ಕನ್ನಡ ಸುದ್ದಿ  /  ಕರ್ನಾಟಕ  /  ಕುಂದಗನ್ನಡ ಹಬ್ಬಕ್ಕೆ ಬೆಂಗಳೂರು ಸಜ್ಜು; 5ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಯಾವಾಗ, ಎಲ್ಲಿ ನಡೆಯುತ್ತೆ? ಇಲ್ಲಿದೆ ವಿವರ

ಕುಂದಗನ್ನಡ ಹಬ್ಬಕ್ಕೆ ಬೆಂಗಳೂರು ಸಜ್ಜು; 5ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಯಾವಾಗ, ಎಲ್ಲಿ ನಡೆಯುತ್ತೆ? ಇಲ್ಲಿದೆ ವಿವರ

ಮಹಾನಗರಿಯಲ್ಲಿರುವ ಕುಂದಗನ್ನಡದ ಕುಡಿಗಳು ಕಾತರದಿಂದ ಕಾಯುತ್ತಿರುವ ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಇದೀಗ ದಿನಾಂಕ ಗೊತ್ತು ಮಾಡಲಾಗಿದೆ. ಈ ಬಾರಿ ಮಹಾನಗರಿಯಲ್ಲಿ ಅದ್ಧೂರಿಯಾಗಿ 2 ದಿನಗಳ ಕಾಲ ಕುಂದಾಪ್ರ ಕನ್ನಡ ಹಬ್ಬ ನಡೆಯಲಿದೆ. ಈ ಕಾರ್ಯಕ್ರಮ ಯಾವಾಗ, ಎಲ್ಲಿ ನಡೆಯುತ್ತೆ, ಕಾರ್ಯಕ್ರಮದಲ್ಲಿ ಏನೆಲ್ಲಾ ಇರುತ್ತೆ ಎಂಬಿತ್ಯಾದಿ ವಿವರ ಇಲ್ಲಿದೆ.

5ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಯಾವಾಗ, ಎಲ್ಲಿ ನಡೆಯುತ್ತೆ? ಇಲ್ಲಿದೆ ವಿವರ
5ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಯಾವಾಗ, ಎಲ್ಲಿ ನಡೆಯುತ್ತೆ? ಇಲ್ಲಿದೆ ವಿವರ

ಕುಂದಾಪುರ ಎಂದರೆ ಸಮುದ್ರ, ದೇವಾಲಯ, ಗುಡಿ-ಗೋಪುರ, ಚೆಂಡೆ-ಮದ್ದಲೆ, ಆಚರಣೆ-ಸಂಸ್ಕೃತಿ ಇಷ್ಟೇ ಅಲ್ಲ, ಇದನ್ನೂ ಮೀರಿದ್ದು ನಮ್ಮ ಕುಂದಗನ್ನಡ. ಕಡಲ ತಡಿಯ ಊರಿನ ಭಾಷೆಯ ಸೊಗಡೇ ಅಂದ. ಜಗದಗಲಕ್ಕೂ ಹರಡಿರುವ ಕುಂದಗನ್ನಡದ ಮನಸ್ಸುಗಳು ಕಳೆದ ಕೆಲವು ವರ್ಷಗಳಿಂದ ಪ್ರತಿವರ್ಷ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನು ಹಬ್ಬವನ್ನಾಗಿಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ಅದ್ಧೂರಿಯಾಗಿ ನಡೆಯುತ್ತಿದೆ. ಈ ವರ್ಷ ಈ ಸಂಭ್ರಮಕ್ಕೆ ಇನ್ನಷ್ಟು ಮೆರುಗು ಸಿಗಲಿದೆ. ಪ್ರತಿ ವರ್ಷ 1 ದಿನಗಳ ಕಾಲ ನಡೆಯುತ್ತಿದ್ದ ಕುಂದಾಪ್ರ ಕನ್ನಡ ಹಬ್ಬ ಈ ಬಾರಿ 2 ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತಿದೆ.

