ಬೇಸಿಗೆ ರಜೆ ಸಿಕ್ತು ಅಂತ ಪ್ರವಾಸಕ್ಕೋ, ಊರಿಗೋ ಹೊರಟ್ರಾ, ಬೆಂಗಳೂರು ಪೊಲೀಸರ ಹೊಸ ಉಪಕ್ರಮದ ಕಡೆಗೊಮ್ಮೆ ಗಮನಕೊಡಿ
Bengaluru Summer Vacation: ಬೆಂಗಳೂರಿಗರ ಪೈಕಿ ಬಹುತೇಕರಿಗೆ ಮಕ್ಕಳ ಶಾಲೆ ಮುಗಿದು ಇನ್ನು ಬೇಸಿಗೆ ರಜೆಯ ಸಂಭ್ರಮ. ಅನೇಕರು ಬೇಸಿಗೆ ರಜೆಯ ಪ್ರವಾಸಕ್ಕೋ ಅಥವಾ ಊರಿಗೋ ಹೊರಡಲು ಸಜ್ಜಾಗಿರುವ ಹೊತ್ತು. ಮನೆಯ ಭದ್ರತೆಯ ಕಡೆಗೆ ಗಮನಕೊಡಿ ಎಂದು ಬೆಂಗಳೂರು ಪೊಲೀಸರು 8 ಸಲಹೆ ನೀಡಿದ್ಧಾರೆ.

Bengaluru Summer Vacation: ಮನೆ ಬೀಗ ಒಡೆದ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಬೇಸಿಗೆ ರಜೆ ಸಿಕ್ತು ಅಂತ ಬೆಂಗಳೂರು ಬಿಟ್ಟು ಊರಿಗೋ ಅಥವಾ ಪ್ರವಾಸಕ್ಕೋ ಹೋಗುವುದು ಹೇಗೆ ಎಂಬ ಚಿಂತೆ ಬೇಡ. ಬೆಂಗಳೂರು ಪೊಲೀಸರ ಹೊಸ ಉಪಕ್ರಮದ ಕಡೆಗೆ ಗಮನಕೊಡಿ. ಅವರ ಸಲಹೆಗಳನ್ನು ಪಾಲಿಸಿ, ಮನೆಯ ಭದ್ರತೆಯನ್ನು ಕಾಪಾಡಬಹುದು. ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರು ಮಹಾನಗರ ಪೊಲೀಸರು ಈ ಉಪಕ್ರಮ ಜಾರಿಗೊಳಿಸಿದ್ದಾರೆ.
ಬೇಸಿಗೆ ರಜೆ ಸಿಕ್ತು ಅಂತ ಪ್ರವಾಸಕ್ಕೋ ಊರಿಗೋ ಹೊರಟ್ರಾ, ಮನೆಯ ಭದ್ರತೆ ಗಮನಿಸಿ
ಬೇಸಿಗೆ ರಜೆ ಸಿಕ್ತು ಅಂತ ಪ್ರವಾಸಕ್ಕೋ ಅಥವಾ ಊರಿಗೋ ಹೊರಟರೆ, ಅಂತಹ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಬೀಗ ಹಾಕುವುದನ್ನು ಮರೆಯಬಾರದು. ಈ ವಿಚಾರದಲ್ಲಿ ಎಚ್ಚರವಹಿಸಬೇಕು ಎಂದು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸಲಹೆ ನೀಡಿದ್ದಾರೆ.
ಇನ್ನು, ಬೆಂಗಳೂರು ದಕ್ಷಿಣ ಪೊಲೀಸರು ಪ್ರಾಯೋಗಿಕವಾಗಿ ಹೊಸ ಉಪಕ್ರಮ ಜಾರಿಗೊಳಿಸಿದ್ದು, ಅದು ನಾಗರಿಕ ಕೇಂದ್ರಿತವಾದ ಸುರಕ್ಷಾ ಕ್ರಮವಾಗಿತ್ತು. ಕಳೆದ ಫೆಬ್ರವರಿ ತಿಂಗಳಲ್ಲಿ ಅದು ಜಾರಿಗೆ ಬಂದಿದೆ. ಒಂದು ದಿನಕ್ಕಿಂತ ಹೆಚ್ಚು ನೀವು ಬೆಂಗಳೂರು ಬಿಟ್ಟು ಇರುವುದಾದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಬೆಂಗಳೂರು ದಕ್ಷಿಣ ಪೊಲೀಸರು ಅಲ್ಲಿನ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಶುರುಮಾಡಿದ್ದಾರೆ. ಬೆಂಗಳೂರಿನಲ್ಲಿ 2021ರಿಂದೀಚೆಗೆ ಪ್ರತಿವರ್ಷ ಮನೆ ಕಳ್ಳತನ ಕೇಸ್‌ಗಳು ಹೆಚ್ಚಾಗುತ್ತಿರುವ ಕಾರಣ ಪೊಲೀಸರು ಈ ಮುಂಜಾಗ್ರತಾ ಕ್ರಮ ಜಾರಿಗೊಳಿಸಿದ್ದಾರೆ.
