ಮಹಾಲಕ್ಷ್ಮೀ ಕೊಂದು 50 ಪೀಸ್ ಮಾಡಿ ಪ್ರಿಡ್ಜ್​ನಲ್ಲಿಟ್ಟಿದ್ದೇಕೆ; ಆರೋಪಿ ಡೆತ್​ನೋಟ್​ನಲ್ಲಿತ್ತು ರೋಚಕ ಕಹಾನಿ!
ಕನ್ನಡ ಸುದ್ದಿ  /  ಕರ್ನಾಟಕ  /  ಮಹಾಲಕ್ಷ್ಮೀ ಕೊಂದು 50 ಪೀಸ್ ಮಾಡಿ ಪ್ರಿಡ್ಜ್​ನಲ್ಲಿಟ್ಟಿದ್ದೇಕೆ; ಆರೋಪಿ ಡೆತ್​ನೋಟ್​ನಲ್ಲಿತ್ತು ರೋಚಕ ಕಹಾನಿ!

ಮಹಾಲಕ್ಷ್ಮೀ ಕೊಂದು 50 ಪೀಸ್ ಮಾಡಿ ಪ್ರಿಡ್ಜ್​ನಲ್ಲಿಟ್ಟಿದ್ದೇಕೆ; ಆರೋಪಿ ಡೆತ್​ನೋಟ್​ನಲ್ಲಿತ್ತು ರೋಚಕ ಕಹಾನಿ!

Mahalakshmi Murder Case: ಬೆಂಗಳೂರಿನಲ್ಲಿ ನಡೆದ ಮಹಾಲಕ್ಷ್ಮೀ ಹತ್ಯೆಗೆ ಸಂಬಂಧಿಸಿ ಕೊಲೆಗೆ ಕಾರಣ ಬಹಿರಂಗವಾಗಿದೆ. ಹತ್ಯೆಗೈದ ಆರೋಪಿ ಡೆತ್​​ನೋಟ್​ನಲ್ಲಿ ವಿವರವಾಗಿ ಬರೆದಿಟ್ಟಿದ್ದಾನೆ. ಇಲ್ಲಿದೆ ನೋಡಿ ಅದರ ವಿವರ.

ಮಹಾಲಕ್ಷ್ಮೀ ಕೊಲೆ ಪ್ರಕರಣ
ಮಹಾಲಕ್ಷ್ಮೀ ಕೊಲೆ ಪ್ರಕರಣ

ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್​ ವ್ಯಾಪ್ತಿಯಲ್ಲಿ ನಡೆದ ಮಹಾಲಕ್ಷ್ಮೀ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆಗೆ ಕಾರಣ ಏನೆಂಬುದು ಕೊನೆಗೂ ಬೆಳಕಿಗೆ ಬಂದಿದೆ. ನೇಪಾಳ ಮೂಲಕ ಕನ್ನಡತಿಯನ್ನು ಬರ್ಬರವಾಗಿ ಕೊಲೆಗೈದಿದ್ದ ಆರೋಪಿ ಮುಕ್ತಿ ರಂಜನ್ ರಾಯ್​ ಒಡಿಶಾದಲ್ಲಿ ನೇಣಿಗೆ ಶರಣಾದರೂ ಹತ್ಯೆಗೆ ಕಾರಣ ಏನೆಂಬುದನ್ನು ಬರೆದಿಟ್ಟಿದ್ದಾನೆ. ಅಲ್ಲದೆ, ಮನೆಯಲ್ಲಿ ಅಮ್ಮನಿಗೂ ಈ ಘಟನೆಯ ಕುರಿತು ತಿಳಿಸಿದ್ದಾನೆ.

ಪ್ರಕರಣ ದಾಖಲಾದ ನಂತರ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬೆನ್ನತ್ತಿದ ಪೊಲೀಸರು, ಹಂತನ ಜಾಡು ಹಿಡಿದು ಒಡಿಶಾಗೆ ಹೊರಟರು. ಈ ಕೇಸ್​ ತನಿಖೆಗೆ ಒಟ್ಟು 8 ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಒಂದು ತಂಡ ಒಡಿಶಾಗೆ, ಮತ್ತೊಂದು ಪಶ್ಚಿಮ ಬಂಗಾಳಕ್ಕೆ ಹೋಗಿತ್ತು. ಮುಕ್ತಿ ರಂಜನ್, ತನ್ನ ಸಹೋದರನೊಂದಿಗೆ ಹೆಬ್ಬಗೋಡಿಯಲ್ಲಿ ವಾಸ ಇದ್ದ. ಹತ್ಯೆಯ ನಂತರ ಸಹೋದರನಿಗೆ ರೂಮ್ ಖಾಲಿ ಮಾಡುವಂತೆ ಹೇಳಿ ಬೈಕ್​ ಮೂಲಕವೇ ಒಡಿಶಾಗೆ ಹೋಗಿದ್ದ.

ಆದರೆ ವೈಯಾಲಿಕಾವಲ್ ಪೊಲೀಸರು, ಹಂತಕನ ಸಹೋದರನನ್ನು ವಿಚಾರಣೆ ನಡೆಸಿದಾಗ ತನ್ನ ಅಣ್ಣನೇ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದರು. ಆರೋಪಿ ಒಡಿಶಾದಲ್ಲಿರುವ ಮಾಹಿತಿ ಪಡೆದ ಪೊಲೀಸರು, ಅಲರ್ಟ್ ಆದರು. ಆದರೆ, ಬೆಂಗಳೂರು ಪೊಲೀಸರು ಬಂಧನಕ್ಕೆ ಹೋಗುವಷ್ಟರಲ್ಲಿ ರಂಜನ್ ನೇಣಿಗೆ ಶರಣಾಗಿದ್ದ. ಸೆ. 25 ರಂದು ಒಡಿಶಾದ ಭದ್ರಕ್ ನಗರದಲ್ಲಿ ಮುಕ್ತಿ ರಂಜನ್, ಸ್ಮಶಾನದಲ್ಲಿ ಮರವೊಂದಕ್ಕೆ ನೇಣಿಗೆ ಶರಣಾಗಿದ್ದರು.

ಪ್ರಮುಖ ಆರೋಪಿಯೇ ಸೂಸೈಡ್ ಮಾಡಿಕೊಂಡ ಕಾರಣ ಮುಕ್ತಿ ರಂಜನ್ ರಾಯ್ ಯಾರು? ಮಹಾಲಕ್ಷ್ಮೀಯನ್ನು ಏಕೆ ಕೊಂದರು? ಕೊಲೆಗೆ ಕಾರಣವೇನು? ಎಂದು ತಿಳಿದುಕೊಳ್ಳಲು ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಆರೋಪಿಯ ಡೈರಿ ಹಾಗೂ ಡೆತ್ ನೋಟ್​​ ಮೂಲಕ ಉತ್ತರ ಸಿಕ್ಕಿತು. ಮುಕ್ತಿ ರಂಜನ್, ಫಂಡಿ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮೀ ಕೂಡ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.

ಡೆತ್ ನೋಟ್​ನಲ್ಲಿ ಬರೆದಿದ್ದೇನು?

ರಂಜನ್ ತನ್ನ ಡೆತ್ ನೋಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾನೆ... ನಾನು ಸೆಪ್ಟೆಂಬರ್ 3ರಂದು ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ್ದೆ. ಅಂದು ನಾನು ಮಹಾಲಕ್ಷ್ಮೀ ಮನೆಗೆ ಹೋಗಿದ್ದೆ. ನಾವು ಯಾವುದೋ ವಿಷಯಕ್ಕೆ ಜಗಳವಾಡಿದೆವು. ಆಗ ಮಹಾಲಕ್ಷ್ಮೀ ನನ್ನ ಮೇಲೆ ಹಲ್ಲೆ ನಡೆಸಿದಳು. ಇದು ನನ್ನ ಕೋಪಕ್ಕೆ ಕಾರಣವಾಯಿತು. ಅದೇ ಕೋಪದಲ್ಲಿ ನಾನು ಆಕೆಯನ್ನು ಕೊಂದಿದ್ದೇನೆ. ನಂತರ ದೇಹವನ್ನು 59 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್​​ನಲ್ಲಿಟ್ಟೆ. ವಾಸನೆ ಬಾರದಂತೆ ಮನೆ ಸ್ವಚ್ಛಗೊಳಿಸಿ ಅಲ್ಲಿಂದ ಓಡಿ ಹೋದೆ. ಮಹಾಲಕ್ಷ್ಮಿಯ ನಡತೆ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನಂತರ ಕೊಲೆಯ ಬಗ್ಗೆ ವಿಷಾದಿಸುತ್ತೇನೆ. ಯಾಕೆಂದರೆ ನಾನು ಕೋಪದಲ್ಲಿ ಏನು ಮಾಡಿದರೂ ಅದು ತಪ್ಪು ತಪ್ಪೇ. ನನಗೆ ಭಯವಾಗಿ ನಾನು ಇಲ್ಲಿಗೆ ಓಡಿದೆ ಎಂದು ಬರೆದಿದ್ದಾನೆ.

