ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ನೀರಿನ ಪೂರೈಕೆಯಲ್ಲಿ ಶೇ 20ರಷ್ಟು ಕಡಿತಕ್ಕೆ ಜಲಮಂಡಳಿ ನಿರ್ಧಾರ; ಈಜುಕೊಳಗಳ ಸ್ಥಗಿತಕ್ಕೂ ಆದೇಶ
ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ನೀರಿನ ಸಂಪರ್ಕ ಪಡೆದಿರುವವರ ಸಂಖ್ಯೆ 3 ಲಕ್ಷ ಇದ್ದು, ಇವರಿಗೆ ಏಪ್ರಿಲ್ 1ರಿಂದ ಶೇ 20 ರಷ್ಟು ನೀರನ್ನು ಸಂಪೂರ್ಣವಾಗಿ ಕಡಿತಗೊಳಿಸಲು ಬಿಡ್ಬ್ಲ್ಯೂಎಸ್‌ಎಸ್‌ಬಿ ನಿರ್ಧರಿಸಿದೆ. (ವರದಿ: ಎಚ್. ಮಾರುತಿ)
ಬೆಂಗಳೂರು: ಬೃಹತ್ ಪ್ರಮಾಣದ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ 20ರಷ್ಟು ಕಡಿತಗೊಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಬೃಹತ್ ಗಾತ್ರದ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕರುಗಳೊಂದಿಗೆ ಮಂಡಳಿಯು ಸಭೆ ನಡೆಸಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.
ಈ ಸಭೆಯಲ್ಲಿ ಬಿಡ್ಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಡಾ. ವಿ.ರಾಮ್ ಪ್ರಸಾತ್ ಮನೋಹರ್ ಮತ್ತು ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಮಂಡಳಿಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಬಿಡ್ಬ್ಲ್ಯೂಎಸ್‌ಎಸ್‌ಬಿ ಪ್ರಮುಖ ಗ್ರಹಕರೆಂದರೆ ರೈಲ್ವೆ, ಎಚ್ಎಎಲ್, ಏರ್‌ಫೋರ್ಸ್, ಡಿಫೆನ್ಸ್, ಸಿಆರ್‌ಪಿಎಫ್, ಬಯೋಕಾನ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಒಟ್ಟು 3 ಲಕ್ಷ ಗ್ರಾಹಕರಿದ್ದಾರೆ.
ಏಪ್ರಿಲ್ 1ರಿಂದ ಶೇ 20 ರಷ್ಟು ನೀರು ಕಡಿತಗೊಳಿಸಲು ನಿರ್ಧಾರ
ಸದ್ಯಕ್ಕೆ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ 1.40 ಕೋಟಿ ಜನಸಂಖ್ಯೆಯಿದ್ದು, ನೀರು ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ನಾಗರಿಕರ ಹಿತಾಸಕ್ತಿ ಮುಖ್ಯವಾಗಿದೆ. ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ 20ರಷ್ಟು ನೀರನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಮಾ 15ರಿಂದ ಹಂತಹಂತವಾಗಿ ಕಾವೇರಿ ನೀರನ್ನು ಕಡಿತಗೊಳಿಸಲಾಗುವುದು. ಏಪ್ರಿಲ್ 1ರಿಂದ ಶೇ 20 ರಷ್ಟು ನೀರನ್ನು ಸಂಪೂರ್ಣವಾಗಿ ಕಡಿತಗೊಳಿಸಲು ಮಂಡಳಿ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ನೀರಿನ ಸಂಪರ್ಕ ಪಡೆದಿರುವವರ ಸಂಖ್ಯೆ 3 ಲಕ್ಷ ಇದ್ದು ಇವರು ತ್ಯಾಗ ಮನೋಭಾವವನ್ನು ಪ್ರದರ್ಶಿಸಬೇಕು. 1.40 ಕೋಟಿ ಜನರ ಹಿತದೃಷ್ಟಿಯಿಂದ ಮಂಡಳಿ ಕೈಗೊಂಡಿರುವ ಈ ನಿರ್ಧಾರಕ್ಕೆ ಬೃಹತ್ ಪ್ರಮಾಣದ ಗ್ರಾಹಕರು ಕೈಜೋಡಿಸಬೇಕು ಎಂದು ಬಿಡ್ಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಡಾ. ವಿ.ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
ಬೆಂಗಳೂರಿನ ನಾಗರಿಕರಿಗೆ ಅಗತ್ಯ ನೀರು ಒದಗಿಸಲು ಮಂಡಳಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದುವರೆಗೂ ಬೃಹತ್ ಪ್ರಮಾಣದ ನೀರಿನ ಸಂಪರ್ಕ ಪಡೆದಿರುವವರಿಗೆ ಇದುವರೆಗೂ ಶೇ 95ರಿಂದ ಶೇ 100ರಷ್ಟು ಪೂರೈಸಲಾಗುತ್ತಿದ್ದು, ಇದರಲ್ಲಿ ಇನ್ನು ಮುಂದೆ ಶೇ 20ರಷ್ಟು ನೀರು ಪೂರೈಕೆ ಕಡಿತಗೊಳಿಸಲು ಮಂಡಳಿ ನಿರ್ಧರಿಸಿದೆ.
ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಲು ಸಲಹೆ
ಬೃಹತ್ ಗಾತ್ರದ ನೀರಿನ ಸಂಪರ್ಕ ಪಡೆದಿರುವ ಸಂಸ್ಥೆಗಳು, ಆಸ್ಪತ್ರೆ ಮತ್ತು ಐಟಿ-ಬಿಟಿ ಕಂಪನಿಗಳು ತಮ್ಮ ಕ್ಯಾಂಪಸ್‌ನಲ್ಲಿ ನೀರಿನ ಪ್ರಾಮುಖ್ಯ, ಮಿತಬಳಕೆ ಮತ್ತು ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಒಂದು ವೇಳೆ ಬೃಹತ್ ಗಾತ್ರದ ನೀರಿನ ಸಂಪರ್ಕ ಪಡೆದಿರುವ ಸಂಸ್ಥೆಗಳಲ್ಲಿ ಈಜುಕೊಳಗಳಿದ್ದರೆ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಿದರು. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ನಗರದ ಎಲ್ಲ ಈಜುಕೊಳಗಳನ್ನು ಸ್ಥಗಿತಗೊಳಿಸುವಂತೆಯೂ ಆದೇಶ ನೀಡಿದರು. ಈ ನಿಟ್ಟಿನಲ್ಲಿ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಬೃಹತ್ ಪ್ರಮಾಣದ ನೀರಿನ ಗ್ರಾಹಕರಿಗೆ ಕಡಿತ ಮಾಡುವ ಶೇ 20ರಷ್ಟು ನೀರನ್ನು ಜನನಿಬಿಡ ಪ್ರದೇಶ, ಕೊಳಚೆ ಪ್ರದೇಶ ಹಾಗೂ ಬಡವರು ವಾಸಿಸುತ್ತಿರುವ ಪ್ರದೇಶಗಳಿಗೆ ಮತ್ತು ಅತ್ಯಂತ ಅವಶ್ಯವಿರುವ ಪ್ರದೇಶಗಳಿಗೆ ಪೂರೈಸುವಂತೆ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ.
ಕಾವೇರಿ-5ನೇ ಹಂತದ ಯೋಜನೆ ಮೇ 15ರೊಳಗೆ ಅನುಷ್ಠಾನಗೊಳ್ಳಲಿದ್ದು, ಅಲ್ಲಿಯವರೆಗೆ ಸಹಕಾರ ನೀಡುವಂತೆ ಮಂಡಳಿ ವಿನಂತಿಸಿದೆ.
ಸಂಸ್ಕರಿಸಿದ ನೀರನ್ನು ಇತರೆ ಉದ್ದೇಶಗಳಿಗೆ ಬಳಸಲು ಅಭ್ಯಂತರವಿಲ್ಲ. ಈ ನೀರು ಬೇಕಿದ್ದಲ್ಲಿ ಸರಬರಾಜು ಮಾಡಲಾಗುವುದು. ಕೊಳವೆಬಾವಿ ಕೊರೆಯುವುದಕ್ಕೆ ಕೆಲವರು ಅನುಮತಿ ಕೋರಿದರು. ಇದನ್ನು ಆಲಿಸಿದ ಅಧ್ಯಕ್ಷರು ಅರ್ಜಿ ಸಲ್ಲಿಸಿದ ಕೂಡಲೇ ಅನುಮತಿ ನೀಡಲಾಗುವುದು ಎಂದರು.