ಬೆಂಗಳೂರು ಮೆಟ್ರೋ ಮಾದಾವರಕ್ಕೆ; ಇಲ್ಲೀಗ ಬಾಡಿಗೆ ಶೇ 16-25 ಹೆಚ್ಚಳ, ಆಸ್ತಿ ಮೌಲ್ಯ ಎಷ್ಟಾಯಿತು ನೋಡಿ ಇಲ್ಲಿದೆ ವಿವರ
ಬೆಂಗಳೂರು ಮೆಟ್ರೋ ಮಾದಾವರಕ್ಕೆ ಬಂತು. ಇಲ್ಲೀಗ ಬಾಡಿಗೆ ಶೇ 16-25 ಹೆಚ್ಚಳ, ಆಸ್ತಿ ಮೌಲ್ಯ ಎಷ್ಟಾಯಿತು? ರಿಯಾಲ್ಟಿ ಮೌಲ್ಯ ಹೆಚ್ಚಳವಾಗಿದ್ದು, 2017ರಿಂದೀಚೆಗೆ ಆಗಿರುವ ಆಸ್ತಿ ಮೌಲ್ಯ ಬದಲಾವಣೆ, ಬಾಡಿಗೆ ಹೆಚ್ಚಳದ ವಿವರ ಇಲ್ಲಿದೆ ನೋಡಿ.
ಬೆಂಗಳೂರು: ನಾಗಸಂದ್ರ- ಮಾದಾವರ ಮೆಟ್ರೋ ರೈಲು ಮಾರ್ಗ ವಿಸ್ತರಣೆಯಾಗಿ ನಮ್ಮ ಮೆಟ್ರೋ ರೈಲು ಸಂಚಾರ ಶುರುವಾಗುತ್ತಿರುವಂತೆಯೇ ಬೆಂಗಳೂರು ಮೆಟ್ರೋ ಲೈನ್‌ನ ಈ ಭಾಗದಲ್ಲಿ ಭೂಮಿಯ ಬೆಲೆ ಏರಿಕೆಯಾಗತೊಡಗಿದೆ. ಹಲವು ರಿಯಲ್ ಎಸ್ಟೇಟ್ ಏಜೆನ್ಸಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಬೆಂಗಳೂರು ಮೆಟ್ರೋದ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ವಿಸ್ತರಣೆಯ ಉದ್ದಕ್ಕೂ ಆಯ್ದ ಪ್ರದೇಶಗಳಲ್ಲಿನ ಸರಾಸರಿ ಆಸ್ತಿ ಬೆಲೆಗಳು ಮೆಟ್ರೋ ಮಾರ್ಗ ನಿರ್ಮಾಣದ ಅವಧಿಯಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ವಿಸ್ತರಣೆಯಾಗಿರುವ ಸಂಪರ್ಕವು ವಿಶೇಷವಾಗಿ ಸಮೀಪದ ಕೈಗಾರಿಕಾ ಪ್ರದೇಶ ಮತ್ತು ಟೆಕ್ ಹಬ್‌ಗಳಲ್ಲಿ ಉದ್ಯೋಗದಲ್ಲಿರುವ ಉದ್ಯೋಗಿಗಳಿಗೆ ಪ್ರಯೋಜನವನ್ನು ಒದಗಿಸಿದೆ.ಹೊಸ ನಿಲ್ದಾಣಗಳ 2 ರಿಂದ 3 ಕಿ.ಮೀ. ವ್ಯಾಪ್ತಿಯ ಸ್ಥಗಳಲ್ಲಿ ವಸತಿ ಬೇಡಿಕೆ ದುಪ್ಪಟ್ಟು ಹೆಚ್ಚಾಗಿದೆ ಎಂದು ಅನರಾಕ್ ಗ್ರೂಪ್‌ನ ಚೆನ್ನೈ ನಗರ ಮುಖ್ಯಸ್ಥ ಸಂಜಯ್ ಛಗ್ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
ಬೆಂಗಳೂರು ಮೆಟ್ರೋ ವಿಸ್ತರಣೆ: ಮಾದಾವರ ಸುತ್ತಮುತ್ತ ಸೈಟ್ ದರ ಹೆಚ್ಚಳ
ಇತ್ತೀಚೆಗೆ ಬೆಂಗಳೂರು ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯಾಗಿರುವಲ್ಲಿ ಕೊನೆಯ ನಿಲ್ದಾಣವಾಗಿರುವ ಮಾದಾವರದಲ್ಲಿ ಸರಾಸರಿ ಆಸ್ತಿ ಬೆಲೆ 2017ರಲ್ಲಿ ಪ್ರತಿ ಚದರ ಅಡಿಗೆ 4500- 5000 ರೂ ಇತ್ತು. 