ಅಜ್ಜಿಯ ಹಣ, ಆಭರಣ ದೋಚಿದ್ದ ಮೊಮ್ಮಗ; ಆರೋಪಿ ಬಂಧಿಸಿದ ಬೆಂಗಳೂರು ಪೊಲೀಸರು
ಅಜ್ಜಿ ಬೇರೆ ಊರಿಗೆ ಹೋಗಿದ್ದ ವಿಷಯ ತಿಳಿದುಕೊಂಡು ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ. ಕದ್ದ ಚಿನ್ನವನ್ನು ಮತ್ತಿಕೆರೆಯ ಚಿನ್ನಾಭರಣ ಅಂಗಡಿಯಲ್ಲಿ ಮಾರಾಟ ಮಾಡಿದ್ದ.

ಬೆಂಗಳೂರು: ಆಟೊ ರಿಕ್ಷಾ ಖರೀದಿಸಲು ಅಜ್ಜಿಯ ಚಿನ್ನಾಭರಣ ದೋಚಿದ್ದ ಮೊಮ್ಮಗನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಿಥುನ್ ಎಂಬಾತನಿಂದ 81 ಗ್ರಾಂ ಚಿನ್ನಾಭರಣ ಮತ್ತು ರೂ. 9.44 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಠಾಣಾ ವ್ಯಾಪ್ತಿಯ ವಿಜಯಾನಂದ ಲೇಔಟ್ ನಿವಾಸಿ ಪುಟ್ಟನಂಜಮ್ಮ ಎಂಬುವರು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಪುಟ್ಟನಂಜಮ್ಮ ಅವರ ಮೊಮ್ಮಗನೇ ಕಳ್ಳತನ ಮಾಡಿದ್ದು ಗೊತ್ತಾಯಿತು ಎಂದು ಪೊಲೀಸರು ಹೇಳಿದರು.
ಮೇ 1ರಂದು ಪುಟ್ಟನಂಜಮ್ಮ ಅವರು ಅಮೃತ್ತೂರಿನ ಹೊಸಪಾಳ್ಯಕ್ಕೆ ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ಹೋಗಿದ್ದರು. ಮೇ 5ರಂದು ಮರಳಿ ಬಂದು ನೋಡಿದಾಗ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ರೂ.10 ಲಕ್ಷ ನಗದು ಹಾಗೂ 125 ಗ್ರಾಂ ಚಿನ್ನಾಭರಣ ಕಳ್ಳತನ ಆಗಿರುವುದು ತಿಳಿದುಬಂದಿತ್ತು. ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆಟೋ ಚಾಲಕನಾಗಿದ್ದ ಮಿಥುನ್ ಆಟೋ ಕೊಡಿಸುವಂತೆ ಅಜ್ಜಿಯನ್ನು ಕೇಳುತ್ತಿದ್ದ. ಆದರೆ ಅವರು ಒಪ್ಪಿರಲಿಲ್ಲ. ಅಜ್ಜಿ ಬೇರೆ ಊರಿಗೆ ಹೋಗಿದ್ದ ವಿಷಯ ತಿಳಿದುಕೊಂಡು ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ. ಕದ್ದ ಚಿನ್ನವನ್ನು ಮತ್ತಿಕೆರೆಯ ಚಿನ್ನಾಭರಣ ಅಂಗಡಿಯಲ್ಲಿ ಮಾರಾಟ ಮಾಡಿದ್ದ. ಹಣವನ್ನು ಅಂದ್ರಹಳ್ಳಿಯಲ್ಲಿರುವ ಸ್ನೇಹಿತನ ಮನೆಯಲ್ಲಿ ಅಡಗಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.