ಬೆಂಗಳೂರಿನ ಮೂಲಸೌಕರ್ಯ ಅಧೋಗತಿಗೆ ಇಳಿದಿದೆ, ಇಲ್ಲಿ ಒಂದು ಕಾನ್ಸರ್ಟ್ ಮಾಡುವುದಕ್ಕೆ ಸ್ಥಳವಿಲ್ಲ- ಕೃಷ್ಣ ಭಟ್ ಬರಹ
ಬೆಂಗಳೂರಿನ ಮೂಲಸೌಕರ್ಯ ಅದೆಂಥಾ ಅಧೋಗತಿಗೆ ಇಳಿದಿದೆ ಎಂದರೆ, ಒಂದೂಕಾಲು ಕೋಟಿ ಜನರಿರುವ ಬೆಂಗಳೂರಿನಲ್ಲಿ ಒಂದೆರಡು ಲಕ್ಷ ಜನರನ್ನು ಸೇರಿಸಿ ಒಂದು ಕಾನ್ಸರ್ಟ್ ಮಾಡುವುದಕ್ಕೆ ಸ್ಥಳವಿಲ್ಲ ಅಂದರೆ ನೀವು ನಂಬಲೇಬೇಕು ಎಂದು ಕೃಷ್ಣ ಭಟ್ ಬರೆದಿದ್ದಾರೆ. ಅದಕ್ಕೆ ಕಾರಣವಾದ ಅಂಶಗಳನ್ನು ಅವರು ಇಲ್ಲಿ ವಿವರಿಸಿದ್ದಾರೆ.

ಕೃಷ್ಣ ಭಟ್ ಬರಹ: ಬೆಂಗಳೂರಿನ ಮೂಲಸೌಕರ್ಯ ಅದೆಂಥಾ ಅಧೋಗತಿಗೆ ಇಳಿದಿದೆ ಎಂದರೆ, ಒಂದೂಕಾಲು ಕೋಟಿ ಜನರಿರುವ ಬೆಂಗಳೂರಿನಲ್ಲಿ ಒಂದೆರಡು ಲಕ್ಷ ಜನರನ್ನು ಸೇರಿಸಿ ಒಂದು ಕಾನ್ಸರ್ಟ್ ಮಾಡುವುದಕ್ಕೆ ಸ್ಥಳವಿಲ್ಲ ಅಂದರೆ ನೀವು ನಂಬಲೇಬೇಕು! ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಕೋಲ್ಡ್‌ಪ್ಲೇ ಕಾನ್ಸರ್ಟ್ ಆಯ್ತು. ಅದಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಹೋಗಿದ್ದು ಬೆಂಗಳೂರಿನಿಂದ! ಮುಂಬೈನಲ್ಲಿ ನಡೆದ ಶೋಗೂ ಕೂಡಾ ಹಾಗೇ... ಯಾಕೆ ಅವರು ಬೆಂಗಳೂರಿನಲ್ಲಿ ಶೋ ಮಾಡಲಿಲ್ಲ ಅಂತ ವಿಚಾರಿಸಿದರೆ, ಅವರಿಗೆ ಅಷ್ಟು ಜನ ಸೇರುವ ಒಂದು ಸ್ಥಳವೇ ಸಿಗಲಿಲ್ಲ!
ಕಳೆದ ಹತ್ತು ವರ್ಷದಲ್ಲಿ ದೊಡ್ಡ ದೊಡ್ಡ ಸಂಗೀತ ಕಲಾವಿದರ, ಅಂತಾರಾಷ್ಟ್ರೀ ಬ್ಯಾಂಡ್‌ಗಳ ಕಾನ್ಸರ್ಟ್‌ಗಳಾಗಲೀ, ಲಕ್ಷಗಟ್ಟಲೆ ಜನಸೇರಿದ ಬೇರೆ ಯಾವುದಾದರೂ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಗಿದ್ದು ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ! ಇದಕ್ಕೆ ಕಾರಣ ಇಷ್ಟೇ... ಬೆಂಗಳೂರಿನಲ್ಲಿ ಒಂದು ಬೃಹತ್ ಮನರಂಜನೆ ಕಾರ್ಯಕ್ರಮ ಮಾಡುವುದಕ್ಕೆ 1-2 ಲಕ್ಷ ಜನರನ್ನು ಸೇರಿಸುವುದಕ್ಕೆ ಸರಿಯಾದ ಸ್ಥಳವೇ ಇಲ್ಲ! ಕಳೆದ ತಿಂಗಳು ಪಂಜಾಬಿ ಗಾಯಕ ದಿಲ್ಜಿತ್ ದೊಸಾಂಜ್ ಕಾರ್ಯಕ್ರಮವೇ ಬಹುಶಃ ಇದ್ದುದರಲ್ಲಿ ದೊಡ್ಡ ಕಾರ್ಯಕ್ರಮ ಆಗಿತ್ತು.
