ಶಾಲೆಗಳ ಆರಂಭಕ್ಕೆ ದಿನಗಣನೆ: ಬೆಂಗಳೂರು ಶಾಲೆಗಳಿಗೆ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ಖಾಸಗಿ ಶಾಲೆಗಳ ಒಕ್ಕೂಟ
ಕನ್ನಡ ಸುದ್ದಿ  /  ಕರ್ನಾಟಕ  /  ಶಾಲೆಗಳ ಆರಂಭಕ್ಕೆ ದಿನಗಣನೆ: ಬೆಂಗಳೂರು ಶಾಲೆಗಳಿಗೆ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ಖಾಸಗಿ ಶಾಲೆಗಳ ಒಕ್ಕೂಟ

ಶಾಲೆಗಳ ಆರಂಭಕ್ಕೆ ದಿನಗಣನೆ: ಬೆಂಗಳೂರು ಶಾಲೆಗಳಿಗೆ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ಖಾಸಗಿ ಶಾಲೆಗಳ ಒಕ್ಕೂಟ

ಶಾಲೆಗಳ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಬೆಂಗಳೂರು ಶಾಲೆಗಳಿಗೆ ಕೋವಿಡ್‌ ಮಾರ್ಗಸೂಚಿಯನ್ನು ಖಾಸಗಿ ಶಾಲೆಗಳ ಒಕ್ಕೂಟ ಬಿಡುಗಡೆ ಮಾಡಿದೆ. ಶಾಲೆಗಳು, ವಿದ್ಯಾರ್ಥಿಗಳು, ಪೋಷಕರು ಶಿಕ್ಷಕರು ಏನು ಮಾಡಬೇಕು? ಮಾಡಬಾರದು? ಇಲ್ಲಿದೆ ಮಾಹಿತಿ. (ವರದಿ- ಎಚ್.ಮಾರುತಿ, ಬೆಂಗಳೂರು)

ಖಾಸಗಿ ಶಾಲೆಗಳ ಒಕ್ಕೂಟವು ಬೆಂಗಳೂರು ಶಾಲೆಗಳಿಗೆ ಕೋವಿಡ್‌ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. (ಸಾಂಕೇತಿಕ ಚಿತ್ರ)
ಖಾಸಗಿ ಶಾಲೆಗಳ ಒಕ್ಕೂಟವು ಬೆಂಗಳೂರು ಶಾಲೆಗಳಿಗೆ ಕೋವಿಡ್‌ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಒಂದು ಕಡೆ ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭವಾಗುತ್ತಿದ್ದರೆ ಮತ್ತೊಂದು ಕಡೆ ಕೋವಿಡ್‌ -19 ಹಬ್ಬುತ್ತಿದೆ. ಇದು ಮಕ್ಕಳು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳನ್ನು ಸಂಕಷ್ಟಕ್ಕೀಡು ಮಾಡಿದೆ. ಈ ನಿಟ್ಟಿನಲ್ಲಿ ಕೋವಿಡ್‌ -19 ಮತ್ತು ಇತರ ಸೋಂಕು ರೋಗಗಳನ್ನು ಕುರಿತು ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್)‌ ಮಕ್ಕಳ ವಿಷಯದಲ್ಲಿ ಎಚ್ಚರಿಕೆ ವಹಿಸುವಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರು ಶಾಲೆಗಳಿಗೆ ಖಾಸಗಿಶಾಲೆಗಳ ಒಕ್ಕೂಟದ ಕೋವಿಡ್‌ ಮಾರ್ಗಸೂಚಿ

ಬೆಂಗಳೂರಿನಲ್ಲಿ ಶನಿವಾರ ಕೋವಿಡ್‌ -19 ಗೆ ಒಬ್ಬರು ಬಲಿಯಾದ ನಂತರ ನಂತರ ಕ್ಯಾಮ್ಸ್‌ ಎಚ್ಚರ ವಹಿಸಿದೆ. ಆತಂಕಕ್ಕೀಡಾಗಲು ಯಾವುದೇ ಕಾರಣಗಳಿಲ್ಲವಾದರೂ ಶಾಲೆಗಳು ಜವಬ್ದಾರಿಯಿಂದ ಇರಬೇಕು. ಸ್ವಚ್ಛತೆ ಮತ್ತು ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಶಾಲೆಗಳು ಆರಂಭವಾಗುವುದಕ್ಕೂ ಮುನ್ನ ಮತ್ತು ನಂತರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅವರ ಕುಟುಂಬದ ಸುರಕ್ಷತೆಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ಆರೋಗ್ಯ ಆಧಾರಿತ ಹಾಜರಾತಿಯನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದೆ.

ಜ್ವರ, ಕೆಮ್ಮು, ಶೀತ, ಅಲರ್ಜಿಯಂತಹ ಗುಣಲಕ್ಷಣಗಳು ಕಂಡು ಬಂದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಬಾರದು. ಅಂತಹ ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪೋಷಕರು ನಿಗಾವಹಿಸಬೇಕು ಎಂದು ಹೇಳಲಾಗಿದೆ. ಶಾಲೆಯ ಹಾಜರಾತಿಗಿಂತ ಆರೋಗ್ಯವೇ ಮುಖ್ಯ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇಡೀ ಶಾಲೆಯನ್ನು ಸ್ಯಾನಿಟೈಸೇಷನ್‌ ಮಾಡಿಸಬೇಕು. ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ಮಕ್ಕಳು ಆಗಾಗ್ಗೆ ಕೈಗಳನ್ನು ತೊಳೆಯುವಂತೆ, ಉಸಿರಾಟದ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಬೇಕು. ಪ್ರತಿ ಕೊಠಡಿಯಲ್ಲೂ ಸರಾಗವಾಗಿ ಗಾಳಿಯಾಡಲು ವೆಂಟಿಲೇಷನ್‌ ಇರಬೇಕು ಎಂದೂ ಹೇಳಲಾಗಿದೆ.

ಶಾಲಾ ಅವಧಿಯಲ್ಲಿ ಮಕ್ಕಳು ರೋಗಗಳಿಗೆ ತುತ್ತಾದರೆ ಅಂತಹ ಮಕ್ಳನ್ನು ಪ್ರತ್ಯೇಕಗೊಳಿಸಿ ಕೂಡಲೇ ಪೋಷಕರಿಗೆ ಮಾಹಿತಿ ನೀಡಬೇಕು. ಕೋವಿಡ್‌ -19 ಬಗ್ಗೆ ಅನಧಿಕೃತ ಸುದ್ದಿ ಅಥವಾ ಆತಂಕಕ್ಕೀಡುಮಾಡುವಂತಹ ಸುದ್ದಿಗಳನು ಹರಡಬಾರದು. ಕೇವಲ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಅಧಿಕೃತ ಸುದ್ದಿಗಳನ್ನು ಮಾತ್ರ ನಂಬಬೇಕು ಎಂದೂ ತಿಳಿಸಿದೆ.

ಸಾಮಾಜಿಕ ಹೊಣೆಗಾರಿಕೆಯಿಂದ ಮಾರ್ಗಸೂಚಿ ಪ್ರಕಟ

ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌ ಪ್ರತಕ್ರಿಯಿಸಿ ಸರಕಾರದಿಂದ ಕೋವಿಡ್ ಕುರಿತು ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ನಮ್ಮ ಸಾಮಾಜಿಕ ಜವಾಬ್ದಾರಿಯಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಘವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಎಲ್ಲ ಶಾಲೆಗಳಿಗೂ ಬಿಡುಗಡೆ ಮಾಡಿದ್ದೇವೆ. ಒಂದು ಕಡೆ ನಿರಂತರವಾಗಿ ಮಳೆಯಾಗುತ್ತಿದೆ. ಮಕ್ಕಳು ಬೇಗ ಸೋಂಕಿಗೆ ಈಡಾಗುವ ಸಾಧ್ಯತೆಗಳಿರುತ್ತವೆ. ಆದರೂ ಮಕ್ಕಳು, ಪೋಷಕರು ಅಥವಾ ಶಾಲೆಗಳು ಭಯಪಡಬಾರದು. ಈ ಮಾರ್ಗಸೂಚಿಗಳೆಲ್ಲವೂ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವಂತಹ ಕ್ರಮಗಳೇ ಆಗಿವೆ. ಸಾಮಾಜಿಕ ಅಂತರ ಅಥವಾ ಮಾಸ್ಕ್‌ ಅವಶ್ಯಕತೆ ಇರುವುದಿಲ್ಲ. ಅವಶ್ಯಕತೆ ಬಿದ್ದರೆ ಕ್ಯಾಮ್ಸ್‌ ಮುನ್ಸೂಚನೆ ನೀಡಲಿದೆ ಎಂದೂ ಅವರು ತಿಳಿಸಿದ್ದಾರೆ.

(ವರದಿ- ಎಚ್ ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.