2023ರಲ್ಲಿ 9000 ರೂ ನಿಂದ 9500 ರೂಪಾಯಿ ಆಗಿದ್ದು, 2024ರ ಮೂರನೇ ತ್ರೈಮಾಸಿಕದಲ್ಲಿ 10,000 - 10,500 ರೂಪಾಯಿಗೆ ಏರಿಕೆಯಾಗಿದೆ. ಇದೇ ರೀತಿ ಅಂಚೆಪಾಳ್ಯದಲ್ಲಿ 2017ರಲ್ಲಿ ಪ್ರತಿ ಚದರ ಅಡಿಗೆ 5000 - 5500 ರೂಪಾಯಿ ಇತ್ತು. 2023ರಲ್ಲಿ 10,000- 10,500 ರೂಪಾಯಿ ಮತ್ತು 2024ರ ಮೂರನೇ ತ್ರೈಮಾಸಿಕದಲ್ಲಿ 10,600 - 11,100 ರೂಪಾಯಿ ಆಗಿದೆ ಎಂದು ಆಸ್ತಿ ಸಲಹಾ ಕಂಪನಿ ಅನಾರಾಕ್ ಹಂಚಿಕೊಂಡ ದತ್ತಾಂಶ ತೋರಿಸಿದೆ.
ಬೆಂಗಳೂರು ಮೆಟ್ರೋ - ಹಸಿರು ಮಾರ್ಗದ ಸುತ್ತಮುತ್ತ ಆಸ್ತಿ ಮೌಲ್ಯ
ಪ್ರದೇಶ | 2017ರಲ್ಲಿ ಚದರ ಅಡಿಗೆ ಸರಾಸರಿ ದರ (ರೂಪಾಯಿ) | 2023ರಲ್ಲಿ ಚದರ ಅಡಿಗೆ ಸರಾಸರಿ ದರ (ರೂಪಾಯಿ) | 2024ರ 3ನೇ ತ್ರೈಮಾಸಿಕದಲ್ಲಿ ಚದರ ಅಡಿಗೆ ಸರಾಸರಿ ದರ (ರೂಪಾಯಿ) |
---|---|---|---|
ಮಾದಾವರ | 4500- 5000 | 9000- 9500 | 10000- 10500 |
ಅಂಚೆಪಾಳ್ಯ | 5000- 5500 | 10000- 10500 | 10600- 11100 |
ಚಿಕ್ಕಬಿದರಕಲ್ಲು | 3300- 3800 | 5600- 6100 | 6400-6900 |
ಬಾಗಲಕುಂಟೆ | 3000- 3500 | 5000- 5500 | 5800- 6300 |
ನಾಗಸಂದ್ರ | 4400- 4900 | 7100-7600 | 8600- 9100 |
ಉತ್ತರ ಬೆಂಗಳೂರಿನಲ್ಲಿ 3.14 ಕಿಮೀ ಉದ್ದದ ನಮ್ಮ ಮೆಟ್ರೋ ವಿಸ್ತರಣಾ ಮಾರ್ಗವನ್ನು ಇತ್ತೀಚೆಗಷ್ಟೆ ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 2017ರಲ್ಲಿ ಇದರ ನಿರ್ಮಾಣ ಕಾಮಗಾರಿ ಶುರುವಾಗಿದ್ದು, ಬಹಳ ನಿಧಾನವಾಗಿ ಪೂರ್ಣಗೊಂಡ ಮಾರ್ಗ ಇದಾಗಿ ದಾಖಲಾಯಿತು. ಕಾಮಗಾರಿ ಪೂರ್ಣವಾಗಲು 27 ತಿಂಗಳ ಆರಂಭಿಕ ಚೌಕಟ್ಟನ್ನು ಮೀರಿ ಎರಡು ಪಟ್ಟು ಹೆಚ್ಚು ಅವಧಿ ಬೇಕಾಯಿತು. ವಿಸ್ತರಿತ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ ನಿಲ್ದಾಣಗಳು ಇವೆ. 1,169 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ರಾಜ್ಯದ ವ್ಯಾಪಾರ ಸಮ್ಮೇಳನಗಳು ಮತ್ತು ಪ್ರದರ್ಶನಗಳ ಪ್ರಮುಖ ಕೇಂದ್ರ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (ಬಿಐಇಸಿ) ಗೆ ಮೆಟ್ರೋ ಸಂಪರ್ಕ ಅನುಕೂಲ ಹೆಚ್ಚಿಸಿದೆ.
