ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ದ; ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಕಟ್ಟೆಚ್ಚರ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್
ಕನ್ನಡ ಸುದ್ದಿ  /  ಕರ್ನಾಟಕ  /  ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ದ; ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಕಟ್ಟೆಚ್ಚರ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ದ; ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಕಟ್ಟೆಚ್ಚರ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

New Year 2025: ಹೊಸ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಕೂಡಾ ಹೊಸ ವರ್ಷಾಚರಣೆಗೆ ಸಕಲ ಸಿದ್ದತೆ ನಡೆದಿದೆ. ನಗರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ನಗರದಲ್ಲಿ ಏರ್ಪಡಿಸಿರುವ ಮುನ್ನೆಚರಿಕೆ ಕ್ರಮ ಕುರಿತು ಬೆಂಗಳೂರು ನಗರ ಕಮೀಷನರ್ ಬಿ ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ
ಬೆಂಗಳೂರು ನಗರದಲ್ಲಿ ಏರ್ಪಡಿಸಿರುವ ಮುನ್ನೆಚರಿಕೆ ಕ್ರಮ ಕುರಿತು ಬೆಂಗಳೂರು ನಗರ ಕಮೀಷನರ್ ಬಿ ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ

ಬೆಂಗಳೂರು: ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜುಗೊಂಡಿದೆ. ಡಿಸೆಂಬರ್‌ 31 ರಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ವಿಶೇಷವಾಗಿ ಹೊಸ ವರ್ಷಾಚರಣೆಗೆ ಹೆಚ್ಚು ಜನರು ಸೇರುವ ಇಂದಿರಾನಗರ, ಕೋರಮಂಗಲ, ಎಂಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಈ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೈಲ್ಯಾಂಡ್ ಮತ್ತು ವಾಚ್ ಟವರ್ ಸ್ಥಾಪಿಸಲಾಗಿದೆ. ಶ್ವಾನ ದಳ, ಡ್ರೋನ್ ಕ್ಯಾಮರಾ ಮೂಲಕ ಹೆಚ್ಚಿನ ನಿಗಾ ವಹಿಸಲಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ ಕುರಿತು ಮಾಹಿತಿ ಹಂಚಿಕೊಂಡ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

ಬೆಂಗಳೂರಿನಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕುರಿತು ಬೆಂಗಳೂರು ನಗರ ಪೊಲೀಸ್ ಬಿ ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸ್‌ ಇಲಾಖೆಯು ಬಿಬಿಎಂಪಿ, ಅಗ್ನಿಶಾಮಕ ದಳ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಜೊತೆ ಪರಸ್ಪರ ಸಮನ್ವಯ ಸಾಧಿಸಿದ್ದು ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಬ್ರಿಗೇಡ್ ರಸ್ತೆಗೆ ಕಾವೇರಿ ಎಂಪೋರಿಯಂ ಕಡೆಯಿಂದ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಏಕಮುಖ ಸಂಚಾರ ವ್ಯವಸ್ಥೆ ಮಾತ್ರ ಇರುತ್ತದೆ. ರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ. ಬೆಂಗಳೂರಿನ ಎಲ್ಲಾ ಮೇಲ್ಸೇತುವೆಗಳನ್ನುಮುಚ್ಚಲಾಗುತ್ತದೆ. ‌ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನೆಲೆಯಲ್ಲಿ 11 ಗಂಟೆ ನಂತರ ಎಂಜಿ ರಸ್ತೆ ಮೆಟ್ರೊ ಸ್ಟೇಷನ್ ಬಂದ್‌ ಮಾಡಲಾಗುತ್ತದೆ. ಕೇವಲ ಬರುವವರಿಗೆ ಮಾತ್ರ ಅವಕಾಶ ಇರುತ್ತದೆ. ಮರಳಿ ಹೋಗಲು ಹೋಗಲು ಟ್ರಿನಿಟಿ ಸರ್ಕಲ್ ಅಥವಾ ಕಬ್ಬನ್‌ ಪಾರ್ಕ್ ಸ್ಟೇಷನ್‌ಗೆ ಹೋಗಬೇಕಾಗುತ್ತದೆ.

