ಬೆಂಗಳೂರಿನಲ್ಲಿ ತೆಲುಗು ಭಾಷಿಕರಿಗೆ ‘ವರ್ಕ್ ಫ್ರಂ ಹೋಮ್ʼ ಉದ್ಯೋಗ, ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ತೆಲುಗು ಭಿತ್ತಿಪತ್ರಗಳು
ಕರ್ನಾಟಕದ ಹೃದಯ ಭಾಗವಾದ ಬೆಂಗಳೂರಿನ ಬೀದಿಗಳಲ್ಲಿ "ತೆಲುಗು ಭಾಷೆ ಬಲ್ಲವರಿಗೆ ಮಾತ್ರ ಉದ್ಯೋಗ" ಎಂಬ ಭಿತ್ತಿಪತ್ರಗಳು ರಾರಾಜಿಸುತ್ತಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಲಸಂದ್ರದ ವಿವಿಧೆಡೆ ಅಂಟಿಸಲಾಗಿರುವ ಇಂತಹ ಬೋರ್ಡ್‌ಗಳ ಫೋಟೋಗಳನ್ನು ಓದುಗರಾದ ವಿಶ್ವನಾಥ್ ಅವರು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ಕ್ಕೆ ಕಳಿಸಿದ್ದಾರೆ.

ಬೆಂಗಳೂರು: ಕರ್ನಾಟಕದ ಹೃದಯ ಭಾಗವಾದ ಬೆಂಗಳೂರಿನ ಬೀದಿಗಳಲ್ಲಿ "ತೆಲುಗು ಭಾಷೆ ಬಲ್ಲವರಿಗೆ ಮಾತ್ರ ಉದ್ಯೋಗ" ಎಂಬ ಭಿತ್ತಿಪತ್ರಗಳು ರಾರಾಜಿಸುತ್ತಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ "ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ, ಉದ್ಯೋಗಗಳು ಅನ್ಯಭಾಷಿಕರ ಪಾಲಾಗುತ್ತಿದೆ" "ಕನ್ನಡಿಗರಿಗೆ ಉದ್ಯೋಗ ಪ್ರಾತಿನಿಧ್ಯ ಹೆಚ್ಚಬೇಕು" "ಬೆಂಗಳೂರಿನಲ್ಲಿ ಕನ್ನಡಿಗರಿಗೆ ಕೆಲಸವಿಲ್ಲ" ಎಂಬ ಕೂಗು, ಹೋರಾಟಗಳ ನಡುವೆ "ತೆಲುಗು ಭಾಷೆ ಬಲ್ಲವರಿಗೆ ಮಾತ್ರ ಉದ್ಯೋಗ" ಎಂಬ ಪೋಸ್ಟರ್‌ಗಳನ್ನು ಬೀದಿಬೀದಿಗಳಲ್ಲಿ ರಾಜಾರೋಷವಾಗಿ ಅಂಟಿಸಲಾಗಿದೆ. ಚಿಕ್ಕಲಸಂದ್ರದ ವಿವಿಧೆಡೆ ಅಂಟಿಸಲಾಗಿರುವ ಇಂತಹ ಬೋರ್ಡ್‌ಗಳ ಫೋಟೋಗಳನ್ನು ಓದುಗರಾದ ವಿಶ್ವನಾಥ್ ಅವರು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ಕ್ಕೆ ಕಳಿಸಿದ್ದಾರೆ.
ಮನೆಯಿಂದ ಕೆಲಸ ಮಾಡಿ, ತೆಲುಗು ಭಾಷಿಕರಿಗೆ ಮಾತ್ರ ಅವಕಾಶವಿದೆ. ತಿಂಗಳಿಗೆ 20ರಿಂದ 40 ಸಾವಿರ ರೂಪಾಯಿವರೆಗೆ ವೇತನ ಇರುತ್ತದೆ ಎಂಬರ್ಥದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಯಾವುದಾದರೂ ತೆಲುಗು ಕುಟುಂಬದ ಸೇವೆಗೆ, ಮನೆಕೆಲಸಕ್ಕೆ ಇರುವ ಉದ್ಯೋಗವಾಗಿದ್ದರೆ ಯಾರ ತಕರಾರು ಇರುತ್ತಿರಲಿಲ್ಲ. ಹತ್ತನೇ ತರಗತಿ, ಇಂಟರ್‌ಮೀಡಿಯೇಟ್, ಪದವಿ, ಎಂಬಿಎ, ಬಿಟೆಕ್ ಮುಂತಾದ ಶಿಕ್ಷಣ ಪಡೆದವರಿಗೆ ಇರುವ ವರ್ಕ್ ಫ್ರಮ್ ಹೋಮ್ ಉದ್ಯೋಗದ ಕುರಿತಾದ ಜಾಹೀರಾತು ಇದಾಗಿದೆ. ಬೆಂಗಳೂರಿನಲ್ಲಿ ಉದ್ಯೋಗಾವಕಾಶದ ನಿರೀಕ್ಷೆಯಲ್ಲಿರುವರ ಮುಖಕ್ಕೆ ಹೊಡೆದಂತೆ ಇಂತಹ ಜಾಹೀರಾತುಗಳು ಹೆಚ್ಚುತ್ತಿವೆ ಎಂದು ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾಕೆ ತೆಲುಗು ಭಾಷಿಕರಿಗೆ ಮಾತ್ರ ಉದ್ಯೋಗ?
ಪೋಸ್ಟರ್‌ನಲ್ಲಿ ನೀಡಲಾದ ಸಂಖ್ಯೆಗೆ ಕರೆ ಮಾಡಿದಾಗ ದೀಪಿಕಾ ದೀಪು ಎಂಬವರು ಕರೆ ಸ್ವೀಕರಿಸಿದ್ದಾರೆ. ಯಾಕೆ ಈ ಉದ್ಯೋಗ ತೆಲುಗು ಭಾಷಿಕರಿಗೆ ಮಾತ್ರ. ಕನ್ನಡ, ತಮಿಳು, ಹಿಂದಿ, ಉರ್ದು, ಮಲಯಾಳಂ ಭಾಷೆ ಗೊತ್ತಿರುವವರು ಅರ್ಜಿ ಸಲ್ಲಿಸಬಾರದೇ? ಎಂದು ಕೇಳಿದಾಗ ಆ ಕಡೆಯಿಂದ ಅರ್ಧಂಬರ್ಧ ಕನ್ನಡದಲ್ಲಿ "ಹೌದು, ಇದು ತೆಲುಗು ಮಾತನಾಡಲು ಬರುವವರಿಗೆ ಮಾತ್ರ ಇರುವ ಉದ್ಯೋಗ. ತೆಲುಗು ಮಾತನಾಡಲು ಬರಬೇಕು. ತೆಲುಗು ಟೈಪಿಂಗ್ ಮಾಡಲು ಬರಬೇಕು. ತೆಲುಗು ಗೊತ್ತಿದ್ರೆ ಮಾತ್ರ ಕೆಲಸ" ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ. "ಈ ಮೂಲಕ ಈ ಉದ್ಯೋಗವು ತಮಿಳು, ಕನ್ನಡ ಭಾಷೆ ಗೊತ್ತಿದ್ದವರಿಗೆ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