ಪ್ರಮುಖ ಡೆವಲಪರ್‌ಗಳು ಈಗಾಗಲೇ ಉತ್ತರ ಬೆಂಗಳೂರಿನ ಗ್ರೀನ್ ಲೈನ್‌ನ ಕಾರ್ಯಾಚರಣಾ ವಿಭಾಗಗಳಲ್ಲಿ ತಮ್ಮನ್ನು ತಾವು ಕಾರ್ಯತಂತ್ರವಾಗಿ ಇರಿಸಿಕೊಂಡಿದ್ದಾರೆ. 2019 ರಿಂದ ಸರಾಸರಿ ಪ್ರಾಪರ್ಟಿ ಬೆಲೆಗಳು ಮತ್ತು ಮಾಸಿಕ ಕೇಳುವ ಬಾಡಿಗೆಗಳನ್ನು ವಾರ್ಷಿಕವಾಗಿ 9-12 ಪ್ರತಿಶತದಷ್ಟು ಹೆಚ್ಚಿಸುವ ಬೇಡಿಕೆಯ ಆವೇಗವನ್ನು ಗಮನಿಸಿದರೆ, ಮುಂಬರುವ ವರ್ಷಗಳಲ್ಲಿ ಹೊಸದಾಗಿ ತೆರೆಯಲಾದ ಮೆಟ್ರೋ ವಿಭಾಗಗಳಿರುವ ಪ್ರದೇಶಗಳಲ್ಲೂ ಇದೇ ರೀತಿಯ ಪ್ರವೃತ್ತಿಯನ್ನು ನಾವು ನಿರೀಕ್ಷಿಸುತ್ತೇವೆ ”ಎಂದು ಸ್ಕ್ವೇರ್ ಯಾರ್ಡ್ಸ್‌ನ ಪ್ರಧಾನ ಪಾಲುದಾರ ಸೋಪಾನ್ ಗುಪ್ತಾ ಹೇಳಿದರು.
ಬೆಂಗಳೂರು ಮೆಟ್ರೋ ವಿಸ್ತರಣೆ: ಮಾದಾವರ ಸುತ್ತಮುತ್ತ ಬಾಡಿಗೆ ಶೇ 16- 25 ಹೆಚ್ಚಳ
ಪ್ರಾಪ್ಟೆಕ್ ಪ್ಲಾಟ್‌ಫಾರ್ಮ್ ಸ್ಕ್ವೇರ್ ಯಾರ್ಡ್‌ಗಳಿಂದ ಪಡೆದ ಮಾಹಿತಿಯ ಪ್ರಕಾರ, ವಿಸ್ತರಣಾ ರೇಖೆಯ ಉದ್ದಕ್ಕೂ ಇರುವ ಪ್ರದೇಶಗಳಲ್ಲಿ ಸರಾಸರಿ ಬಾಡಿಗೆ ಮೌಲ್ಯಗಳು ಐದು ವರ್ಷಗಳ ಅವಧಿಯಲ್ಲಿ 16- 25 ಪ್ರತಿಶತದ ನಡುವೆ ಹೆಚ್ಚಾಗಿದೆ. ನಾಗಸಂದ್ರದಲ್ಲಿ ಸರಾಸರಿ ಬಾಡಿಗೆ ಮಾಸಿಕ 26,394-30,100 ರೂ. ಇದ್ದದ್ದು 2023ರಲ್ಲಿ 30,690-32,550 ರೂ.ಗಳಿಗೆ ಮತ್ತು 2024 ರ ಮೊದಲ 10 ತಿಂಗಳಲ್ಲಿ 33,000-35,000 ರೂಪಾಯಿಗೆ ತಲುಪಿದೆ.