ಕೋಲ್ಡ್‌ಪ್ಲೇ ಹೋಗಲಿ... ನಮ್ಮದೇ ಎ ಆರ್ ರೆಹಮಾನ್ ದೊಡ್ಡ ಮಟ್ಟದಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು ಸುಮಾರು ದಶಕವೇ ಆಯಿತೇನೋ! ರೆಹಮಾನ್ ಸಂಗೀತ ಕಾರ್ಯಕ್ರಮ ಎಂದರೆ ಅದಕ್ಕೆ ಲಕ್ಷಗಟ್ಟಲೆ ಜನ ಸೇರುತ್ತಾರೆ. ಹಾಗೆ ಲಕ್ಷಗಟ್ಟಲೆ ಜನ ಸೇರಿಸದೇ ಇದ್ದರೆ, ಅವರಿಗೆ ಅಷ್ಟು ದೊಡ್ಡ ಕಲಾವಿದರ ದಂಡನ್ನು ಕರೆದುಕೊಂಡು ಬಂದು ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಲಾಭವೂ ಆಗದು. 2018 ರಲ್ಲಿ ಒಮ್ಮೆ ಕಾರ್ಯಕ್ರಮ ಮಾಡಿದ್ದು ಬಿಟ್ಟರೆ, ಕಳೆದ ವರ್ಷ ಚೆನ್ನೈಯಲ್ಲಿ ಕಾರ್ಯಕ್ರಮ ಮಾಡುವುದಕ್ಕೂ ಮೊದಲು ಬೆಂಗಳೂರಿನಲ್ಲೂ ಅಂಥದ್ದೇ ಸಂಗೀತ ಕಾರ್ಯಕ್ರಮ ಮಾಡುವ ಪ್ರಯತ್ನ ನಡೆಸಿದ್ದರಂತೆ. ಆದರೆ, ಅವರಿಗೆ ಬೆಂಗಳೂರಿನಲ್ಲಿ ಸ್ಥಳವೇ ಸಿಗಲಿಲ್ಲ ಎಂದು ಸುಮ್ಮನಾದರಂತೆ!
ಇದು ಒಂದು ರೀತಿ ಬೆಂಗಳೂರಿನಂಥ ಸಿಟಿಗೆ ಅವಮಾನದ ಸಂಗತಿ...! ಒಂದು ಜನಪ್ರಿಯ ಕಲಾವಿದ ಕಾನ್ಸರ್ಟ್ ಮಾಡಿದರೆ ಲಕ್ಷಗಟ್ಟಲೆ ಜನರನ್ನು ಸೇರಿಸಲಾಗುತ್ತದೆ. ಹಾಗೆ ಲಕ್ಷಗಟ್ಟಲೆ ಜನ ಸೇರಿದರೆ ಮಾತ್ರ ಕಾರ್ಯಕ್ರಮ ಆಯೋಜನೆ ಮಾಡಿದವರಿಗೆ ವರ್ಕೌಟ್ ಆಗುತ್ತೆ. ಕಾರ್ಯಕ್ರಮ ನಡೆಯುವ ಸ್ಥಳ ವಿಮಾನ ನಿಲ್ದಾಣದಿಂದ ಸುಲಭವಾಗಿ ತಲುಪುವ ಹಾಗೆ ಇರಬೇಕು. ಸಮೀಪದಲ್ಲಿ 5 ಸ್ಟಾರ್ ಹೋಟೆಲ್‌ಗಳು ಇರಬೇಕು. ಯಾಕೆಂದರೆ, ಅಂತಾರಾಷ್ಟ್ರೀಯ ಕಲಾವಿದರು ಬಂದರೆ ಅವರ ಜೊತೆಗೆ ಹಿನ್ನೆಲೆ ಕಲಾವಿದರ ಒಂದು ತಂಡವೇ ಬರುತ್ತದೆ. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಬೇಕಾಗುತ್ತದೆ. ಅದೆಲ್ಲದರ ಜೊತೆಗೆ, ಯಾವುದೇ ಕಿರಿಕಿರಿ ಇಲ್ಲದೇ ಪೊಲೀಸರ ಅನುಮತಿ ಬೇಕಾಗುತ್ತದೆ.
ಲಕ್ಷಗಟ್ಟಲೆ ಜನ ಸೇರುತ್ತಾರೆ ಎಂದಾದಾಗ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ವ್ಯವಸ್ಥೆಯನ್ನು ಪೊಲೀಸರು ನೋಡಿಕೊಳ್ಳಬೇಕಿರುತ್ತದೆ. ಅದಕ್ಕೆ ಪೊಲೀಸರು ವ್ಯವಸ್ಥೆ ಮಾಡಿಕೊಳ್ಳಬೇಕು. ಇದೆಲ್ಲವನ್ನೂ ನಿರ್ವಹಣೆ ಮಾಡುವುದು ಸುಲಭದ್ದಲ್ಲ. ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಕೋಲ್ಡ್‌ಪ್ಲೇ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದೆ.