ಎಂಜಿ ರಸ್ತೆ, ಬಿಗ್ರೇಡ್ ರಸ್ತೆ, ಕ್ಲಬ್, ಪಬ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಫೇಸ್‌ ಮಾಸ್ಕ್ ನಿಷೇಧ ಮಾಡಲಾಗಿದ್ದು, ಯಾರೊಬ್ಬರೂ ಫೇಸ್ ಮಾಸ್ಕ್ ಧರಿಸುವಂತಿಲ್ಲ. ಡಿಸೆಂಬರ್ 31 ರಾತ್ರಿ 8 ಗಂಟೆಯಿಂದ ಜನವರಿ 1ರ ಬೆಳಗ್ಗೆವರೆಗೆ ಎಂಜಿ ರಸ್ತೆಯಿಂದ ಅನಿಲ್‌ ಕುಂಬ್ಳೆ ಸರ್ಕಲ್, ಮೇಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿಷೇಧಿಸಲಾಗಿದೆ. ಬಾರ್ ಅಂಡ್‌ ರೆಸ್ಟೋರೆಂಟ್ ಮಾಲೀಕರ ಜೊತೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದ್ದು, ಸಿಸಿಟಿವಿ ಮತ್ತು ಭದ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ. ನಗರದ ಹೊರ ವಲಯಗಳಲ್ಲಿ ನಡೆಯುವ ರೇವ್ ಪಾರ್ಟಿಗಳ ಮೇಲೆ ನಿಗಾ ಇಡಲಾಗುವುದು ಅಲ್ಲದೆ ಅನಧಿಕೃತವಾಗಿ ಆಯೋಜನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಾದ್ಯಂತ ಬಿಗಿ ಭದ್ರತೆ

ವಿಶೇಷವಾಗಿ ಕೇಂದ್ರ ವಿಭಾಗದ ಬಿಗ್ರೇಡ್ ರಸ್ತೆಯಲ್ಲಿ ಭದ್ರತೆಗಾಗಿ 5 ಡಿಸಿಪಿ, 18 ಎಸಿಪಿ, 41 ಪೊಲೀಸ್ ಇನ್‌ಸ್ಪೆಕ್ಟರ್‌ ಸೇರಿದಂತೆ 2572 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್ ಕಿಯೋಸ್ಕ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಡೀ ಬೆಂಗಳೂರಿನಲ್ಲಿ ಭದ್ರತೆಗೆ 11830 ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, 2 ಹೆಚ್ಚುವರಿ ಪೊಲೀಸ ಆಯುಕ್ತರು, 1 ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿ, 44 ಎಸಿಪಿಗಳು, 135 ಇನ್‌ಸ್ಪೆಕ್ಟರ್‌ಗಳು, 800 ಸಿವಿಲ್ ಡಿಫೆನ್ಸ್, 1048 ಮಹಿಳಾ ಸಿಬ್ಬಂದಿ, 72 ಕೆಎಸ್ಆರ್‌ಪಿ ತುಕಡಿ, 21 ಸಿಎಆರ್ ತುಕಡಿಯನ್ನು ಬಂದೋಬಸ್ತ್‌ ವ್ಯವಸ್ಥೆಗೆ ನಿಯೋಜಿಸಲಾಗಿದೆ.

ಷಬೈಕ್‌ಗಳಲ್ಲಿ ಪದೇಪದೆ ಓಡಾಡುವಂತಿಲ್ಲ. ವಿಷ್‌ ಮಾಡುವ ನೆಪದಲ್ಲಿ ಕೂಗಾಟ, ವಿಶಲ್‌ ಊದುವಂತಿಲ್ಲ. ವಿಚಿತ್ರ ರೀತಿಯ ಮಾಸ್ಕ್ ಧರಿಸುವಂತಿಲ್ಲ. ಮಕ್ಕಳು, ವೃದ್ಧರು ಮತ್ತು ಹೆಣ್ಣುಮಕ್ಕಳಿಗೆ ತೊಂದರೆ ನೀಡುವಂತಿಲ್ಲ, ಇದೆಲ್ಲವನ್ನೂ ಮೀರಿ ಅನುಚಿತ ವರ್ತನೆ‌ ತೋರುವರಿಗೆ ಕಠಿಣ ಶಿಕ್ಷೆ ಕಾದಿರುತ್ತದೆಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಓಲಾ, ಊಬರ್ ಪ್ರತಿನಿಧಿಗಳ ಜತೆಯೂ ಸಭೆ ನಡೆಸಿದ್ದು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಬಳಿ ಪಿಕಪ್‌ ಮತ್ತು ಡ್ರಾಪ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಹಣಕ್ಕೆ ಬೇಡಿಕೆ‌ ಇಡದಂತೆ ಸೂಚನೆ ನೀಡಲಾಗಿದೆ. ವ್ಹೀಲಿಂಗ್ ಮಾಡುವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಕುಡಿದು ವಾಹನ ಓಡಿಸುವವರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.

ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿ, ಆದರೆ ಸುರಕ್ಷತೆ ನಿಮ್ಮ ಮೊದಲ ಆದ್ಯತೆಯಾಗಿರಲಿ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner