ಬೆಂಗಳೂರು ಗುಡ್‌ಗಿಂಗ್ ಅಂಡ್ ಮಿಂಚಿಂಗ್ ಹೆವಿಲಿ: ಮಳೆ ಕಂಡು ಖುಷಿಯಾದ ನೆಟ್ಟಿಗರು ಹಂಚಿಕೊಂಡ ಖುಷಿ ವಿಡಿಯೊಗಳು ಇಲ್ಲಿವೆ
ಬೆಂಗಳೂರು ಮಳೆ: ನಗರದಲ್ಲಿ ಮಳೆಯಿಂದ ಕೆಲವೆಡೆ ಮರಗಳು ಉರುಳಿದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲ ರಸ್ತೆಗಳು ಜಲಾವೃತಗೊಂಡ ಕಾರಣ ಟ್ರಾಫಿಕ್ ಅಸ್ತವ್ಯಸ್ತಗೊಂಡಿತು.
ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಮಳೆ ಆರಂಭವಾಗಿದ್ದು ರಾತ್ರಿ 9:30 ರವರೆಗೂ ಸುರಿಯುತ್ತಲೇ ಇತ್ತು. ಮಳೆ ಕಂಡು ಖುಷಿಯಾಗಿರುವ ಜನರು 'ಗುಡ್‌ಗಿಂಗ್ ಅಂಡ್ ಮಿಂಚಿಂಗ್ ಹೆವಿಲಿ' (Gudging and Minching heavily) ಎಂದು ಬೆಂಗಳೂರಿನ 'ಟಿಪಿಕಲ್ ಕನ್ನಡ'ದಲ್ಲಿ ಒಕ್ಕಣೆ ಬರೆದು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿಯೂ #BengaluruRains ಟ್ರೆಂಡ್ ಆಗಿದೆ.
ನಗರದಲ್ಲಿ ಇತ್ತೀಚೆಗೆ ಉಷ್ಣಾಂಶ ವಿಪರೀತ ಹೆಚ್ಚಾಗಿದ್ದು ದಾಖಲೆ ಬರೆದಿತ್ತು. ಕಾದ ಕೆಂಡದಂತಾಗಿದ್ದ ಬೆಂಗಳೂರಿಗರು ಬಿಸಿಲಿಗೆ ಬೆವರಿ ಬಸವಳಿದಿದ್ದರು. ಮಳೆಗಾಗಿ ಕಾತರದಿಂದ ಕಾಯುತ್ತಿದ್ದ ಜನರಿಗೆ ವರುಣ ಗುರುವಾರವೂ ಖುಷಿಕೊಟ್ಟ. ಮಳೆಯಿಂದ ಕೆಲವೆಡೆ ಮರಗಳು ಉರುಳಿದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲ ರಸ್ತೆಗಳು ಜಲಾವೃತಗೊಂಡ ಕಾರಣ ಟ್ರಾಫಿಕ್ ಸಹ ಅಸ್ತವ್ಯಸ್ತಗೊಂಡಿತು.
ಬೆಂಗಳೂರಿನ ಯಲಹಂಕ, ಹೆಬ್ಬಾಳ, ಜಯನಗರ, ಹನುಮಂತನಗರ, ಬಾಣಸವಾಡಿ, ಕೋರಮಂಗಲ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೊಮ್ಮನಹಳ್ಳಿ, ಹೊರಮಾವು ಸೇರಿದಂತೆ ಹಲವು ಬಡಾವಣೆಗಳಲ್ಲಿ ಉತ್ತಮ ಮಳೆಯಾಗಿದೆ. ಬೆಂಗಳೂರಿನಲ್ಲಿ ಇನ್ನೂ 5 ದಿನ, ಅಂದರೆ ಮೇ 15 ರವರೆಗೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.