ಕುಂದಾಪ್ರ ಕನ್ನಡ ಹಬ್ಬ ಆಚರಣೆಯ ದಿನ ಹಾಗೂ ಸ್ಥಳ ಘೋಷಣೆಯ ಕುರಿತು ಜುಲೈ 7ರಂದು ʼವಾಲ್ಗಾʼ ಎಂಬ ಹೆಸರಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸುದೀಕ್ಷಾ ಕನ್ವೆನ್ಷನ್‌ ಸೆಂಟರ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಹಾಗಾದರೆ ಈ ವರ್ಷ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಯಾವಾಗ, ಎಲ್ಲಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಏನೆಲ್ಲಾ ಇರುತ್ತೆ ವಿವರ ಇಲ್ಲಿದೆ.  

ಟ್ರೆಂಡಿಂಗ್​ ಸುದ್ದಿ

ವಿಶ್ವ ಕುಂದಾಪ್ರ ಕನ್ನಡ ಹಬ್ಬ 2024

ಈ ವರ್ಷ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಬಲು ಜೋರಿನಿಂದ ನಡೆಯಲಿದೆ. ಆಗಸ್ಟ್‌ 17 ಮತ್ತು 18 ರಂದು ಪ್ಯಾಲೆಸ್‌ ಗ್ರೌಂಡ್‌ನ ವೈಟ್‌ ಪೆಟಲ್ಸ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಪ್ರತಿ ವರ್ಷ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಬಾರಿ 5ನೇ ವರ್ಷದ ಕಾರ್ಯಕ್ರಮವಾಗಿರಲಿದೆ.

ʼಪ್ರತಿ ವರ್ಷ ಬೆಂಗಳೂರಿನ ಬಂಟರ ಸಂಘದ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಆ ಕಾರಣದಿಂದ ಹಲವರಿಗೆ ಕುಂದಗನ್ನಡ ಹಬ್ಬಕ್ಕೆ ಬಂದರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಈ ಬಾರಿ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆʼ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷ ದೀಪಕ್‌ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ.

2 ದಿನಗಳ ಕುಂದಾಪ್ರ ಕನ್ನಡ ಹಬ್ಬದಲ್ಲಿ ಏನೇನಿರಲಿದೆ?

ʼದಿಬ್ಣʼ (ಮೆರವಣಿಗೆ) ದೊಂದಿಗೆ ಈ ದಿನಗಳ ಕುಂದಾಪ್ರ ಕನ್ನಡ ಹಬ್ಬಕ್ಕೆ ಚಾಲನೆ ಸಿಗಲಿದೆ. ನಗರದ ವಿವಿಧ 10 ದಿಕ್ಕುಗಳಿಂದ ಮೆರವಣಿಗೆ ಸಾಗಿ ಬಂದು ಅರಮನೆ ಮೈದಾನ ತಲುಪಲಿದೆ. ನುಡಿ ಚಾವಡಿ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನೆರವೇರಲಿದೆ. ಆಗಸ್ಟ್‌ 17 ರಂದು ಜೋಡಾಟ ಯಕ್ಷಗಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಂದಾಪುರ ಭಾಗದ ಸಿನಿ ಕಲಾವಿದರು ಸೇರಿದಂತೆ ಕನ್ನಡ ಸಿನಿರಂಗದವರು ಹಲವರು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದ್ದಾರೆ.

ಎರಡು ದಿನ ಇಷ್ಟೆಲ್ಲಾ ಕಾರ್ಯಕ್ರಮ ಇರತ್‌ ಕಾಣಿ 

* ಕುಂದಕನ್ನಡ ನಗೆ ರಾಯಭಾರಿ ಖ್ಯಾತಿಯ ಮನು ಹಂದಾಡಿ ತಂಡದಿಂದ ʼಹಂದಾಡ್ತ ನೆಗಾಡಿʼ ನಗೆ ಪ್ರಹಸನ ನಡೆಯಲಿದೆ.

