ನಿಷೇಧಿತ ಎಂಡಿಎಂಎ ಕ್ರಿಸ್ಟಲ್ ಮಾರಾಟ: ವಿದೇಶಿ ಪ್ರಜೆ ಬಂಧನ; ರೂ 3 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ದಾಸರಹಳ್ಳಿಯ ನಾರ್ಥ್ ಹಿಲ್ಸ್ ಶಾಲೆ ಹಿಂಭಾಗದ ಖಾಲಿ ಪ್ರದೇಶದಲ್ಲಿ ವಿದೇಶಿ ಪ್ರಜೆಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ಸಿಕ್ಕಿತ್ತು. (ವರದಿ: ಎಚ್.ಮಾರುತಿ)

ಬೆಂಗಳೂರು: ನಿಷೇಧಿತ ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಪ್ರಜೆ ಪೆಪೆ ಎಂಬಾತನನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ ರೂ. 3 ಕೋಟಿ ಮೌಲ್ಯದ ಮೂರು ಕೆ.ಜಿ ಎಂಡಿಎಂಎ ಕ್ರಿಸ್ಟಲ್ ಜಪ್ತಿ ಮಾಡಲಾಗಿದೆ. ದಾಸರಹಳ್ಳಿಯ ನಾರ್ಥ್ ಹಿಲ್ಸ್ ಶಾಲೆ ಹಿಂಭಾಗದ ಖಾಲಿ ಪ್ರದೇಶದಲ್ಲಿ ವಿದೇಶಿ ಪ್ರಜೆಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿರುವ ಖಚಿತ ಸುಳಿವು ಸಿಕ್ಕಿತ್ತು. ಮಾಹಿತಿ ಆಧರಿಸಿ ದಾಳಿ ಮಾಡಿದಾಗ ಈತನ ಬಳಿ ಡ್ರಗ್ಸ್ ಪತ್ತೆಯಾಗಿದೆ. ಆರೋಪಿ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ ಅಡಿ (ಎನ್ ಡಿಪಿಎಸ್) ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
2023ರಲ್ಲಿ ಪೆಪೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಕೈತುಂಬ ಸಂಬಳ ನೀಡುವ ಕೆಲಸ ದೊರೆಯದ ಕಾರಣಕ್ಕೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ದುರಾಸೆಯಿಂದ ಡ್ರಗ್ಸ್ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದ್ದ. ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ವಿದೇಶಿ ಪ್ರಜೆಯಿಂದ ಆರೋಪಿಯು ಎಂಡಿಎಂಎ ಕ್ರಿಸ್ಟಲ್ ಅನ್ನು ಖರೀದಿಸಿ ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಪೇಯಿಂಗ್ ಗೆಸ್ಟ್ ನಿವಾಸಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.