ಕನ್ನಡ ಸುದ್ದಿ  /  Karnataka  /  Bengaluru News Water Crisis Water Mafia In Bengaluru Reality Check Water Tanker Owners Illegal Water Supply In The City

Bengaluru Water Crisis: ಬೆಂಗಳೂರಿನಲ್ಲಿ ವಾಟರ್‌ ಮಾಫಿಯಾ ತಾಂಡವ; ನೀರಿನ ಬವಣೆ ನಡುವೆ ಅಕ್ರಮಕ್ಕಿಲ್ಲ ಕಡಿವಾಣ

ಬೆಂಗಳೂರಿನಲ್ಲಿ ಹನಿ ನೀರಿಗೂ ತಾತ್ವರವಿದೆ. ಜನರು ದೈನಂದಿನ ಬಳಕೆಗೂ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ನಡುವೆ ಮಹಾನಗರಿಯಲ್ಲಿ ವಾಟರ್‌ ಮಾಫಿಯಾ ಎಗ್ಗಿಲ್ಲದೇ ಸಾಗುತ್ತಿದೆ. ಸರ್ಕಾರಿ ನೋಂದಣಿ ಇಲ್ಲದೆ ಟ್ಯಾಂಕರ್‌ಗಳು ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೆ ಕಾನೂನು ನಿಯಮಗಳನ್ನೂ ಉಲ್ಲಂಘಿಸುತ್ತಿವೆ. (ವರದಿ: ಪ್ರಿಯಾಂಕ ಗೌಡ)

ಬೆಂಗಳೂರಿನಲ್ಲಿ ವಾಟರ್‌ ಮಾಫಿಯಾ ತಾಂಡವ; ನೀರಿನ ಬವಣೆ ನಡುವೆ ಅಕ್ರಮಕ್ಕಿಲ್ಲ ಕಡಿವಾಣ
ಬೆಂಗಳೂರಿನಲ್ಲಿ ವಾಟರ್‌ ಮಾಫಿಯಾ ತಾಂಡವ; ನೀರಿನ ಬವಣೆ ನಡುವೆ ಅಕ್ರಮಕ್ಕಿಲ್ಲ ಕಡಿವಾಣ

ಬೆಂಗಳೂರು: ಸಿಲಿಕಾನ್‌ ಸಿಟಿ, ಐಟಿ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಮಹಾನಗರಿ ಬೆಂಗಳೂರಿನಲ್ಲಿ ತೀವ್ರ ನೀರಿನ ಬಿಕ್ಕಟ್ಟು ಎದುರಾಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ದಿನನಿತ್ಯದ ಬಳಕೆಗೂ ನೀರಿಲ್ಲ ಎಂದು ಜನ ಒದ್ದಾಡುತ್ತಿದ್ದಾರೆ. ಟ್ಯಾಂಕರ್ ನೀರಿಗೆ ಕಾದರೂ ಸಿಗುತ್ತಿಲ್ಲ ಅನ್ನೋದು ನಾಗರಿಕರ ಅಳಲು. ಒಂದೆಡೆ ಇಲ್ಲಿನ ನಿವಾಸಿಗಳು ನೀರಿಗಾಗಿ ಪಡಿಪಾಟಲು ಪಡುತ್ತಿದ್ದರೆ, ಇನ್ನೊಂದೆಡೆ ನೀರು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ.