ನೀವು ಬೆಂಗಳೂರು ದಕ್ಷಿಣ ಪೊಲೀಸ್ ವಲಯದ ವ್ಯಾಪ್ತಿಯವರಾದರೆ, 080-22943111 ಅಥವಾ 9480801500 ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ಫೆಬ್ರವರಿಯಲ್ಲಿ ಪೊಲೀಸರು ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಹೇಳಿತ್ತು.
ಬೆಂಗಳೂರಿಗರಿಗೆ ಪೊಲೀಸರ ಸಲಹೆ ಏನು
ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಬೆಂಗಳೂರಿಗರಿಗೆ ನೀಡಿರುವ ಸಲಹೆ ಇದು.
1) ದೀರ್ಘಾವಧಿ ಪ್ರವಾಸ ಅಂದರೆ ಒಂದು ದಿನಕ್ಕಿಂತ ಹೆಚ್ಚು ದಿನ ಮನೆಯಿಂದ ದೂರ ಇರುವುದಾದರೆ, ಮನೆಯ ಭದ್ರತೆಯ ಕಡೆಗೆ ಹೆಚ್ಚು ಎಚ್ಚರವಹಿಸಬೇಕು.
2) ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇರಿಸಬೇಡಿ. ಅವುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಟ್ಟುಬಿಡಿ.
3) ಮನೆಯ ಬಾಗಿಲಿಗೆ ಗುಣಮಟ್ಟದ ಬೀಗ ಹಾಕಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು.
4) ಒಂದಕ್ಕಿಂತ ಹೆಚ್ಚು ದಿನ ಪ್ರವಾಸಕ್ಕೆ ಹೋಗುವುದಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ತೆರಳಬೇಕು. ಈ ಮಾಹಿತಿ ಆಧರಿಸಿ ಆಯಾ ಠಾಣೆಯ ಪೊಲೀಸರು ಅಂತಹ ಪ್ರದೇಶದಲ್ಲಿ ಹೆಚ್ಚು ನಿಗಾವಹಿಸುತ್ತಾರೆ.
5) ಸಾಮಾನ್ಯ ದಿನಗಳಲ್ಲಿ ಕೂಡ ಮನೆಯಿಂದ ಹೊರಗೆ ಹೋಗುತ್ತೀರಾದರೆ, ಕಿಟಕಿ, ಬಾಗಿಲು, ಗೇಟ್ ಮುಚ್ಚಬೇಕು.
6) ಮನೆಯ ಬೀಗದ ಕೀಗಳನ್ನು ಹೊರಗೆ ಹೂವಿನ ಕುಂಡ, ಪಾದರಕ್ಷೆ ಕೆಳಗೆ, ಡೋರ್ ಮ್ಯಾಟ್ ಕೆಳಗೆ ಇರಿಸುವುದು ಬೇಡ.
7) ಮನೆಯ ಗೇಟ್‌ಗೆ ಬೀಗ ಹಾಕಬೇಡಿ. ಹಾಕಿದರೆ ಮನೆಯಲ್ಲಿ ಯಾರೂ ಇಲ್ಲ ಎಂಬುದು ಹೊರ ನೋಟಕ್ಕೆ ಮನವರಿಕೆಯಾಗುತ್ತದೆ. ಇದು ಕಳ್ಳರಿಗೆ ಅನುಕೂಲ ಮಾಡಿಕೊಡುತ್ತದೆ.
8) ಮನೆಯಲ್ಲಿ ಯಾರಾದರೂ ಇದ್ದಾರೆ ಎಂಬ ಭಾವನೆ ಮೂಡಿಸಲು ಮನೆಯೊಳಗಿನ ಒಂದು ಬಲ್ಬ್ ಆನ್ ಮಾಡಿ ಇಟ್ಟಿರುವುದು ಸೂಕ್ತ.
ಬೆಂಗಳೂರಲ್ಲಿ ಮನೆ ಕಳವು ಪ್ರಕರಣ
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ. 2021ರಲ್ಲಿ 654, 2022ರಲ್ಲಿ 702, 2023ರಲ್ಲಿ ಇದು 879ಕ್ಕೆ ಏರಿಕೆಯಾಗಿದೆ. ಈ ಪೈಕಿ 264 ಕೇಸ್‌ಗಳಲ್ಲಿ ಮಾತ್ರವೇ ಕಳುವಾದ ವಸ್ತುಗಳು ಪುನಃ ಸಿಕ್ಕಿವೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ. ಹಾಗಾಗಿ, ಬೆಂಗಳೂರಿಗರು ಬೇಸಿಗೆ ರಜೆ ಅಥವಾ ದೀರ್ಘಾವಧಿ ರಜೆಗೆ (Bengaluru Summer Vacation) ಹೋಗುವಾಗ ಮನೆಯ ಭದ್ರತೆ ಕಡೆಗೆ ಗಮನಹರಿಸಬೇಕು ಎಂದು ಪೊಲೀಸರು ಸಲಹೆ ನೀಡಿರುವಂಥದ್ದು.
