ನಮ್ಮ ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಿಸಿ ರೀಲ್ಸ್ ಪೋಸ್ಟ್: ಬೆಂಗಳೂರು ಪೊಲೀಸರಿಂದ ವ್ಯಕ್ತಿಯ ಬಂಧನ
ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಪ್ರಯಾಣಿಕರು ತಮ್ಮ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮಹಿಳೆಯರ ಅನುಮತಿಯಿಲ್ಲದೆ ವಿವಿಧ ಸಂದರ್ಭದಲ್ಲಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿದು ಇನ್ಸ್ಟಾಗ್ರಾಮ್ ಖಾತೆಗೆ ಪೋಸ್ಟ್ ಮಾಡುತ್ತಿದ್ದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹಾವೇರಿ ಜಿಲ್ಲೆಯ ದಿಗಂತ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಪೀಣ್ಯ ಪ್ರದೇಶದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಆರೋಪಿಯು @metro_chicks ಎಂಬ ಖಾತೆಯಲ್ಲಿ ಮಹಿಳೆಯರ ಆಕ್ಷೇಪಾರ್ಹ ಮತ್ತು ಖಾಸಗಿತನಕ್ಕೆ ಧಕ್ಕೆಯಾಗುವ ರೀತಿಯಲ್ಲಿ, ಫೋಟೊ ಮತ್ತು ವಿಡಿಯೊಗಳನ್ನು ಸೆರೆಹಿಡಿದು ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ಎರಡು ದಿನಗಳ ನಂತರ ಆತನ ಬಂಧನವಾಗಿದೆ.
ಆರೋಪಿ ಬಂಧನದ ಬಗ್ಗೆ ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಲೋಕೇಶ್ ಬಿ ಜಗಲಾಸರ್, ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತಿಯು ಖಾಸಗಿ ಸಂಸ್ಥೆಯ ಲೆಕ್ಕಪತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಆತ ತಮ್ಮ ದೈನಂದಿನ ಮೆಟ್ರೋ ಪ್ರಯಾಣದ ಸಮಯದಲ್ಲಿ ಮತ್ತು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮಹಿಳೆಯರ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುತ್ತಿದ್ದನು. ನಂತರ ಅವುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದನು ಎಂದು ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಈ ಕೃತ್ಯವನ್ನು ದಿಗಂತ್ ಒಬ್ಬನೇ ನಡೆಸಿದ್ದಾನೆಯೇ ಅಥವಾ ಪಾಲುದಾರರನ್ನು ಹೊಂದಿದ್ದಾನೆಯೇ ಎಂಬ ಬಗ್ಗೆ ಮತ್ತು ಯಾವ ಉದ್ದೇಶಕ್ಕಾಗಿ ಈ ಕೃತ್ಯ ಎಸಗಿದ್ದಾನೆ, ವಿಡಿಯೊವನ್ನು ಇತರ ಕಡೆ ಹಂಚಲಾಗಿದೆಯೇ ಅಥವಾ ಹಣಗಳಿಕೆಯ ಉದ್ದೇಶ ಹೊಂದಿದ್ದಾನೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೂರು ದಾಖಲಾದ ವಿಚಾರ ತಿಳಿಯುತ್ತಲೇ ವಿಡಿಯೊಗಳನ್ನು ಮತ್ತು ಇನ್‌ಸ್ಟಾ ಖಾತೆಯನ್ನು ಡಿಲೀಟ್ ಮಾಡಲಾಗಿದೆ. ಅದರಲ್ಲಿ ಕನಿಷ್ಠ 14 ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿತ್ತು. ಹೆಚ್ಚಾಗಿ ಮೆಟ್ರೋ ರೈಲುಗಳು ಅಥವಾ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ಮಹಿಳೆಯರ ಕ್ಲೋಸ್-ಅಪ್ ವಿಡಿಯೊ, ಫೋಟೊವನ್ನು ಅವರ ಅರಿವಿಲ್ಲದೆ ಸೆರೆಹಿಡಿಯಲಾಗಿದೆ. ಬೆಂಗಳೂರಿನ ಸುಂದರ ಹುಡುಗಿಯರು ಎಂಬ ಕೀಳುಮಟ್ಟದ ಶೀರ್ಷಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊಗಳನ್ನು ಗಮನಿಸಿದ ಜನರು, ಮೆಟ್ರೋ ಮತ್ತು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.