ಕನ್ನಡ ಸುದ್ದಿ  /  Karnataka  /  Bengaluru News Woman Kills Two Year Old Daughter Tries To Die By Suicide In Bengaluru Crime News Mrt

Bengaluru Crime: ಕೆಆರ್‌ ಪುರಂನಲ್ಲಿ ಕೋಳಿ ಜಗಳಕ್ಕೆ 2 ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಆರ್‌ ಪುರಂನಲ್ಲಿ ಕೋಳಿ ಜಗಳಕ್ಕೆ 2 ವರ್ಷದ ಮಗುವನ್ನು ಕೊಂದ ತಾಯಿ, ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂಬುದು ನೆನಪಿರಲಿ. (ವರದಿ-ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ
ಬೆಂಗಳೂರು ಅಪರಾಧ ಸುದ್ದಿ

ಬೆಂಗಳೂರಿನಲ್ಲಿ ನಡೆದ ಎರಡು ಆತ್ಮಹತ್ಯೆ ಪ್ರಕರಣಗಳಲ್ಲಿ ನಾಲ್ವರು ಬಲಿಯಾಗಿದ್ದಾರೆ. ಮೊದಲ ಪ್ರಕರಣದಲ್ಲಿ ಸಾಲದ ಸುಳಿಗೆ ಸಿಲುಕಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೌಟುಂಬಿಕ ಜಗಳ ಮತ್ತು ಅನಾರೋಗ್ಯ ಸಮಸ್ಯೆಯಿಂದಾಗಿ ಗೃಹಿಣಿಯೊಬ್ಬರು ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ಆಂಧ್ರ ಪ್ರದೇಶ ಮೂಲದ ಲಕ್ಷ್ಮೀನಾರಾಯಣ ಮತ್ತು ಚಿನ್ನಾ ಎಂಬ ದಂಪತಿ ನೆಲೆಸಿದ್ದರು. ಇವರಿಗೆ 2 ವರ್ಷದ ಶೃತಿಕಾ ಎಂಬ ಮಗು ಇತ್ತು. ದಂಪತಿಗಳ ನಡುವೆ ಸದಾ ಜಗಳ ನಡೆಯುತ್ತಿತ್ತು. ಜೊತೆಗೆ ಚಿನ್ನಾ ಅವರಿಗೆ ಆರೋಗ್ಯದ ಸಮಸ್ಯೆಯೂ ಕಾಡುತ್ತಿತ್ತು. ಇದರಿಂದ ಬೇಸತ್ತ ಚಿನ್ನಾ ತನ್ನ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ ತಾನೂ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ಚಿನ್ನಾ ಅವರು ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಪತ್ನಿ ಜಗಳ ತೆಗೆಯುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು. ಬುದ್ದಿಮಾತು ಹೇಳಿದಾಗ ಸುಮ್ಮನಾಗುತ್ತಿದ್ದರು ಎಂದು ಪತಿ ಲಕ್ಷ್ಮೀನಾರಾಯಣ ಹೇಳಿಕೆ ನೀಡಿದ್ದಾರೆ. ಪತಿಯು ದೇವಸ್ಥಾನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಮಗುವನ್ನು ಕೊಂದ ನಂತರ ಚಿನ್ನಾ ತನ್ನ ಪತಿಗೆ ಮೊಬೈಲ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಕೂಡಲೇ ಲಕ್ಷ್ಮೀನಾರಾಯಣ ನೆರೆಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿ ಮನೆಗೆ ಹೋಗಿ ನೋಡಲು ಕೇಳಿಕೊಂಡಿದ್ದಾರೆ. ಆದರೆ ಅವರು ಬಂದು ನೋಡುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಆ ವೇಳೆಗೆ ಪತ್ನಿಯೂ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದರು. ಆದರೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಿಂದ ಬದುಕುಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಲದ ಸುಳಿಗೆ ಸಿಕ್ಕ ಕುಟುಂಬ, ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ

ಮತ್ತೊಂದು ಪ್ರಕರಣದಲ್ಲಿ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ 53 ವರ್ಷದ ಸುಕನ್ಯಾ ವಿಜಯಾನಂದ್, ಅವರ ಅವಳಿ ಮಕ್ಕಳಾದ 28 ವರ್ಷದ ನಿಖಿತ್ ಮತ್ತು ನಿಶ್ಚಿತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಬುಧವಾರ ಬೆಳ್ಳಂಬೆಳಗ್ಗೆ 8 ಗಂಟೆಯ ವೇಳೆಗೆ ಕೊಠಡಿಯೊಂದರಲ್ಲಿ ಮೂವರೂ ಬೆಂಕಿ ಹಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುಕನ್ಯಾ ಅವರ ಪತಿ ವಿಜಯಾನಂದ್ ದಿನಪತ್ರಿಕೆ ಓದುತ್ತಿದ್ದರು. ರೂಮ್ ನಿಂದ ಹೊಗೆ ಬರುತ್ತಿದ್ದಂತೆ ವಿಜಯಾನಂದ್ ಬಾಗಿಲು ತೆರೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಒಳಗಡೆಯಿಂದ ಬಾಗಿಲಿನ ಚಿಲಕವನ್ನು ಹಾಕಿಕೊಂಡಿದ್ದರಿಂದ ತೆರೆಯಲು ಸಾಧ್ಯವಾಗಿಲ್ಲ. ಇವರು ನೆರೆಮನೆಯವರ ಸಹಾಯದಿಂದ ಬಾಗಿಲನ್ನು ಒಡೆದು ಒಳಗೆ ಹೋಗುವಷ್ಟರಲ್ಲಿ ಮೂವರೂ ಸುಟ್ಟು ಕರಕಲಾಗಿದ್ದರು.

ಉಡುಪಿ ಮೂಲದ ಇವರು ಬೆಂಗಳೂರಿನಲ್ಲಿ ಆಗಮಿಸಿ ಜೆಪಿ ನಗರದ ಮೂರನೇ ಹಂತದ ೬ನೇ ಮುಖ್ಯ ರಸ್ತೆಯಲ್ಲಿ ವಾಸವಾಗಿದ್ದರು. ವಿಜಯಾನಂದ್ ಅವರು ಸುದ್ದಗುಂಟೆಪಾಳ್ಯದಲ್ಲಿ ಬಣ್ಣ ಹಾಕುವ ಕಾರ್ಖಾನೆಯೊಂದನ್ನು ನಡೆಸುತ್ತಿದ್ದರು. ನಷ್ಟ ಉಂಟಾಗಿದ್ದರಿಂದ ಕಳೆದ ವರ್ಷ ಕಾರ್ಖಾನೆಯನ್ನು ಮುಚ್ಚಿದ್ದರು. ವಿಕಲಾಂಗರಾದ ನಿಶ್ಚಿತ್ ಎಂಸಿಎ ಪದವೀಧರರಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿಖಿತ್ ಕಂಪ್ಯೂಟರ್ ಅನಿಮೇಷನ್ ಕೋರ್ಸ್ ಮಾಡಿಕೊಂಡು ಮುಂಬೈನಲ್ಲಿ ಉದ್ಯೋಗಿಯಾಗಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಅವರು ಬೆಂಗಳೂರಿಗೆ ಮರಳಿದ್ದರು. ಸುಕನ್ಯಾ ಅವರು ಸಂಜೆಯ ವೇಳೆ ಮಕ್ಕಳಿಗೆ ಮನೆಪಾಠದ ತರಗತಿಗಳನ್ನು ನಡೆಸುತ್ತಿದ್ದರು. ಈ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಬಲ್ಲ ಮೂಲಗಳ ಪ್ರಕಾರ ಇವರು ಖಾಸಗಿ ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದರು ಇವರ ಬ್ಯಾಂಕ್ ಸಾಲ 1 ಲಕ್ಷಕ್ಕಿಂತ ಹೆಚ್ಚಿಗೆ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬೇರೆ ಮೂಲಗಳಿಂದ ಸಾಲ ಪಡೆದಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಗಮನಿಸಿ, ಆತ್ಮಹತ್ಯೆ ಎಂಬುದು ಯಾವುದೇ ಸಮಸ್ಯೆಗೂ ಪರಿಹಾರ ಅಲ್ಲ…

ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ಕೂಡಲೇ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯುವುದನ್ನು ಮರೆಯಬೇಡಿ.

ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

(ವರದಿ-ಎಚ್.ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point