ಬೆಂಗಳೂರಿಗರೇ, ನೀವಿನ್ನೂ ಆಸ್ತಿ ತೆರಿಗೆ ಕಟ್ಟಿಲ್ವಾ, ನ 30 ಡೆಡ್‌ಲೈನ್ ಮರೆಯಬೇಡಿ, ಒಟಿಎಸ್ ಪ್ರಯೋಜನ ಪಡ್ಕೊಂಡು ಬಿಡಿ ಎನ್ನುತ್ತಿದೆ ಬಿಬಿಎಂಪಿ
ಬೆಂಗಳೂರಿನಲ್ಲಿ ನೀವು ಇನ್ನೂ ಆಸ್ತಿ ತೆರಿಗೆ ಪಾವತಿಸಿಲ್ಲವೇ? ನ.30ಕ್ಕೆ ಕೊನೆಗೊಳ್ಳುವ ಒಟಿಎಸ್ ಯೋಜನೆಯ ಲಾಭ ಪಡೆದುಕೊಳ್ಳಿ. ದಂಡ, ತೆರಿಗೆ ಮೇಲಿನ ಬಡ್ಡಿ ಪಾವತಿಸುವುದರಿಂದ ವಿನಾಯಿತಿ ಪಡೆದುಕೊಳ್ಳಿ. ಅದಿಲ್ಲದೇ ಹೋದರೆ ನಿಮ್ಮ ಆಸ್ತಿ ಜಪ್ತಿಯಾದೀತು ಎಂದು ಬಿಬಿಎಂಪಿ ಎಚ್ಚರಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ತೆರಿಗೆ ಪಾವತಿಸದ 3.9 ಲಕ್ಷ ಸುಸ್ತಿದಾರರಲ್ಲಿ 2 ಲಕ್ಷ ತೆರಿಗೆದಾರರು ಇನ್ನೂ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಈ ಎರಡು ಲಕ್ಷ ತೆರಿಗೆದಾರರು ಸುಮಾರು 373 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಈಗಾಗಲೇ ಹಲವಾರು ಬಾರಿ ಗಡುವನ್ನು ವಿಸ್ತರಿಸಿದ್ದು, ನ.30ರ ನಂತರ ಗಡುವುನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂಲಗಳು ಖಚಿತಪಡಿಸಿವೆ. ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಡಿ.1ರಿಂದ ದಂಡ ಮತ್ತು ಬಡ್ಡಿಯನ್ನು ವಿಧಿಸಲಾಗುತ್ತದೆ. ಆದ್ದರಿಂದ ಇನ್ನೂ 9 ದಿನಗಳು ಬಾಕಿ ಉಳಿದಿದ್ದು, ಸುಸ್ತಿದಾರರು ಕೂಡಲೇ ಬಾಕಿ ಪಾವತಿಸುವುದು ಕ್ಷೇಮ. ಆನ್ ಲೈನ್ ಮೂಲಕ ದಂಡ ಪಾವತಿಸುವುದು ತುಂಬಾ ಸರಳೀಕರಣವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 733 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ
ಸುಸ್ತಿದಾರರಿಂದ ಸುಮಾರು 733 ಕೋಟಿ ರೂ. ಬಾಕಿ ಉಳಿದಿದ್ದು, 2024-25ರ ನವಂಬರ್ 16 ರ ವರೆಗೆ ಬಿಬಿಎಂಪಿ 360 ಕೋಟಿ ರೂ. ಸಂಗ್ರಹ ಮಾಡಿದೆ. ಸುಸ್ತಿದಾರರ ಅನುಕೂಲಕ್ಕಾಗಿ ಒಟಿಎಸ್ (ಒನ್ ಟೈಮ್ ಸೆಟ್ಲ್ ಮೆಂಟ್) ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾಗಿತ್ತು. ನಂತರ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿತ್ತು. ಇದೀಗ ಡಿಸೆಂಬರ್ 1ರಿಂದ ಬಾಕಿ ವಸೂಲಿಗೆ ಪಾಲಿಕೆ ಕಠಿಣ ಕ್ರಮಗಳನ್ನು ಅನುಸರಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ ಎಲ್ಲ 8 ವಲಯಗಳಲ್ಲೂ ಬಾಕಿ ಉಳಿಸಿಕೊಂಡವರಿದ್ದಾರೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಅಂದರೆ 50,000 ಸುಸ್ತಿದಾರರು 96 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ಅಂದರೆ ದಾಸರಹಳ್ಳಿ ವಲಯದಲ್ಲಿ 10.356 ಆಸ್ತಿಗಳಿಂದ 14 ಕೋಟಿ ರೂ. ಬಾಕಿ ಸಂದಾಯವಾಗಬೇಕಿದೆ.
ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಅವರು ಒಟಿಎಸ್ ಪ್ರಯೋಜನ ಪಡೆಯಲು ಸುಸ್ತಿದಾರರಿಗೆ ಇದು ಕೊನೆಯ ಅವಕಾಶ. ಡಿಸೆಂಬರ್ 1ರಿಂದ ಬಾಕಿಯ ಬಡ್ಡಿ ದಂಡ ಸೇರಿ ಬಾಕಿ ತೆರಿಗೆಯ ಎರಡು ಮೂರು ಪಟ್ಟು ಹೆಚ್ಚಳವಾದರೂ ಆಗಬಹುದು. ಬಡ್ಡಿ ಮತ್ತು ದಂಡ ಮನ್ನಾದ ಸಂಪೂರ್ಣ ಪ್ರಯೋಜನ ಪಡೆಯಲು ಸುಸ್ತಿದಾರರಿಗೆ ಇದು ಸುವರ್ಣಾವಕಾಶವಾಗಿದ್ದು, ಆನ್ ಲೈನ್ ಮೂಲಕ ತೆರಿಗೆ ಪಾವತಿಸಲು ಕೋರಿದ್ದಾರೆ.
ಕಳೆದ ಒಂದು ತಿಳಗಳಿನಿಂದ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರ ಆಸ್ತಿಗಳನ್ನು ಜಪ್ತಿ ಮಾಡತೊಡಗಿದೆ. ನವಂಬರ್ 16ರವರೆಗೆ 6,381 ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು 82,708 ಆಸ್ತಿಗಳನ್ನು ಜಪ್ತಿ ಮಾಡಿದೆ. ಜಪ್ತಿ ಮಾಡುವದರಿಂದ ಆಸ್ತಿ ಮಾಲೀಕರಿಗೆ ಅಂತಹ ತೊಂದರೆಯಾಗುತ್ತಿರಲಿಲ್ಲ. ಹೆಚ್ಚೆಂದರೆ ಜಪ್ತಿ ಮಾಡಲಾದ ಆಸ್ತಿಯ ಮೇಲೆ ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಮುಂದೆ ಆಸ್ತಿಗಳಿಗೆ ಬೀಗಮುದ್ರೆ ಹಾಕಲು ಪಾಲಿಕೆ ನಿರ್ಧರಿಸಿದೆ.
ಸುಸ್ತಿದಾರರಲ್ಲಿ ಬೃಹತ್ ವಾಣಿಜ್ಯ ಮಳಿಗೆಗಳೂ ಸೇರಿವೆ. ಬೀಗಮುದ್ರೆ ಹಾಕಿದರೆ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ದಕ್ಷಿಣ ವಲಯದಲ್ಲಿ 16,049 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ದಾಸರಹಳ್ಳಿ ವಲಯದಲ್ಲಿ 4,851; ಪೂರ್ವ ವಲಯದಲ್ಲಿ 1,747 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಆಸ್ತಿ ತೆರಿಗೆ ಮೇಲಿನ ದಂಡದ ಸ್ವರೂಪ ಹೇಗಿರುತ್ತದೆ?
ಒಟಿಎಸ್ ಮೂಲಕ ಅವಕಾಶ ನೀಡಲಾಗಿದ್ದು, ದಂಡ ಮತ್ತು ಬಡ್ಡಿಗೆ ವಿನಾಯಿತಿ ನೀಡಲಾಗಿದೆ. ಈ ಅವಕಾಶ ಮತ್ತೆ ಒದಗಿಬರುವುದಿಲ್ಲ. ಕೊನೆಯ ಕ್ಷಣದಲ್ಲಿ ಎರಡು ದಿನ ಅವಕಾಶ ಕೇಳಿದರೂ ಸಿಗುವುದಿಲ್ಲ. ನಂತರ ಬಡ್ಡಿ ದಂಡ ಸೇರಿ ದುಪ್ಪಟ್ಟು ಪಾವತಿಸಬೇಕಾಗುತ್ತದೆ.
ಉದಾಹರಣೆಗೆ ಒಟಿಎಸ್ ಅಡಿಯಲ್ಲಿ 25 ಸಾವಿರ ರೂ. ಬಾಕಿ ಇದ್ದರೆ ಯೋಜನೆ ಅವಧಿ ಮುಗಿದ ಬಳಿಕ ಕನಿಷ್ಠ 63,000 ರೂ ಪಾವತಿಸಬೇಕಾಗುತ್ತದೆ. ಆದ್ದರಿಂದ ಈಗಲೇ ಆಸ್ತಿ ತೆರಿಗೆ ಪಾವತಿಸಿ ಹೆಚ್ಚಿನ ಹೊರೆಯನ್ನು ತಗ್ಗಿಸಿಕೊಳ್ಳುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಒಟಿಎಸ್ ಪ್ರಯೋಜನ ಪಡೆದುಕೊಂಡವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2024ರ ಏಪ್ರಿಲ್ 1 ರಲ್ಲಿ 3.95 ಲಕ್ಷ ಸುಸ್ತಿದಾರರು 733.61 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸಿಬೇಕಿತ್ತು. ಈ ಆರ್ಥಿಕ ವರ್ಷದಲ್ಲಿ 1.61 ಸುಸ್ತಿದಾರರು 336 ಕೋಟಿ ರೂ ಪಾವತಿಸಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)