ಹೌದು, ನಗರದಲ್ಲಿ ನೆಲೆಸಿರುವ ಹಲವಾರು ಮಂದಿ ನೀರಿಲ್ಲದೆ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ, ಇದನ್ನೇ ಕೆಲವರು ಬಂಡವಾಳವಾಗಿಸಿಕೊಂಡಿದ್ದಾರೆ. ಅಕ್ರಮವಾಗಿ ಬೋರ್‌ವೆಲ್ ತೆಗೆಯುವುದರಿಂದ ಹಿಡಿದು ಲಾಭದಾಯಕ ಯೋಜನೆಗಳವರೆಗೆ, ನೀರು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ವಾಲ್‌ಮಾರ್ಟ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಹಲವಾರು ದೈತ್ಯ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಆತಿಥ್ಯ ವಹಿಸುವ, 14 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಬೆಂಗಳೂರು ನೆಲೆಯಾಗಿದೆ. ಪ್ರಸ್ತುತ, ದಿನನಿತ್ಯದ ಬಳಕೆಗೂ ನೀರು ಸಿಗದೆ ಇಲ್ಲಿನ ಜನತೆ ಒದ್ದಾಡುವಂತಾಗಿದೆ. ಕಳೆದ ಬಾರಿ ಮುಂಗಾರು ಮಳೆ ಸುರಿಯದೇ ಇದ್ದುದೇ ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ವ್ಯಾಪಕವಾದ ನಗರೀಕರಣದ ಜೊತೆಗೆ ಅಂತರ್ಜಲ, ಜಲಾಶಯಗಳು ಮತ್ತು ಹಸಿರು ಹೊದಿಕೆ ಕ್ಷೀಣಿಸುತ್ತಿರುವುದು ಕೂಡ ಪ್ರಮುಖ ಕಾರಣವಾಗಿದೆ.

ನಾಲ್ಕು ದಶಕಗಳಲ್ಲೇ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟು

ಕಳೆದ 30-40 ವರ್ಷಗಳಲ್ಲಿ, ನಾವು ಇಂತಹ ಬರವನ್ನು ಎಂದೂ ನೋಡಿರಲಿಲ್ಲ. ಹಿಂದೆ ಬರಗಾಲವಿದ್ದರೂ, ನಾವು ಇಷ್ಟು ದೊಡ್ಡ ಸಂಖ್ಯೆಯ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರಾಜ್ಯದ ರಾಜಧಾನಿಯಲ್ಲಿ ಕುಡಿಯುವ ನೀರಿನ ತೀವ್ರ ಕೊರತೆಯ ನಡುವೆ, ನೀರಿನ ಟ್ಯಾಂಕರ್ ಮಾಫಿಯಾದ ಕಾರ್ಯಾಚರಣೆ ಬಗ್ಗೆ ಇಂಡಿಯಾ ಟುಡೆ ತನಿಖೆಯಲ್ಲಿ ಬಹಿರಂಗವಾಗಿದೆ. ವಿಶೇಷವಾಗಿ ದಕ್ಷಿಣ ಬೆಂಗಳೂರಿನಲ್ಲಿ, ಸರ್ಕಾರಿ ನೋಂದಣಿ ಇಲ್ಲದೆ ಟ್ಯಾಂಕರ್‌ಗಳು ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೆ ಕಾನೂನು ಗಡಿಗಳನ್ನು ಉಲ್ಲಂಘಿಸುತ್ತಿದೆ ಎಂದು ತಿಳಿದು ಬಂದಿದೆ.

ಅಂತರ್ಜಲದ ದುರ್ಬಳಕೆ

ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ವಾಣಿಜ್ಯ ಸ್ಥಳದಲ್ಲಿ ಬೋರ್‌ವೆಲ್ ಅಳವಡಿಸಿರುವ ವ್ಯಕ್ತಿಯೊಬ್ಬರು, ಇದರಿಂದ ಲಾಭ ಪಡೆದಿರುವುದು ಕಂಡುಬಂದಿದೆ. ಆ ವ್ಯಕ್ತಿ 6,000 ಲೀಟರ್‌ಗೆ 600 ರೂಪಾಯಿಯಂತೆ ಕುಡಿಯಲು ಬೋರ್‌ವೆಲ್ ನೀರನ್ನು ನೀಡುತ್ತಿದ್ದು, ಸರ್ಕಾರದ ಹೊಸ ನಿಯಮಗಳ ಅಡಿಯಲ್ಲಿ ತನ್ನ ಟ್ಯಾಂಕರ್ ನೋಂದಣಿ ಮಾಡಿಸಿಲ್ಲ ಎಂಬುದು ತಿಳಿದುಬಂದಿದೆ.

