳು ಹೆಚ್ಚಾಗುತ್ತಿವೆ. ಕೆಲವು ಮಕ್ಕಳಲ್ಲಿ ಮುಖದ ಮೇಲೆ ವಿಚಿತ್ರವಾದ ದದ್ದುಗಳು ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ.

ಬೆಂಗಳೂರು: ಮಾನ್ಸೂನ್ ಪೂರ್ವ ಮಳೆಗೆ ಬೆಂಗಳೂರಿನ ಜನತೆ ಹೈರಾಣಾಗಿದ್ದಾರೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲ, ಮಳೆಯ ಜೊತೆಗೆ ವೈರಲ್ ಸೋಂಕುಗಳು ಮತ್ತು ಉಸಿರಾಟದ ಕಾಯಿಲೆಗಳು ಹೆಚ್ಚಾಗುತ್ತಿವೆ. ನಗರದ ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಶೀತ, ಕೆಮ್ಮು, ಜ್ವರ ತರಹದ ಲಕ್ಷಣಗಳು ಮತ್ತು ಕೆಲವು ಮಕ್ಕಳಲ್ಲಿ ಮುಖದ ಮೇಲೆ ವಿಚಿತ್ರವಾದ ದದ್ದುಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದು ಅನೇಕ ಪೋಷಕರನ್ನು ಆತಂಕಕ್ಕೆ ತಳ್ಳಿದೆ.
ಹಠಾತ್ ತಾಪಮಾನ ಕುಸಿತ, ಹೆಚ್ಚುತ್ತಿರುವ ಆರ್ದ್ರತೆಯಿಂದ ಇಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತಿದೆ. ಮುಚ್ಚಿದ ಸ್ಥಳ, ಕಳಪೆ ಗಾಳಿ ಇತ್ಯಾದಿ ವೈರಸ್ ಬೇಗನೆ ಹರಡಲು ಕಾರಣವಾಗುತ್ತದೆ. ನೆಗಡಿ, ಕೆಮ್ಮು ಮತ್ತು ಜ್ವರ ಇತ್ಯಾದಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಯ ಒಪಿಡಿಯಲ್ಲಿ ಸುಮಾರು ಶೇ. 60 ರಿಂದ 70ರಷ್ಟು ಉಸಿರಾಟದ ವೈರಲ್ ಪ್ರಕರಣಗಳು ದಾಖಲಾಗಿದೆ. ಹಠಾತ್ ಹವಾಮಾನ ಬದಲಾವಣೆಗಳು ಮತ್ತು ಆರ್ದ್ರತೆಯ ಏರಿಕೆಯು ವೈರಸ್‍ಗಳು ಅಭಿವೃದ್ಧಿ ಹೊಂದಲು ಹಾಗೂ ಹರಡಲು ಕಾರಣವಾಗುತ್ತಿದೆ ಎಂದು ಎಚ್‍ಬಿಆರ್ ಲೇ ಔಟ್‍ನಲ್ಲಿರುವ ಆಲ್ಟಿಯಸ್ ಆಸ್ಪತ್ರೆಯ ಡಾ. ದರ್ಶನ್ ರೆಡ್ಡಿ ಹೇಳಿದ್ದಾರೆ.
ಉಸಿರಾಟದ ಸೋಂಕುಗಳ ಜೊತೆಗೆ ದೇಹದ ನೋವು, ಆಯಾಸ, ಗಂಟಲು ನೋವು ಮತ್ತು ಸಂಧಿವಾತದೊಂದಿಗೆ ವೈರಲ್ ಜ್ವರದ ಪ್ರಕರಣಗಳಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಈ ಪರಿಸ್ಥಿತಿಯು ರೋಗಿಗಳು ಸೋಂಕಿನ ನಂತರ ದೀರ್ಘಕಾಲದ ಕೀಲು ನೋವು ಕಂಡುಬರುತ್ತಿದೆ. ಮಕ್ಕಳು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ವಯಸ್ಕರಲ್ಲಿ ಈ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ.
ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಭೇಟಿ ನೀಡುವವರ ಸಂಖ್ಯೆ ಸುಮಾರು ಶೇ.30 ರಷ್ಟು ಹೆಚ್ಚಾಗಿದೆ. ಪ್ರತಿದಿನ 5 ರಿಂದ 10 ಹೊಸ ಪ್ರಕರಣಗಳು ಕಂಡುಬರುತ್ತಿವೆ. ಜ್ವರದ ಜೊತೆಗೆ ಅನೇಕ ರೋಗಿಗಳು ವೈರಲ್ ನಂತರ, ಆಯಾಸ ಮತ್ತು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಚಿಕೂನ್ ಗುನ್ಯಾ ಮತ್ತು ಡೆಂಗ್ಯೂದಂತಹ ಕಾಯಿಲೆಗಳಿಗೂ ಕಾರಣವಾಗುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ಡಾ. ನಾಸಿರುದ್ದೀನ್ ಜಿ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಮಳೆಯಿಂದ ಜಠರಗರುಳಿನ ಕಾಯಿಲೆಗಳ ಹೆಚ್ಚಳಕ್ಕೂ ಕಾರಣವಾಗಿದೆ. ಶೇ. 30ರಷ್ಟು ಪ್ರಕರಣ ಹೆಚ್ಚಾಗಿದೆ. ಆರ್ದ್ರ ವಾತಾವರಣದಿಂದ ಸೋಂಕುಗಳು ಹರಡುತ್ತವೆ. ಮಕ್ಕಳಲ್ಲೂ ಜ್ವರದ ಪ್ರಕರಣ ಹೆಚ್ಚುತ್ತಿದೆ. ದಿನವೊಂದಕ್ಕೆ 20 ರಿಂದ 25 ಪ್ರಕರಗಳು ಕಂಡು ಬರುತ್ತಿದೆ. ಜ್ವರದೊಂದಿಗೆ ಮಕ್ಕಳ ಮುಖದ ಮೇಲೆ ದದ್ದುಗಳು ಕಾಣಿಸಿಕೊಳ್ಳುತ್ತಿದೆ. ಇದು ಮಕ್ಕಳಿಂದ ಮಕ್ಕಳಿಗೆ ಹರಡುತ್ತಿರುವುದು ಕಳವಳಕಾರಿಯಾಗಿದೆ.
ಇದನ್ನೂ ಓದಿ: ಸಿಲ್ಕ್ ಬೋರ್ಡ್ ಸೇರಿದಂತೆ ವಿವಿಧೆಡೆ ರಸ್ತೆಗಳು ಜಲಾವೃತ