ತುಂಬ ಬೇಸರದ ಸಂಗತಿಯೆಂದರೆ, ಬೆಂಗಳೂರಿನಲ್ಲಿ ಅವರ ಕಾರ್ಯಕ್ರಮ ನಡೆಯದೇ ಇದ್ದುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಮಾಷೆ, ಮೀಮ್ಸ್‌ಗಳನ್ನ ಮಾಡಲಾಗುತ್ತಿದೆ. ಬೆಂಗಳೂರಿನ ಜನರು ಮುಂಬೈ ಹಾಗೂ ಅಹಮದಾಬಾದ್‌ಗೆ ಫ್ಲೈಟ್‌ನಲ್ಲಿ ಹೋಗಿ ಶೋ ನೋಡಿಕೊಂಡು ಬಂದಿದ್ದಾರೆ.
ಇಂಥದ್ದೊಂದು ಸ್ಥಳವನ್ನ ವ್ಯವಸ್ಥೆ ಮಾಡುವುದಕ್ಕೆ ಬೆಂಗಳೂರಿನಲ್ಲಿ ಸಾಧ್ಯವಾಗಿಲ್ಲ ಎಂಬುದು ಬೆಂಗಳೂರಿಗರಾದ ನಮಗೆ ಬೇಸರವಾಗಬೇಕಾದ ಸಂಗತಿ. ಅದು ಕೋಲ್ಡ್‌ಪ್ಲೇ ಆಗಲಿ, ರೆಹಮಾನ್ ಆಗಲೀ... ಯಾರದ್ದೇ ಕಾರ್ಯಕ್ರಮ ಆಗಲಿ. ಒಂದೂಕಾಲು ಕೋಟಿ ಜನರಿರುವ ನಗರವೊಂದರಲ್ಲಿ 1-2 ಲಕ್ಷ ಜನರನ್ನು ಸೇರಿಸಬಹುದಾದ ಒಂದು ಸ್ಥಳವನ್ನು ನಿರ್ಮಾಣ ಮಾಡುವುದು ಯಾವ ಸಕ್ರಿಯ ಸರ್ಕಾರಕ್ಕೂ ಕಷ್ಟದ ಸಂಗತಿಯಾಗಿರಲಿಲ್ಲ. ಆದರೆ...
ಸದ್ಯ ಬೆಂಗಳೂರಿನ ಹೃದಯಭಾಗದಲ್ಲಿ ಅರಮನೆ ಮೈದಾನ ಇದ್ದು, ಅದರಲ್ಲಿ ಲಕ್ಷಗಟ್ಟಲೆ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಸಾಮರ್ಥ್ಯ, ಅವಕಾಶವಿದೆ. ಆದರೆ, ಸಮಸ್ಯೆ ಇರುವುದು ಅದರ ಸುತ್ತಲಿನ ಪ್ರದೇಶಗಳ ರಸ್ತೆಗಳಲ್ಲಿ..! ಒಂದು ವೇಳೆ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಿದರೆ, ಅರ್ಧ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸಂಚಾರ ನಿಂತೇ ಹೋಗುತ್ತದೆ. ಯಾಕೆಂದರೆ, ಪ್ಯಾಲೇಸ್ ಗ್ರೌಂಡ್ಸ್‌ಗೆ ಬರುವ ಎಲ್ಲ ರಸ್ತೆಗಳೂ ಈಗಾಗಲೇ, ಅಂದರೆ, ಯಾವುದೇ ದೊಡ್ಡ ಕಾರ್ಯಕ್ರಮ ನಡೆಯದೇ ಇರುವ ಸಮಯದಲ್ಲೇ ತುಂಬಿ ತುಳುಕುತ್ತಿರುತ್ತವೆ. ಒಂದು ವೇಳೆ ಲಕ್ಷಗಟ್ಟಲೆ ಜನ ಪ್ಯಾಲೇಸ್ ಗ್ರೌಂಡ್ಸ್ ಕಡೆಗೆ ಬರುವುದಕ್ಕೆ ಶುರು ಮಾಡಿದರೆ, ಅರ್ಧ ಬೆಂಗಳೂರು ನಿಂತ ನೀರಾಗುತ್ತದೆ.
ಹೀಗಾಗಿ, ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಪೊಲೀಸರೇ ಅವಕಾಶ ಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಉಳಿದಂತೆ ಪ್ಯಾಲೇಸ್ ಗ್ರೌಂಡ್ಸ್ ಸುತ್ತಮುತ್ತ ಐಷಾರಾಮಿ ಹೋಟೆಲ್‌ಗಳಿವೆ. ಕಲಾವಿದರು, ಗಣ್ಯರು ಬಂದು ಉಳಿದುಕೊಳ್ಳುವ ವ್ಯವಸ್ಥೆ ಇದೆ. ಬೆಂಗಳೂರಿನ ಜನರಿಗೆ ಹತ್ತಿರದಲ್ಲೂ ಇದೆ. ಆದರೆ, ಸಮಸ್ಯೆ ಇರುವುದೇ ರಸ್ತೆಯ ವಿಷಯದಲ್ಲಿ! ಹೀಗಾಗಿ ಪ್ಯಾಲೇಸ್ ಗ್ರೌಂಡ್ಸ್ ಅನ್ನು ದೊಡ್ಡ ಕಾರ್ಯಕ್ರಮ ಆಯೋಜಕರೂ ಇಷ್ಟಪಡುತ್ತಿಲ್ಲ.
ಲೇಖನ: ಕೃಷ್ಣಭಟ್