ಒಂದು ದಿನದ ಹಿಂದೆ ಮನೆಗೆ ಬಂದಿದ್ದ

ಒಡಿಶಾದ ಫಂಡಿ ಗ್ರಾಮದ ನಿವಾಸಿ ಮುಕ್ತಿ ರಂಜನ್ ಅವರು ಹಿಂದಿನ ದಿನ ಅಂದರೆ ಸೆಪ್ಟೆಂಬರ್ 24 ರಂದು ಮನೆಗೆ ಬಂದಿದ್ದರು. ಕೆಲಕಾಲ ಮನೆಯಲ್ಲೇ ಇದ್ದು ರಾತ್ರಿ ಸ್ಕೂಟಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಅವರು ಲ್ಯಾಪ್‌ಟಾಪ್‌ನೊಂದಿಗೆ ಹೊರಟುಹೋದರು. ನಂತರ ಅವರು ಎಲ್ಲಿಗೆ ಹೋದರು ಎಂಬುದು ಯಾರಿಗೂ ತಿಳಿದಿಲ್ಲ. ಮರುದಿನ ಕುಲೇಪದ ಎಂಬ ಹೆಸರಿನ ಸ್ಮಶಾನದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ಸದ್ಯ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ದುಶಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಬೆಂಗಳೂರು ಪೊಲೀಸರು ಮಹಾಲಕ್ಷ್ಮಿ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಸೆಪ್ಟೆಂಬರ್ 2ರ ರಾತ್ರಿ (ಸೆಪ್ಟೆಂಬರ್ 3ರ ದಿನ) ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ 29 ವರ್ಷದ ಮಹಾಲಕ್ಷ್ಮೀ ಎಂಬವರು ಬರ್ಬರವಾಗಿ ಕೊಲೆಯಾದರು. ಇಲ್ಲಿ ಇಂತಹ ಭೀಕರ ಘಟನೆ ನಡೆದಿದೆ ಎಂಬ ಸುಳಿವೂ ಯಾರಿಗೂ ಇರಲಿಲ್ಲ. ಆದರೆ, ಹಲವು ದಿನಗಳಿಂದ ಮಹಾಲಕ್ಷ್ಮೀ ಮೊಬೈಲ್ ಸ್ವಿಚ್ ಆಫ್ ಆಗಿದ್ದದ್ದು ಆಕೆಯ ತಾಯಿಯ ಅನುಮಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಈ ಅನುಮಾನದ ನಡುವೆ ಮನೆ ಮಾಲೀಕರು, ಮಹಾಲಕ್ಷ್ಮೀ ತಾಯಿ ಮೀನಾ ರಾಣಾಗೆ ಕಾಲ್ ಮಾಡಿ, ಮನೆ ಒಳಗಿನಿಂದ ದರ್ವಾಸನೆ ಬರುತ್ತಿದೆ ಎಂದು ಹೇಳಿದ್ದರು. ಅದರಂತೆ, ಮೀನಾ ಸೆಪ್ಟೆಂಬರ್ 21ರಂದು ಮಗಳ ಮನೆ ಬಾಗಿಲು ಒಡೆದು ಒಳ ಹೊಕ್ಕಿ ನೋಡಿದಾಗ ದುರಂತ ಬೆಳಕಿಗೆ ಬಂದಿತ್ತು.

ಕೋಣೆಯಲ್ಲಿ ರಕ್ತದ ಕಲೆಗಳು, ಮಾಂಸದ ಸಣ್ಣ ತುಂಡುಗಳು ಮತ್ತು ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಿ ನಿಲ್ಲಲೂ ಕಷ್ಟವಾಗುವಷ್ಟು ವಾಸನೆ ಬರುತ್ತಿತ್ತು. ಫ್ರಿಡ್ಜ್ ಬಳಿ ರಕ್ತದ ಕಲೆಗಳು ಕಾಣಿಸಿತು. ಹೀಗಾಗಿ ಫ್ರಿಜ್‌ ತೆರೆದರು. ಫ್ರಿಡ್ಜ್‌ನ ಬಾಗಿಲು ತೆರೆದ ತಕ್ಷಣ ಅವರ ತಾಯಿ ಜೋರಾಗಿ ಕಿರುಚಿಬಿಟ್ಟರು. ಒಳಗೆ 50 ಪೀಸ್​​ಗಳಿದ್ದವು. ಕೆಳಗೆ ಮಹಾಲಕ್ಷ್ಮಿಯ ಕತ್ತರಿಸಿದ ತಲೆ ಇತ್ತು. ತಾಯಿಯ ಕಿರುಚಾಟ ಕೇಳಿ ಅಕ್ಕಪಕ್ಕದವರು ಅಲ್ಲಿಗೆ ಓಡಿ ಬಂದರು. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.