ಬೆಂಗಳೂರಿಗೆ ಮೇ ತಿಂಗಳ ನೀರಿನ ಬೇಡಿಕೆ ಪೂರೈಕೆಗೆ ಈಗಿನಿಂದಲೇ ಜಲಮಂಡಳಿ ಸಜ್ಜು; ಏನೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ?
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗೆ ಮೇ ತಿಂಗಳ ನೀರಿನ ಬೇಡಿಕೆ ಪೂರೈಕೆಗೆ ಈಗಿನಿಂದಲೇ ಜಲಮಂಡಳಿ ಸಜ್ಜು; ಏನೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ?

ಬೆಂಗಳೂರಿಗೆ ಮೇ ತಿಂಗಳ ನೀರಿನ ಬೇಡಿಕೆ ಪೂರೈಕೆಗೆ ಈಗಿನಿಂದಲೇ ಜಲಮಂಡಳಿ ಸಜ್ಜು; ಏನೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ?

ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಜನರು ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮೇ ನಲ್ಲಿ ನೀರಿನ ಸಮಸ್ಯೆಯಾಗದಂತೆ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಜಲ ಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿವೆ. (ವರದಿ: ಎಚ್‌ ಮಾರುತಿ)

ಬೆಂಗಳೂರಿನಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮಾರ್ಚ್‌ನಿಂದ ನಗರದ ಕೆಲವೆಡೆ ನೀರಿನಗೆ ಸಮಸ್ಯೆಯಾಗಿದೆ.
ಬೆಂಗಳೂರಿನಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮಾರ್ಚ್‌ನಿಂದ ನಗರದ ಕೆಲವೆಡೆ ನೀರಿನಗೆ ಸಮಸ್ಯೆಯಾಗಿದೆ. (PTI)

ಬೆಂಗಳೂರು: ಅಂತರ್ಜಲ ಕೊರತೆಯಿಂದಾಗಿ (Bangalore Water Crisis) ಒಂದು ವೇಳೆ ಮೇ ತಿಂಗಳಲ್ಲಿ ನೀರಿನ ಅಭಾವ ಹೆಚ್ಚಾದರೆ ಅದನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಲಮಂಡಳಿ ಈಗಿನಿಂದಲೇ ಸಜ್ಜಾಗುತ್ತಿದೆ. ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧ್ಯಕ್ಷರಾದ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ಅವರು ಜಲಮಂಡಳಿ ವ್ಯಾಪ್ತಿಯಲ್ಲಿರುವ ವಿವಿಧ ಕೆರೆಗಳು ಹಾಗೂ ನೀರು ಸರಬರಾಜು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾದ ಹೆಸರುಘಟ್ಟ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಸ್ತುತ ಈ ಕೆರೆಯಲ್ಲಿ 0.3 ಟಿಎಂಸಿಗಳಷ್ಟು ನೀರಿನ ಲಭ್ಯತೆಯಿದೆ. ಅಲ್ಲದೇ, ಈ ಪ್ರದೇಶದಲ್ಲಿರುವ ಕೊಳವೆ ಬಾವಿಗಳಲ್ಲೂ ಉತ್ತಮ ನೀರಿದೆ. ಜಲಮಂಡಳಿಯ ಹೆಸರುಘಟ್ಟ ನೀರು ಸರಬರಾಜು ಕೇಂದ್ರದ ಮೂಲಕ ನಗರಕ್ಕೆ ಪ್ರತಿ ದಿನ 10 ಎಂಎಲ್‌ಡಿ ನೀರನ್ನು ಸರಬರಾಜು ಮಾಡಬಹುದಾಗಿದೆ. ಮೇ ತಿಂಗಳಲ್ಲಿ ನೀರಿನ ಕೊರತೆ ಕಂಡು ಬಂದಲ್ಲಿ ಮಂಡಳಿಯ ನೀರು ಸರಬರಾಜು ವ್ಯವಸ್ಥೆಯ ಮೂಲಕ ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅಧ್ಯಕ್ಷರು ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳುವಂತೆ ಸೂಚಿಸಿದ್ದಾರೆ.

ಈ ಕೆರೆಯಿಂದ ಲಭ್ಯವಾಗುವ ನೀರನ್ನು ಶುದ್ದೀಕರಿಸಲು ಹೆಸರುಘಟ್ಟ ಜಲಮಂಡಲಿ ನೀರು ಸರಬರಾಜು ಕೇಂದ್ರವನ್ನು ಸಜ್ಜುಗೊಳಿಸಬೇಕು. ಇಲ್ಲಿಂದ ಯಾವ ಸ್ಥಳದವರೆಗೆ ನೀರು ಪೂರೈಕೆ ಮಾಡಲು ಸಾಧ್ಯವೋ ಅಲ್ಲಿಯವರೆಗೆ ನೀರನ್ನು ಸರಬರಾಜು ಮಾಡಬೇಕು. ಪೈಪ್‌ಲೈನ್‌ ಇಲ್ಲದೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ಹೆಸರುಘಟ್ಟ ಕೆರೆ ನೀರನ್ನು ಸರಬರಾಜು ಮಾಡಬೇಕು. ಇದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರ್ಕಾವತಿ ವೃಷಭಾವತಿ ನದಿಗಳ ಪುನಶ್ಚೇತನ

ಅರ್ಕಾವತಿ ಮತ್ತು ವೃಷಭಾವತಿ ನದಿಗಳ ಪುನಶ್ಚೇತನಕ್ಕೆ ಜಲ ಮಂಡಳಿ ಮುಂದಾಗಿದೆ. ಈ ಎರಡೂ ನದಿಗಳ ಪಾತ್ರದಲ್ಲಿ ಬಹಳಷ್ಟು ಒತ್ತುವರಿಯಾಗಿದ್ದು, ನೀರಿನ ಸಮರ್ಪಕ ಹರಿವಿಗೆ ತೊಂದರೆಯಾಗಿದೆ. ಒತ್ತುವರಿಯನ್ನು ತೆರವುಗೊಳಿಸಿದರೆ ನೀರು ಸರಾಗವಾಗಿ ಹರಿಯಲಿದೆ. ಒತ್ತುವರಿ ತೆರವಿಗೆ ಬೆಂಗಳೂರು ನಾಗರಿಕರ ಪಾತ್ರವೂ ಬಹಳ ಮುಖ್ಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪುನರುಜ್ಜೀವನಕ್ಕೆ ಕೈಜೋಡಿಸಬೇಕು ಎಂದು ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಕೋರಿದ್ದಾರೆ.

ಈಗಾಗಲೇ ಸಂಸ್ಕರಿಸಿದ ನೀರಿನಿಂದ 15 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ 185 ಕೆರೆಗಳನ್ನು ಪುನಶ್ಚೇತನಗೊಳಿಸುವುದು ಜಲಮಂಡಳಿ ಗುರಿಯಾಗಿದೆ. ಹೂಳು ತೆಗೆಯುವುದು, ಸ್ವಚ್ಛ ನೀರು ತುಂಬಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. (ವರದಿ: ಎಚ್‌ ಮಾರುತಿ)

ಈ ವರ್ಷ ಉದ್ಯಾನ ನಗರಿ ಬೆಂಗಳೂರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಪರಿಣಾಮವಾಗಿ ಫೆಬ್ರವರಿ ತಿಂಗಳಿನಿಂದಲೇ ನಗರದ ಹಲವು ಕಡೆಗಳಲ್ಲಿ ನೀರಿಗೆ ಸಮಸ್ಯೆಯಾಗಿತ್ತು. ಬಿಬಿಎಂಪಿ ವ್ಯಾಪ್ತಿಯ ಹತ್ತಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯಿತು. ಬೋರ್‌ವೆಲ್‌ಗಳಲ್ಲಿ ನೀರು ಸ್ಥಗಿತಗೊಂಡ ಬಳಿಕ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಜನರಿಗೆ ಅಗತ್ಯಕ್ಕೆ ತಕ್ಕಂತೆ ನೀರು ನೀಡಲುವ ಸಲುವಾಗಿ ಹಲವು ಕ್ರಮಗಳನ್ನು

ಕೈಗೊಳ್ಳುತ್ತಲೇ ಬಂದಿದೆ.

Whats_app_banner