ವಾರಾಂತ್ಯ, ಯುಗಾದಿ ಹಬ್ಬದ ರಜೆ; 2000 ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಿದೆ ಕೆಎಸ್‌ಆರ್‌ಟಿಸಿ, ಬೀಳಲಿದೆಯೇ ಖಾಸಗಿ ಬಸ್ ಸುಲಿಗೆಗೆ ಕಡಿವಾಣ
ವಾರಾಂತ್ಯ, ಯುಗಾದಿ ಹಬ್ಬದ ರಜೆ ಬಂದಿರುವ ಕಾರಣ ರಾಜ್ಯದ ನಾನಾ ಭಾಗಗಳಿಗೆ ಮತ್ತು ಹೊರ ರಾಜ್ಯಗಳಿಗೂ ಸಂಪರ್ಕ ಒದಗಿಸುವಂತೆ 2000ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಿದೆ ಕೆಎಸ್‌ಆರ್‌ಟಿಸಿ ಮತ್ತು ಇತರೆ ಸಾರಿಗೆ ಸಂಸ್ಥೆಗಳು. ಈ ಮೂಲಕ ಖಾಸಗಿ ಬಸ್ ಗಳ ಸುಲಿಗೆಗೆ ಕಡಿವಾಣ ಬೀಳಲಿದೆಯೇ ಎಂಬುದು ಸದ್ಯದ ಕುತೂಹಲ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಯುಗಾದಿ ಹಬ್ಬಕ್ಕೆ ವಿವಿಧ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಿಗೆ ಬೆಂಗಳೂರಿನಿಂದ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸಾರಿಗೆಯ ನಾಲ್ಕು ಸಾರಿಗೆ ನಿಗಮಗಳಿಂದ ಸಾರ್ವಜನಿಕರ ಅನುಕೂಲಕ್ಕಾಗಿ 2000ಕ್ಕೂ ಹೆಚ್ಚು ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಏಪ್ರಿಲ್ 6ರಿಂದ 8ರ ವರೆಗೆ ಬೆಂಗಳೂರಿನಿಂದ ಬಸ್‌ಗಳು ವಿವಿಧ ಸ್ಥಳಗಳಿಗೆ ತೆರಳಲಿವೆ.
ಹಾಗೆಯೇ ಏಪ್ರಿಲ್ 9 ಮತ್ತು 10ಕ್ಕೆ ಅಷ್ಟೇ ಸಂಖ್ಯೆಯ ಬಸ್‌ಗಳು ಬೆಂಗಳೂರಿಗೆ ಹಿಂತಿರುಗಲಿವೆ. ವಾರಾಂತ್ಯ ಮತ್ತು ಯುಗಾದಿ ಹಬ್ಬ ಎರಡೂ ಸಾಲು ಸಾಲಾಗಿ ಬಂದಿದ್ದು ಬೆಂಗಳೂರಿನಿಂದ ಗರಿಷ್ಠ ಪ್ರಮಾಣದಲ್ಲಿ ಸಾರ್ವಜನಿಕರು ತಮ್ಮ ತಮ್ಮ ಊರುಗಳಿಗೆ ತೆರಳಲಿದ್ದಾರೆ.
ವಾರಂತ್ಯದ ಶನಿವಾರ ಭಾನುವಾರದ ರಜೆಯ ಜೊತೆಗೆ ಸೋಮವಾರ ಒಂದು ದಿನ ರಜೆ ತೆದುಕೊಂಡರೆ ಒಟ್ಟಿಗೆ 4 ದಿನ ರಜೆ ಸಿಗುತ್ತದೆ. ಕೆಲವರು ಹಬ್ಬ ಆಚರಿಸಲು ಊರುಗಳಿಗೆ ಹೋದರೆ ಇನ್ನೂ ಕೆಲವರಿಗೆ ಪ್ರವಾಸ ತೆರಳಲು ಉತ್ತಮ ಅವಕಾಶ. ಈ ಹಿನ್ನೆಲೆಯಲ್ಲಿ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.
