ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಜೆಡಿಎಸ್‌ ಮೈತ್ರಿಕೂಟದ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ವಿಶ್ಲೇಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಜೆಡಿಎಸ್‌ ಮೈತ್ರಿಕೂಟದ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ವಿಶ್ಲೇಷಣೆ

ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಜೆಡಿಎಸ್‌ ಮೈತ್ರಿಕೂಟದ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ವಿಶ್ಲೇಷಣೆ

ಒಂದು ವೇಳೆ ಈಗ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಜೆಡಿಎಸ್‌ ಮೈತ್ರಿಕೂಟ ಬಹುಮತ ಪಡೆಯುವುದೇ? ಹೌದು ಎನ್ನುತ್ತವೆ, ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶದ ವಿಶ್ಲೇಷಣೆ; ಹಾಗಾದರೆ ಎನ್‌ ಡಿ ಎ ಮತ್ತು ಕಾಂಗ್ರೆಸ್‌ ನಡೆಯುವ ಸ್ಥಾನಗಳೆಷ್ಟು ? (ವರದಿ: ಎಚ್‌. ಮಾರುತಿ)

ಬಿಜೆಪಿ ಜೆಡಿಎಸ್‌ ಮೈತ್ರಿಕೂಟ
ಬಿಜೆಪಿ ಜೆಡಿಎಸ್‌ ಮೈತ್ರಿಕೂಟ

ಬೆಂಗಳೂರು: ಒಂದು ವೇಳೆ ಈಗ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಜೆಡಿಎಸ್‌ ಮೈತ್ರಿಕೂಟ ಬಹುಮತ ಪಡೆಯುವುದೇ ? ಹೌದು ಎನ್ನುತ್ತದೆ ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶ. ಈಗ ವಿಧಾನಭೆಗೆ ಚುನಾವಣೆ ನಡೆದು ಬಿಜೆಪಿ ಜೆಡಿಎಸ್‌ ಮೈತ್ರಿಕೂಟ ಒಟ್ಟಾಗಿ ಚುನಾವಣೆ ಎದುರಿಸಿದರೆ 142 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅಂದರೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಸ್ಥಾನಗಳಿಗಿಂಲೂ ಹೆಚ್ಚು.

ಲೋಕಸಭಾ ಮತ್ತು ವಿಧಾನಸಭೆಗೆ ವಿಭಿನ್ನವಾಗಿ ಮತ ಚಲಾಯಿಸುತ್ತಾ ಬಂದಿರುವುದು ರಾಜ್ಯದ ಅಲಿಖಿತ ಸಂಪ್ರದಾಯ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳ ಮೂಲಕ ಭರ್ಜರಿ ಜಯ ದಾಖಲಿಸಿದೆ. ಆದರೆ ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ರಲ್ಲಿ 17ರಲ್ಲಿ ಜಯ ಸಾಧಿಸಿದ್ದರೆ ಜೆಡಿಎಸ್‌ 2 ಮತ್ತು ಕಾಂಗ್ರೆಸ್‌ 9 ರಲ್ಲಿ ಜಯ ಗಳಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ 14-15 ಲೋಕಸಭಾ ಸ್ಥಾನಗಳ ನಿರೀಕ್ಞೆಯಲ್ಲಿತ್ತು. ಸೋಲಿಗೆ ಕಾಂಗ್ರೆಸ್‌ ನ ಎಲ್ಲರ ಕೊಡುಗೆಯೂ ಇದೆ. 18 ಸಚಿವರು ತಮ್ಮ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಲೀಡ್‌ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಉದಾಹರಣೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಾವು ಪ್ರತಿನಿಧಿಸುವ ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯೂ ಆಗಿದ್ದ ತಮ್ಮ ಪುತ್ರಿ ಸೌಮ್ಯ ಅವರಿಗೆ ಹಿನ್ನೆಡೆಯಾಗಿದೆ. ಇಲ್ಲಿ ಬಿಜೆಪ;ಯ ತೇಜಸ್ವಿ ಸೂರ್ಯ 9000 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಇದೇ ರೀತಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಅಭ್ಯರ್ಥಿಯಾಗಿದ್ದರೂ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ 50 ಸಾವಿರ ಮತಗಳ ಮುನ್ನಡೆ ಪಡೆದಿದ್ದಾರೆ. ಇಡೀ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌ ಮೈತ್ರಿ ಶೇ.ನೂರರಷ್ಟು ವರ್ಕೌಟ್‌ ಆಗಿದೆ. ಉಭಯ ಪಕ್ಷಗಳ ಮತಗಳು ಪರಸ್ಪರ ವರ್ಗಾವಣೆಯಾಗಿರುವುದು ಎದ್ದು ಕಾಣುತ್ತಿದೆ. ತುಮಕೂರು ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಒಂದೂ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಲೀಡ್‌ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಚಾಮರಾಜನಗರ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಹಾಗೆಯೇ ರಾಯಚೂರು, ಬೀದರ್‌ ಮತ್ತು ಬಳ್ಳಾರಿಯ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸಾದನೆ ಉತ್ತಮವಾಗಿದೆ.

ಕುತೂಹಲಕಾರಿ ಅಂಶವೆಂದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನೆಡೆ ಸಾಧಿಸಿದೆ. ಹಾಗೆಯೇ ಹಿಂದುತ್ವದ ಪ್ರಬಲ ಪ್ರತಿಪಾದಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬಿಜಾಪುರ ಕ್ಷೇತ್ರದಲ್ಲೂ ಕಾಂಗ್ರೆಸ್‌ ಮತ ಗಳಿಕೆಯಲ್ಲಿ ಮುಂದಿದೆ.

ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಗಳಿಸಿದ ಲೀಡ್‌ ನಿಂದ ಲೋಕಸಭಾ ಕ್ಷೇತ್ರವನ್ನೇ ಗೆದ್ದ ಉದಾಹರಣೆಯೂ ನಮ್ಮ ಮುಂದಿದೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರ ನಾಲ್ಕನೇ ಗೆಲುವಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರ ನೀಡಿದ ಮುನ್ನಡೆಯೇ ಕಾರಣ. ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಲಿಂಬಾವಳಿ ಪ್ರತಿನಿಧಿಸುವ ಈ ಕ್ಷೇತ್ರ ಸುಮಾರು 1.14 ಲಕ್ಷ ಮತಗಳ ಲೀಡ್‌ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಸೋಲಿಗೆ ತಮ್ಮದೇ ಆದ ವಾದವನ್ನು ಮಂಡಿಸುತ್ತಾರೆ. ಹುಬ್ಬಳ್ಳಿಯ ನೇಹಾ ಗೌಡ ಅವರ ಕೊಲೆಯನ್ನು ರಾಜಕೀಯಗೊಳಿಸದಿದ್ದರೆ ಬಿಜೆಪಿ ಒಂದಂಕಿಯನ್ನು ದಾಟುತ್ತಿರಲಿಲ್ಲ ಎಂದು ವಿಶ್ಲೇಶಿಸುತ್ತಾರೆ. ಒಟ್ಟಾರೆ ಲೋಕಸಭೆ ಮತ್ತು ವಿಧಾನಸಭೆಗೆ ವಿಭಿನ್ನ ಪಕ್ಷಗಳನ್ನು ಆಯ್ಕೆ ಮಾಡುವ ರಾಜ್ಯದ ಮತದಾರರ ಸಂಪ್ರದಾಯ ಅನೂಚಾನವಾಗಿ ಮುಂದುವರೆದಿದೆ.

ವರದಿ: ಎಚ್‌. ಮಾರುತಿ

Whats_app_banner