ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಶೂನ್ಯ ನೆರಳು ದಿನ ನಾಳೆ; ಏನಿದು ವಿದ್ಯಮಾನ, ಎಷ್ಟು ಗಂಟೆಗೆ, ಯಾವೆಲ್ಲ ನಗರಗಳಲ್ಲಿ ನಡೆಯುತ್ತೆ ಇಲ್ಲಿದೆ ವಿವರ

ಬೆಂಗಳೂರಲ್ಲಿ ಶೂನ್ಯ ನೆರಳು ದಿನ ನಾಳೆ; ಏನಿದು ವಿದ್ಯಮಾನ, ಎಷ್ಟು ಗಂಟೆಗೆ, ಯಾವೆಲ್ಲ ನಗರಗಳಲ್ಲಿ ನಡೆಯುತ್ತೆ ಇಲ್ಲಿದೆ ವಿವರ

ಬೆಂಗಳೂರಲ್ಲಿ ನಾಳೆ ಶೂನ್ಯ ನೆರಳು ದಿನ (Zero Shadow Day in Bengaluru) ವಿದ್ಯಮಾನ ನಡೆಯಲಿದೆ. ಈ ಕೌತುಕ ವೀಕ್ಷಣೆಗೆ ಜೊತೆಯಾಗುವಂತೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಎಲ್ಲರನ್ನೂ ತನ್ನ ಕ್ಯಾಂಪಸ್‌ಗೆ ಆಹ್ವಾನಿಸಿದೆ. ಏನಿದು ವಿದ್ಯಮಾನ, ಎಷ್ಟು ಗಂಟೆಗೆ, ಯಾವೆಲ್ಲ ನಗರಗಳಲ್ಲಿ ನಡೆಯುತ್ತೆ ಇಲ್ಲಿದೆ ವಿವರ ವರದಿ.

ಬೆಂಗಳೂರಲ್ಲಿ ಶೂನ್ಯ ನೆರಳು ದಿನ ನಾಳೆ (ಏಪ್ರಿಲ್ 24) ಮಧ್ಯಾಹ್ನ ನಡೆಯಲಿದೆ. ಇಲ್ಲಿರುವುದು ಹಳೆಯ ಶೂನ್ಯ ನೆರಳು ದಿನದ ಚಿತ್ರಗಳು.
ಬೆಂಗಳೂರಲ್ಲಿ ಶೂನ್ಯ ನೆರಳು ದಿನ ನಾಳೆ (ಏಪ್ರಿಲ್ 24) ಮಧ್ಯಾಹ್ನ ನಡೆಯಲಿದೆ. ಇಲ್ಲಿರುವುದು ಹಳೆಯ ಶೂನ್ಯ ನೆರಳು ದಿನದ ಚಿತ್ರಗಳು. (@arjun_jayadev/ @IIABengaluru)

ಬೆಂಗಳೂರು: ನೆತ್ತಿ ಮೇಲೆ ಬಿಸಿಲು ಬಿದ್ದರೆ ನೆರಳು ಕಾಣಿಸುತ್ತಾ? ಎಂಬುದನ್ನು ತಿಳಿಯುವ ಕುತೂಹಲವಿದ್ದರೆ, ಅಂಥದ್ದೊಂದು ಸನ್ನಿವೇಶ ಬೆಂಗಳೂರು ಮತ್ತು ಮಂಗಳೂರಿಗರಿಗೆ ನಾಳೆ (ಏಪ್ರಿಲ್ 24) ಎದುರಾಗಲಿದೆ. ಹೌದು ಬೆಂಗಳೂರು, ಮಂಗಳೂರು, ಕನ್ಯಾಕುಮಾರಿ, ಭೋಪಾಲ, ಹೈದರಾಬಾದ್ ಮುಂಬಯಿಗಳಲ್ಲಿ ಬುಧವಾರ (ಏಪ್ರಿಲ್ 24) ಮಧ್ಯಾಹ್ನ “ಶೂನ್ಯ ನೆರಳು ದಿನ” (Zero Shadow Day) ವಿದ್ಯಮಾನ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಈ ಸಂಬಂಧ ಕೆಲವು ಟ್ವೀಟ್ ಮಾಡಿದ್ದು, ಈ ವಿದ್ಯಮಾನ ವೀಕ್ಷಣೆಗೆ ಜೊತೆಯಾಗುವಂತೆ ಎಲ್ಲರನ್ನೂ ಆಹ್ವಾನಿಸಿದೆ. ಈ ವಿದ್ಯಮಾನವು ಮಧ್ಯಾಹ್ನ 12: 17 ರಿಂದ 12.23ರ ನಡುವೆ ನಡೆಯಲಿದ್ದು, ಸೂರ್ಯನ ಸ್ಥಾನವು ನಿಖರ ಉತ್ತುಂಗದಲ್ಲಿ ಇರಲಿದೆ. ಆಗ ನೆರಳು ಕಾಣಿಸುವುದಿಲ್ಲ ಎಂದು ಅದು ಹೇಳಿದೆ.