* ಗ್ರಾಮೀಣ ಕ್ರೀಡೆಗಳ ಮೂಲಕ ರಂಜಿಸಲು ʼಬಯಲಾಟʼ ನಡೆಯಲಿದೆ.

* ಊರಿನ ಹಬ್ಬದ ಕಳೆಯನ್ನು ಮಹಾನಗರಿಯಲ್ಲಿ ತೋರಿಸಲು ʼರಥೋತ್ಸವʼ ಕೂಡ ಇರಲಿದೆ.

* ʼಪೆಟ್ಟ್‌ ಒಂದೇ ಸ್ವರ ಬೇರೆʼ ಎಂಬ ಹೆಸರಿನ ಆಫ್ರಿಕದ ಜಂಬೆ, ಕುಂದಾಪುರದ ಚೆಂಡೆ ಜುಗಲ್ ಬಂದಿ ಕಾರ್ಯಕ್ರಮವೂ ಇರಲಿದೆ.

* 'ಭುಜಬಲದ ಪರಾಕ್ರಮ' ಹಗ್ಗಜಗ್ಗಾಟʼದಲ್ಲಿ 8 ಊರಿನ ತಂಡಗಳು ಭಾಗವಹಿಸಲಿವೆ.

* ‘ಯಬ್ಯಾ ಸೌಂಡೇ’ ಹೆಸರಿನಲ್ಲಿ ರವಿ ಬಸ್ರೂರು ಅವರ ಶತಕುಂದ ಪದ್ಯಗಳ ಡಿಜೆ ಇರಲಿದೆ.

* ʼಡ್ಯಾನ್ಸ್ ಕುಂದಾಪ್ರ ಡ್ಯಾನ್ಸ್' ವಿಶೇಷ ನೃತ್ಯ‌ ಪ್ರದರ್ಶನ ನಡೆಯಲಿದೆ.

* 'ಗಂಡಿನ್ ಪಿಚ್ಚರ್ ಬಿಡ್ತ್' ವಿಶೇಷ ಕಿರುಚಿತ್ರ ಪ್ರದರ್ಶನ ಕೂಡ ನಡೆಯಲಿದೆ.

* ʼನಮ್ ಊರ್ಮನಿ ಪಿಚ್ಚರ್ ಆಕ್ಟರ್ಸ್‌ʼ ಊರಿನ ಸಿನಿತಾರೆಯರು, ಸೂಪರ್ ಸ್ಟಾರ್‌ಗಳ ಸಮಾಗಮವನ್ನು ನೀವೂ ವಿಶ್ವ ಕುಂದಾಪ್ರ ಕನ್ನಡ ಹಬ್ಬದಲ್ಲಿ ಕಣ್ತುಂಬಿಕೊಳ್ಳಬಹುದು.

* ಕುಂದಾಪುರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಂತೆ ʼಕುಂದಾಪ್ರ ಸಂತಿ' ಬೆಂಗಳೂರಿಗೆ ಬರಲಿದೆ.

ಇದೆಲ್ಲಾ ಇದ್‌ ಮೇಲೆ ಹೊಟ್ಟಿಗ್‌ ಎಂಥ ಇಲ್ಯಾ ಕೇಣ್ಬೆಡಿ, ಅದೂ ಇತ್‌. ʼಹೊಟ್ಟಿ ಕಂಡದ್ ನಾವೇ ಸೈ' ಕರಾವಳಿಯ ವಿಶೇಷ ಖಾದ್ಯ ಆಹಾರ ಮೇಳವೂ ಇದರ ಭಾಗವಾಗಲಿದೆ.

ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?

ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ಕರಾವಳಿಗರಿಗೆ ಅತ್ಯಂತ ವಿಶೇಷ. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 4ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.