ನಾಗಸಂದ್ರ ಮೆಟ್ರೋ ಸ್ಟೇಷನ್ ಮುಖ್ಯ ನಿಲ್ದಾಣವಾಗಿದ್ದು, ಹಸಿರು ಮಾರ್ಗದಲ್ಲಿ ಹೆಚ್ಚು ಪ್ರಯಾಣಿಕ ದಟ್ಟಣೆ ಇರುವಂಥದ್ದು. ಉತ್ತರ ಬೆಂಗಳೂರು ಭಾಗದ ಬಾಗಲಕುಂಟೆ ಪ್ರದೇಶದ ಜನರಿಗೆ ಸಂಚಾರ ನಾಡಿಯಾಗಿ ಕೆಲಸ ಮಾಡುತ್ತಿದೆ. ಇದೇ ವೇಳೆ ನಾಗಸಂದ್ರದ ಆಸುಪಾಸು ಅಂದರೆ 7 ಕಿಮೀ ವ್ಯಾಪ್ತಿಯಲ್ಲಿ ಜಾಲಹಳ್ಳಿ ಭಾಗದಲ್ಲಿ 2019ರಲ್ಲಿ ತಿಂಗಳ ಬಾಡಿಗೆ 22,395 - 25,594 ರೂಪಾಯಿ ಇದ್ದದ್ದು 2023ರಲ್ಲಿ 26,040 ರೂಪಾಯಿಯಿಂದ 29,760 ರೂಪಾಯಿ ಆಗಿದೆ. 2024ರಲ್ಲಿ ಇದು 28,000 ರೂಪಾಯಿಯಿಂದ 32,000 ರೂಪಾಯಿ ಆಗಿದೆ.
ಬೆಂಗಳೂರು ಹಸಿರು ಮೆಟ್ರೋ ವಿಸ್ತರಿತ ಮಾರ್ಗದ ಸುತ್ತಮುತ್ತ ಬಾಡಿಗೆ ದರ
ಪ್ರದೇಶ | 2017ರ ತಿಂಗಳ ಬಾಡಿಗೆ (ರೂಪಾಯಿ) | 2023ರ ತಿಂಗಳ ಬಾಡಿಗೆ (ರೂಪಾಯಿ) | 2024ರ 3ನೇ ತ್ರೈಮಾಸಿಕದ ತಿಂಗಳ ಬಾಡಿಗೆ (ರೂಪಾಯಿ) |
---|---|---|---|
ನಾಗಸಂದ್ರ | 26394- 30100 | 30690- 32550 | 33000- 35000 |
ಜಾಲಹಳ್ಳಿ | 22395- 25594 | 26040- 29760 | 28000- 32000 |
ಯಶವಂತಪುರ | 23994- 26394 | 27900- 30690 | 30000- 33000 |
ಬೆಂಗಳೂರು ಮೆಟ್ರೋ ರೈಲು ನಿಗಮದ ಮಾಹಿತಿಯ ಪ್ರಕಾರ, ಈ ವಿಭಾಗದ ಕಾರ್ಯಾರಂಭದ ಮೇಲೆ, ಬೆಂಗಳೂರಿನಲ್ಲಿ ಈಗ 69 ನಿಲ್ದಾಣಗಳೊಂದಿಗೆ 76.95 ಕಿಮೀ ವ್ಯಾಪಿಸಿರುವ ಮೆಟ್ರೋ ಜಾಲ ಇದೆ.. ಉತ್ತರ ದಕ್ಷಿಣ ಕಾರಿಡಾರ್ (ಗ್ರೀನ್ ಲೈನ್) ಈಗ 31 ನಿಲ್ದಾಣಗಳೊಂದಿಗೆ 33.46 ಕಿಮೀ ಉದ್ದವಾಗಿದೆ ಮತ್ತು ಪೂರ್ವ ಪಶ್ಚಿಮ ಕಾರಿಡಾರ್ (ಪರ್ಪಲ್ ಲೈನ್) 38 ನಿಲ್ದಾಣಗಳೊಂದಿಗೆ 43.49 ಕಿಮೀ ಉದ್ದಕ್ಕೂ ವಿಸ್ತರಿಸಿದೆ.