ಏನಿದು ಶೂನ್ಯ ನೆರಳು ದಿನ

ಸೂರ್ಯನು ನೇರವಾಗಿ ನಡು ನೆತ್ತಿ ಮೇಲೆ ಬಂದಾಗ ಶೂನ್ಯ ನೆರಳು ಅಂದರೆ ನೆರಳು ಬೀಳದೇ ಇರುವ ವಿದ್ಯಮಾನ ಸಂಭವಿಸುತ್ತದೆ. ಈ ಅವಧಿಯಲ್ಲಿ ಯಾವುದೇ ವಸ್ತುವಿನ ನೆರಳು ಭೂಮಿ ಮೇಲೆ ಬೀಳುವುದಿಲ್ಲ. ಸಾಮಾನ್ಯವಾಗಿ ಇಂತಹ ವಿದ್ಯಮಾನವು ಸಮಭಾಜಕದ ಸಮೀಪ ಇರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಈ ಪ್ರದೇಶಗಳಲ್ಲಿ ಸೂರ್ಯನ ಕೋನವು ಭೂಮಿಯ ಮೇಲ್ಮೈಗೆ ಬಹುತೇಕ ಲಂಬವಾಗಿರುತ್ತದೆ. ಇದರ ಪರಿಣಾಮವಾಗಿ, ವಸ್ತುಗಳಿಗೆ ನೆರಳು ಇರುವುದಿಲ್ಲ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ವಿವರಿಸಿದೆ.

ಭೂಮಿಯು ಸೂರ್ಯನ ಸುತ್ತ ಸುತ್ತುವಾಗ, ಆಕಾಶದಲ್ಲಿ ತನ್ನ ಪಥವನ್ನು ಬದಲಾಯಿಸುತ್ತದೆ. ವರ್ಷದ ವಿವಿಧ ಸಮಯಗಳಲ್ಲಿ ವಿವಿಧ ಅಕ್ಷಾಂಶಗಳಲ್ಲಿ ಸೂರ್ಯ ತನ್ನ ಉತ್ತುಂಗ ತಲುಪುವುದು ಇದೆ. ಋತುಗಳ ಬದಲಾವಣೆ ಇದನ್ನು ಅನುಸರಿಸಿಯೇ ನಡೆಯುತ್ತದೆ. ಇಂತಹ ಚಲನೆಯು ಸೂರ್ಯನು ಸಮಭಾಜಕದ 23.5 ಡಿಗ್ರಿ ದಕ್ಷಿಣದಿಂದ 23.5 ಡಿಗ್ರಿ ಉತ್ತರಕ್ಕೆ ಹೋಗುವಂತೆ ಮಾಡುತ್ತದೆ. ಇದು ವಾರ್ಷಿಕವಾಗಿ ನಡೆಯುವ ಪ್ರಕ್ರಿಯೆ. ಈ ಚಲನೆಯ ವೇಳೆ, 23.5 ಮತ್ತು -23.5 ಡಿಗ್ರಿ ಅಕ್ಷಾಂಶಗಳ ನಡುವೆ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ ಎಂದು ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಹೇಳಿದೆ.

ಎಲ್ಲೆಲ್ಲಿ, ಯಾವ ದಿನ ಎಷ್ಟು ಹೊತ್ತಿಗೆ ಶೂನ್ಯ ನೆರಳು ದಿನ

ಕನ್ಯಾಕುಮಾರಿ: ಏಪ್ರಿಲ್ 10 ಮತ್ತು ಸೆಪ್ಟೆಂಬರ್ 1 (ಸ್ಥಳೀಯ ಕಾಲಮಾನ 12: 21 ಮತ್ತು 12: 22)

ಬೆಂಗಳೂರು: ಏಪ್ರಿಲ್ 24 ಮತ್ತು ಆಗಸ್ಟ್ 18 ( ಸ್ಥಳೀಯ ಕಾಲಮಾನ 12: 17 ಮತ್ತು 12: 25)

ಹೈದರಾಬಾದ್: ಮೇ 9 ಮತ್ತು ಆಗಸ್ಟ್ 5 ( ಸ್ಥಳೀಯ ಕಾಲಮಾನ 12: 12 ಮತ್ತು 12: 19 )

ಮುಂಬಯಿ: ಮೇ 15 ಮತ್ತು ಜೂನ್ 27 (ಸ್ಥಳೀಯ ಕಾಲಮಾನ 12: 34 ಮತ್ತು 12: 45)

ಭೋಪಾಲ: ಜೂನ್ 13 ಮತ್ತು ಜೂನ್ 28 (ಸ್ಥಳೀಯ ಕಾಲಮಾನ 12: 20 ಮತ್ತು 12: 23)

ಬೆಂಗಳೂರಲ್ಲಿ ಶೂನ್ಯ ನೆರಳು ದಿನ

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ತನ್ನ ಕೋರಮಂಗಲ ಕ್ಯಾಂಪಸ್‌ನಲ್ಲಿ ಏಪ್ರಿಲ್ 24ರಂದು ಶೂನ್ಯ ನೆರಳು ದಿನ ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯೋಜಿಸಿದ್ದು, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಆಹ್ವಾನಿಸಿದೆ. ಇದರಲ್ಲಿ ಭಾಗವಹಿಸುವವರು ಸೂರ್ಯನ ಚಲನೆಗೆ ಅನುಗುಣವಾಗಿ ವಸ್ತುಗಳ ಬದಲಾಗುತ್ತಿರುವ ನೆರಳಿನ ಉದ್ದವನ್ನು ವೀಕ್ಷಿಸಬಹುದು ಮತ್ತು ಅಳೆಯಬಹುದು ಮತ್ತು ಸೂರ್ಯನ ಸುತ್ತ ಭೂಮಿಯ ಓರೆ ಮತ್ತು ಕಕ್ಷೆಯ ಒಳನೋಟಗಳನ್ನು ಪಡೆಯಬಹುದು ಎಂದು ಅದು ತಿಳಿಸಿದೆ.

IPL_Entry_Point