ಬೆಂಗಳೂರು ದೇವನಹಳ್ಳಿ ಸಮೀಪ ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ, 7 ಯುವತಿಯರು ಸೇರಿ 31 ಜನರ ಬಂಧನ
ದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಡ್ರಗ್ಸ್ ನಶೆಯಲ್ಲಿದ್ದ ಏಳು ಯುವತಿಯರು ಸೇರಿದಂತೆ 31 ಮಂದಿಯನ್ನು ಬಂಧಿಸಿದರು. ಪ್ರತ್ಯೇಕ ಪ್ರಕರಣದಲ್ಲಿ ಟೆಕ್ಕಿ ಮನೆಯಿಂದ 24 ಲಕ್ಷ ರೂ. ನಗದು, 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಘಟನೆ ನಡೆದಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಹೊವಲಯದ ದೇವನಹಳ್ಳಿಯ ಫಾರ್ಮ್ ಹೌಸ್ ಒಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಠಾಣೆ ಪೊಲೀಸರು ಭಾನುವಾರ ಮುಂಜಾನೆ ದಾಳಿ ನಡೆಸಿ ಏಳು ಯುವತಿಯರು ಸೇರಿದಂತೆ 31 ಮಂದಿಯನ್ನು ಬಂಧಿಸಿದ್ದಾರೆ. ಇವರು ಡ್ರಗ್ಸ್ ಸೇವಿಸಿರುವ ಶಂಕೆ ಇದ್ದು ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ತುಂತುರು ಮಳೆಯ ನಡುವೆಯೂ ಡಿಜೆ ಹಾಕಿಕೊಂಡು ಮಾದಕ ವಸ್ತು ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದವರಲ್ಲರೂ ಬಹುತೇಕ ಸಾಫ್ಟ್‌ವೇರ್ ಇಂಜಿನಿಯರ್‌ಗಳೆಂದು ಪೊಲೀಸರು ಹೇಳಿದ್ದಾರೆ. ಇವರು ಗಾಂಜಾ, ಕೊಕೈನ್ ಮತ್ತು ಅಫೀಮು ಸೇವಿಸಿದ್ದರು ಎಂದು ತಿಳಿದು ಬಂದಿದೆ.
ಡಿಜೆ ಶಬ್ದದಿಂದ ಬೇಸತ್ತ ಕನ್ನಮಂಗಲ ಸಮೀಪದ ಸ್ಥಳೀಯ ಗ್ರಾಮಸ್ಥರು ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ತಂಡ ತಡರಾತ್ರಿ ದಾಳಿ ನಡೆಸಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವರು ಪೊಲೀಸರನ್ನು ನೋಡುತ್ತಿದ್ದಂತೆ ಪರಾರಿಯಾಗಿದ್ದಾರೆ. ಫಾರ್ಮ ಹೌಸ್ ಮಾಲೀಕ ಸಯದ್ ಅಸೀದ್ ಎಂದು ತಿಳಿದು ಬಂದಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಫಾರ್ಮ್ ಹೌಸ್ ಮೇನೇಜರ್ ನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಎನ್ ಡಿಪಿಎಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹುಟ್ಟುಹಬ್ಬದ ಆಚರಣೆ ನೆಪದಲ್ಲಿ ಈ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್ ಗಳೂ ಭಾಗವಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲ 31 ವ್ಯಕ್ತಿಗಳ ರಕ್ತ ಮತ್ತು ಮೂತ್ರವನ್ನು ಸಂಗ್ರಹಿಸಲಾಗಿದ್ದು ಪರೀಕ್ಷೆಗೆ ಕಳುಹಿಸಲಾಗಿದ್ದು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ಮನೆಯಲ್ಲಿ 24 ಲಕ್ಷ ರೂ. ನಗದು 15 ಲಕ್ಷ ರೂ ಮೌಲ್ಯದ ಮೌಲ್ಯದ ಚಿನ್ನ, ಬೆಳ್ಳಿ ಕಳವು
ಮನೆಯ ಮಾಲೀಕ ಸಾಫ್ಟ್ ವೇರ್ ಇಂಜಿನಿಯರ್ ವೊಬ್ಬರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿಕ್ಕಮಗಳೂರಿಗೆ ಹೋಗಿದ್ದಾಗ ಮನೆಯ ಬಾಗಿಲು ಮುರಿದು 24 ಲಕ್ಷ ರೂ. ನಗದು ಸೇರಿದಂತೆ 37.8 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿರುವ ಪ್ರಕರಣ ಕತ್ರಿಗುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ ವಿಶ್ವನಾಥ್ ಮೇ 21ರಂದು ಮಧ್ಯಾಹ್ನ 12.45 ಕ್ಕೆ ಹೊರಟು ಮೇ 22ರಂದು ರಾತ್ರಿ 11.15 ಕ್ಕೆ ಮನೆಗೆ ಮರಳಿದ್ದಾರೆ. ಈ ಅವಧಿಯಲ್ಲಿ ಕಳ್ಳತನ ನಡೆದಿರುವುದು ಕಂಡು ಬಂದಿದೆ. ಇವರದ್ದು ಬಹುಮಹಡಿ ಕಟ್ಟಡ. ದರೋಡೆಕೋರರು ದೋಡೆಕೋರರು ಮೇ 21ರಂದು ರಾತ್ರಿ 8.15ಕ್ಕೆ ಮನೆಯ ಮೂರನೆ ಮಹಡಿಯ ವರಾಂಡ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಅಲ್ಲಿದ್ದ ಸಿಸಿಟಿವಿಯನ್ನು ಮೂಲೆಯೊಂದಕ್ಕೆ ತಿರುಗಿಸಿದ್ದಾರೆ. ಎಲ್ಲ ಮಹಡಿಗಳ ಕೊಠಡಿಗಳ ಬಾಗಿಲು ತೆರದಿರುತ್ತದೆ. ಆಗ ಅವರು ವಾರ್ಡ್ ರೋಬ್ ಮುರಿದು ಲಾಕರ್ ಅನ್ನೂ ಒಡೆದಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)