ಬೆಂಗಳೂರಿನಲ್ಲಿ ಮೇ 18, 19ಕ್ಕೆ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ; ಆರೆಂಜ್ ಅಲರ್ಟ್ ಘೋಷಣೆ -Bengaluru Rain
ಬೆಂಗಳೂರು ನಗರವು ಜಲಾವೃತ ಮತ್ತು ಸಂಚಾರ ಸಮಸ್ಯೆಗಳಿಗೆ ಹೆಸರುವಾಸಿಯಾಗಿರುವುದರಿಂದ ಮುಂಬರುವ ಮಳೆಗಾಲವನ್ನು ಎದುರಿಸಲು ಬಿಬಿಎಂಪಿ ಮತ್ತು ಬೆಂಗಳೂರು ಸಂಚಾರ ಪೊಲೀಸರು ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ.

ಬೆಂಗಳೂರು: ಮೇ ತಿಂಗಳಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು (Bengaluru Rain), ಬಿಸಿ ಮಾಯವಾಗಿ ತಂಪಾದ ವಾತಾವರ ಇದೆ. ಇದರ ನಡುವೆಯೇ ವಾರಾಂತ್ಯದ ದಿನಗಳಾದ ನಾಳೆ (ಮೇ 18, ಶನಿವಾರ) ಮತ್ತು ನಾಡಿದ್ದು (ಮೇ 19 ಭಾನುವಾರ) ನಗರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಿದ್ದು, ಮುಂದಿನ ಎರಡು ದಿನಗಳವರೆಗೆ ಭಾರಿ ಮಳೆಯಾಗುವ (Heavy Rain Forecast) ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.
ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ವರ್ಷದ ಆರಂಭದಿಂದಲೂ ತೀವ್ರ ಬಿಸಿಯನ್ನು ಅನುಭವಿಸುತ್ತಿರುವುದರಿಂದ ಮಳೆಯು ಬೆಂಗಳೂರು ಮಂದಿಗೆ ಭಾರಿ ರಿಲೀಫ್ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಸಂಚಾರ ಪೊಲೀಸರು ಈಗಾಗಲೇ ಮುಂಬರುವ ಮಳೆಗಾಲವನ್ನು ಎದುರಿಸಲು ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಗುರುವಾರ ತಡರಾತ್ರಿ ಬೆಂಗಳೂರಿನಲ್ಲಿ ಭಾರಿ ಮಳೆ
ಕಳೆದೊಂದು ವಾರದಿಂದ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸತತವಾಗಿ ಮಳೆಯಾಗುತ್ತಿದೆ. ಆದರೆ ಮೇ 17ರ ಗುರುವಾರ ಬೆಳಗ್ಗೆಯಿಂದ ಸಂಜೆಯವರಿಗೆ ನಗರದಲ್ಲಿ ಮಳೆಯಾಗದೆ ಕೊಂಚ ರಿಲೀಫ್ ನೀಡಿತ್ತು. ಆದರೆ ಮೇ 17 ರ ತಡರಾತ್ರಿ ವರುಣ ಅಬ್ಬರಿಸಿದ್ದಾನೆ. ಭಾರಿ ಮಳೆಯಿಂದಾಗಿ ರಸ್ತೆಗಳ ತುಂಬೆಲ್ಲಾ ಮಳೆ ನೀರು ಉಕ್ಕಿ ಹರಿದಿದೆ. ರಾತ್ರಿಯಾಗಿದ್ದ ಕಾರಣ ಜನಸಾಮಾನ್ಯ ಹಾಗೂ ವಾಹನ ಸವಾರರು ಸಮಸ್ಯೆಯಾಗಿಲ್ಲ. ಮುಂಜಾನೆ 4 ರ ವರೆಗೆ ಮಳ ಸುರಿಯಿತು. ಎಂಜಿ ರಸ್ತೆ, ಶಿವಾಜಿನಗರ, ವಿಧಾನಸೌಧ, ಕಬ್ಬನ್ ಪಾರ್ಕ್, ವಸಂತನಗರ, ಕಂಟೋನ್ಮೆಂಟ್, ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಆರ್‌ಟಿ ನಗರ, ಜೆಸಿ ನಗರ, ದಿನ್ನೂರು, ಸುಲ್ತಾನ್ ಪಾಳ್ಯ, ಮೇಖ್ರಿ ಸರ್ಕಲ್ ಹಾಗೂ ಹೆಬ್ಬಾಳ ಸೇರಿದಂತೆ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ.
ರೆಡ್, ಆರೆಂಜ್, ಯೆಲ್ಲೋ ಅಲರ್ಟ್ ಎಂದರೇನು?
ರೆಡ್ ಅಲರ್ಟ್ ಎಂದರೆ 24 ಗಂಟೆಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚು ಭಾರಿ ಮಳೆಯಾಗುವುದನ್ನು ಸೂಚಿಸಿದರೆ, ಆರೆಂಜ್ ಅಲರ್ಟ್ ಎಚ್ಚರಿಕೆ ಎಂದರೆ ಅತಿ ಹೆಚ್ಚು ಮಳೆ (6 ಸೆಂ.ಮೀ ನಿಂದ 20 ಸೆಂ.ಮೀ). ಹಳದಿ ಎಚ್ಚರಿಕೆ ಎಂದರೆ 6 ರಿಂದ 11 ಸೆಂ.ಮೀ ನಡುವೆ ಭಾರಿ ಮಳೆಯ ಎಚ್ಚರಿಕೆಯಾಗಿದೆ.
ಆರ್‌ಸಿಬಿ-ಸಿಎಸ್‌ಕೆ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಪ್ಲೇ ಆಫ್ (Play Offs) ಪ್ರವೇಶಿಸಲು ಶನಿವಾರ (ಮೇ 18)ದ ಪಂದ್ಯ ಮಹತ್ವದ್ದಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆಯಲಿರುವ ಈ ಪಂದ್ಯಕ್ಕೆ ಮಳೆಯ ಭೀತಿ ಇದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಏಪ್ರಿಲ್ 18ರ ಶನಿವಾರ ಬೆಂಗಳೂರಿಗೆ ಮಳೆಯ ಮುನ್ಸೂಚನೆ ಇದೆ. ಹೀಗಾಗಿ ಪಂದ್ಯದಕ್ಕೆ ವರುಣ ಕೃಪೆ ತೋರುತ್ತಾ ಇಲ್ಲವೇ ಅನ್ನೋದನ್ನು ಕಾದು ನೋಡಬೇಕು. 2024ರ ಐಪಿಎಲ್‌ನಲ್ಲಿ ಈವರೆಗೆ ಆಡಿರುವ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋಲು ಕಂಡಿರುವ ಸಿಎಸ್‌ಕೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಆಡಿರುವ 13 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 7 ರಲ್ಲಿ ಸೋಲುಂಡಿರುವ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ 18 ರನ್‌ಗಳ ಅಂತರದಿಂದ ಗೆದ್ದರೆ ಐಪಿಎಲ್ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ.