ಸರ್ಕಾರ ಏನೇ ನಿಯಮಗಳನ್ನು ಜಾರಿಗೆ ತಂದರೂ ಇಂತಹ ಮಾಫಿಯಾಗಳು ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದಕ್ಕೆ ಈ ತನಿಖಾ ವರದಿ ಸಾಕ್ಷಿಯಾಗಿದೆ. ಕುಡಿಯುವ ನೀರಿನ ಬಳಕೆಯನ್ನು ಕಾರು ತೊಳೆಯಲು ಬಳಸಬಾರದು ಎಂಬಂತಹ ಆದೇಶಗಳಿದ್ದರೂ ಸಹ, ಇದಕ್ಕೆ ಕೆಲವರು ಖ್ಯಾರೆ ಎನ್ನುತ್ತಿಲ್ಲ. ಬೆಂಗಳೂರಿಗೆ ಸಮೀಪದಲ್ಲಿರುವ ಹಳ್ಳಿಗಳಲ್ಲೂ ಇದೇ ರೀತಿ ಕಂಡುಬಂದಿದೆ.

ಸ್ಥಳೀಯ ಅಧಿಕಾರಿಗಳಿಗೆ ಲಂಚ ಕೊಟ್ಟರೆ ಸುಲಭವಾಗಿ ಬೋರ್‌ವೆಲ್‌ಗಳನ್ನು ಅಗೆಯಬಹುದು ಎಂದು ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

ನಿರ್ಮಾಣಕ್ಕಾಗಿ ಬೋರ್‌ವೆಲ್‌ಗಳನ್ನು ಕೊರೆಯುವುದು

ಬೆಂಗಳೂರಿನ ನಿರ್ಮಾಣ ಯೋಜನೆಗಳಿಗೆ ಉತ್ತೇಜನ ನೀಡಲು ಅಕ್ರಮ ಬೋರ್‌ವೆಲ್ ಕೊರೆಯುವಿಕೆ ಬಗ್ಗೆ ವರದಿಯಾಗಿದೆ.

ಸರ್ಕಾರ ವಿಧಿಸಿದ ನಿಯಮಗಳ ಹೊರತಾಗಿಯೂ, ನಗರದ ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ಅಕ್ರಮ ಬೋರ್‌ವೆಲ್ ಕಾರ್ಯಾಚರಣೆಗಳು ಎಗ್ಗಿಲ್ಲದೆ ಮುಂದುವರಿದಿವೆ. ಲಂಚ ಕೊಟ್ಟರೆ ಯಾವುದೂ ಕಷ್ಟವಲ್ಲ. 20,000ದಿಂದ 25,000 ರೂ.ಗಳವರೆಗೆ ಹಣ ಪಾವತಿಸಿದ್ದೇವೆ. ಎರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ನಾವು ಎರಡರಿಂದ ಮೂರು ದಿನಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಿ, ನಂತರ ಹೊರಡುತ್ತೇವೆ ಎಂದು ವೈಟ್‌ಫೀಲ್ಡ್‌ನ ನಿರ್ಮಾಣ ಸ್ಥಳದಲ್ಲಿ ಬೋರ್‌ವೆಲ್ ಮೇಲ್ವಿಚಾರಕರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ತಿಳಿಸಿದೆ.

ಒಟ್ಟಾರೆ ನಗರದ ಜನತೆ ನೀರಿಗಾಗಿ ಸಂಕಷ್ಟ ಪಡುತ್ತಿದ್ದರೆ, ನೀರಿನ ಮಾಫಿಯಾಗಳು ಎಗ್ಗಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವುದು ಮಾತ್ರ ಕಳವಳಕಾರಿಯಾಗಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.

IPL_Entry_Point