2000 ಕ್ಕೂ ಹೆಚ್ಚು ಬಸ್ ವ್ಯವಸ್ಥೆ, ಯಾವ ಸಾರಿಗೆ ಸಂಸ್ಥೆ ಎಷ್ಟು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 1,750, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಆರ್‌ಟಿಸಿ) 145, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ(ಕೆಕೆಆರ್‌ಟಿಸಿ) 200, ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ)180 ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ.
ಪ್ರಯಾಣಿಕರ ಅನುಕೂಲಕ್ಕಾಗಿ ಕೆ ಎಸ್ ಆರ್ ಟಿ ಸಿ ಈ ಬಾರಿ ಎಲ್ಲ ಮಾದರಿಯ ಬಸ್ ಗಳನ್ನು ಒದಗಿಸಲಿದೆ. ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್, ಸ್ಲೀಪರ್, ಇ.ವಿ. ಪವರ್ ಪ್ಲಸ್,ಅಂಬಾರಿ ಉತ್ಸವ್ ಅಂಬಾರಿ ಕ್ಲಬ್ ಕ್ಲಾಸ್ ಮತ್ತು ಪಲ್ಲಕ್ಕಿ ಬಸ್‌ಗಳು ರಸ್ತೆಗಿಲಿಯಲಿವೆ ಎಂದು ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್‌ಗಳು ವಿವಿಧ ಮಾರ್ಗಗಳತ್ತ ಹೊರಡಲಿವೆ. ಬೆಂಗಳೂರಿನಿಂದ ಬೆಳಗಾವಿ, ವಿಜಯಪುರ, ಕಾರವಾರ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಶಿವಮೊಗ್ಗ, ಮಡಿಕೇರಿ ಮುಂತಾದ ಸ್ಥಳಗಳಿಗೆ ಹೊರಡಲಿದೆ ಎಂದು ಸಾರಿಗೆ ಸಂಸ್ಥೆ ಹೇಳಿದೆ.
ಹೊರರಾಜ್ಯಗಳಿಗೂ ಇದೆ ಹೆಚ್ಚುವರಿ ಬಸ್
ನೆರೆರಾಜ್ಯಗಳ ಪ್ರಮುಖ ನಗರಗಳಾದ ಶಿರಡಿ, ಪುಣೆ, ಎರ್ನಾಕುಲಂ, ಪಾಲ್ಘಾಟ್, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ತಿರುಚಿನಾಪಳ್ಳಿ, ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್ ಹಾಗೂ ಸೇಲಂ ಸೇರಿ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜೊತೆಗೆ ಖಾಸಗಿ ಟ್ರಾವೆಲ್ಸ್ ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ಆದರೆ ಬಸ್ ಪ್ರಯಾಣ ದರ ಎರಡು ಮೂರು ಪಟ್ಟು ಹೆಚ್ಚು ವಿಧಿಸಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ 500 ರೂಪಾಯಿ ಪ್ರಯಾಣ ಇದ್ದರೆ ಈಗ 1500 ರೂಪಾಯಿವರೆಗೆ ಏರಿಸಿ ಪ್ರಯಾಣಿಕರ ಸುಲಿಗೆ ಮಾಡುತ್ತವೆ. ಸಾರಿಗೆ ಇಲಾಖೆ ಗೊತ್ತಿದ್ದೂ ಕಣ್ಮುಚ್ಚಿ ಕುಳಿತಿರುತ್ತದೆ. ಈ ಬಾರಿಯಾದರೂ ಸರ್ಕಾರ ಪ್ರಯಾಣಿಕರ ನೆರವಿಗೆ ನಿಲ್ಲಲಿದೆಯೇ ಎಂದು ಸದ್ಯದ ಕುತೂಹಲ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
