ಪ್ರಸಿದ್ಧ ನಟಿಗೆ ಐಷಾರಾಮಿ ಬಂಗಲೆ ಗಿಫ್ಟ್ ಕೊಟ್ಟ ಖತರ್‌ನಾಕ್ ಕಳ್ಳನ ಬಂಧನ, ಸಿನಿಮೀಯ ಬದುಕು ಬೆನ್ನು ಹತ್ತಿದ ಖದೀಮ ಬೆಂಗಳೂರು ಪೊಲೀಸರ ಬಲೆಗೆ
Bengaluru Crime: ಜನಪ್ರಿಯ ನಟಿಗೆ ಐಷಾರಾಮಿ ಬಂಗಲೆ ಗಿಫ್ಟ್ ಕೊಟ್ಟ ಖತರ್‌ನಾಕ್ ಕಳ್ಳ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ಪಂಚಾಕ್ಷರಿ ಸ್ವಾಮಿ ಎಂದು ಗುರುತಿಸಲಾಗಿದೆ. ಸಿನಿಮೀಯ ಬದುಕಿನ ಶೋಕಿಗೆ ಬಿದ್ದ ಖದೀಮನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

Bengaluru Crime: ಪ್ರಸಿದ್ಧ ನಟಿಗೆ ಐಷಾರಾಮಿ ಮನೆ ಗಿಫ್ಟ್ ಕೊಟ್ಟಿದ್ದ ಖತರ್‌ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ಬದುಕು ಬೆನ್ನು ಹತ್ತಿದ ಖದೀಮ, ಕಳ್ಳತನ ನಡೆಸುತ್ತ ಶೋಕಿ ಮಾಡ್ತಾ ಬದುಕು ಸಾಗಿಸುತ್ತಿದ್ದ. ಮಡಿವಾಳ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಶೋಕಿಲಾಲಾ ಕಳ್ಳ ಬಲೆಗೆ ಬಿದ್ದಿದ್ದು, ಆತನಿಂದ 12 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಳ್ಳತನದ ಮಾಲನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಎಂದು ಗುರುತಿಸಲಾಗಿದೆ.
ಪ್ರಸಿದ್ಧ ನಟಿಗೆ ಐಷಾರಾಮಿ ಬಂಗಲೆ ಗಿಫ್ಟ್ ಕೊಟ್ಟ ಖತರ್‌ನಾಕ್ ಕಳ್ಳನ ಬಂಧನ
ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕಳ್ಳನನ್ನು ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ ಎಂದು ಗುರುತಿಸಲಾಗಿದೆ. ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ಸೇರಿ ವಿವಿಧೆಡೆ ಈತನ ವಿರುದ್ಧ 150ಕ್ಕೂ ಹೆಚ್ಚು ಕಳವು ಪ್ರಕರಣಗಳಿವೆ. ಈತ ಜನವರಿ 9 ರಂದು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಅಲ್ಲಿಂದ 410 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಜನವರಿ 20ರಂದು ಈತನನ್ನು ಬಂಧಿಸಿದ್ದರು. ಸರಿಯಾದ ತನಿಖೆ ವಿಚಾರಣೆ ಬಳಿಕ ಅನೇಕ ವಿಷಯಗಳು ಬಹಿರಂಗವಾಗಿವೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಈತ, ಮಡಿವಾಳದಲ್ಲಿ ಕಳವು ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಈತನ ಬಂಧನದ ಕಾರ್ಯಾಚರಣೆ ಉತ್ತಮವಾಗಿದ್ದು ಮಡಿವಾಳ ಪೊಲೀಸರ ತಂಡಕ್ಕೆ 25,000 ರೂಪಾಯಿ ಪಾರಿತೋಷಕ ಘೋಷಿಸುತ್ತಿರುವುದಾಗಿ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಬಾಲಕನಾಗಿದ್ದಾಗಲೇ ಅಂದರೆ 2003 ರಿಂದಲೆ ಈತ ಕಳ್ಳತನಕ್ಕೆ ಇಳಿದಿದ್ದ. 2009ರಲ್ಲಿ ವೃತ್ತಿಪರ ಕಳ್ಳನಾಗಿ ಬದಲಾದ ಪಂಚಾಕ್ಷರಿ ಸ್ವಾಮಿ, 2014-15ರ ಹೊತ್ತಿಗೆ ಖ್ಯಾತ ನಟಿಯ ಸಂಪರ್ಕ ಸಾಧಿಸಿದ್ದ. ಆಕೆಗಾಗಿ 3 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಗಿಫ್ಟ್ ನೀಡಿದ್ದ. ಅಲ್ಲದೆ, ಆಕೆಯ ಹುಟ್ಟುಹಬ್ಬಕ್ಕೆ 22 ಲಕ್ಷ ರೂಪಾಯಿ ಅಕ್ವೇರಿಯಂ ಕೂಡ ಕೊಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಗುಜರಾತ್ ಪೊಲೀಸರು 2016ರಲ್ಲಿ ಈತನನ್ನು ಬಂಧಿಸಿದ್ದು, 6 ವರ್ಷ ಸಾಬರ್‌ಮತಿ ಜೈಲಿನಲ್ಲಿಟ್ಟಿದ್ದರು. ಅಲ್ಲಿಂದ ಹೊರ ಬಂದ ಬಳಿಕ ಮಹಾರಾಷ್ಟ್ರದಲ್ಲಿ ಕಳವು ಮಾಡಿದ್ದ. ಅಲ್ಲಿ ಜೈಲು ವಾಸ ಅನುಭವಿಸಿ 2024 ಅಕ್ಟೋಬರ್‌ನಲ್ಲಿ ಹೊರ ಬಂದಿದ್ದ. ನಂತರ ಬೆಂಗಳೂರಲ್ಲಿ ಕಳವು ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಿಷ್ಟು
ಚಿನ್ನಾಭರಣ ಕಳವು ಮಾಡಿದ ಕೂಡಲೇ ಗಟ್ಟಿ ಮಾಡಿಡುತ್ತಿದ್ದ ಖದೀಮ
ಪಂಚಾಕ್ಷರಿ ಸ್ವಾಮಿ ತಾನು ಚಿನ್ನಾಭರಣ ಕಳವು ಮಾಡಿ ತಂದ ಕೂಡಲೇ ಅದನ್ನು ಗಟ್ಟಿ ಮಾಡಿಡುತ್ತಿದ್ದ. ಅದಕ್ಕೆ ಆತ ಬಳಸಿದ್ದ ಫೈರ್ ಗನ್ ಮತ್ತು ಮೂಸ್ ಅನ್ನು ವಶಪಡಿಸಲಾಗಿದೆ. ಹೀಗಾಗಿ ಆತನ ಪತ್ತೆ ಕಾರ್ಯ ಕಷ್ಟವಾಗುತ್ತಿತ್ತು. 12.25 ಲಕ್ಷ ರೂಪಾಯಿ ಮೌಲ್ಯದ ಕಳವು ಮಾಲನ್ನು ವಶಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಪಂಚಾಕ್ಷರಿ ಸ್ವಾಮಿ ಮನೆ ಕಳ್ಳತನ ಮಾಡಿದ ಬಳಿಕ ರಸ್ತೆಗೆ ಬಂದ ನಂತರ ಬಟ್ಟೆ ಬದಲಾಯಿಸುತ್ತಿದ್ದ. ಈತ ಕಳ್ಳತನದ ಸುಳಿವು ಸಿಗದಂತೆ ಸಾಕ್ಷ್ಯಗಳನ್ನು ನಾಶ ಮಾಡುತ್ತಿದ್ದ. ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದುಕೊಂಡಿದ್ದ ಪಂಚಾಕ್ಷರಿ ಸ್ವಾಮಿ ವಿವಾಹಿತ. ಮಗು ಕೂಡ ಇದೆ. ಆದರೂ ಹುಡುಗಿಯರ ಮೋಹ ಕಡಿಮೆಯಾಗಿರಲಿಲ್ಲ. ಈತನ ತಂದೆ ರೈಲ್ವೆ ಉದ್ಯೋಗಿಯಾಗಿದ್ದರು. ಅವರ ಮರಣಾನಂತರ ಆ ಅನುಕಂಪದ ಆಧಾರದ ಮೇಲೆ ತಾಯಿಗೆ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಬೆಂಗಳೂರಲ್ಲಿ 400 ಚದರ ಅಡಿ ಮನೆಯಲ್ಲಿ ವಾಸವಿದ್ದರೂ, ಮನೆ ಸಾಲ ಕಟ್ಟಿರಲಿಲ್ಲ. ಹೀಗಾಗಿ ಬ್ಯಾಂಕ್ ಅದನ್ನು ವಶಪಡಿಸಿ ಹರಾಜು ಹಾಕಲು ಮುಂದಾಗಿದೆ. ಆ ಮನೆ ಪಂಚಾಕ್ಷರಿ ಸ್ವಾಮಿಯ ತಾಯಿ ಹೆಸರಿನಲ್ಲಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
