ಬೆಂಗಳೂರು ಮೆಟ್ರೋ ನಗರ ಯಾಕಲ್ಲ, ಏನಿದು ಮೆಟ್ರೋ ಸ್ಥಾನಮಾನ, ಇದರಿಂದ ಯಾರಿಗೇನು ಪ್ರಯೋಜನ, Explainer
Metro City status to Bengaluru; ಬೆಂಗಳೂರಿಗೆ ಮೆಟ್ರೋ ನಗರ ಸ್ತಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹಾಗಾದರೆ ಮೆಟ್ರೋ ಸ್ಥಾನಮಾನ ಎಂದರೇನು? ಇದರಿಂದ ಬೆಂಗಳೂರಿನ ನಿವಾಸಿಗಳಿಗೆ ಆಗುವ ಲಾಭಗಳಾದರೂ ಏನು? ಇಲ್ಲಿದೆ ನಿಮ್ಮ ಸಂದೇಹಗಳಿಗೆ ಉತ್ತರ. (ವಿವರ ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮೆಟ್ರೋ ನಗರ ಸ್ಥಾನಮಾನ ನೀಡುವ ಯಾವುದೇ ಯೋಜನೆ ಅಥವಾ ಪ್ರಸ್ತಾಪ ಸರಕಾರದ ಮುಂದಿಲ್ಲ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಇತ್ತೀಚೆಗೆ ಮುಗಿದ ರಾಜ್ಯಸಬಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದರು.
ಹೆಚ್ಚಿನ ನಗರಗಳಿಗೆ ಮೆಟ್ರೋ ನಗರಗಳ ಸ್ಥಾನಮಾನ ನೀಡುವುದು ಮತ್ತು ಅಂತಹ ನಗರಗಳಿಗೆ ಮನೆ ಬಾಡಿಗೆ ಭತ್ಯೆ (ಎಚ್.ಆರ್. ಎ) ಮೇಲೆ ಹೆಚ್ಚಿನ ವಿನಾಯಿತಿ ಮಿತಿಯ ಲಾಭವನ್ನು ವಿಸ್ತರಿಸುವುದು ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂಬ ಕಾರಣ ನೀಡಿದ್ದರು.
1962ರ ಆದಾಯ ತೆರಿಗೆ ನಿಯಮಗಳ ಪ್ರಕಾರ ದೆಹಲಿ, ಕೋಲ್ಕತ್ತ, ಚೆನ್ನೈ ನಗರಗಳನ್ನು ಮಾತ್ರ ಮೆಟ್ರೋ ನಗರಗಳು ಎಂದು ಪರಿಗಣಿಸಲಾಗುತ್ತಿದೆ. ಈ ನಗರಗಳಲ್ಲಿ ವಾಸ ಮಾಡುವವವರು ತೆರಿಗೆ ಪಾವತಿಸಬಹುದಾದ ತಮ್ಮ ವೈಯಕ್ತಿಕ ಆದಾಯದಲ್ಲಿ ಎಚ್. ಆರ್. ಎ. ರೂಪದಲ್ಲಿ ಶೇ.50ರಷ್ಟು ವಿನಾಯಿತಿ ಪಡೆಯಲು ಅವಕಾಶವಿದೆ. ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ಈ ಮಿತಿ ಶೇ.40ರಷ್ಟಿದೆ ಎಂದೂ ಸಚಿವರು ಸ್ಪಷ್ಟಪಡಿಸಿದ್ದರು.
ಮೆಟ್ರೋ ನಗರಗಳ ವ್ಯಾಪ್ತಿಗೆ ಬೆಂಗಳುರು ಮಹಾ ನಗರವನ್ನು ಸೇರ್ಪಡೆ ಮಾಡಿದರೆ ಇಲ್ಲಿನ ಆದಾಯ ತೆರಿಗೆದಾರರು ಇತರ ಮೆಟ್ರೋ ನಗರಗಳಂತೆಯೇ ಎಚ್. ಆರ್.ಎ ವಿನಾಯಿತಿ ಪಡೆಯಲು ಸಾದ್ಯವಾಗುತ್ತದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರೂ ಸಹ 2022ರ ಡಿಸೆಂಬರ್ ನಲ್ಲಿಯೇ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಬೆಂಗಳೂರು ನಗರವನ್ನು ಮೆಟ್ರೋ ನಗರಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಪಡಿಸಿದ್ದರು.
ಮೆಟ್ರೋ ಸ್ಥಾನಮಾನದಿಂದ ಯಾರಿಗೆ ಏನು ಪ್ರಯೋಜನ
ಈ ಯೋಜನೆಯಿಂದ ಬೆಂಗಳೂರು ನಿವಾಸಿಗಳಿಗೆ ಆಗುವ ಲಾಭವೇನು ಎಂದು ನೋಡೋಣ
ತಜ್ಞರ ಪ್ರಕಾರ ಈ ಯೋಜನೆಯಿಂದ ವೇತನ ಪಡೆಯುವ ಮತ್ತು ಆದಾಯ ಪಾವತಿಸುವವರಿಗೆ ಹೆಚ್ಚಿನ ಲಾಭವಾಗುತ್ತದೆ. ಆ ಮೂಲಕ. ಶೇ.50ರಷ್ಟು ಎಚ್ ಆರ್ ಎ ಲಾಭ ಪಡೆದುಕೊಳ್ಳುತ್ತಾರೆ.
ಜನಗಣತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಗ್ರಾಮೀಣ, ಪಟ್ಟಣ, ನಗರ ಮತ್ತು ಮೆಟ್ರೋ ನಗರ ಎಂದು ವರ್ಗೀಕರಿಸಲಾಗಿದೆ. ಆದರೆ ಈ ನಿಯಮಗಳನ್ನು ಅಷ್ಟಾಗಿ ಪಾಲಿಸುತ್ತಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ಕಾಲಕಾಲಕ್ಕೆ ಸ್ಣಾನಮಾನಗಳು ಬದಲಾಗಬೇಕು. ಆದರೆ ಆಗುತ್ತಿಲ್ಲ
ಎಂದು ನಗರ ತಜ್ಞರು ಪ್ರತಿಪಾದಿಸುತ್ತಾರೆ. ದೇಶದಲ್ಲಿ 1960ರ ಸಾಲಿನ ಆದಾಯ ತೆರಿಗೆ ನಿಯಮಗಳಿಗನುಸಾರವಾಗಿ ವರ್ಗೀಕರಣ ಮಾಡಲಾಗಿದೆ. ಆದರೆ ಈಗ ಆದಾಯ ತೆರಿಗೆ ನಿಯಮಗಳನ್ನೇ ಮರು ವರ್ಗೀಕರಿಸಬೇಕಾಗುತ್ತದೆ . ಇದು ಕಷ್ಟ ಸಾಧ್ಯ ಎನ್ನುತ್ತಾರೆ.
ದಶಕಗಳ ಹಿಂದೆಯೇ ಜನಸಂಖ್ಯೆ ಆಧಾರದ ಮೇಲೆ ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ ನಗರಗಳಿಗೆ ಮೆಟ್ರೋ ನಗರಗಳು ಎಂಬ ಸ್ಥಾನಮಾನ ನೀಡಲಾಗಿದೆ. ಜನಸಂಖ್ಯೆ ಬೆಳೆದಿರುವುದನ್ನು ಗಮನಿಸಿದರೆ ಬೆಂಗಳೂರಿಗೂ ಈ ಸ್ಥಾನಮಾನ ನೀಡಲೇಬೇಕು.
ಬೆಂಗಳೂರು ಮೆಟ್ರೋ ನಗರ ಅಲ್ಲ ಎನ್ನುವುದಾದರೆ ಏನು ಅರ್ಥ?
ಬೆಂಗಳೂರು ಅತಿ ಹೆಚ್ಚು ತೆರಿಗೆದಾರರನ್ನು ಹೊಂದಿರುವ ನಗರ ಮತ್ತು ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ನಗರ ಅಲ್ಲವೇ ಎಂದೂ ಅವರು ಪ್ರಶ್ನಿಸುತ್ತಾರೆ. ಮೆಟ್ರೋ ನಗರ ಸ್ತಾನಮಾನದಿಂದ ಎಚ್ ಆರ್ ಎ ಜೊತೆಗೆ ಮೆಟ್ರೋಪಾಲಿಟಿನ್ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಲಿದ್ದು, ನಾಗರೀಕರ ಸೇವೆಗಾಗಿ ಉತ್ತಮ ಆಡಳಿತ ವ್ಯವಸ್ಥೆ ರೂಪುಗೊಳ್ಳುತ್ತದೆ.ಇದೂ ಸಹ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿರುತ್ತದೆ.
ಕೇಂದ್ರ ಸರ್ಕಾರ ತೆರಿಗೆ ಪದ್ದತಿಯನ್ನು ಹೆಚ್ಚಿಸುತ್ತಿದೆಯೇ ಹೊರತು ರಿಯಾಯಿತಿಗಳನ್ನು ನೀಡುತ್ತಿಲ್ಲ. ಅದಕ್ಕಾಗಿಯೇ ಬೆಂಗಳೂರುಗೆ ಮೆಟೋ ಗರಿ ಸಿಗುತ್ತಿಲ್ಲ ಎಂದೂ ಐಟಿ ಉದ್ಯೋಗಿಗಳು ಅಭಿಪ್ರಾಯಪಡುತ್ತಾರೆ. ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಗಳು ಸರಕಾರಕ್ಕೆ ಗಣನೀಯ ಪ್ರಮಾಣದಲ್ಲಿ ಆದಾಯ ನೀಡುತ್ತಿದ್ದು, ಒಂದಿಷ್ಟು ಪ್ರಮಾಣವನ್ನು ಸರ್ಕಾರ ಅವರಿಗೆ ಹಿಂತಿರುಗಿಸಬೇಕು ಎಂದು ಆಗ್ರಹಪಡಿಸುತ್ತಾರೆ. ಮೆಟ್ರೋ ಸ್ಥಾನಮಾನಕ್ಕೆ ಪಕ್ಷ ಭೇದ ಮರೆತು, ರಾಜಕೀಯ ಪಕ್ಷಗಳು ಜನಪ್ರತಿನಿಧಿಗಳು, ಮತ್ತು ಹೋರಾಟಗಾರರು ಹಾಠ ರೂಪಿಸಬೇಕಾದ ಅಗತ್ಯವಿದೆ.
(ವಿವರ ವರದಿ- ಎಚ್.ಮಾರುತಿ, ಬೆಂಗಳೂರು)